ದಾವಣಗೆರೆ, ಜು. 21- ತ್ಯಾಗ ಹಾಗೂ ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ನಗರಾದ್ಯಂತ ಮುಸ್ಲಿಂ ಬಾಂಧವರು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.
ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಈದ್-ಉಲ್-ಅಜ್ಹಾ ಪ್ರಾರ್ಥನೆಯನ್ನು ಬೆಳಿಗ್ಗೆ 7 ಗಂಟೆಯಿಂದಲೇ ಮಸೀದಿಗಳಲ್ಲಿ ತಂಡ ತಂಡವಾಗಿ ಸೇರಿಕೊಂಡು ಪ್ರಾರ್ಥನೆ ಸಲ್ಲಿಸಿದರು.
ದೇಶಾದ್ಯಂತ ಕೋವಿಡ್ ಮಾರ್ಗಸೂಚಿ ಪ್ರಕಾರ ಈದ್ಗಾಗಳಲ್ಲಿ ನಮಾಜ್ ಮಾಡಲು ನಿರ್ಬಂಧಿಸಿದ ಕಾರಣ ಹಾಗೂ ಜಿಲ್ಲಾಡಳಿತದ ಸೂಚನೆ ಮೇರೆಗೆ ಮುಸ್ಲಿಂ ಬಾಂಧವರು ಆಯಾ ಪ್ರದೇಶಗಳಲ್ಲಿರುವ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಹೊಸ ಹೊಸ ಬಟ್ಟೆಗಳನ್ನು ಧರಿಸಿಕೊಂಡು ತಲೆಗೆ ಟೋಪಿ ಹಾಕಿಕೊಂಡು ಮಕ್ಕಳೊಂದಿಗೆ ಮಸೀದಿಗಳತ್ತ ಧಾವಿಸುತ್ತಿದ್ದ ಮುಸ್ಲಿಂ ಬಾಂಧವರು `ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್’ಎಂಬ ಶ್ಲೋಕ ಓದುತ್ತಾ ಹೆಜ್ಜೆ ಹಾಕುತ್ತಿದ್ದ ದೃಶ್ಯಕಂಡು ಬಂದಿತು. ಬೆಳಿಗ್ಗೆ ಫಜರ್ ನಮಾಜ್ ನಂತರ ಗಂಟೆಗೊಂದು ಜಮಾತ್ ಮಾಡಿ ಹಬ್ಬದ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು ಒಬ್ಬರಿಗೊಬ್ಬರು ಆಲಂಗಿಸುವ ಮೂಲಕ ಹಸ್ತ ಲಾಘವ ಮಾಡಿ ಹಬ್ಬದ ಸಂತೋಷ ವಿನಿಮಯ ಮಾಡಿಕೊಂಡರು.
ದೇಶಕ್ಕೆ ಕಂಟಕವಾಗಿರುವ ಕೊರೊನಾ, ಡೆಲ್ಟಾ ಮೂರನೇ ಅಲೆಯಂತಹ ಕಾಯಿಲೆಗಳು ದೇಶದಿಂದ ತೊಲಗಲಿ ಎಂದು ದುವಾ ಮಾಡಿದ ಉಲೇಮಾಗಳು ನಮ್ಮ ದೇಶ ಸಮೃದ್ಧಿಯತ್ತ ಸಾಗಲಿ ಎಂದು ಆಶಿಸಿ, ಬಕ್ರೀದ್ ಹಬ್ಬದ ಶುಭ ಹಾರೈಸಿದರು.
ಈದ್ಗಾಕ್ಕೆ ಡಿಸಿ-ಎಸ್ಪಿ ಭೇಟಿ : ಪ್ರಾರ್ಥನೆ ಸಲ್ಲಿಸಲು ಈದ್ಗಾಗಳಲ್ಲಿ ನಿಷೇಧವಿದ್ದರೂ ಸಹ ಮುಸ್ಲಿಂ ಬಾಂಧವರು ಈದ್ಗಾಕ್ಕೆ ತೆರಳಿ ಅಗಲಿರುವ ತಮ್ಮ ಕುಟುಂಬ ಸದಸ್ಯರಿಗೆ ಹೂ, ಗಂಧ ಅರ್ಪಿಸಿ ದುವಾ ಮಾಡಿದರು. ಹೀಗಾಗಿ ಪಿ.ಬಿ. ರಸ್ತೆಯಲ್ಲಿ ತಂಡ ತಂಡವಾಗಿ ಆಗಮಿಸಿದ ಮುಸ್ಲಿಂ ಬಾಂಧವರು ಕೊಂಚ ಗಂಟೆಗಳ ಕಾಲ ಈದ್ಗಾದಲ್ಲಿದ್ದರು. ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್ ಅವರುಗಳು ಈದ್ಗಾಕ್ಕೆ ಭೇಟಿ ನೀಡಿದ್ದರು.
