ಹರಿಹರ: 6 ಮನೆಗಳಿಗೆ ಹಾನಿ, ಓರ್ವನಿಗೆ ಗಾಯ
ಸ್ಥಳಕ್ಕೆ ಶಾಸಕ ರಾಮಪ್ಪ ಭೇಟಿ: ಮಾಲೀಕರಿಗೆ ಸಾಂತ್ವನ
ಹರಿಹರ, ಅ. 4 – ನಗರದಲ್ಲಿ ಸೋಮವಾರ ಸಂಜೆ ಬೀಸಿದ ಭಾರೀ ಗಾಳಿ ಹಾಗೂ ಮಳೆ ಯಿಂದಾಗಿ ಆರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಮರ ಬಿದ್ದು ಐದು ವಾಹನಗಳು ಜಖಂಗೊಂಡಿವೆ.
ಸಂಜೆ ದಿಢೀರನೇ ಗಾಳಿ ಹಾಗೂ ಮಳೆಯ ರಭಸ ಹೆಚ್ಚಾಯಿತು. ಪರಿಣಾಮ 14ನೇ ವಾರ್ಡ್ನಲ್ಲಿ 6ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಅಂದಾಜು 10 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಹಳೇ ಪಿ.ಬಿ. ರಸ್ತೆಯ ಟ್ಯಾಕ್ಸಿ ಸ್ಟ್ಯಾಂಡ್ನಲ್ಲಿದ್ದ ಇನೋವಾ, ಓಮಿನಿ, ಕ್ರೂಸರ್ ಸೇರಿದಂತೆ 5 ವಾಹನಗಳ ಮೇಲೆ ಮರ ಬಿದ್ದು ವಾಹನಗಳು ಜಖಂ ಆಗಿದ್ದು, ಸುಮಾರು 8 ಲಕ್ಷ ರೂ.ನಷ್ಟು ನಷ್ಟ ಉಂಟಾಗಿದೆ.
ಟ್ಯಾಕ್ಸಿ ಸ್ಟ್ಯಾಂಡ್ ಸ್ಥಳಕ್ಕೆ ಶಾಸಕ ಎಸ್.ರಾಮಪ್ಪ ಭೇಟಿ ನೀಡಿ, ವಾಹನ ಮಾಲೀಕರಿಗೆ ಸಾಂತ್ವನ ಹೇಳಿದರು. ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಾ, ತಾಲ್ಲೂಕಿನಲ್ಲಿ ಮಳೆಯಿಂದಾಗಿ ಮನೆ, ವಾಹನ, ಬೆಳೆಗಳಿಗೆ ಹಾನಿಯಾಗಿದ್ದು, ಸರ್ಕಾರ ವಿಳಂಬ ಮಾಡದೇ ಕೂಡಲೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಕೊರೊನಾದಿಂದ ಮೃತಪಟ್ಟವರಿಗೆ ಇದುವರೆಗೂ ಪರಿಹಾರ ನೀಡಿಲ್ಲ. ಇತ್ತೀಚೆಗೆ ಸುರಿದ ಮಳೆಹಾನಿಯಿಂದಾದ ನಷ್ಟದ ಬಗ್ಗೆ ವರದಿ ಕಳುಹಿಸಿದ್ದರೂ ಪರಿಹಾರ ಬಿಡುಗಡೆ ಮಾಡಿಲ್ಲ. ಕೂಡಲೇ ಪರಿಹಾರ ನೀಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಮುಂದಿನ ದಿನಗಳಲ್ಲಿ ಟ್ಯಾಕ್ಸಿ ಸ್ಟ್ಯಾಂಡ್ ನಿಲ್ದಾಣಕ್ಕೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ ಮಾತನಾಡಿ, ಇತ್ತೀಚೆಗೆ ಅತಿವೃಷ್ಟಿಯಿಂದಾದ ಹಾನಿ ವರದಿ ಕಳುಹಿಸಲಾಗಿತ್ತು. ಅದರಲ್ಲಿ ಕೆಲ ರೈತ ಕುಟುಂಬಕ್ಕೆ ನೇರವಾಗಿ ಖಾತೆಗಳಿಗೆ ಹಣ ನೀಡಲಾಗಿದೆ. ಉಳಿದ ಕುಟುಂಬಗಳಿಗೆ ಹಣ ಹಾಕಲಾಗುವುದು ಎಂದರು.
ಪೌರಾಯುಕ್ತೆ ಎಸ್.ಲಕ್ಷ್ಮಿ ಮಾತನಾಡಿ, ಇಂದು ಸಂಜೆಯ ಮಳೆಯಿಂದಾಗಿ 6 ಮನೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದ್ದು, ಓರ್ವ ವ್ಯಕ್ತಿಯ ಬಲಗೈಗೆ ಪೆಟ್ಟಾಗಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಶಾಂತ್ ನಗರದ ನೀರಿನ ಟ್ಯಾಂಕ್ ಹಿಂಭಾಗದ ದನದ ಕೊಟ್ಟಿಗೆಯೊಂದಕ್ಕೆ ಹಾನಿಯಾಗಿದೆ. ಗಾಂಧಿನಗರ, ಬೆಂಕಿ ನಗರ, ಕೈಲಾಸ ನಗರ, ತೆಗ್ಗಿನಕೇರಿ, ಕಾಳಿದಾಸ ನಗರದ ಭಾಗಗಳಲ್ಲಿ ಅನೇಕ ಮನೆಗಳಿಗೆ ನೀರು ನುಗ್ಗಿದ್ದರಿಂದ ಮನೆಯಲ್ಲಿ ಇದ್ದ ವಸ್ತುಗಳಿಗೆ ಹೆಚ್ಚಿನ ಹಾನಿಯಾಗಿದೆ. ಈ ಬಗ್ಗೆ ವರದಿ ನೀಡಲು ಸಿಬ್ಬಂದಿಗಳನ್ನು ಕಳುಹಿಸಿಕೊಡಲಾಗಿದೆ. ಸರ್ಕಾರದ ಗಮನಕ್ಕೆ ತಂದು ಪರಿಹಾರ ಕೊಡಿಸಲಾಗುತ್ತದೆ ಎಂದು ಹೇಳಿದರು.
ನಗರಸಭೆ ಎಇಇ ಬಿರಾದಾರ, ವಾಹನ ಮಾಲೀಕ ಬಾಷಾ, ಸೈಯದ್ ರಫೀಕ್, ಉಮೇಶ್, ಇಮ್ರಾನ್, ಜಗದೀಶ್, ಮುಸ್ತಫಾ ಹಾಗೂ ಇತರರು ಹಾಜರಿದ್ದರು.