ಮಗು ಹುಟ್ಟಿದ ದಿನದಂದೇ ಶ್ರವಣ ದೋಷ ಪತ್ತೆ ಮಾಡಬೇಕು

ಜಿಲ್ಲಾ ಕುಟುಂಬ ಕಲ್ಯಾಣಧಿಕಾರಿ ಡಾ. ರೇಣುಕಾರಾಧ್ಯ

ದಾವಣಗೆರೆ, ಮಾ. 3- ಹುಟ್ಟಿದ ದಿನದಂದೇ ಮಕ್ಕಳ ಶ್ರವಣ ದೋಷ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ನ್ಯೂನತೆ ಗುಣಪಡಿಸಬಹುದಾಗಿದ್ದು, ಪೋಷಕರು ಹಾಗೂ ವೈದ್ಯರು ಮಕ್ಕಳ ಶ್ರವಣ ದೋಷವನ್ನು ಆರಂಭದಲ್ಲೇ ಪತ್ತೆ ಹಚ್ಚಿ ಗುಣಪಡಿಸಬೇಕು ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಕಾರಾಧ್ಯ ತಿಳಿಸಿದರು.   

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾ ಐಇಸಿ, ಎಸ್‍ಬಿಸಿಸಿ ವಿಭಾಗ ಇವರುಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ನಗರದ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಶ್ರವಣ ದಿನಾಚರಣೆಯಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. 

ಮಕ್ಕಳಿಗೆ ಕಿವಿಯ ಆರೈಕೆಯ ಶಿಕ್ಷಣ ನೀಡುವುದು ಅವಶ್ಯಕ. ಕಿವಿಗಳಲ್ಲಿ ಯಾವುದೇ ವಸ್ತುವನ್ನು ಹಾಕಿಕೊಳ್ಳುವುದು ಹಾಗೂ ಜೋರಾದ ಶಬ್ಧದೊಂದಿಗೆ ಸಂಗೀತವನ್ನು ಆಲಿಸುವುದರಿಂದ ಆಗಬಹುದಾದ ಅನಾಹುತದ ಬಗ್ಗೆ ತಿಳುವಳಿಕೆ ನೀಡಬೇಕು ಎಂದವರು ಹೇಳಿದ್ದಾರೆ.

2012 ರಲ್ಲಿ ಶ್ರವಣ ದೋಷಗಳ ಸಮೀಕ್ಷೆಯನ್ನು ನಡೆಸಲಾಗಿತ್ತು. ನಂತರದಲ್ಲಿ ಇಲ್ಲಿಯವರೆಗೂ ಸಮೀಕ್ಷೆ ಕೈಗೊಳ್ಳದ ಕಾರಣ ನಿರ್ದಿಷ್ಟ ಅಂಕಿ-ಅಂಶಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ 2021ರಲ್ಲಿ ಶ್ರವಣ ದೋಷದ ಸಮೀಕ್ಷೆ ನಡೆಸಿ, ಜನರಿಗೆ ತಿಳುವಳಿಕೆ ಮೂಡಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.  

ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕ ಕಲ್ಯಾಣಾಧಿಕಾರಿ ಅಧಿಕಾರಿ ಜಿ.ಎಸ್. ಶಶಿಧರ್ ಮಾತನಾಡಿ, ಕೋವಿಡ್ ಇರುವ ಕಾರಣದಿಂದ ಸಾಂಕೇತಿಕವಾಗಿ ಆಚರಿಸುತ್ತಿದ್ದೇವೆ. 60 ಡೆಸಿಬಲ್ ಗಿಂತ ಹೆಚ್ಚು ಶ್ರವಣ ದೋಷ ಇರುವವರನ್ನು ಅಂಗವಿಕಲರು ಎಂದು ಪರಿಗಣಿಸಿ, ಇವರಿಗೆ ಶೇ. 40 ಕ್ಕಿಂತ ಹೆಚ್ಚು ಅಂಗವೈಕಲ್ಯ ಇರುವವರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು ಎಂದರು. 

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಮಾತನಾಡಿ, ವಿಶ್ವ ಶ್ರವಣ ದಿನಾಚರಣೆಯ ಉದ್ದೇಶವೆಂದರೆ ಶ್ರವಣ ದೋಷದ ಲಕ್ಷಣಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ತಪಾಸಣೆ ನಡೆಸುವುದು, ಅದರ ಕುರಿತು ಮಾಹಿತಿ ಹರಡುವುದು ಮತ್ತು ಅನಾರೋಗ್ಯ ಮುಕ್ತ ದೇಶವನ್ನಾಗಿ ಮಾಡುವುದಾಗಿದೆ ಎಂದರು. 

ಆರ್‍ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ ಮಾತನಾಡಿ, ಪ್ರಾಥಮಿಕ ಹಂತದಲ್ಲೇ ಪರೀಕ್ಷೆ ಮಾಡದೇ ನಿರ್ಲಕ್ಷಿಸಿದರೆ 2 ವರ್ಷದ ನಂತರ ಮಗುವಿನ ಶ್ರವಣ ದೋಷಕ್ಕೆ ನಾವೇ ಕಾರಣೀಭೂತರಾಗುವುದಲ್ಲದೇ, ಆರೋಗ್ಯ ಇಲಾಖೆ ಇದ್ದೂ ಇಲ್ಲದಂತೆ ಆಗುತ್ತದೆ ಎಂದರು. 

ಡಿಎಲ್‍ಓ ಡಾ.ಮುರುಳಿಧರ ಮಾತನಾಡಿ, ಸಾಮಾನ್ಯ ಜ್ವರ, ಕೆಮ್ಮು, ಶೀತ ಬಂದರೆ ಹೇಗೆ ನಮ್ಮ ಬಗ್ಗೆ ನಾವು ಕಾಳಜಿ ವಹಿಸುತ್ತೇವೆಯೋ ಹಾಗೆಯೇ ಕಿವಿಗಳ ಬಗೆಗೂ ಜಾಗೃತರಾಗಬೇಕು ಎಂದರು. 

ಚಿಗಟೇರಿ ಆಸ್ಪತ್ರೆಯ ಅಧೀಕ್ಷಕ ಡಾ.ಜಯಪ್ರಕಾಶ್ ಮಾತನಾಡಿ, ಕಿವಿಗಳಲ್ಲಿ ಕೊಳಕು ನೀರು ಪ್ರವೇಶಿಸುವುದನ್ನು ತಡೆಗಟ್ಟಲು ಎಣ್ಣೆ ಅಥವಾ ಯಾವುದೇ ತೀಕ್ಷ್ಣವಾದ ವಸ್ತುಗಳು, ಬೆಂಕಿಕಡ್ಡಿಗಳು, ಕಿವಿ-ಮೊಗ್ಗುಗಳನ್ನು ಬಳಸಬಾರದು ಎಂದು ತಿಳಿಸಿದರು. 

ಈ ವೇಳೆ ಡಿಹೆಚ್‍ಓ ಡಾ.ನಾಗರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶ್ರವಣ ದೋಷದಿಂದ ಬಳಲುತ್ತಿದ್ದ ಭೂಮಿಕ ಅವರಿಗೆ ಸರ್ಕಾರದ ವತಿಯಿಂದ ಎನ್.ಪಿ.ಪಿ.ಸಿ.ಡಿ ಯೋಜನೆಯಡಿ ಉಚಿತವಾಗಿ ಆಡಿಯೋಲಾಜಿಸ್ಟ್ ಹಾಗೂ ಸ್ಪೀಚ್ ಥೆರಪಿ ಮಾಡಿಸಲಾಗುತ್ತಿದೆ. ಈ ಚಿಕಿತ್ಸೆಗೆ ಖಾಸಗಿ ಅಸ್ಪತ್ರೆಗಳಲ್ಲಿ ಸುಮಾರು 7 ರಿಂದ 10 ಲಕ್ಷ ವ್ಯಯವಾಗುತ್ತಿದ್ದು, ಇದೀಗ ಯೋಜನೆಯಡಿ ಚಿಕಿತ್ಸೆ ಫಲಕಾರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಆರ್.ಎನ್.ಟಿ.ಸಿ.ಪಿ ಡಾ.ಗಂಗಾಧರ್, ನರ್ಸಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ. ನಳಿನಾಕ್ಷಿ, ಎಸ್, ಟಿಹೆಚ್‍ಒ ಡಾ.ವೆಂಕಟೇಶ್ ನಾಯ್ಕ್, ಡಿಹೆಚ್‍ಇಒ ಡಾ.ಸುರೇಶ್.ಎನ್.ಬಾರ್ಕಿ, ಇಎನ್‍ಟಿ ತಜ್ಞೆ ಡಾ.ರೂಪ.ಸಿ.ವೈ, ಆಡಿಯೋಲಾಜಿಸ್ಟ್ ಕಾವ್ಯ, ಸ್ಪೀಚ್ ಥೆರಪಿಸ್ಟ್ ಡಾ.ಮಮತ, ಡಿವಿಬಿಡಿಸಿ ಡಾ.ನಟರಾಜ್, ಟಿಹೆಚ್‍ಇಒ ಉಮಾಪತಿ.ಹೆಚ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

error: Content is protected !!