ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಮಾರೋಪದಲ್ಲಿ ಪ್ರೊ. ಕೃಷ್ಣೇಗೌಡ
ದಾವಣಗೆರೆ, ಮಾ. 2 – ಅಲ್ಲಮಪ್ರಭು, ಅಕ್ಕಮಹಾದೇವಿ ಅವರಂತಹ ಶರಣರಿಂದ ಹಿಡಿದು ಕುವೆಂಪು ಹಾಗೂ ದ.ರಾ. ಬೇಂದ್ರೆ ಅವರಂತಹ ಕವಿಗಳವರೆಗಿನ ಸಾಹಿತ್ಯ ಸಶಕ್ತವಾಗಲು ಕನ್ನಡ ಭಾಷೆಯ ಸಾಮರ್ಥ್ಯವೇ ಕಾರಣ ಎಂದು ವಾಗ್ಮಿ ಪ್ರೊ. ಎಂ. ಕೃಷ್ಣೇಗೌಡ ಅಭಿಪ್ರಾಯ ಪಟ್ಟಿದ್ದಾರೆ.
ದಾವಣಗೆರೆ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡುತ್ತಿದ್ದ ಅವರು, ಕುವೆಂಪು ಹಾಗೂ ಬೇಂದ್ರೆ ಅವರು ಜಗತ್ತಿನ ಯಾವ ಸಾಹಿತಿಗೂ ಕಡಿಮೆ ಇಲ್ಲ. ಕನ್ನಡಕ್ಕೆ ಅಂತಹ ಕಾವ್ಯ ಬರೆಸುವ ತಾಕತ್ತಿದೆ ಎಂದು ತಿಳಿಸಿದರು.
ವಿಶ್ವದಲ್ಲಿ 4,500ಕ್ಕೂ ಹೆಚ್ಚು ಭಾಷೆಗಳಿವೆ. ಇವುಗಳಲ್ಲಿ ಅನನ್ಯ ಹಾಗೂ ಸಮೃದ್ಧವಾಗಿರುವ 30 ಭಾಷೆಗಳಲ್ಲಿ ಕನ್ನಡವೂ ಒಂದಾಗಿದೆ. ಈ ಮಾತು ಕೇವಲ ಹೊಗಳಿಕೆಗೆ ಅಲ್ಲ, ಕನ್ನಡದಲ್ಲಿ ಅಂತಹ ಗ್ರಹಿಕೆ ಇದೆ ಎಂದು ತಿಳಿಸಿದರು.
ಇಂಗ್ಲಿಷ್ ಬಂದರೆ ಪ್ರಪಂಚವನ್ನೇ ತಲುಪಬಹುದು ಎಂಬ ಭಾವನೆ ಕೆಲವರಲ್ಲಿದೆ. ಆದರೆ, ಕನ್ನಡ ನಮಗೆ ರಕ್ತಗತವಾಗಿ ಮೈಗೂಡಿದೆ. ಹೀಗಾಗಿ ನಾವು ಇಂಗ್ಲಿಷಿನಲ್ಲಿ ಮಾತನಾಡಿದರೂ ನಮ್ಮ ಮನಸ್ಸು ಕನ್ನಡದ ಮೂಲಕವೇ ಅರ್ಥ ಮಾಡಿಕೊಳ್ಳುತ್ತದೆ. ಇಂಗ್ಲಿಷ್ ಬೌದ್ಧಿಕ ಭಾಷೆಯಾಗಬಹುದಷ್ಟೇ, ಭಾವನೆಯ ಭಾಷೆ ಕನ್ನಡವೇ ಆಗಿರುತ್ತದೆ ಎಂದು ಕೃಷ್ಣೇಗೌಡ ಹೇಳಿದರು.
