ಕರ್ಫ್ಯೂಗೆ ನಗರ ಮೌನ.. ಸಮಸ್ಯೆಗಳಲ್ಲಿ ಜನ…

ದಾವಣಗೆರೆ, ಏ.28- ಕೊರೊನಾ ಕರ್ಫ್ಯೂಗೆ ಬೆಳಿಗ್ಗೆ 10ರ ನಂತರ ನಗರ ಸಂಪೂರ್ಣ ಸ್ತಬ್ಧವಾಗಿತ್ತು. ಜನತೆ ಸ್ವ ಇಚ್ಛೆಯಿಂದಲೇ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸರ್ಕಾರದ ಆದೇಶಕ್ಕೆ ಸ್ಪಂದಿಸಿದರು.

ವಹಿವಾಟು ಇಲ್ಲದೆ ಸಂಪೂರ್ಣ ನಗರ ಮೌನವಾಗುತ್ತಿರುವ ಬೆನ್ನಲ್ಲೇ ಸಮಸ್ಯೆಗಳೂ ಅನಾವರಣಗೊಳ್ಳಲಾರಂಭಿಸಿವೆ.

ಬುಧವಾರ ಲಾರೀ ಮಾಲೀಕರು ಸಾಗಾಣಿಕೆ ಸಮಯದಲ್ಲಿ ಲಾರಿಗಳು ಪಂಕ್ಚರ್ ಆದರೆ ಗ್ಯಾರೇಜ್‌ಗಳು ಬೇಕು ಎಂದರೆ, ಎಪಿಎಂಸಿ ವರ್ತಕರು 10 ಗಂಟೆ ಒಳಗಾಗಿ ಟೆಂಡರ್ ಪ್ರಕ್ರಿಯೆಗಳನ್ನು ಮುಗಿಸಲು ಸಾಧ್ಯವಿಲ್ಲ ಎಂದರು.

ಹೀಗೆ ಹಲವು ಸಮಸ್ಯೆಗಳು ಕರ್ಫ್ಯೂ ಯಶಸ್ವಿಯ ಬೆನ್ನಲ್ಲೇ ಉದ್ಭವಿಸಲಾರಂಭಿಸಿವೆ.

ಬೆಳಿಗ್ಗೆ 6 ರಿಂದ 10ರವರೆಗೆ ಅಗತ್ಯ ವಸ್ತುಗಳ ಮಾರಾಟಕ್ಕೆ ಅನುಮತಿ ನೀಡಿದ್ದರಿಂದ ಹಾಲು-ತರಕಾರಿ, ದಿನಸಿ, ಹಣ್ಣುಗಳನ್ನು ಜನತೆ ಮುಗಿ ಬಿದ್ದು ಕೊಂಡುಕೊಂಡರು.

ನಗರದ ಕೆ.ಆರ್. ಮಾರುಕಟ್ಟೆ ಹಾಗೂ ತಹಶೀಲ್ದಾರ್ ಕಚೇರಿ ಬಳಿಯ ತರಕಾರಿ ಮಾರು ಕಟ್ಟೆಗಳಲ್ಲಿ ಬೆಳಿಗ್ಗೆ ಹೋಲ್‌ಸೆಲ್ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ತಳ್ಳು ಗಾಡಿಯವರು ಹೆಚ್ಚಾಗಿ ತರಕಾರಿ ಕೊಳ್ಳುತ್ತಿದ್ದುದು ಕಂಡು ಬಂತು. ಮಾರುಕಟ್ಟೆ ರಸ್ತೆಯಲ್ಲಿ ರೀಟೆಲ್  ತರಕಾರಿ ಮಾರಲು ಅವಕಾಶವಿರಲಿಲ್ಲ.

ಹೈಸ್ಕೂಲ್ ಮೈದಾನದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಖಾಸಗಿ ಹಾಗೂ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಗಳು ಖಾಲಿಯಾಗಿ ದ್ದವು. ಅಡ್ಡಲಾಗಿ ಬ್ಯಾರಿಕೇಡ್ ಹಾಕಲಾಗಿತ್ತು.

ಔಷಧಿ ಅಂಗಡಿಗಳು ಹಾಗೂ ಪೆಟ್ರೋಲ್ ಬಂಕ್‌ಗಳು ದಿನಪೂರ್ತಿ ತೆರೆಯಲ್ಪಟ್ಟಿದ್ದವು. ಆದರೆ ಗ್ರಾಹಕರ ಸಂಖ್ಯೆ ವಿರಳವಾಗಿತ್ತು. 

ಬೆಳಿಗ್ಗೆ ಕೃಷಿ ಚಟುವಟಿಕೆ ಹಾಗೂ ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ಸಂಬಂಧಿಸಿದ ಮಳಿಗೆಗಳು ತೆರೆಯಲ್ಪಟ್ಟಿದ್ದವಾದರೂ ನಂತರ ಅವುಗಳನ್ನೂ ಮುಚ್ಚಿಸಲಾಯಿತು. ಅನಗತ್ಯವಾಗಿ ಜನತೆ ಅಡ್ಡಾಡದಂತೆ ಪೊಲೀಸರು ನಿಗಾ ವಹಿಸಿದ್ದರು. ವಾಹನ ಸವಾರರನ್ನು ತಡೆದು ಕಾರಣ ಕೇಳುತ್ತಿದ್ದರು.

ಮಂಡಿಪೇಟೆ, ಗಡಿಯಾರ ಕಂಬ, ಪಿ.ಬಿ. ರಸ್ತೆ, ಕಾಳಿಕಾದೇವಿ ರಸ್ತೆ, ಹದಡಿ ರಸ್ತೆ, ಜಯದೇವ ವೃತ್ತ, ಅಶೋಕ ರಸ್ತೆ ಸೇರಿದಂತೆ ಪ್ರಮುಖ ರಸ್ತೆ, ವೃತ್ತಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.

ಕಬ್ಬಿಣ, ಸಿಮೆಂಟ್ ಅಂಗಡಿ ಮಾಲೀಕರಲ್ಲಿ ಗೊಂದಲ: ಕಬ್ಬಿಣ-ಸಿಮೆಂಟ್ ಸೇರಿದಂತೆ ಕಟ್ಟಡ ನಿರ್ಮಾಣ ಸಾಮಗ್ರಿಗಳ ಮಳಿಗೆ ತೆರೆಯಲು ಅನುಮತಿ ಇದೆ ಎಂದು ಮಳಿಗೆ ತೆರೆದು ವ್ಯಾಪಾರ ಆರಂಭಿಸಿದ್ದರು. ಆದರೆ ಪೊಲೀಸರು ಮಳಿಗೆ ಮುಚ್ಚಿಸುತ್ತಿದ್ದಾರೆ ಎಂದು ಕೆಲ ವ್ಯಾಪಾರಸ್ಥರು ಆರೋಪಿಸಿದರು. ಬಡಾವಣೆಗಳ ಒಳಗಡೆ ಕಟ್ಟಡ ನಿರ್ಮಾಣ ಕಾಮಗಾರಿಗಳು ಎಂದಿನಂತೆ ನಡೆದವು. ಬ್ಯಾಂಕುಗಳು ಬದಲಾದ ಸಮಯದಲ್ಲಿ ಹಾಗೂ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. 

error: Content is protected !!