ಲಕ್ಷಣ-ಹರಡುವಿಕೆ ಬದಲಿಸಿದ ಕೊರೊನಾ

ಎರಡನೆ ಅಲೆಯಲ್ಲಿ ತಲೆನೋವು, ಕಣ್ಣು ಕೆಂಪು, ವಾಂತಿ – ಭೇದಿ ಹೆಚ್ಚು

ಸೋಂಕಿದ್ದರೂ ಆರ್‌ಟಿ – ಪಿಸಿಆರ್‌ನಲ್ಲಿ ನೆಗೆಟಿವ್

ದಾವಣಗೆರೆ, ಏ. 28 – ಕೊರೊನಾ ಮೊದಲ ಅಲೆಗೆ ಹೋಲಿಸಿದರೆ, ಎರಡನೇ ಅಲೆಯಲ್ಲಿ ಸೋಂಕು ಲಕ್ಷಣಗಳು ಬದಲಾಗಿದ್ದು, ಇದು ಜಿಲ್ಲಾಡಳಿತ ಹಾಗೂ ರೋಗಿಗಳಿಗೆ ಹೊಸ ಸವಾಲುಗಳನ್ನು ತಂದಿದೆ.

ಮೊದಲ ಅಲೆ ಬಂದಾಗ ಕೆಮ್ಮು, ಶೀತ, ಜ್ವರ ಮುಂತಾದ ಲಕ್ಷಣಗಳು ಕಂಡು ಬರುತ್ತಿದ್ದವು. ಆದರೆ, ಎರಡನೇ ಅಲೆಯಲ್ಲಿ ತಲೆನೋವು, ಕಣ್ಣು ಕೆಂಪಗಾಗುವುದು, ವಾಂತಿ – ಭೇದಿಯಂತಹ ಲಕ್ಷಣಗಳು ಕಂಡು ಬರುತ್ತಿವೆ.

ಈ ವಿಷಯ ತಿಳಿಸಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಲಕ್ಷಣಗಳು ಅರ್ಥವಾಗದೇ ಹಲವರು ಕೊರೊನಾ ಪರೀಕ್ಷೆಗೆ ಒಳಗಾಗುತ್ತಿಲ್ಲ. ಕೊನೆಗೆ ಆಸ್ಪತ್ರೆಗೆ ಬರುವ ವೇಳೆಗೆ ಶ್ವಾಸಕೋಶಕ್ಕೆ ಸೋಂಕಿನಿಂದ ಸಂಪೂರ್ಣ ಹಾನಿಯಾಗಿರುತ್ತದೆ ಎಂದಿದ್ದಾರೆ.

ವೈದ್ಯಕೀಯ ಪರಿಣಿತರ ಸಮಿತಿ ಈ ವಿಷಯಗಳನ್ನು ಪರಿಗಣಿಸಿದ್ದು, ಈ ಲಕ್ಷಣ ಹೊಂದಿರುವವರೂ ಪರೀಕ್ಷೆಗೆ ಒಳಗಾಗಬೇಕು ಹಾಗೂ ತಡ ಮಾಡದಂತೆ ಚಿಕಿತ್ಸೆ ಪಡೆಯಬೇಕು. ಅಗತ್ಯವಾದಲ್ಲಿ ಆಸ್ಪತ್ರೆಗೆ ದಾಖಲಾಗಬೇಕು ಎಂದು ಸಲಹೆ ನೀಡಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಈ ನಡುವೆ, ಎರಡನೇ ಅಲೆಯಲ್ಲಿ ಕೊರೊನಾ ಆರ್‌ಟಿ – ಪಿಸಿಆರ್ ಪರೀಕ್ಷೆಯಿಂದ ನುಸುಳಿಕೊಳ್ಳುವ ಸಾಧ್ಯತೆಯೂ ಕಂಡು ಬರು ತ್ತಿದೆ. ಕೊರೊನಾ ಸೋಂಕು ಶ್ವಾಸಕೋಶ ಮತ್ತಿತರೆ ಅಂಗಗಳಿಗೆ ತಲುಪಿದ್ದರೂ ಸಹ ಪರೀಕ್ಷೆಯಲ್ಲಿ ನೆಗೆಟಿವ್ ಬರುವ ಪ್ರಕರಣಗಳು ಕಂಡು ಬರುತ್ತಿವೆ!

ಮೊದಲ ಅಲೆಗೆ ಹೋಲಿಸಿದರೆ, ಎರಡನೇ ಅಲೆಯಲ್ಲಿ ಸೋಂಕಿದ್ದರೂ ನೆಗೆಟಿವ್ ಬರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಶ್ವಾಸಕೋಶದ ಸ್ಕ್ಯಾನ್ ಮಾಡಿದಾಗ ಕೊರೊನಾ ಸೋಂಕಿನಿಂದ ಹಾನಿಯಾಗಿರುವುದು ಕಂಡು ಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರ್‌ಟಿ – ಪಿಸಿಆರ್ ಪರೀಕ್ಷೆಗಾಗಿ ಗಂಟಲು ದ್ರವ ಪಡೆಯಲಾಗುತ್ತದೆ. ಗಂಟಲು ಭಾಗದಲ್ಲಿ ವೈರಾಣು ಇದ್ದರೆ ಪಾಸಿಟಿವ್ ಬರುತ್ತದೆ. ಒಂದು ವೇಳೆ ಗಂಟಲಲ್ಲಿ ವೈರಾಣು ಇರದೇ, ದೇಹದ ಬೇರೆ ಭಾಗಗಳಲ್ಲಿ ಹರಡಿದ್ದರೆ ನೆಗೆಟಿವ್ ಬರುತ್ತದೆ ಎಂದು ವೈದ್ಯಕೀಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೊರೊನಾ ನೆಗೆಟಿವ್ ಬಂದರೂ, ಸೋಂಕು ಹರಡಿರುವ ಪ್ರಕರಣಗಳು ಈಗ ದಿನಕ್ಕೆ 10-15 ಕಂಡು ಬರುತ್ತಿವೆ. ಇಂತಹ ಪ್ರಕರಣಗಳಲ್ಲಿ ಸರ್ಕಾರದ ಮಾರ್ಗಸೂಚಿಯ ಪ್ರಕಾರ, ಕೊರೊನಾ ರೀತಿಯ ಸೋಂಕು ಎಂದು ಪರಿಗಣಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊರೊನಾ ಸೋಂಕಿತರಿಗೆ ನೀಡುವ ಚಿಕಿತ್ಸೆಯನ್ನೇ ಇವರಿಗೂ ನೀಡಲಾಗುತ್ತಿದೆ. ಆದರೆ, ಇವರ ಲೆಕ್ಕ ಕೊರೊನಾ ಸೋಂಕಿತರ ಪಟ್ಟಿಗೆ ಸೇರ್ಪಡೆಯಾಗುವುದಿಲ್ಲ. ಹೀಗಾಗಿ ಕೊರೊನಾ ನೆಗೆಟಿವ್ ಬಂದರೂ, ಜನರು ಸೋಂಕು ಲಕ್ಷಣಗಳಿದ್ದರೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಅಧಿಕಾರಿ ವಿವರಿಸಿದ್ದಾರೆ.

ಎರಡನೇ ಅಲೆ ಅತ್ಯಂತ ವೇಗವಾಗಿ ಹರಡುತ್ತಿದೆ. ಮೊದಲ ಅಲೆಯಲ್ಲಿ ಸೋಂಕು ನಿಧಾನವಾಗಿ ಹರಡುತ್ತಿತ್ತು. ಆದರೆ, ಎರಡನೇ ಅಲೆಯಲ್ಲಿ ಕೊರೊನಾ ವೇಗವಾಗಿ ಹರಡುತ್ತಿದೆ. ಹೀಗಾಗಿ ಸೋಂಕು ನಗರದ ಒಂದು ಭಾಗದಲ್ಲಿ ಕೇಂದ್ರೀಕೃತವಾಗದೇ, ಎಲ್ಲೆಡೆ ಹರಡಿದೆ ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಜಿ.ಡಿ. ರಾಘವನ್ ಹೇಳಿದ್ದಾರೆ.

ಸೋಂಕು ವೇಗವಾಗಿ ಹರಡುತ್ತಿರುವ ಕಾರಣ, ಒಬ್ಬ ಸೋಂಕಿತರ ಸಂಪರ್ಕಿತರನ್ನು ತಪಾಸಣೆಗೆ ಒಳಪಡಿಸಿದಾಗ ನಾಲ್ಕೈದು ಸೋಂಕಿ ತರು ಸಿಗುತ್ತಿದ್ದಾರೆ ಎಂದೂ ಅವರು ತಿಳಿಸಿದ್ದಾರೆ. ಒಟ್ಟಾರೆ ಎರಡು ಅಲೆಯ ನಡುವೆ ಕೊರೊನಾ ಹೊಸ ರೂಪ ಪಡೆದುಕೊಂಡಿದೆ. ಜನರು ಹಾಗೂ ಆರೋಗ್ಯ ವಲಯ ಬದಲಾವಣೆಗೆ ತಕ್ಕಂತೆ ಸ್ಪಂದಿಸುವ ಅಗತ್ಯ ಕಂಡು ಬರುತ್ತಿದೆ.

error: Content is protected !!