ಯಾವುದೇ ಕಾವ್ಯದಲ್ಲಿ ಬಳಸಲಾದ ಪದದ ಅರ್ಥ ಮನಸ್ಸಿಗೆ ಆಗುವ ಮೊದಲೇ ಅದರ ಲಹರಿಯಿಂದ ಮನಸ್ಸು ತಟ್ಟಬೇಕು ಎಂದು ಉದಯೋನ್ಮುಖ ಕವಿಗಳಿಗೆ ಕಿವಿಮಾತು ಹೇಳಿದ ಅವರು, ಕುವೆಂಪು ಅವರ ದೋಣಿ ಸಾಗಲಿ, ಮುಂದೆ ಹೋಗಲಿ ಹಾಡಿನಲ್ಲಿ ದೀರ್ಘ ಸ್ವರಗಳನ್ನೇ ಹೆಚ್ಚಾಗಿ ಬಳಸಿದ್ದಾರೆ. ಇದರಿಂದ ಹಾಡಿನ ಪದಗಳಿಗಿಂತ ರಾಗದಲ್ಲೇ ಭಾವ ಮನಸ್ಸಿಗೆ ತಲುಪುತ್ತದೆ ಎಂದು ಉದಾಹರಿಸಿದರು.
ಅಧಿವೇಶನದಲ್ಲಿ ಪಂಚ ನಿರ್ಣಯ
ಎರಡು ದಿನಗಳ ಕಾಲ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಐದು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ನಿರ್ಣಯಗಳೆಂದರೆ :
1. ಕೃಷಿ ಉತ್ಪನ್ನಗಳ ದರದ ಅನುಪಾತದಲ್ಲಿ ಶಾಸಕರು, ಸಂಸದರು ಹಾಗೂ ಸರ್ಕಾರಿ ನೌಕರರ ವೇತನ ನಿಗದಿ ಪಡಿಸಬೇಕು. 2. ದಾವಣಗೆರೆ ಜಿಲ್ಲೆಯಲ್ಲಿ ಎಫ್.ಎಂ. ರೇಡಿಯೋ ಕೇಂದ್ರ ಸ್ಥಾಪಿಸಬೇಕು. 3. ಕನ್ನಡ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಎಷ್ಟೇ ಕಡಿಮೆ ಮಕ್ಕಳಿದ್ದರೂ ಶಾಲೆಗಳ ಮುಚ್ಚಬಾರದು. 4. ಕೊಂಡಜ್ಜಿಯಲ್ಲಿ ಸ್ಥಾಪಿಸಿರುವ ರಂಗಭೂಮಿ ಶಾಲೆಯ ಕಾರ್ಯಗಳನ್ನು ತೀವ್ರಗೊಳಿಸಬೇಕು. 5. ಕನ್ನಡದ ಅನುಭಾವದ ಕವಿ ಮಹಲಿಂಗರಂಗರ ಐಕ್ಯಸ್ಥಳದ ಅಭಿವೃದ್ಧಿ ಹಾಗೂ ಜಗಳೂರು ತಾಲ್ಲೂಕಿನ ಕೊಣಚಕಲ್ಲಿನಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಬೇಕು.
ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕಿದೆ
ದಾವಣಗೆರೆ, ಮಾ.2 – ಕೇಂದ್ರ ಸರ್ಕಾರ ಜಾರಿಗೆ ತರಲುದ್ದೇಶಿಸಿರುವ ಕೃಷಿ ಕಾಯ್ದೆಗಳು ಜನತೆಗೆ ಮಾರಕವಾಗಿದ್ದು, ಅವುಗಳನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕದಿದ್ದರೆ ಮುಂದೆ ಅತ್ಯಂತ ಅಪಾಯ ಎದುರಿಸಬೇಕಾಗುತ್ತದೆ ಎಂದು ಮಾಜಿ ಶಾಸಕ ವೈ.ಎಸ್.ವಿ ದತ್ತಾ ಎಚ್ಚರಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ `ನೂತನ ಕೃಷಿ ಕಾಯ್ದೆ ನಿಜಕ್ಕೂ ಹಿತಶತ್ರುವೇ?’ ಸಂವಾದ ಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೃಷಿ ಕಾಯ್ದೆಗಳು ಮೇಲ್ನೋಟಕ್ಕೆ ಹಿತ ಎನಿಸಿದರೂ, ಇವುಗಳ ಒಳ ಕಂಟಿಕೆಗಳಲ್ಲಿ ರೈತರಿಗೆ, ದೇಶದ ಚಿಲ್ಲರೆ ವ್ಯಾಪಾರಿಗಳಿಗೆ ಮಾರಕವಾದ ಅಂಶಗಳೇ ತುಂಬಿವೆ. ಆದ್ದರಿಂದ ಈ ಕಾಯ್ದೆಗಳನ್ನು ವಿರೋಧಿಸುವುದು ಅಗತ್ಯ ಹಾಗೂ ಅನಿವಾರ್ಯವೂ ಆಗಿದೆ ಎಂದು ಹೇಳಿದರು.
