ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿ ದಾವಣಗೆರೆ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮನು ಬಳಿಗಾರ್ ಉದ್ಘಾಟಿಸಿದರು.
ಬ್ಯಾಂಕ್ – ರೈಲ್ವೆ ಹುದ್ದೆಗಳಿಗೆ ಕನ್ನಡ ಕಡ್ಡಾಯವಾಗಲಿ : ಜಿಲ್ಲಾ ಕನ್ನಡ ಸಮ್ಮೇಳನಾಧ್ಯಕ್ಷ ಎನ್.ಟಿ. ಎರಿಸ್ವಾಮಿ
ದಾವಣಗೆರೆ, ಮಾ. 1- ಕನ್ನಡ ಅಮ್ಮನ ಭಾಷೆ ಮಾತ್ರವಲ್ಲದೆ, ಅನ್ನದ ಭಾಷೆಯೂ ಆಗಬೇಕಿದೆ. ಮೊಬೈಲ್ – ಲ್ಯಾಪ್ಟಾಪ್ ಇತ್ಯಾದಿ ಬಳಸುವ ಯುವ ಸಮೂಹ ಅಲ್ಲಿಯೂ §ಕನ್ನಡ ದರ್ಶನ¬ ಪಡೆಯುವಂತೆ ಮಾಡಬೇಕಿದೆ ಎಂದು ದಾವಣಗೆರೆ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎನ್.ಟಿ. ಎರಿಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
ನಗರದ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣ ಮಾಡುತ್ತಿದ್ದ ಅವರು, ಕನ್ನಡ ಅಮ್ಮನ ಭಾಷೆ ಮಾತ್ರವಲ್ಲದೆ ಅನ್ನದ ಭಾಷೆಯೂ ಆಗಬೇಕಿದೆ. ಶೇ.4ರಷ್ಟು ಜನರಿಗೆ ಮಾತ್ರ ಸರ್ಕಾರಿ ನೌಕರಿ ಸಿಗಲು ಸಾಧ್ಯ. ಉಳಿದವರು ತಮ್ಮ ಸ್ವಂತ ನೆಲೆಗಟ್ಟಿನ ಮೇಲೆ ಸ್ವಾಭಿಮಾನಿ ಬದುಕು ಬದುಕಬೇಕಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ §ರುಡ್ಸೆಟ್¬ ರೀತಿಯ ಉದ್ಯೋಗ ತರಬೇತಿ ಕೇಂದ್ರಗಳು ಪ್ರತಿ ತಾಲ್ಲೂಕಿನಲ್ಲೂ ಆರಂಭವಾಗಬೇಕು ಎಂದು ಹೇಳಿದರು.
ಇತ್ತೀಚೆಗೆ ಯುವಕರು ಅಂದರೆ ಇಂಗ್ಲಿಷ್ ಎಂಬಂತಾಗಿದೆ. ಅವರು ಮೊಬೈಲ್, ಲ್ಯಾಪ್ಟಾಪ್, ಟ್ಯಾಬ್, ಗ್ಯಾಜೆಟ್, ಕಂಪ್ಯೂಟರ್ ಮೂಲಕ ಬೆರಳ ತುದಿಯಲ್ಲೇ ಪ್ರಪಂಚ ದರ್ಶನ ಮಾಡುತ್ತಿದ್ದಾರೆ. ಯುವ ಸಮೂಹಕ್ಕೆ ಅಲ್ಲಿಯೂ ಕನ್ನಡ ದರ್ಶನ ಮಾಡುವಂತಹ ಕೆಲಸ ಆಗಬೇಕಿದೆ ಎಂದವರು ಹೇಳಿದರು.
ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯಲಿ
ರಾಜಕೀಯ ಸ್ಥಿತ್ಯಂತರಗಳ ಕಾರಣದಿಂದಾಗಿ ದಾವಣಗೆರೆಯಲ್ಲಿ ನಡೆಯಬೇಕಿದ್ದ ವಿಶ್ವ ಕನ್ನಡ ಸಮ್ಮೇಳನ ನಿಲ್ಲುವಂತಾಗಿದೆ. ಬಹುದಿನಗಳ ಕನಸು ನನಸಾಗಿಸಲು ಮತ್ತೆ ಇಲ್ಲೇ ಸಮ್ಮೇಳನ ನಡೆಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಕನ್ನಡ ಸಮ್ಮೇಳ ನಾಧ್ಯಕ್ಷ ಎನ್.ಟಿ. ಎರಿಸ್ವಾಮಿ ಒತ್ತಾಯಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ಕೆರೆಗಳಿಗೆ ನೀರು ತುಂಬುವ ಯೋಜನೆಗಳು, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ತ್ವರಿತವಾಗಿ ಪೂರ್ಣಗೊಳ್ಳಬೇಕಿದೆ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.
ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಹೆಸರಾಗಿರುವ ದಾವಣಗೆರೆ ಜಿಲ್ಲೆಯಲ್ಲಿ ಜವಳಿ ಪಾರ್ಕ್, ಸೌರ ವಿದ್ಯುತ್, ಆಹಾರ ಸಂಸ್ಕರಣಾ ಘಟಕ, ಗಾರ್ಮೆಂಟ್ಸ್, ಹತ್ತಿ, ಭತ್ತ, ಮೆಕ್ಕೆಜೋಳ, ಶೇಂಗಾ ಆಧರಿತ ಸಣ್ಣ ಕೈಗಾರಿಕೆಗಳು ಪ್ರಾರಂಭಗೊಂಡು, ನೂರಕ್ಕೆ ನೂರರಷ್ಟು ಜನರಿಗೆ ಕನ್ನಡದಲ್ಲಿ ಉದ್ಯೋಗ ಸಿಗುವಂತಾಗಬೇಕು ಎಂದವರು ಒತ್ತಾಯಿಸಿದ್ದಾರೆ.
ಪ್ರತಿ ಗ್ರಾಮದಲ್ಲೂ ಸುಸಜ್ಜಿತ ಗ್ರಂಥಾಲಯಜಿಲ್ಲೆಯಲ್ಲಿ ಉಚಿತ ಬ್ಯಾಂಕಿಂಗ್ ಹಾಗೂ ರೈಲ್ವೆ ಪರೀಕ್ಷಾ ತರಬೇತಿ ಕೇಂದ್ರ, ಪ್ರವಾಸಿ ತಾಣಗಳ ಅಭಿವೃದ್ಧಿ, ಕೊಂಡಜ್ಜಿಯಲ್ಲಿ ಪ್ರಾರಂಭವಾಗುತ್ತಿರುವ ವೃತ್ತಿ ರಂಗಭೂಮಿ ಕೇಂದ್ರವನ್ನು ರಾಜ್ಯದಲ್ಲೇ ಮಾದರಿಯಾಗಿ ರೂಪಿಸುವ ಹಾಗೂ ಮಾಧ್ಯಮ ಮಿತ್ರರ ಓದಿಗಾಗಿ ಸುಸಜ್ಜಿತ ಪತ್ರಿಕಾ ಭವನ ನಿರ್ಮಾಣವಾಗಬೇಕು ಎಂದವರು ಒತ್ತಾಯಿಸಿದ್ದಾರೆ.
ಪರಿಷತ್ತಿನ ಕಾರ್ಯಕಾರಿಯಲ್ಲಿ ಬುಡಕಟ್ಟು, ಮಹಿಳೆಯರಿಗೆ ಆದ್ಯತೆ : ಮನು ಬಳಿಗಾರ್
ದಾವಣಗೆರೆ, ಮಾ. 1 – ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯಲ್ಲಿ ಬುಡಕಟ್ಟು ