ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಸಂಸದ ಸಿದ್ದೇಶ್ವರ
ದಾವಣಗೆರೆ, ಮಾ.2- ಮುಂಬರುವ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಸೇರಿದಂತೆ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಪಕ್ಷವು ಅಧಿಕಾರ ಹಿಡಿಯಲು ನಿಮ್ಮ ಪ್ರಾಬಲ್ಯತೆ ಮತ್ತು ಶ್ರಮವೇ ಬಹುಮುಖ್ಯ ಎಂದು ಪಕ್ಷದ ಕಾರ್ಯಕರ್ತರಿಗೆ ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.
ಅವರು, ಇಂದು ಮಧ್ಯಾಹ್ನ ವಿನೋಬನಗರದಲ್ಲಿ ಸಹಕಾರ ಸಮುದಾಯ ಭವನದಲ್ಲಿ ಜಿಲ್ಲಾ ಬಿಜೆಪಿಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರಗಳ ಜನಪರ ಯೋಜನೆಗಳು, ಸಾಧನೆಗಳನ್ನು ಕುಂತಲ್ಲಿ ನಿಂತಲ್ಲಿ ಹೆಚ್ಚು ಪ್ರಚುರಪಡಿಸುವ ಮುಖೇನ ಜನರಿಗೆ ತಲುಪಿಸಿ. ಪ್ರತಿಯೊಬ್ಬರ ಮನೆ-ಮನಗಳಲ್ಲೂ ಬಿಜೆಪಿ ಸಾಧನೆ ಗುನುಗುವಂತಾಗಲು ಕಾರ್ಯಪ್ರವೃತ್ತರಾಗಬೇಕು. ಆಗ ಜನರ ಬೆಂಬಲ ಸಿಕ್ಕು ಮುಂಬರುವ ಚುನಾವಣೆಗಳ ಗೆಲುವಿಗೆ ಬಲ ಸಿಗಲಿದೆ ಎಂದು ಹೇಳಿದರು.
ಅಂತರರಾಷ್ಟ್ರೀಯ ಮಟ್ಟದ ನಾಯಕರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸುವ ಕೆಲಸ ಆಗಬೇಕು. ಬಿಜೆಪಿಯ ಕೇಂದ್ರ, ರಾಜ್ಯ ಸರ್ಕಾರದ ಸಾಧನೆಗಳನ್ನು ಕಾರ್ಯಕರ್ತರು ಪ್ರತಿಯೊಬ್ಬರ ಮನೆಗಳಿಗೆ ಭೇಟಿ ನೀಡಿ, ಅದನ್ನು ತಿಳಿಸುವ ಮೂಲಕ ಪಕ್ಷದ ಬಲವರ್ಧನೆ ಮಾಡಿ, ಚುನಾವಣೆಯಲ್ಲಿ ಗೆಲುವಿಗೆ ದಾರಿಯಾಗುವಂತೆ ಮಾಡಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಪಕ್ಷದಲ್ಲಿ ವಿರಳ ಕಾರ್ಯಕರ್ತರಿದ್ದು, ಅವರು ಈ ಹಿಂದೆ ಆಡಳಿತ ನಡೆಸಿದ ತಮ್ಮ ಪಕ್ಷದ ಸಾಧನೆಗಳನ್ನು ಪ್ರಚುರಪಡಿಸುತ್ತಿದ್ದಾರೆ. ಗರೀಬಿ ಹಠಾವೋ ಎಂದು ಹೇಳಿಕೊಂಡು 53 ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ. ಅಂದು ಗರೀಬಿ ಹಠಾವೋ ಆಗಿದ್ದರೆ ಇಂದೂ ಸಹ ಜನರಿಗೆ ಪಡಿತರ ವ್ಯವಸ್ಥೆ ನೀಡುವಂತಹ ಸ್ಥಿತಿ ಏಕೆ ಬರುತ್ತಿತ್ತು ಎಂದು ಟೀಕಿಸಿದರು.
ದಾವಣಗೆರೆ ದಕ್ಷಿಣ ಸೇರಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲೋಣ
ಜಿಲ್ಲೆಯಲ್ಲಿ ಪಕ್ಷ ಸಂಘಟಿಸಿ, ಬೆಳೆಸಬೇಕು. ಇಲ್ಲಿಯ ತನಕವೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸೋಲು ಕಂಡಿದ್ದೇವೆ. ಹಾಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ದಕ್ಷಿಣ ಸೇರಿದಂತೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಪಕ್ಷದ ಶಾಸಕರು ಆಯ್ಕೆಯಾಗುವ ಗುರಿ ಹೊಂದೋಣ ಎಂದು ಸಂಸದ ಸಿದ್ದೇಶ್ವರ ಕಾರ್ಯಕರ್ತರಿಗೆ ಸ್ಪೂರ್ತಿ ತುಂಬಿದರು.