ರೈತರ ಸಶಕ್ತೀಕರಣದ ಹೆಸರಿನಲ್ಲಿ ಜಾರಿಗೆ ತಂದಿರುವ ತಿದ್ದುಪಡಿಯಿಂದ 8 ಕೋಟಿ ಚಿಲ್ಲರೆ ವ್ಯಾಪಾರಿಗಳು ಬೀದಿ ಪಾಲಾಗಲಿದ್ದಾರೆ. ಶ್ರೀಮಂತರು ರೈತರ ಭೂಮಿ ಖೇಣಿ ಪಡೆದು ಜಾಗತಿಕ ಮಾರುಕಟ್ಟೆಗೆ ಪೂರಕವಾದ ಬೆಳೆಗಳನ್ನು ಅತ್ಯಧಿಕ ರಾಸಾಯನಿಕ ಹಾಕಿ ಬೆಳೆದು, ಭೂಮಿಯನ್ನು ಬಂಜರು ಮಾಡಿ ಹೋಗುತ್ತಾರೆ. ಆಹಾರ ವಸ್ತು ಕಾಯ್ದೆಯಿಂದ ಆಹಾರ ಧಾನ್ಯ, ಖಾದ್ಯ ತೈಲ, ಎಣ್ಣೆ, ಕಾಳು, ಆಲೂಗಡ್ಡೆ, ಈರುಳ್ಳಿಯನ್ನು ಹೊರಗಿಡಲಾಗಿದ್ದು, ಮುಂದೆ ಬಿಪಿಎಲ್ ಕಾರ್ಡುದಾರರಿಗೆ ನೀಡುವ ಅಕ್ಕಿ, ಅಡುಗೆ ಎಣ್ಣೆ, ಉಪ್ಪುಗಳಂತಹ ಸಾರ್ವಜನಿಕ ವಿತರಣಾ ಪದ್ಧತಿಯೇ ರದ್ದಾದರೂ ಅಚ್ಚರಿ ಪಡಬೇಕಿಲ್ಲ ಎಂದರು.
12ನೇ ಶತಮಾನದಲ್ಲಿ ಬಸವಣ್ಣನರು, 20ನೇ ಶತಮಾನದಲ್ಲಿ ಕುವೆಂಪು ಕೃಷಿ ಬಗ್ಗೆ ಸಾಕಷ್ಟು ಬೆಳಕು ಚೆಲ್ಲಿದ್ದಾರೆ. ರೈತರನ್ನು ಶೋಷಣೆಯಿಂದ ಪಾರು ಮಾಡಲು ಕುವೆಂಪು ಅವರು ಧನ್ವಂತರಿ ಕಥೆಯನ್ನು ಪ್ರಸ್ತುತ ಕಾಲಘಟ್ಟದಲ್ಲೇನಾದರು ಬರೆದಿದ್ದರೆ ಅವರ ಮೇಲೆ ಪ್ರಾಯಶಃ ದೇಶದ್ರೋಹಿ ಎಂದು ಪ್ರಕರಣ ದಾಖಲಾಗುತ್ತಿತ್ತು ಎಂದ ದತ್ತಾ, ರೈತರ ಬಗ್ಗೆ ಮಾತನಾಡಲು ಅಂಜಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಕವಿ ದ.ರಾ. ಬೇಂದ್ರಯವರೂ ಸಹ `ಬಡವರ ಬಗ್ಗರ ತುತ್ತಿನ ಚೀಲವ ಮಾತ್ರ ಬರಿದೋ ಬರಿದು’ ಎಂದು ಕಾವ್ಯ ರಚಿಸಿದ್ದರು. ಕೇಂದ್ರ ಸರ್ಕಾರ ತರಲು ಹೊರಟಿರುವ ರೈತ ಕಾಯ್ದೆಗಳಿಂದ ಮುಂದೆ ಬೇಂದ್ರೆಯವರ ಮಾತುಗಳು ನಿಜವಾಗುವ ಆತಂಕ ಕಾಡುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನೀರಾವರಿ ತಜ್ಞ ಪ್ರೊ.ಸಿ.ನರಸಿಂಹಪ್ಪ, ಕಾಯ್ದೆಗಳ ಬದಲು ರೈತರ ಉತ್ಪನ್ನಗಳಿಗೆ ನೀಡುವ ಕನಿಷ್ಟ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ನೀಡಿದರೆ ರೈತರ ಪರಿಸ್ಥಿತಿ ಸುಧಾರಣೆಯಾಗಲಿದೆ ಎಂದರು.
