ಅವಕಾಶ ಕಳೆದುಕೊಂಡು ಪಶ್ಚಾತ್ತಾಪ ಪಡಬೇಡಿ

ಅವಕಾಶ ಕಳೆದುಕೊಂಡು ಪಶ್ಚಾತ್ತಾಪ ಪಡಬೇಡಿ - Janathavaniಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಿಗೊಳಿಸಲಾಗುತ್ತಿದೆ ಎಂದು ಕೇಳಿಬರುತ್ತಿರುವ ವಿಷಯದ ಹಿನ್ನೆಲೆೆಯಲ್ಲಿ ವೀರಶೈವ ಮಹಾಸಭಾದ ಅಧ್ಯಕ್ಷ ಜಿ. ಶಿವಯೋಗಪ್ಪ ಅವರು ಬಿಜೆಪಿ ವರಿಷ್ಠರಿಗೆ ನೀಡಿರುವ ಎಚ್ಚರಿಕೆ.

ದಾವಣಗೆರೆ,ಜು.20- ‘ಸಿಕ್ಕಿರುವ ಅವಕಾಶವನ್ನು ಕಳೆದುಕೊಳ್ಳಬೇಡಿ, ನಂತರ ಅದನ್ನು ಮತ್ತೆ ಹುಡುಕುತ್ತಾ ಪಶ್ಚಾತ್ತಾಪ ಪಡುವಂತಾಗಬಾರದು’ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ನಗರ ಘಟಕದ ಅಧ್ಯಕ್ಷ ಜಿ.ಶಿವಯೋಗಪ್ಪ ಬಿಜೆಪಿ ವರಿಷ್ಠರಿಗೆ ಎಚ್ಚರಿಕೆ ನೀಡಿದ್ದಾರೆ.

ವೀರಶೈವ ಸಮಾಜದ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಿಗೊಳಿಸಲಾಗುತ್ತಿದೆ ಎಂದು ಕೇಳಿಬರುತ್ತಿರುವ ವಿಷಯದ ಹಿನ್ನೆಲೆೆಯಲ್ಲಿ ಶಿವಯೋಗಪ್ಪ ಅವರು ಬಿಜೆಪಿ ವರಿಷ್ಠರಿಗೆ ಮೇಲಿನಂತೆ ಸೂಕ್ಷ್ಮವಾಗಿ ಎಚ್ಚರಿಕೆ ಕೊಟ್ಟಿದ್ದಾರೆ.

ರಾಜ್ಯ ಸರ್ಕಾರದ ನಾಯಕತ್ವ ವಹಿಸಿಕೊಂಡಿರುವ ಯಡಿಯೂರಪ್ಪ ಅವರು ನಾಡಿನ ಎಲ್ಲಾ ವರ್ಗಗಳ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ಸೇರಿದಂತೆ ಹಲವಾರು ಸಂದಿಗ್ಧ ಪರಿಸ್ಥಿತಿಗಳಲ್ಲೂ ದಿಟ್ಟತನದಿಂದ ತಮ್ಮ ವಯಸ್ಸನ್ನೂ ಲೆಕ್ಕಿಸದೇ ಸ್ವತಃ ರಾಜ್ಯಾದ್ಯಂತ ಪ್ರವಾಸ ಮಾಡಿ ನಾಡು – ನುಡಿಯ ಸೇವೆ ಸಲ್ಲಿಸುತ್ತಿದ್ದಾರೆ. ಈ ಬಗ್ಗೆ ಪಕ್ಷಾತೀತವಾಗಿ ಎಲ್ಲರೂ ಶ್ಲ್ಯಾಘಿಸುತ್ತಿದ್ದಾರೆ ಎಂದು ಉದಾಹರಣೆಯೊಂದಿಗೆ ಬಿಜೆಪಿ ವರಿಷ್ಠರಿಗೆ ಶಿವಯೋಗಪ್ಪ ಮನವರಿಕೆ ಮಾಡಿಕೊಟ್ಟಿದ್ದಾರೆ.