ಕೃಷಿ ಕಾಯ್ದೆಗಳ ವಿರೋಧ ರಾಜಕೀಯ ಪ್ರೇರಿತ
ಕಿಸಾನ್ ಸನ್ಮಾನ್, ಆತ್ಮ ನಿರ್ಭರ್ ಯೋಜನೆ ಮುಖೇನ ರೈತರ ಖಾತೆಗೆ ಹಣ, ಸಬ್ಸಿಡಿ, ಸಣ್ಣ ರೈತರಿಗೆ ಪ್ರೋತ್ಸಾಹಿಸುವ ಕೆಲಸವನ್ನು ಪ್ರಧಾನಿ ಮೋದಿ ಸರ್ಕಾರ ಮಾಡುತ್ತಿದೆ. ರೈತರ ಆದಾಯ ದ್ವಿಗುಣಕ್ಕಾಗಿ ಕೃಷಿ ಸಿಂಚಾಯ್, ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ ಇದೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆ ಸಿಗಬೇಕೆಂಬ ಹಿತದೃಷ್ಟಿಯಿಂದ ಎಪಿಎಂಸಿ, ಕೃಷಿ ಕಾಯ್ದೆಗಳನ್ನು ತಿದ್ದುಪಡಿ ಮಾಡಲಾಗಿದ್ದು, ಈ ಬಗ್ಗೆ ನಿಜವಾದ ರೈತರು ವಿರೋಧದ ಧ್ವನಿ ಎತ್ತಿಲ್ಲ. ಆದರೆ ರಾಜಕೀಯ ಪ್ರೇರಿತ ವಿರೋಧದ ಹೋರಾಟಗಳು, ರಾಜಕೀಯವಾಗಿ ಕೆಲ ಸಂಘಟನೆಗಳ ಎತ್ತಿಕಟ್ಟಲಾಗುತ್ತಿದೆ.
-ಸಂಸದ ಜಿ.ಎಂ. ಸಿದ್ದೇಶ್ವರ.
ಬಿಜೆಪಿ ನುಡಿದಂತೆ ನಡೆಯುವ ಕೆಲಸ ಮಾಡುತ್ತಿದೆ. `ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಘೋಷಣೆಯಾಗಿ ಉಳಿದಿಲ್ಲ. ಅದನ್ನು ಮೋದಿ ಅವರು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆಯಿಂದ ಬಡವರಿಗೆ ನೇರವಾಗಿ ಐದು ಲಕ್ಷ ರೂ. ವಿಮೆ ನೀಡಿದ್ದಾರೆ. ಬಹಳಷ್ಟು ಜನರು ಈ ಯೋಜನೆ ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ಕಾರ್ಯಕರ್ತರು ಆಯುಷ್ಮಾನ್ ಭಾರತ್ ಕಾರ್ಡ್ ಮಾಡಿಸುವ ಕೆಲಸ ಮಾಡಬೇಕು. ಸೂರು ಇಲ್ಲದವರ ಪಟ್ಟಿ ಮಾಡಿ ಗ್ರಾಮ ಪಂಚಾಯಿತಿನಲ್ಲಿ ನೋಂದಾಯಿಸಿದ ಕಾರಣ ಇದೀಗ 2-3 ಸಾವಿರ ಮನೆ ಸಿಗುವಂತೆ ಮಾಡಲಾಗುತ್ತಿದ್ದು, ಅರ್ಹರಿಗೆ ಸೂರು ಕಲ್ಪಿಸುವುದು ಪಕ್ಷದ ಆಯಾ ಕ್ಷೇತ್ರದ ಕಾರ್ಯಕರ್ತರು, ಶಾಸಕರ ಜವಾಬ್ದಾರಿ ಎಂದರು.
ಗ್ರಾಮೀಣ ಭಾಗದ ಜನರಿಗೆ ಜಲಜೀವನ್ ಮಿಷನ್ ಮೂಲಕ ಶುದ್ಧ ಕುಡಿಯುವ ನೀರನ್ನು ನೀಡುವಂತಹ ಮಹತ್ವದ ಯೋಜನೆ ಮೋದಿ ಅವರದ್ದಾಗಿದೆ. ಜಿಲ್ಲೆಯಲ್ಲಿ 370 ಗ್ರಾಮಗಳಿಗೆ ಶುದ್ಧ ನೀರನ್ನು ತಲುಪಿಸುವ ಯೋಜನೆಗೆ ಚಾಲನೆ ನೀಡಲಾಗುವುದು. ಈಗಾಗಲೇ ಚನ್ನಗಿರಿ, ಮಾಯಕೊಂಡ ಕ್ಷೇತ್ರದಲ್ಲಿ ಚಾಲನೆ ನೀಡಲಾಗಿದೆ. 2023ರೊಳಗಾಗಿ ಜನರಿಗೆ ಶುದ್ಧ ಕುಡಿಯುವ ನೀರು ಕೊಡುವ ಗುರಿ ಹೊಂದಲಾಗಿದೆ ಎಂದ ಅವರು, ಗ್ರಾಮ ಪಂಚಾಯಿತಿ ವ್ಯಾಪ್ತಿಗಳ ಕೆಲವೆಡೆ ನೀರು ವಿನಾಕಾರಣ ಪೋಲಾಗುತ್ತಿದ್ದು, ಜನರು ಪೋಲಾಗದಂತೆ ನೋಡಿಕೊಳ್ಳುತ್ತಿಲ್ಲ. ಹೀಗೆ ನೀರು ಪೋಲಾಗುವುದನ್ನು ಆ ದಾರಿಯಲ್ಲಿ ಸಾಗುವಾಗ ಕಂಡು ನಾನೇ ನಿಲ್ಲಿಸಿದ್ದೇನೆ. ಹೀಗೆ ಪೋಲಾದರೆ ಮುಂದೆ ಜಲಕ್ಷಾಮ ಎದುರಿಸಬೇಕಾಗಲಿದೆ ಎಂದು ಮುನ್ನೆಚ್ಚರಿಸಿದರು.