ಮೀನಾ ಬಜಾರ್‌ನಲ್ಲಿ ಬಕ್ರೀದ್ ಬಹಾರ್ : ಕಳೆದ ಎರಡು ವರ್ಷಗಳಿಂದ ಮೀನಾ ಬಜಾರ್ ಮಾರ್ಕೆಟ್‌ನಿಂದ ವಂಚಿತರಾಗಿದ್ದ ಮುಸ್ಲಿಂ ಬಾಂಧವರು ಇದ್ದಕ್ಕಿದ್ದಂತೆ ಕಳೆದ ಎರಡು ದಿನಗಳಲ್ಲಿ ಬಿಡಾರ ಹಾಕಿದ್ದ ಮೀನಾ ಬಜಾರ್‌ನಲ್ಲಿ ಈ ಬಾರಿ ಬಹಳ ವಿಶೇಷವಾದ ಐಟಂಗಳು ಲಭ್ಯವಾದವು. ಗೃಹ ಬಳಕೆ ವಸ್ತು ಸೇರಿದಂತೆ ಬಟ್ಟೆ ಅಂಗಡಿಗಳು ಝಗಮಗಿಸುತ್ತಿದ್ದವು. ಟಿವಿ ಸೀರಿಯಲ್ ನಾಯಕಿಯರ ಡಿಸೈನ್ ಬಟ್ಟೆಗಳು, ಚಪ್ಪಲಿ, ಬಳೆಗಳು ಸೇರಿದಂತೆ ಇನ್ನು ಅನೇಕ ವಸ್ತುಗಳ ಖರೀದಿ ಜೋರಾಗಿತ್ತು.
ಬಹುತೇಕರಿಗೆ ಇದರ ಮಾಹಿತಿ ಲಭ್ಯವಾಗದ ಕಾರಣ ಮಾರಾಟಗಾರರು ತಂದ ಐಟಂಗಳು ಉಳಿಯಬಾರದೆಂಬ ಉದ್ದೇಶದಿಂದ ಕಡಿಮೆ ಬೆಲೆಗೆ ಮಾರಾಟ ಮಾಡಿ `ರಸ್ತೆ ಕಾ ಮಾಲ್ ಸಸ್ತೆ ಮೇ’ ಎಂದು ಘೋಷಣೆ ಹಾಕಿದ ದೃಶ್ಯಗಳು ಸಾಮಾನ್ಯವಾಗಿದ್ದವು. ಬಡವರಿಗೆ ವರದಾನವಾಗಿದ್ದ ಈ ಮೀನಾ ಬಜಾರ್ ನ ರಂಗು ಬಕ್ರೀದ್ ಹಬ್ಬದ ಬಹಾರ್ ಆಗಿ ಪರಿಣಮಿಸಿತು.
ರಂಜಾನ್ ಖರ್ಚು ಬಕ್ರೀದ್‌ಗೆ ಬಿತ್ತು !
ರಂಜಾನ್ ತಿಂಗಳಲ್ಲಿ ದೇಶಾದ್ಯಂತ ಲಾಕ್‌ಡೌನ್ ಇದ್ದ ಕಾರಣ ಮನೆಯ ಲ್ಲಿಯೇ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು ಹೊಸ ಬಟ್ಟೆ ಖರೀದಿಸಲು ಸಹ ಅವಕಾಶ ಸಿಕ್ಕಿಲ್ಲ. ಹೀಗಾಗಿ ರಂಜಾನ್ ತಿಂಗಳಲ್ಲಿ ಮಾಡ ಬೇಕಾದ ಹಬ್ಬದ ಖುಷಿಯ ಖರ್ಚು ಉಳಿತಾಯ ಆಗಿದ್ದರೂ ಬಕ್ರೀದ್ ಹಬ್ಬಕ್ಕೆ ಡಬಲ್ ಖರ್ಚು ಆಯ್ತು ಎಂದು ತಮ್ಮ ಅನುಭವ ಹಂಚಿ ಕೊಂಡ ಮುಸ್ಲಿಂ ಮುಖಂಡರೊಬ್ಬರು, ಒಟ್ಟಾಗಿ ಏನೇ ಆಗಲಿ ಸುಖ, ಶಾಂತಿಯಿಂದ ಬಕ್ರೀದ್ ನಮಾಜ್ ಸಲ್ಲಿಸಲು ಭಗವಂತನು ಕೃಪೆ ತೋರಿದ್ದಾನೆ ಎಂದರು.
– ಬಿ. ಸಿಕಂದರ್