ಬಿಜೆಪಿಗೆ ವಾಜಪೇಯಿ ಕಾಲದಿಂದಲೂ ಒಪ್ಪಂದದ ಕೃಷಿ ಕಾಯಿಲೆ ಇತ್ತು. ಅದನ್ನ ಈಗ ಜಾರಿಗೆ ತಂದು ರೈತ ಸಂಕುಲಕ್ಕೆ ಭಯಂಕಾರ ಅನ್ಯಾಯ ಮಾಡಿದೆ. ರೈತ ನಾಶವಾದ ದಿನವೇ ಪ್ರಜಾಪ್ರಭುತ್ವವು ನಾಶವಾಗುತ್ತದೆ ಎಂದು ಎಚ್ಚರಿಸಿದರು.
ಕೇವಲ ಮೋದಿಯಲ್ಲ. ಅವರಂತಹ ನೂರು ಪ್ರಧಾನಿಗಳು ಬಂದರೂ ರೈತರ ಆದಾಯ ದ್ವಿಗುಣ ಮಾಡಲು ಸಾಧ್ಯವಿಲ್ಲ. ಭಾರತೀಯ ಸಂಸದೀಯ ಇತಿಹಾಸದಲ್ಲಿಯೇ ಹತ್ತು ದಿನಗಳಲ್ಲಿ ಕಾಯ್ದೆ ರೂಪಿಸಿರುವುದು ಆಶ್ಚರ್ಯ ಎಂದರು.
ರೈತ ಮುಖಂಡ ತೇಜಸ್ವಿ ಪಟೇಲ್, ನೂತನ ಕಾಯ್ದೆಗಳು ಅತಿ ಹೆಚ್ಚು ಜನರಿಗೆ ಅತಿ ಕಡಿಮೆ ಒಳಿತನ್ನೂ, ಅತಿ ಕಡಿಮೆ ಜನರಿಗೆ ಹೆಚ್ಚು ಒಳಿತನ್ನು ಮಾಡುವ ಕಾಯ್ದೆಗಳಾಗಿವೆ ಎಂದು ವಿಶ್ಲೇಷಿಸಿದರು.
ರೈತರ ಕೃಷಿ ಪದ್ಧತಿ ಹಾಗೂ ಸಂಸ್ಕೃತಿಯನ್ನೇ ಬದಲಾಯಿಸುತ್ತವೆ. ಅನಿವಾರ್ಯವಾಗಿ ಕೃಷಿಯಿಂದ ವಿಮುಖರಾಗುವ ಸಂದರ್ಭ ಬರಲಿದೆ. ಕಾಯ್ದೆಗಳು ಸದ್ಯಕ್ಕೆ ರೈತರಿಗೆ ಮಾರಕವಾದರೆ, ಮುಂದೆ ಗ್ರಾಹಕರು, ವ್ಯಾಪಾರಿಗಳಿಗೂ ಕುತ್ತು ಬರಲಿದೆ. ಭೂಮಿ ರೈತರ ಕೈ ತಪ್ಪಿದರೆ ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟಾಗಲಿದೆ ಎಂದು ಎಚ್ಚರಿಸಿದರು.
ರೈತ ಮುಖಂಡ ಹೆಚ್.ಆರ್. ಲಿಂಗರಾಜ್, ಕಾಯ್ದೆಗಳಿಂದ ರೈತರಿಗೆ ಅನುಕೂಲವೇ ಹೆಚ್ಚಾಗಿದೆ. ಆದರೆ ಅನಗತ್ಯವಾಗಿ ಕಾಯ್ದೆ ಬಗ್ಗೆ ಅಪ ಪ್ರಚಾರ ಮಾಡಲಾಗುತ್ತಿದೆ ಎಂದರು.
