ದಾವಣಗೆರೆ, ಜು. 21- ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಂದಿಗಳ ಹಾವಳಿ ನಿಯಂತ್ರಣದ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಹಂದಿಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು, ಇದಕ್ಕಾಗಿ ಅಗತ್ಯ ಭೂಮಿಯನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಹಂದಿಗಳ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೊನ್ನೆ ಏರ್ಪಡಿಸಲಾಗಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಂದಿ ಹಾವಳಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ರಸ್ತೆಗಳಲ್ಲಿ ಬಿಡಾಡಿ ಹಂದಿಗಳ ಓಡಾಟದಿಂದಾಗಿ ಸಾಕಷ್ಟು ಅಪಘಾತಗಳೂ ಸಂಭವಿಸಿವೆ. ಅಲ್ಲಲ್ಲಿ ಮಕ್ಕಳ ಮೇಲೂ ಹಂದಿಗಳು ದಾಳಿ ಮಾಡಿ ಗಾಯಗೊಳಿಸಿ ರುವ ಬಗ್ಗೆ ಸಾರ್ವಜನಿಕರಿಂದಲೂ ಬಹಳಷ್ಟು ದೂರುಗಳಿವೆ. ಹೀಗಾಗಿ ಹಂದಿಗಳ ಹಾವಳಿಯನ್ನು ತಪ್ಪಿಸಲು ವರಾಹ ಶಾಲೆ ನಿರ್ಮಾಣಕ್ಕೆ ಜಿಲ್ಲಾಡಳಿತ ಅಂತಿಮ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಚರ್ಚಿಸಲು ಹಂದಿ ಮಾಲೀಕರ ಸಂಘದವರಿಗೆ ಸಭೆಗೆ ಆಹ್ವಾನಿಸಲಾಗಿತ್ತು. ಆದರೆ ಅವರು ಬಂದಿಲ್ಲ. ಹೀಗಾಗಿ ಜಿಲ್ಲಾಡಳಿತದಿಂದಲೇ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. ವರಾಹ ಶಾಲೆ ನಿರ್ಮಾಣಕ್ಕೆ ಕೆಲವೆಡೆ ಭೂಮಿ ಗುರುತಿಸಲಾಗಿದ್ದು, ನಗರ ಪಾಲಿಕೆಗೆ ಭೂಮಿ ಹಸ್ತಾಂತರಿಸುವ ಕಾರ್ಯ ತ್ವರಿತ ಗೊಳಿಸಲಾಗುವುದು ಎಂದವರು ಹೇಳಿದರು.
ನಗರದಲ್ಲಿ ಸಂಗ್ರಹಿಸಲಾಗುವ ಹಸಿ ಕಸವನ್ನು ವರಾಹ ಶಾಲೆಗೆ ಒದಗಿಸಲು ನಿರ್ಧರಿಸಲಾಗಿದೆ ಎಂದರು. ಇದಕ್ಕೆ ಪ್ರತಿ ಕ್ರಿಯಿಸಿದ ನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಪಾಲಿಕೆಗೆ ಕಸ ಸಾಗಾಣಿಕೆಗೆ ಸಂಬಂಧಿಸಿದ 13 ಹೊಸ ಆಟೋ ಟಿಪ್ಪರ್ಗ ಳನ್ನು ಖರೀದಿಸಲಾಗಿದ್ದು, ಹಸಿ ಕಸ ಸಾಗಾಟಕ್ಕೆ ಯಾವುದೇ ಸಮಸ್ಯೆಯಿಲ್ಲ ಎಂದರು.
ವರಾಹ ಶಾಲೆ ನಿರ್ಮಿಸಿದ ಬಳಿಕ ಹಂದಿಗಳ ಸ್ಥಳಾಂತರಕ್ಕೆ ಮಾಲೀಕರುಗಳಿಗೆ ಸಮಯ ನಿಗದಿಪಡಿಸ ಲಾಗುವುದು. ಇಲ್ಲದಿದ್ದಲ್ಲಿ, ನಗರದಲ್ಲಿ ಕಂಡುಬರುವ ಹಂದಿಗಳನ್ನು ಪಾಲಿಕೆಯಿಂದಲೇ ಹಿಡಿದು, ಮಾರಾಟ ಮಾಡಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು.
ಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್ ಮಾತನಾಡಿ, ಸಾಂಕ್ರಾಮಿಕ ರೋಗಗಳು ವ್ಯಾಪಕ ವಾಗಿರುವ ಇಂತಹ ಸಂದರ್ಭದಲ್ಲಿಯೇ ವರಾಹ ಶಾಲೆ ನಿರ್ಮಾಣಕ್ಕೆ ನಿರ್ಧರಿಸುವುದು ಸೂಕ್ತವಾಗಿದೆ. ಕೆಲವರಿಂದ ಇದಕ್ಕೆ ಆಕ್ಷೇಪಣೆಗಳು ಬಂದರೂ, ಅವುಗಳನ್ನು ನಿವಾರಿಸಿ, ಮನವೊಲಿಸಿ ಅನುಷ್ಠಾನಕ್ಕೆ ತರಲೇಬೇಕು. ವರಾಹ ಶಾಲೆಗೆ ಭೂಮಿ ನಿಗದಿಪಡಿಸುವಾಗ ಜನವಸತಿ ಪ್ರದೇಶದಿಂದ ದೂರವಿದ್ದರೆ ಒಳಿತು ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅವರು ಮಾತನಾಡಿ, ನಗರದ ರಸ್ತೆಗಳಲ್ಲಿ ಹಂದಿಗಳ ಓಡಾಟದಿಂದಾಗಿ ಅಪಘಾತ ಪ್ರಕರಣಗಳು ಹೆಚ್ಚುತ್ತಿರುವುದು ಇದರ ಗಂಭೀರತೆಗೆ ನಿದರ್ಶನ ವಾಗಿದೆ. ವರಾಹ ಶಾಲೆ ಬಳಿ ವಾಸನೆ ಬರುತ್ತದೆ ಎಂಬ ಬಗ್ಗೆ ಆಕ್ಷೇಪಣೆಗಳಿರುತ್ತವೆ. ಹೀಗಾಗಿ ಹಂದಿಗಳ ಸಾಕಾಣಿಕೆಯಲ್ಲಿ ವಾಸನೆ ಬಾರದಂತೆ ವಿದೇಶಗಳಲ್ಲಿ ಕೈಗೊಂಡಿರುವ ವಿಧಾನಗಳನ್ನು ಅರಿತು, ಇಂತಹ ವಿಧಾನಗಳನ್ನು ಇಲ್ಲಿಯೂ ಅನುಸರಿಸಬೇಕು ಎಂದರು.
ಸಭೆಯಲ್ಲಿ ನಗರ ಪಾಲಿಕೆ ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಡಿ. ಗೋಣೆಪ್ಪ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.