ಪಕ್ಷದ ರಾಜ್ಯ ಉಪಾಧ್ಯಕ್ಷ ನಂದೀಶ್ ಮಾತನಾಡಿ, ಕಣ್ಣು ತೆರೆದು ನೋಡುವಷ್ಟು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಅಧಿಕಾರ ಕಂಡಿದ್ದಾರೆ. ದಾವಣಗೆರೆಯಲ್ಲಿ ಪಕ್ಷದ ಕಾರ್ಯಕರ್ತ ಮೇಯರ್ ಆಗಿದ್ದು, ವಿರೋಧ ಪಕ್ಷದವರು ಮುಟ್ಟಿ ನೋಡಿಕೊಳ್ಳುವಂತೆ ಮಾಡಿದೆ. ಪಕ್ಷ ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರ ಹಿಡಿದಿದೆ. ಮುಂದಿರುವ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಗಳಲ್ಲೂ ಸಹ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಅಧಿಕಾರ ಹಿಡಿಯಬೇಕಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಕಾರ್ಯಕರ್ತರ ಜವಾಬ್ದಾರಿ ಹೆಚ್ಚಿದೆ. ಕೇವಲ ಚುನಾವಣೆ ಗೆಲುವು ಅಷ್ಟೇ ಅಲ್ಲ ಪಕ್ಷದ ಸಂಘಟನೆಯನ್ನು ಬಲಪಡಿಸಬೇಕೆಂದರು.
ಮಾರ್ಚ್ 15ರೊಳಗೆ ಬೂತ್‍ಮಟ್ಟದ ಅಧ್ಯಕ್ಷರ ಮನೆಗೆ ನಾಮಫಲಕ ಹಾಕಲಾಗುವುದು. ಕಾರ್ಯಕರ್ತರ ಸಂಖ್ಯೆಯ ಆಧಾರದ ಮೇಲೆ ಮತಗಟ್ಟೆ ಸ್ಥಾಪನೆ ಮಾಡುತ್ತಿವೆ. ಅವರು ಪಕ್ಷಕ್ಕಾಗಿ ದುಡಿಯಬೇಕು. ಮಾ.11ರೊಳಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಸ್ವಾವಲಂಬಿ ವಿಧಾನಸಭಾ ಕ್ಷೇತ್ರ ಸ್ಥಾಪಿಸಲಾಗುವುದು. ಹೀಗೆ ಚುನಾವಣೆಗಳ ಗೆಲುವಿಗೆ ನಾನಾ ಪ್ರಯತ್ನಗಳ ಜೊತೆಗೆ ದಶಕಗಳ ಕಾಲ ಶ್ರಮಿಸಿದ ಪಕ್ಷದ ಕಾರ್ಯಕರ್ತರನ್ನು ಗುರುತಿಸಿ ರಾಜಕೀಯವಾಗಿ ಸ್ಥಾನ-ಮಾನ ನೀಡುತ್ತಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಮಾತನಾಡಿದರು. ಶಾಸಕರಾದ ಎಸ್.ಎ. ರವೀಂದ್ರನಾಥ, ಎಸ್.ವಿ. ರಾಮಚಂದ್ರಪ್ಪ, ಪ್ರೊ. ಲಿಂಗಣ್ಣ, ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಬಸವರಾಜ ನಾಯ್ಕ, ಪ್ರಕೋಷ್ಠಗಳ ಸಂಚಾಲಕ ಡಾ. ಎ.ಹೆಚ್. ಶಿವಯೋಗಿ ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್, ರಾಜ್ಯ ಕಾರ್ಯದರ್ಶಿ ಸುಧಾ ಜಯರುದ್ರೇಶ್, ಮುಖಂಡರಾದ ಲಕ್ಷ್ಮೀಶ, ಶಾಂತರಾಜ್ ಪಾಟೀಲ್, ಸೊಕ್ಕೆ ನಾಗರಾಜ್ ಮತ್ತಿತರರಿದ್ದರು.