ಕಂದಗಲ್ಲು ಕೆ.ಜಿ. ಈಶ್ವರಪ್ಪ ಮಾತನಾಡಿ, ರೈತನ ಆದಾಯ ಹೆಚ್ಚಿಸಲು, ಕೃಷಿಯ ಪ್ರಗತಿಗಾಗಿ ಈ ಕಾಯ್ದೆಗಳು ಅತ್ಯಗತ್ಯ. ಪ್ರಧಾನಿಯೊಬ್ಬರೇ ಕಾಯ್ದೆಗಳ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ಪಕ್ಷಾತೀತವಾಗಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಸಲಹೆ ಪಡೆದು ಅವರೆಲ್ಲರ ನಿರ್ಣಯದ ಮೇಲೆಯೇ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ತೀರ್ಮಾನಕೈಗೊಂಡಿದ್ದಾರೆ ಎಂದರು.
ಬಲ್ಲೂರು ರವಿಕುಮಾರ್, ಕಾಯ್ದೆಗಳ ಬಗ್ಗೆ ಪ್ರಧಾನಿ ರೈತರೊಂದಿಗೆ ಮಾತನಾಡದೆ, ಬೇರೊಬ್ಬರ ಮೂಲಕ ಮಾತನಾಡಿಸುತ್ತಿದ್ದಾರೆಂಬ ಅಳಲಿದೆ ಎಂದರು.
ಎಪಿಎಂಸಿ ಅಧ್ಯಕ್ಷ ಎಸ್.ಕೆ. ಚಂದ್ರಶೇಖರ್, ಕಾಯ್ದೆಗಳ ಬಗ್ಗೆ ತಮ್ಮ ವಿರೋಧವಿದ್ದು, ಅದರಲ್ಲೂ ಕೊರೊನಾದಂತಹ ಸಂಕಷ್ಟದಲ್ಲಿ ಕಾಯ್ದೆ ಜಾರಿಗೆ ಮುಂದಾಗಿದ್ದು ಸಮರ್ಪಕವಲ್ಲ ಎಂದರು.
ಜಿ.ಪಂ. ಸದಸ್ಯ ಕೆ.ಎಸ್. ಬಸವರಾಜ್, ಜಿಲ್ಲೆಯಲ್ಲಿ ಮೆಕ್ಕೆಜೋಳ ಖರೀದಿಗೆ ಈ ಗೋಷ್ಠಿಯ ಮೂಲಕ ಹಕ್ಕೊತ್ತಾಯ ಮಾಡಬೇಕು ಎಂದರು. ಅರುಣ ಕುಮಾರ್ ಕುರುಡಿ ಮಾತನಾಡಿದರು.
ಸೆಲ್ಫಿ ಬಿಟ್ಟು ಭವ್ಯಾನುಭೂತಿ ಹೊಂದೋಣ
ನನ್ನ ಫೋಟೋ ನಾನೇ ತೆಗೆದುಕೊಳ್ಳಬೇಕಾದರೆ ಸಂಕೋಚ ಹೊಂದುವುದೇ ಸರಿಯಾದ ವರ್ತನೆ. ಆದರೆ, ಸೆಲ್ಫಿ ಹಾವಳಿ ಹೆಚ್ಚಾಗಿ ಜನರಲ್ಲಿ ಅಹಂ ಭಾವವೇ ಹೆಚ್ಚಾಗುತ್ತಿದೆ ಎಂದು ವಾಗ್ಮಿ ಪ್ರೊ. ಎಂ.ಕೃಷ್ಣೇಗೌಡ ವಿಷಾದಿಸಿದ್ದಾರೆ.
