ಯೋಗ ಪರಂಪರೆ : ಅಥಣಿ ಶಿವಯೋಗಿಗಳು ಅಗ್ರಗಣ್ಯರು

ಬಸವ ಪ್ರಭು ಸ್ವಾಮೀಜಿ

ದಾವಣಗೆರೆ, ಏ. 28- ಅಥಣಿ ಶಿವಯೋಗಿಗಳು ನಮ್ಮ ದೇಶ ಕಂಡ ಮಹಾನ್ ಶಿವಯೋಗಿಗಳು. ದೇಶದ ಯೋಗ ಪರಂಪರೆ ಯಲ್ಲಿ ಅಗ್ರಗಣ್ಯರಾಗಿದ್ದಾರೆ ಎಂದು ವಿರಕ್ತ ಮಠದ ಶ್ರೀ ಬಸವ ಪ್ರಭು ಸ್ವಾಮೀಜಿ ಹೇಳಿದರು. 

ದಾವಣಗೆರೆ ವಿರಕ್ತಮಠದಲ್ಲಿ ಸರಳವಾಗಿ ನಡೆದ ಅಥಣಿ ಶಿವಯೋಗಿಗಳವರ 100ನೇ ವರ್ಷದ ಸ್ಮರಣೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಿವಯೋಗ ಸಿದ್ಧಿಯನ್ನು ಸಂಪಾದಿಸಿ, ಬಳಿ ಬಂದ ಭಕ್ತರ ಕಷ್ಟಗಳನ್ನು ನಿವಾರಣೆ ಮಾಡಿದ, ಧಾರ್ಮಿಕ ಕ್ಷೇತ್ರದ ಮೌಂಟ್ ಎವರೆಸ್ಟ್ ಶಿಖರ ಅಥಣಿ ಮುರುಗೇಂದ್ರ ಶಿವಯೋಗಿಗಳು. ಅವರ ಮಹಿಮೆಯಿಂದ ಕಾವಿ ಬಟ್ಟೆಯನ್ನು ಧರಿಸಿದವರಿಗೆ ಗೌರವ ಸಿಗುತ್ತಿದೆ ಎಂದರು.

ಸ್ವಾಮಿಯಾದರೆ ಮೃತ್ಯುಂಜಯ ಅಪ್ಪ ಗಳಂತೆ ಆಗಬೇಕು, ಜಗದ್ಗುರುಗಳಾದರೆ ಜಯದೇವ ಜಗದ್ಗುರುಗಳಂತೆ ಆಗಬೇಕು. ಶಿವಯೋಗಿಯಾದರೆ ಅಥಣಿ ಶಿವಯೋಗಿಯಂತೆ ಆಗಬೇಕು ಎಂಬ ಮಾತು ಪ್ರಚಲಿತವಾಗಿದೆ. ಕಾರಣ ಅಂತಹ ಶ್ರೇಷ್ಠ ಬದುಕನ್ನು ಅವರು ಬಾಳಿದರು. ನಡೆ ನುಡಿಗಳು ಒಂದಾದ ಬದುಕು ಶಿವಯೋಗಿಗಳದ್ದು. ಅವರು ಎಂದೂ, ಯಾರಿಗೂ ಬೋಧನೆ ಮಾಡಲಿಲ್ಲ. ತಮ್ಮ ನಿಜಾಚರಣೆಯ ಬದುಕಿನಿಂದ ಬೋಧಿಸಿದರು. ಅಂತಹ ಮಹಾತ್ಮರನ್ನು ಸ್ಮರಿಸೋಣ. ಅವರ ಆದರ್ಶದ ದಾರಿಯಲ್ಲಿ ನಡೆಯೋಣ ಎಂದರು.

ಮಹಾತ್ಮರನ್ನು ಸ್ಮರಿಸಿದರೆ ನಮಗೆ ಶಾಂತಿ, ನೆಮ್ಮದಿ ಸಿಗುತ್ತದೆ. ಕಾರಣ ತಮ್ಮ ಶಿವಯೋಗ ಸಾಧನೆಯಿಂದ ಅಧ್ಯಾತ್ಮಿಕ ಶಕ್ತಿಯನ್ನು ಪಡೆದಿರುತ್ತಾರೆ. ಅಂತವರ ಹೆಸರುಗಳು ಮಂತ್ರಗಳಾಗುತ್ತವೆ. ಹಾಗಾಗಿ ನಾವು ಅವರನ್ನು ಸ್ಮರಣೆ ಮಾಡಿದರೆ ನಮ್ಮ ಕಷ್ಟಗಳು ಪರಿಹಾರ ವಾಗುತ್ತವೆ. ಶಿವಯೋಗಿಗಳಿಗೆ ಬಸವಣ್ಣನವರೇ ಬಲ. ಬಸವ ತತ್ವಗಳನ್ನು ಪಾಲಿಸಿಕೊಂಡು ಬಂದು ಶ್ರೇಷ್ಠರು, ಸರ್ವಜನರನ್ನು ಉದ್ಧರಿಸಿದ ಒಬ್ಬ ಸಮಾಜ ಯೋಗಿಯಾಗಿದ್ದಾರೆ ಎಂದು ಸ್ವಾಮೀಜಿ ಹೇಳಿದರು.

ವಿರಕ್ತಮಠದ ಕಾರ್ಯದರ್ಶಿ ಕಣಕುಪ್ಪಿ ಮುರುಗೇಶಪ್ಪ, ಎಸ್.ಜೆ.ಎಂ.ಶಾಲೆಯ ಮುಖ್ಯ ಶಿಕ್ಷಕ ರೋಷನ್‌, ಪಾರುಖ್, ಜಗದೀಶ್ , ಅಸಗೋಡು ಶಂಭಣ್ಣ, ಶಾಂತಕುಮಾರಿ ಹಾಗು ಇತರರು ಇದ್ದರು.

error: Content is protected !!