ಯಶಸ್ವಿ ಮತ್ತು ಶಾಂತಿಯುತವಾಗಿ ಆಡಳಿತವನ್ನು ಮುನ್ನಡೆಸುತ್ತಿದ್ದರೂ ಅವಧಿಗೂ ಮುನ್ನ ಯಡಿಯೂರಪ್ಪ ಅವರನ್ನು ನೆಪದ ಕಾರಣಗಳನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಗೊಳಿಸಲಾಗುತ್ತಿದೆ ಎಂದು ದೆಹಲಿಯಿಂದ ಕೇಳಿಬರುತ್ತಿರುವ ಉಹಾಪೋಹಗಳ ಬಗ್ಗೆ ಕಿಡಿ ಕಾರಿರುವ ಶಿವಯೋಗಪ್ಪ, ಒಂದು ವೇಳೆ  ಆ ಸ್ಥಾನದಿಂದ ಕೆಳಗಿಳಿಸಿದ್ದೇ ಆದಲ್ಲಿ ಎರಡು ಕೋಟಿ ಜನಸಂಖ್ಯೆ ಹೊಂದಿರುವ ಲಿಂಗಾಯತ ಸಮುದಾಯವನ್ನು ಕಳೆದುಕೊಳ್ಳ ಬೇಕಾದೀತು ಎಂದು ಎಚ್ಚರಿಕೆಯ ಗಂಟ ಭಾರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರಂಭಾಪುರಿ ಪೀಠದ ಜಗದ್ಗುರುಗಳು, ಶ್ರೀಶೈಲ ಪೀಠದ ಜಗದ್ಗುರುಗಳು ಸೇರಿದಂತೆ ನಾಡಿನ ಹಲವಾರು ಮಠಾಧೀಶರುಗಳು, ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಡಾ. ಶಾಮನೂರು ಶಿವಶಂಕರಪ್ಪ, ಕಾಂಗ್ರೆಸ್ ಪಕ್ಷದ ಮತ್ತೋರ್ವ ಹಿರಿಯ ಮುಖಂಡ ಎಂ.ಬಿ. ಪಾಟೀಲ್ ಅವರುಗಳೂ ಸೇರಿದಂತೆ, ಪಕ್ಷಾತೀತವಾಗಿ ವಿವಿಧ ಪಕ್ಷಗಳ ನಾಯಕರು ಯಡಿಯೂರಪ್ಪ ಅವರನ್ನು ಬೆಂಬಲಿಸಿ ನೀಡಿರುವ ಹೇಳಿಕೆಗಳನ್ನು ಶಿವಯೋಗಪ್ಪ ಸ್ವಾಗತಿಸಿ, ಕೃತಜ್ಞತೆ ಸಲ್ಲಿಸಿದ್ದಾರೆ.

ನಾಡಿನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ, `ವೀರಶೈವ ಮಹಾಸಭಾ ನಿಮ್ಮ ಬೆನ್ನಿಂದಿದೆ’ ಎಂದು ಹೇಳುವುದರ ಮೂಲಕ ಸಿ.ಎಂ. ಬೆಂಬಲಕ್ಕೆ ನಿಂತಿರುವುದು ಸ್ವಾಗತಾರ್ಹ. 

ವೀರಶೈವ ಸಮಾಜದ ಮುಖಂಡರಿಗೆ ಅಗೌರವ ತೋರಿದಾಗಲೆಲ್ಲಾ ಅವರ ಬೆಂಬಲಕ್ಕೆ ನಿಲ್ಲುತ್ತಿರುವ ಎಸ್ಸೆಸ್ ಅವರಿಗೆ ಕೃತಜ್ಞತೆಗಳು ಎಂದು ಶಿವಯೋಗಪ್ಪ ತಿಳಿಸಿದ್ದಾರೆ.

ಹೋರಾಟಕ್ಕೆ ಕರೆ : ಸಮಾಜದ ಮುಖಂಡರನ್ನು ಎಲ್ಲಾ ಪಕ್ಷಗಳು ಉಪಯೋಗಿಸಿಕೊಂಡು ನಂತರ ಅಲಕ್ಷ್ಯ ಮಾಡುತ್ತಿ ರುವ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಶಿವಯೋಗಪ್ಪ, ಇಂತಹ ಸಂದರ್ಭದಲ್ಲಿ ಬೀದಿಗಿಳಿದು ಹೋರಾಟ ಮಾಡುವಂತಹ ಪರಿಸ್ಥಿತಿ ಬಂದೊದಗಿದೆ ಎಂದು ಹೇಳಿದ್ದಾರೆ.

ವೀರೇಂದ್ರ ಪಾಟೀಲ್, ಎಸ್.ಆರ್. ಬೊಮ್ಮಾಯಿ, ಜೆ.ಹೆಚ್. ಪಟೇಲ್ ಅವರಿದ್ದ ಆಯಾ ಪಕ್ಷಗಳು ಅನ್ಯಾಯ ಮಾಡಿವೆ ಎಂದು ಉದಾಹರಣೆ ಮೂಲಕ ತಿಳಿಸಿರುವ ಶಿವಯೋಗಪ್ಪ, ಅಂತಹ ಸ್ಥಿತಿಗೆ ಈಗ ಯಡಿಯೂರಪ್ಪ ಅವ ರನ್ನೂ ತರಲಾಗು ತ್ತಿದೆ. ಸಮಾಜದವರು ಹೋರಾಟಕ್ಕಿಳಿಯಬೇಕು ಎಂದಿದ್ದಾರೆ.

error: Content is protected !!