ರೋಗಿಗಳಿಗೆ ಬೆಡ್ ಸಿಗದಿದ್ದರೆ ಡಿಸಿ-ಎಸ್ಪಿ ಹೊಣೆ
ದಾವಣಗೆರೆ, ಏ. 28 – ರೈತರು, ಕೈಗಾರಿಕೆಗಳು ಹಾಗೂ ಕಟ್ಟಡ ನಿರ್ಮಾಣದಂತಹ ಚಟುವಟಿಕೆಗಳಿಗೆ ತೊಂದರೆಯಾಗದ ರೀತಿಯಲ್ಲಿ ರಾಜ್ಯ ಸರ್ಕಾರ ವಿಧಿಸಿರುವ ಕೊರೊನಾ ನಿರ್ಬಂಧಗಳನ್ನು ಜಾರಿಗೆ ತರುವಂತೆ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ಜೊತೆ ಸಭೆ ನಡೆಸಿದ ಅವರು, ಸರ್ಕಾರದ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಹಾಗೂ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಮೈ ಮರೆಯಬಾರದು ಎಂದು ಹೇಳಿದರು.
ದಾವಣಗೆರೆ, ಹೊನ್ನಾಳಿ, ಚನ್ನಗಿರಿ, ಹರಿಹರ, ಜಗಳೂರು ತಾಲ್ಲೂಕುಗಳ ತಹಶೀಲ್ದಾರರೊಂದಿಗೆ ಸಚಿವರು ಮಾತನಾಡಿ, ರೈತರ ಚಟುವಟಿಕೆ ಮತ್ತು ಕೈಗಾರಿಕೆ ಚಟುವಟಿಕೆ ಹಾಗು ಇತರೆ ಕಟ್ಟಡ ಕಾಮಗಾರಿಗಳಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು. ಜೊತೆಗೆ ತಾಲ್ಲೂಕು ಟಾಸ್ಕ್ಫೋರ್ಸ್, ಗ್ರಾ.ಪಂ ಹಾಗೂ ಬೂತ್ ಮಟ್ಟದಲ್ಲಿ ಟಾಸ್ಕ್ಫೋರ್ಸ್ ಸಮಿತಿಗಳು ಸಕ್ರಿಯವಾಗಿ ಕೋವಿಡ್ ನಿರ್ವಹಣೆಯಲ್ಲಿ ಪಾಲ್ಗೊಳ್ಳಬೇಕು. ಪಿಡಿಓ, ಆಶಾ, ಅಂಗನವಾಡಿ ಸೇರಿದಂತೆ, ಹಿಂದೆ ಸಕ್ರಿಯವಾಗಿದ್ದ ಎಲ್ಲ ಸಿಬ್ಬಂದಿಗಳನ್ನೊಳಗೊಂಡು ಕಾರ್ಯ ನಿರ್ವಹಿಸಬೇಕೆಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಪ್ರತಿದಿನ 20 ಸಾವಿರ ಲಸಿಕೆಯ ಅಗತ್ಯವಿದೆ ಹಾಗೂ ರೆಮ್ಡಿಸಿವಿರ್ ಮತ್ತಿತರೆ ಔಷಧಗಳನ್ನು ಪೂರೈಸಬೇಕಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.
ಜಿಲ್ಲೆಗೆ ಅಗತ್ಯವಾಗಿರುವ ಔಷಧ ಹಾಗೂ ಲಸಿಕೆಗಳ ಪೂರೈಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ಜೊತೆ ಮಾತನಾಡುವುದಾಗಿ ಭೈರತಿ ತಿಳಿಸಿದರು.
ಜಿಲ್ಲೆಗೆ ಬಂದವರಿಗೆ ಕೊರೊನಾ ಲಕ್ಷಣವಿದ್ದಲ್ಲಿ ತಕ್ಷಣ ಪರೀಕ್ಷೆ ಮಾಡಿ, ಫಲಿತಾಂಶ ಬರುವವರೆಗೆ ಅವರನ್ನು ಹೋಂ ಕ್ವಾರಂಟೈನ್ನಲ್ಲಿ ಇರಿಸಬೇಕು. ಇದಕ್ಕಾಗಿ ಹೆಚ್ಚುವರಿಯಾಗಿ ಗೃಹ ರಕ್ಷಕ ದಳದ ಸಿಬ್ಬಂದಿ ಬಳಸಿಕೊಳ್ಳಬೇಕು. ಎಲ್ಲಾ ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಆಂಬ್ಯುಲೆನ್ಸ್ ಇರುವಂತೆ ನೋಡಿಕೊಳ್ಳಬೇಕು ಎಂದವರು ಹೇಳಿದರು.
