ಸಿ.ಎಂ. ಬದಲಾವಣೆ ; ಪ್ರಮುಖರ ಅಭಿಪ್ರಾಯಗಳು

ಸಿ.ಎಂ. ಬದಲಾವಣೆ ; ಪ್ರಮುಖರ ಅಭಿಪ್ರಾಯಗಳು - Janathavaniಪೂರ್ಣಾವಧಿ ಕೆಲಸ ಮಾಡಲು ಅವಕಾಶ ನೀಡಿ

ಸಾಣೇಹಳ್ಳಿ, ಜು.21- ಹಾಲಿ ಇರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರು ಪೂರ್ಣಾವಧಿ ಕೆಲಸ ಮಾಡುವಂತೆ ಅವಕಾಶ ನೀಡ ಬೇಕು ಎಂದು ಸಾಣೇಹಳ್ಳಿ  ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ಮೂರ್ನಾಲ್ಕು ದಿನಗಳಿಂದ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಬದಲಾಯಿಸುವ ಮಾತುಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಯಾವುದೇ ಸರ್ಕಾರವಿರಲಿ, ಪೂರ್ಣ ಸ್ವಾತಂತ್ರ್ಯವಿದ್ದಾಗ ಮಾತ್ರ ಮುಖ್ಯಮಂತ್ರಿ ಉತ್ತಮ ಆಡಳಿತ ಕೊಡಲು ಸಾಧ್ಯ. 

ಕೇಂದ್ರ ಸರ್ಕಾರವು ಮತ್ತೆ ಮತ್ತೆ ರಾಜ್ಯ ಸರ್ಕಾರಗಳ ಮೇಲೆ ಹತೋಟಿ ಸಾಧಿಸುವ ಸಂಚು ಮಾಡಿದರೆ ಎಂತಹ ಮುಖ್ಯಮಂತ್ರಿ ಇದ್ದರೂ ಪರಿಪೂರ್ಣ ಆಡಳಿತ ಕೊಡಲು ಸಾಧ್ಯವಿಲ್ಲ. ಯಡಿಯೂರಪ್ಪನವರ ವಿಚಾರದಲ್ಲೂ ಇದೇ ಆಗಿದೆ ಎಂದರು.

ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಕರ್ನಾಟಕ ಅಷ್ಟೇ ಅಲ್ಲದೆ, ಭಾರತವೇ ನೋವು ಅನುಭವಿಸಿದೆ. ಇಂತಹ ಸಂದರ್ಭದಲ್ಲೂ ಮುಖ್ಯಮಂತ್ರಿಗಳಾಗಿ ಯಡಿಯೂರಪ್ಪ ಸರ್ಕಾರದ ಸಹೋದ್ಯೋಗಿಗಳ ಒಲವು ಗಳಿಸಿಕೊಂಡು ಆ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎನ್ನುವುದು ರಾಜ್ಯ ಹಾಗೂ ದೇಶಕ್ಕೆ ಗೊತ್ತಿದೆ.

ಒಳ್ಳೆಯ ಆಡಳಿತ ಕೊಡಬೇಕೆಂದರೆ ಎಲ್ಲರ ಸಹಕಾರವೂ ಇರಬೇಕು. ಜೊತೆಗೆ ಆ ವ್ಯಕ್ತಿ ಯಾವುದೇ ಪಕ್ಷದವನಾಗಿರಲಿ ಕೊನೆ ಪಕ್ಷ ಐದು ವರ್ಷ ಆ ಸ್ಥಾನದಲ್ಲಿ ಮುಂದುವರೆದರೆ ಮಾತ್ರ ಒಳ್ಳೆಯ ಕಾರ್ಯಗಳನ್ನು ಮಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಜನಿಪ್ರತಿನಿಧಿಗಳು ಮುಖ್ಯಮಂತ್ರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟು ಉತ್ತಮ ಆಡಳಿತ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಶ್ರೀಗಳು ವೀಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

ಸಿ.ಎಂ. ಬದಲಾವಣೆ ; ಪ್ರಮುಖರ ಅಭಿಪ್ರಾಯಗಳು - Janathavaniಮಠಾಧೀಶರ ಮಧ್ಯಪ್ರವೇಶ ಸಲ್ಲದು

ದಾವಣಗೆರೆ, ಜು. 21 – ಮುಖ್ಯಮಂತ್ರಿ ಬದಲಾ ವಣೆ ವಿಚಾರದಲ್ಲಿ ಮಠಾ ಧೀಶರ ಮಧ್ಯ ಪ್ರವೇಶಕ್ಕೆ ಆಕ್ಷೇಪಿಸಿರುವ ಹಿರಿಯ ಶಾಸಕ ಎಸ್.ಎ. ರವೀಂದ್ರನಾಥ್, ಮಠಾಧೀಶರು ರಾಜಕೀಯ ಮಾಡಬಾರದು ಎಂದಿದ್ದಾರೆ.

ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ವೀರಶೈೃವ – ಲಿಂಗಾಯತರು ಎಲ್ಲರೂ ಮಠಾಧೀಶರ ಭಕ್ತರೇ. ನಾನೂ ವೀರಶೈವ – ಲಿಂಗಾಯತನೇ. ಸಚಿವರಾದ ಜಗದೀಶ್ ಶೆಟ್ಟರ್, ಮುರುಗೇಶ್ ನಿರಾಣಿ ಹಾಗೂ ಉಮೇಶ್ ಕತ್ತಿ ಎಲ್ಲರೂ ಲಿಂಗಾಯತರೇ. ಒಬ್ಬರ ಪರವಾಗಿಯೇ ಎಲ್ಲರೂ ಈ ರೀತಿ ಮಾತನಾಡಬಾರದು ಎಂದಿದ್ದಾರೆ. ಕಾಂಗ್ರೆಸ್ ಶಾಸಕರಾದ ಶಾಮನೂರು ಶಿವಶಂಕರಪ್ಪ ಹಾಗೂ ಎಂ.ಬಿ. ಪಾಟೀಲ್ ಅವರು ಯಡಿಯೂರಪ್ಪ ಅವರನ್ನು ಬೆಂಬಲಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಅವರು ರಾಜೀನಾಮೆ ನೀಡಿ ಬಿಜೆಪಿ ಸೇರಿ ಆನಂತರ ಈ ಮಾತು ಹೇಳಿದರೆ ಒಪ್ಪಿಕೊಳ್ಳುತ್ತೇನೆ ಎಂದರು.

ಕಾಂಗ್ರೆಸ್‌ನಲ್ಲಿ ಇದ್ದು ವೀರಶೈವ ಅಂದರೆ ಹೇಗೆ? ಯಡಿಯೂರಪ್ಪ ಅಧಿಕಾರಕ್ಕೆ ಬರುವ ಮುಂಚೆ ಅವರಿಗೆ ಬೆಂಬಲಿಸಬೇಕಿತ್ತು. ಆದರೆ, ಇಂತಹ ಸಂದರ್ಭದಲ್ಲಿ ಈ ರೀತಿಯ ಹೇಳಿಕೆ ನೀಡಬಾರದು. ಬೇರೆ ಪಕ್ಷದಲ್ಲಿ ಇದ್ದುಕೊಂಡು ಬೆಂಬಲಿಸುತ್ತೇವೆ ಅನ್ನುವುದು ನ್ಯಾಯಯುತವಲ್ಲ ಎಂದು ಹೇಳಿದರು.

ಮುಖ್ಯಮಂತ್ರಿ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ರವೀಂದ್ರನಾಥ್, ಪಕ್ಷದ ವರಿಷ್ಠರ ತೀರ್ಮಾನ ಒಪ್ಪಿಕೊಳ್ಳುತ್ತೇನೆ ಎಂದು ಯಡಿಯೂರಪ್ಪ ಅವರೇ ಹೇಳಿದ್ದಾರೆ. ನಾನೂ ಸಹ ವರಿಷ್ಠರ ತೀರ್ಮಾನ ಒಪ್ಪಿಕೊಳ್ಳುತ್ತೇನೆ ಎಂದು ತಿಳಿಸಿದರು.

ಸಿ.ಎಂ. ಬದಲಾವಣೆ ; ಪ್ರಮುಖರ ಅಭಿಪ್ರಾಯಗಳು - Janathavaniಬಿಎಸ್‌ವೈಗೆ ಎಸ್ಸೆಸ್ ಬೆಂಬಲ  ; ಸಂಸದ ಸಿದ್ದೇಶ್ವರ ಆಕ್ಷೇಪ

ದಾವಣಗೆರೆ, ಜು.21- ಶಾಸಕ ಶಾಮನೂರು ಶಿವಶಂಕರಪ್ಪ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬೆಂಬಲಿಸಿ ನೀಡಿದ ಹೇಳಿಕೆ ಬಗ್ಗೆ ತರಾಟೆಗೆ ತೆಗೆದುಕೊಂಡಿರುವ ಸಂಸದ ಜಿ.ಎಂ. ಸಿದ್ದೇಶ್ವರ, ನಾವೇ ಲಿಂಗಾಯತರ ಪರ ಎಂದು ತೋರಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.

ಬಿಜೆಪಿಯವರು ಯಾರೂ ಲಿಂಗಾಯತರ ಪರ ನಿಲ್ಲಲಿಲ್ಲ ಎಂದು ತೋರಿಸಿಕೊಳ್ಳಲು ಎಸ್ಸೆಸ್ ಈ ರೀತಿ ಮಾಡುತ್ತಿದ್ದಾರೆ. ಬಿಜೆಪಿಗೆ ಚುನಾವಣೆಯಲ್ಲಿ 106 ಸೀಟು ಬಂದಾಗ ಯಾವ ಲಿಂಗಾಯತ ಶಾಸಕರು ಬಂದು ಯಡಿಯೂರಪ್ಪ ಅವರನ್ನು ಬೆಂಬಲಿಸಿದರು ? ಎಂದು ಪ್ರಶ್ನಿಸಿರುವ ಸಿದ್ದೇಶ್ವರ, ಆ ಸಂದರ್ಭದಲ್ಲಿ ನಾವೇ ಶಾಮನೂರು ಶಿವಶಂಕರಪ್ಪನವರನ್ನು ಕರೆದಿದ್ದೆವು. ಆಗ ಯಾಕೆ ಬರಲಿಲ್ಲ ? ಎಂದೂ ಕೇಳಿದ್ದಾರೆ.

error: Content is protected !!