ದಾವಣಗೆರೆ, ಏ.28- ಕೃಷಿ ಉತ್ಪನ್ನ ಮಾರುಕಟ್ಟೆ ವಹಿವಾಟನ್ನು ಬೆಳಿಗ್ಗೆ 6 ರಿಂದ 10ರವರೆಗೆ ಮಾತ್ರ ಅವಕಾಶ ನೀಡಿರುವ ಬಗ್ಗೆ ಖರೀದಿದಾರರು, ರೈತರು ಹಾಗೂ ಹಮಾಲರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಳಿಗ್ಗೆ 11ರ ಸಮಾರಿಗೆ ಎಪಿಎಂಸಿ ಕಚೇರಿ ಬಳಿ ಧಾವಿಸಿದ ಖರೀದಿದಾರರು, ಹಮಾಲರು ಅವಧಿ ವಿಸ್ತರಣೆಗಾಗಿ ಅಧಿಕಾರಿಗಳನ್ನು ಒತ್ತಾಯಿಸಿದರು. ಆದರೆ ಅಧಿಕಾರಿಗಳು ಸರ್ಕಾರದ ಮಾರ್ಗಸೂಚಿ ಅನ್ವಯ 10ರ ನಂತರ ಯಾವುದೇ ವಹಿವಾಟು ನಡೆಸುವಂತಿಲ್ಲ ಎಂದರು.
ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರ ಗಿರೀಶ್, ಬೆಳಿಗ್ಗೆ 6 ರಿಂದ 10ರವರೆಗೆ ವಹಿವಾಟಿಗೆ ಅವಕಾಶ ನೀಡಿದ್ದರಿಂದ ರೈತರಿಗೆ ತೀವ್ರ ತೊಂದರೆ ಯಾಗುತ್ತಿದೆ. ಆದ್ದರಿಂದ ನಾವು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಸಂಜೆ ವರೆಗೆ ಅವಕಾಶ ನೀಡುವಂತೆ ಮನವಿ ಮಾಡಿದೆವು. ಆದರೆ ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರದಿಂದ ಈ ಬಗ್ಗೆ ಆದೇಶವಿದ್ದು ಅದನ್ನು ಪಾಲಿಸಲೇ ಬೇಕು ಎಂದು ಹೇಳಿದ್ದಾರೆ ಎಂದರು. ಪ್ರಸ್ತುತ ಎಪಿಎಂಸಿಗೆ ಸಾವಿರಾರು ಕ್ವಿಂಟಾಲ್ ಭತ್ತ, ರಾಗಿ, ಶೇಂಗಾ ಅವಕ ಬರುತ್ತಿದೆ. ಖರೀದಿದಾರರು ರೈತರಿಂದ ಖರೀದಿಸಿದ ಧಾನ್ಯವನ್ನು ತರುವುದೇ ಬೆಳಿಗ್ಗೆ 10ರ ನಂತರ. ಆ ಮೇಲೆ ಟೆಂಡರ್ ಪ್ರಕ್ರಿಯೆ ನಡೆಸಬೇಕು. ಆದರೆ ಸರ್ಕಾರ ಸೂಚಿಸಿರುವ ಅವಧಿಯೊಳಗೆ ಅದು ಸಾಧ್ಯವಿಲ್ಲ.
ಖರೀದಿ ಪ್ರಕ್ರಿಯೆ ನಡೆಯದಿದ್ದರೆ ರೈತರಿಗೆ ತೊಂದರೆಯಾಗುತ್ತದೆ. ಅಲ್ಲದೆ ಹಸಿ ಭತ್ತವಿದ್ದರೆ 15-20 ದಿನಗಳ ಕಾಲ ಇಟ್ಟುಕೊಂಡರೆ ಹಾಳಾಗುವ ಸಾಧ್ಯತೆ ಇದೆ ಎಂದು ಖರೀದಿದಾರರು ಆರೋಪಿಸಿದರು.
ಕಳೆದ ಬಾರಿ ಲಾಕ್‌ಡೌನ್ ಅವಧಿಯಲ್ಲಿ ಎಪಿಎಂಸಿ ವಹಿವಾಟಿಗೆ ಅವಕಾಶವಿತ್ತು. ಹಮಾಲರಿಗೂ ಐಡಿ ಕಾರ್ಡ್ ನೀಡಲಾಗಿತ್ತು. ಆದರೆ ಈಗ ಹಮಾಲರು ಎಪಿಎಂಸಿಗೆ
ಬರಲು ಪೊಲೀಸರು ಬಿಡುತ್ತಿಲ್ಲ. ವಹಿವಾಟು ಇಲ್ಲದೆ ನೂರಾರು ಹಮಾಲರು ಸಂಜೆವರೆಗೆ ನಡೆಯಲು ಅನುಮತಿ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಒಟ್ಟಿನಲ್ಲಿ ಎಪಿಎಂಸಿ ವಹಿವಾಟು ಪ್ರಕ್ರಿಯೆ ನಡೆಯದ ಕಾರಣ ರೈತರ ಅವಕ ಹಾಗೆಯೇ ಉಳಿದಿತ್ತು. ಮಧ್ಯಾಹ್ನದ ವೇಳೆಗೆ ರೈತರು, ದಲಾಲರು, ಹಮಾಲರು ಸರ್ಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಾ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹೊರ ನಡೆದರು.