ಕೋವಿಡ್ ಹಾಗೂ ಕೋವಿಡೇತರ ರೋಗಿಗಳಿಗೆ ಬೆಡ್ ನಿರಾಕರಿಸಬಾರದು. ಹಾಗೇನಾದರೂ ಬೆಡ್ ನಿರಾಕರಣೆಯಾದರೆ ಅದಕ್ಕೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳೇ ಕಾರಣರಾಗಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಎಚ್ಚರಿಸಿದರು. ಇತ್ತೀಚೆಗೆ ಕೊರೊನಾದಿಂದ ನಾಲ್ವರು ಮೃತಪಟ್ಟಿದ್ದು ತಮ್ಮ ಮನಸಿಗೆ ನೋವು ತಂದಿದೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಎಚ್ಚರಿಕೆಯಿಂದ ಕ್ರಮ ತೆಗೆದುಕೊಳ್ಳಬೇಕು ಎಂದೂ ಅವರು ಹೇಳಿದರು.
ಕೊರೊನಾ ನಿಯಂತ್ರಣ ಕ್ರಮಗಳಿಗಾಗಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಕಳೆದ ಬಾರಿಯಂತೆ ಬಳಸಿಕೊಳ್ಳಬೇಕು. ಬೂತ್ ಮಟ್ಟದ ಸಮಿತಿಗಳನ್ನು ರಚಿಸಬೇಕು. ಇದು ತಾಲ್ಲೂಕು ನೋಡಲ್ ಅಧಿಕಾರಿಗಳಾದ ತಹಶೀಲ್ದಾರರ ಜವಾಬ್ದಾರಿ ಎಂದು ಸಚಿವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಬೀಳಗಿ, ಪ್ರಸ್ತುತ ದಿನಕ್ಕೆ 13 ಸಾವಿರ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ 20 ಸಾವಿರದವರೆಗೆ ಲಸಿಕೆ ನೀಡಲು ಅಗತ್ಯವಾದ ಲಸಿಕೆಗಳ ಸರಬರಾಜು ಮಾಡಬೇಕೆಂದು ಕೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಕಳೆದ ಒಂದು ವಾರದಲ್ಲಿ 2335 ಮಾಸ್ಕ್ ಪ್ರಕರಣ. ಲಾಕ್ಡೌನ್ ಉಲ್ಲಂಘನೆಯ 15 ಪ್ರಕರಣಗಳನ್ನು ಎಪಿಡೆಮಿಕ್ ಕಾಯ್ದೆ ಅಡಿ ದಾಖಲಿಸಲಾಗಿದೆ. ಇದರಲ್ಲಿ ರೆಮಿಡಿಸಿವಿರ್ ಅಕ್ರಮ ಸಂಗ್ರಹ ಮತ್ತು ಮಾರಾಟದ ಕುರಿತು 2 ಪ್ರಕರಣಗಳನ್ನು ದಾಖಲಾಗಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಡಿಹೆಚ್ಓ ಡಾ.ನಾಗರಾಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಜಯಪ್ರಕಾಶ್ ಹಾಗೂ ತಾಲ್ಲೂಕುಗಳ ತಹಶೀಲ್ದಾರರು ಸಚಿವರಿಗೆ ಕೋವಿಡ್ ಕ್ರಮಗಳ ಕುರಿತು ವಿವರ ನೀಡಿದರು.
ಸಭೆಯಲ್ಲಿ ಎಡಿಸಿ ಪೂಜಾರ ವೀರಮಲ್ಲಪ್ಪ, ಎಸಿ ಮಮತಾ ಹೊಸಗೌಡರ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಎಸ್ಎಲ್ಓಗಳಾದ
ರೇಷ್ಮಾ ಹಾನಗಲ್, ಸರೋಜ, ತಹಶೀಲ್ದಾರ್ ಗಿರೀಶ್, ಆರ್ಸಿಹೆಚ್ಓ ಡಾ.ಮೀನಾಕ್ಷಿ,
ಡಾ. ನಟರಾಜ್, ಡಾ.ಗಂಗಾಧರ್, ಡಾ.ರೇಣುಕಾರಾಧ್ಯ,
ಡಾ.ಯತೀಶ್, ಟಿಹೆಚ್ಓ ಡಾ.ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.