ಜಗಳೂರು, ಜು.20- ತಾಲ್ಲೂಕಿನಲ್ಲಿ ಮುಂಗಾರು ಹಂಗಾಮು ಚುರುಕಾಗಿದ್ದು, ಉತ್ತಮ ಮಳೆಯಾಗಿರುವುದರಿಂದ ಯೂರಿಯಾ ರಸಗೊಬ್ಬರದ ಕೃತಕ ಅಭಾವ ಸೃಷ್ಟಿಯಾಗದಂತೆ ರಸಗೊಬ್ಬರ ಮಾರಾಟ ಮಳಿಗೆಗಳು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಭೇಟಿ ನೀಡಿ ಸೂಚನೆ ನೀಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸುಲು ತಿಳಿಸಿದ್ದಾರೆ.
ಜು.19 ರಂದು ಕೃಷಿ ಇಲಾಖೆ ವತಿಯಿಂದ 6 ತಂಡಗಳ ಮೂಲಕ ಮೂರು ಹೋಬಳಿ ಗಳಿಗೆ ಒಟ್ಟು 44 ರಸಗೊಬ್ಬರ ಮಾರಾಟ ಮಳಿಗೆಗಳು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಸಹಾಯಕ ಕೃಷಿ ನಿರ್ದೇಶಕರ ನೇತೃತ್ವದಲ್ಲಿ ಅಧಿಕಾರಿಗಳು ಮಾರಾಟ ಮಳಿಗೆಗಳ ತಪಾಸಣೆ ನಡೆಸಿದರು.
ತಪಾಸಣಾ ತಂಡದಲ್ಲಿ ಕೃಷಿ ಅಧಿಕಾರಿಗಳಾದ ಜೆ. ಗಿರೀಶ್, ಕೃಷಿ ಅಧಿಕಾರಿ ಎಸ್. ಜೀವಿತ, ಕೃಷಿ ಅಧಿಕಾರಿ ಎಂ.ಎ. ಹರ್ಷ, ಎ.ಡಿ. ಕೃಷ್ಣಪ್ಪ, ರವಿಂದ್ರನಾಥ್ ಮತ್ತು ಸಹಾಯಕ ಕೃಷಿ ಅಧಿಕಾರಿ ಹೆಚ್.ಡಿ. ಹನುಮಂತಪ್ಪ ಕಾರ್ಯನಿರ್ವಹಿಸಿದರು ಎಂದು ಅವರು ತಿಳಿಸಿದ್ದಾರೆ. ರಸಗೊಬ್ಬರ ಮಾರಾಟಗಾರರಿಗೆ ರಸಗೊಬ್ಬರ ನಿಯಂತ್ರಣ ಆದೇಶ 1985 ಉಲ್ಲಂಘನೆ ಮಾಡಿದ್ದಲ್ಲಿ ಪರವಾನಿಗೆ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿರುತ್ತದೆ. ಪರಿಶೀಲನೆ ಸಮಯದಲ್ಲಿ ಭೌತಿಕವಾಗಿ ಹಾಗೂ ಪಿಒಎಸ್ ಮಿಷನ್‌ನಲ್ಲಿ ಗೊಬ್ಬರವನ್ನು ಪರಿಶೀಲಿಸಲಾಗಿರುತ್ತದೆ.
ಮಾರಾಟಗಾರರು ಯೂರಿಯಾ ರಸಗೊಬ್ಬರ ಕೃತಕ ಅಭಾವ ಸೃಷ್ಟಿ ಮಾಡಬಾರದು, ನಿಗದಿತ ದರಕ್ಕೆ ರಸಗೊಬ್ಬರ ಮಾರಾಟ ಮಾಡಬೇಕು, ಆಧಾರ್ ಕಾರ್ಡ್ ಮೂಲಕ ಮಾರಾಟ ಮಾಡಬೇಕು ಹಾಗೂ ರಸಗೊಬ್ಬರ ದರಪಟ್ಟಿಯನ್ನು ಕಡ್ಡಾಯವಾಗಿ ಪ್ರಕಟಿಸಬೇಕು ಎಂಬ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.