ಎಂತಹ ದೊಡ್ಡ ವ್ಯಕ್ತಿಯ ಜೊತೆಗೆ ಸೆಲ್ಫಿ ತೆಗೆಸಿಕೊಳ್ಳುವಾಗಲೂ, ಫೋಟೋ ತೆಗೆದುಕೊಳ್ಳುವ ವ್ಯಕ್ತಿಯೇ ದೊಡ್ಡವನಾಗಿ ಬಿಡುವುದೇ ಸೆಲ್ಫಿ ಗುಣ ಎಂದವರು ತಿಳಿಸಿದರು
ಯಾವುದೇ ಮಹಾನ್ ವ್ಯಕ್ತಿಯ ಎದುರು ನಿಂತಾಗ ನಾನು ಏನೇನೂ ಅಲ್ಲ ಎಂಬ ಭಾವ ಬಂದಾಗ ಅದನ್ನು ಭವ್ಯಾನುಭೂತಿ ಎಂದು ಕಾವ್ಯದಲ್ಲಿ ಕರೆಯಲಾಗುತ್ತದೆ. ಜನರಲ್ಲಿರುವ ಸೆಲ್ಫಿ ಅಹಂಭಾವವನ್ನು ತೊಡೆದು ಹಾಕಲು ಭವ್ಯಾನುಭೂತಿ ಹೊಂದಬೇಕಿದೆ ಎಂದವರು ಅಭಿಪ್ರಾಯಪಟ್ಟರು.
ಆಧುನಿಕ ಕಾಲದಲ್ಲಿ ಭಾಷೆಯ ಬಳಕೆಯಲ್ಲೇ ಜನರು ಸೊರಗುತ್ತಿದ್ದಾರೆ ಎಂದು ವಿಷಾದಿಸಿದ ಅವರು, ನಗರಗಳ ಜನರು ತಮ್ಮ ಕಾಂಪೌಂಡ್ ಗೇಟುಗಳ ಒಳಗೆ ಸೀಮಿತರಾಗಿ ಮಾತುಗಳನ್ನೇ ಮರೆಯುತ್ತಿದ್ದಾರೆ. ಜೀವನದ ಘಟನೆಗಳನ್ನು ಸೊಗಸಾಗಿ ಬಣ್ಣಿಸುವ ಶಕ್ತಿಯನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮ್ಮೇಳನಾಧ್ಯಕ್ಷ ಎನ್.ಟಿ. ಎರಿಸ್ವಾಮಿ, ಮನುಜ ಕುಲ ಒಂದೇ ಎಂಬ ಸಂದೇಶವನ್ನು ಕನ್ನಡ ಭಾಷೆ ಸಾವಿರಾರು ವರ್ಷಗಳಿಂದ ನೀಡುತ್ತಾ ಬಂದಿದೆ. ಕುವೆಂಪು ಅವರ ಮನುಜಮತ – ವಿಶ್ವಪಥ ಸಂದೇಶ ಕನ್ನಡದ ದೃಷ್ಟಿಕೋನವಾಗಿದೆ. ಬೇರೆ ಭಾಷೆಗಳಲ್ಲಿ ಇಂತಹ ಭಾವೈಕ್ಯತೆ ದುರ್ಲಭ ಎಂದವರು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯ ಮೇಲೆ ಕರ್ನಾಟಕ ವಿ.ವಿ. ಹಾಗೂ ಕಾಲೇಜು ಅಧ್ಯಾಪಕರ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷ ಪ್ರೊ. ಸಿ.ಹೆಚ್. ಮುರಿಗೇಂದ್ರಪ್ಪ, ಜಿಲ್ಲಾ ಕ.ಸಾ.ಪ. ಮಾಜಿ ಜಿಲ್ಲಾ ಅಧ್ಯಕ್ಷರಾದ ಪ್ರೊ. ಎಸ್.ಬಿ. ರಂಗನಾಥ್, ಎಸ್.ಹೆಚ್. ಹೂಗಾರ್, ಬಿ.ಎಂ. ಸದಾಶಿವಪ್ಪ ಶ್ಯಾಗಲೆ, ಎ.ಆರ್. ಉಜ್ಜನಪ್ಪ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕನ್ನಡದ ಸಾಧಕರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎನ್.ಎಸ್. ರಾಜು ಸ್ವಾಗತಿಸಿದರೆ, ಇನ್ನೋರ್ವ ಗೌರವ ಕಾರ್ಯದರ್ಶಿ ಬಿ. ದಿಳ್ಯಪ್ಪ ವಂದಿಸಿದರು.