ಮಲೇಬೆನ್ನೂರು, ಏ.30- ಗುರುವಾರ ರಾತ್ರಿ ಬೀಸಿದ ಬಿರುಗಾಳಿ-ಮಳೆಗೆ ಮಲೇಬೆನ್ನೂರು ಹೋಬಳಿ ಯಲ್ಲಿ 744 ಎಕರೆ ಭತ್ತದ ಬೆಳೆ ನೆಲಕಚ್ಚಿದೆ ಎಂದು ಉಪ ತಹಶೀಲ್ದಾರ್ ಆರ್. ರವಿ ಮಾಹಿತಿ ನೀಡಿದ್ದಾರೆ.
ಆದಾಪುರ, ನಿಟ್ಟೂರು ಮತ್ತು ಕುಂಬಳೂರಿನಲ್ಲಿ ನೆಲಕಚ್ಚಿದ ಭತ್ತದ ಬೆಳೆ ವೀಕ್ಷಿಸಿದ ರವಿ ಅವರು, ಬೆಳೆ ಹಾನಿ ಕುರಿತು ಸ್ಥಳ ಪರಿಶೀಲನೆ ಮಾಡಿ ವರದಿ ನೀಡು ವಂತೆ ಎಲ್ಲಾ ಗ್ರಾಮಲೆಕ್ಕಾಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದರು. ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿ ಶ್ರೀಧರಮೂರ್ತಿ ಈ ವೇಳೆ ಹಾಜರಿದ್ದರು.
ಗ್ರಾಮ ಲೆಕ್ಕಾಧಿಕಾರಿಗಳಾದ ಜಿಗಳಿ ವೃತ್ತದ ಸುಭಾನಿ, ಕೊಕ್ಕನೂರು ವೃತ್ತದ ಬೋರಯ್ಯ, ಧೂಳೆ ಹೊಳೆ ವೃತ್ತದ ಮಂಜುಳಾ, ವಾಸನ ವೃತ್ತದ ಆನಂದತೀರ್ಥ, ಕುಂಬಳೂರು ವೃತ್ತದ ಶ್ರೀಧರ ಮೂರ್ತಿ ಅವರುಗಳು ನೀಡಿರುವ ಸದ್ಯದ ಮಾಹಿತಿ ಪ್ರಕಾರ ನಂದಿಗುಡಿಯಲ್ಲಿ 50, ಗೋವಿನಹಾಳ್-14, ಕಂಭತ್ತಹಳ್ಳಿ-ಕೊಕ್ಕನೂರು ಸೇರಿ-15, ಕುಂಬಳೂರು-55, ನಿಟ್ಟೂರು-45, ಆದಾಪುರ-80, ಯಲವಟ್ಟಿ-45, ಜಿಗಳಿ-50, ಜಿ. ಬೇವಿನಹಳ್ಳಿ-40 ಮತ್ತು ಧೂಳೆಹೊಳೆ-ಇಂಗಳಗೊಂದಿಯಲ್ಲಿ 350 ಎಕರೆ ಸೇರಿ ಒಟ್ಟು 744 ಎಕರೆ ಭತ್ತದ ಬೆಳೆ ನೆಲಕಚ್ಚಿದೆ.
ಹಾನಿಯಾಗಿಲ್ಲ: ಬಿರುಗಾಳಿ ಮಳೆಗೆ ನೆಲಕಚ್ಚಿರುವ ಭತ್ತದ ಬೆಳೆ 2-3 ದಿನಗಳಲ್ಲಿ ಮೇಲಕ್ಕೆ ಎದ್ದೇಳಲಿದೆ. ಹಾಗಾಗಿ ಇದನ್ನು ಹಾನಿ ಎಂದು ಪರಿಗಣಿಸಲು ಆಗುವುದಿಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕ ಗೋವರ್ಧನ್ ಅವರು §ಜನತಾವಾಣಿ¬ ಗೆ ತಿಳಿಸಿದ್ದಾರೆ.
ಒಂದು ವೇಳೆ ಶುಕ್ರವಾರ ಅಥವಾ ಶನಿವಾರ ಮತ್ತೆ ಮಳೆ ಬಂದರೆ ಈಗ ನೆಲಕಚ್ಚಿರುವ ಕಟಾವಿಗೆ ಬಂದಿರುವ ಭತ್ತಕ್ಕೆ ಹಾನಿ ಆಗಲಿದೆ. ಮಳೆ ಬಾರದಿದ್ದರೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.