ಕರ್ನಾಟಕ ಕೇವಲ ಗಡಿಯಲ್ಲ

ಸ್ವಂತ ವ್ಯಕ್ತಿತ್ವದ ರಾಷ್ಟ್ರೀಯ ಸಂಸ್ಕೃತಿಯ ಭಾವ : ಸಚಿವ

ದಾವಣಗೆರೆ, ನ.1 – ಕರ್ನಾಟಕ ವೆಂದರೆ ಕೇವಲ ಗಡಿರೇಖೆಯ ಒಳಗೆ ಸೀಮಿತವಾದ ಭೌಗೋಳಿಕ ಪ್ರದೇಶವಲ್ಲ. ಅದು ಕನ್ನಡದ ಸ್ವಂತ ವ್ಯಕ್ತಿತ್ವದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸಂಸ್ಕೃತಿಯನ್ನು ಪ್ರತಿಪಾದಿಸುವ ಅತ್ಯುನ್ನತ ಭಾವ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಹೇಳಿದ್ದಾರೆ.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿ ಸಲಾಗಿದ್ದ ಕನ್ನಡ ರಾಜ್ಯೋತ್ಸವದ ಸಂದ ರ್ಭದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ರಾಜ್ಯೋತ್ಸವ ಸಂದೇಶ ನೀಡಿ ಅವರು ಮಾತನಾಡುತ್ತಿದ್ದರು.

ದಾಸ, ಭಕ್ತಿ ಪರಂಪರೆ, ವಚನ ಸಾಹಿತ್ಯದ ಮೂಲಕ ಸಾಮಾಜಿಕ ಕ್ರಾಂತಿ ಮಾಡಿ ನಾಡು, ನುಡಿಯನ್ನು ಶ್ರೀಮಂತಗೊಳಿಸಲಾಗಿದೆ. ಬಹುತ್ವದ ಸ್ಥಳೀಯತೆಯನ್ನು ಗೌರವಿಸುವ ಹಾಗೂ ಒಕ್ಕೂಟದ ಭಾವೈಕ್ಯತೆ ಬಲಗೊಳಿಸುವ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಭಾಷಾವಾರು ಪ್ರಾಂತ್ಯಗಳ ರಚನೆಯಾಗಿದೆ. ಪ್ರತಿ ರಾಜ್ಯದ ರಾಜ್ಯ ಭಾಷೆಯು ಈ ನೆಲದ ಸಾರ್ವಭೌಮ ಭಾಷೆಯಾಗಿದೆ ಎಂದು ತಿಳಿಸಿದರು.

ಜಾಗತೀಕರಣದ ಹಿನ್ನೆಲೆಯಲ್ಲಿ ಇಂಗ್ಲಿಷ್ ಜ್ಞಾನ ಅವಶ್ಯಕವಾಗಿದ್ದರೂ, ಮಾೃತಭಾಷೆ ಕನ್ನಡಕ್ಕೆ ಮೊದಲ ಆದ್ಯತೆ. ನಮ್ಮ ಶಿಕ್ಷಣ ನೀತಿಯೂ ಮಾತೃ ಭಾಷೆಗೆ ಹೆಚ್ಚಿನ ಒತ್ತು ನೀಡಿದೆ. ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ, ಬೆಳೆಸುವ ಹಾಗೂ ಕನ್ನಡ ಭಾಷೆಯ ಸೊಗಡು ಉಳಿಸಿ, ಸೊಬಗು ಹೆಚ್ಚಿಸುವ ಕೆಲಸ ಇನ್ನಷ್ಟು ಆಗಬೇಕಿದೆ ಎಂದು  ಕರೆ ನೀಡಿದರು.

ಕೊರೊನಾ ಇಳಿಮುಖವಾಗಿರುವುದಕ್ಕೆ ಇದೇ ಸಂದರ್ಭದಲ್ಲಿ ಸಂತೋಷ ವ್ಯಕ್ತಪಡಿಸಿದ ಅವರು, ಒಂದನೇ ತರಗತಿಯಿಂದ ಶಾಲೆಗಳು ಆರಂಭವಾ ಗಿರುವುದು ಶುಭ ಸಮಾಚಾರ ಎಂದು ಹೇಳಿದರು.

ಶಾಸಕ ಎಸ್.ಎ. ರವೀಂದ್ರನಾಥ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಮೇಯರ್ ಎಸ್.ಟಿ. ವೀರೇಶ್, ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಐ.ಜಿ.ಪಿ. ರವಿ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಸಿಇಒ ವಿಜಯ ಮಹಾಂತೇಶ ದಾನಮ್ಮನವರ್, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನಾಡು – ನುಡಿಗಾಗಿ ಸೇವೆ ಸಲ್ಲಿಸಿದ 51 ಗಣ್ಯರನ್ನು ಸನ್ಮಾನಿಸಲಾಯಿತು. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಗಳಲ್ಲಿ 14 ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ನೀಡಲಾಯಿತು.

ಸಮಾರಂಭದಲ್ಲಿ ಮೀಸಲು ಪೊಲೀಸ್ ಪಡೆ, ಗ್ರಾಮಾಂತರ ಉಪ ವಿಭಾಗ, ಅರಣ್ಯ ಇಲಾಖೆ, ಗೃಹ ರಕ್ಷಕ ದಳ, ಅಗ್ನಿ ಶಾಮಕ ದಳ ಹಾಗೂ ಪೊಲೀಸ್ ವಾದ್ಯ ವೃಂದಗಳಿಂದ ಕವಾಯತು ನಡೆಯಿತು. ಸಚಿವ ಭೈರತಿ ಅವರು ಗೌರವ ವಂದನೆ ಸ್ವೀಕರಿಸಿದರು.

ಇದಕ್ಕೂ ಮುಂಚೆ ಮಹಾನಗರ ಪಾಲಿಕೆ ಮುಂಭಾಗದಿಂದ ಆರಂಭವಾಗಿ ವಿದ್ಯಾರ್ಥಿ ಭವನದ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣದವರೆಗೆ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆ ಕಲಾ ತಂಡಗಳೊಂದಿಗೆ ನೆರವೇರಿತು.

ಕಾಡಿದ ಪ್ರೇಕ್ಷಕರ ಕೊರತೆ : ರಾಜ್ಯೋತ್ಸವದ ಸಮಾರಂಭದಲ್ಲಿ ಪ್ರೇಕ್ಷಕರ ಕೊರತೆ ಕಾಡಿತು. ಮೆರವಣಿಗೆಯಲ್ಲೂ ಸಹ ಜನರ ಸಂಖ್ಯೆ ಕಡಿಮೆ ಇತ್ತು. ರಾಜ್ಯ ಸರ್ಕಾರ ರಾಜ್ಯೋತ್ಸವಕ್ಕೆ ಗರಿಷ್ಠ 500 ಜನ ಭಾಗವಹಿಸಬಹುದು ಎಂದು ಅನುಮತಿ ನೀಡಿತ್ತು. ಆದರೆ, ಕೈಬೆರಳಣಿಕೆಯಷ್ಟೇ ಜನ ಸಮಾರಂಭದಲ್ಲಿ ಭಾಗವಹಿಸಿದ್ದರು. ಕೊರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಂದ ಯಾವುದೇ ಕಾರ್ಯಕ್ರಮಗಳು ನೆರವೇರಲಿಲ್ಲ. ಇದೂ ಸಹ ಪ್ರೇಕ್ಷಕರ ನಿರಾಸಕ್ತಿಗೆ ಕಾರಣವಾಗಿತ್ತು.

error: Content is protected !!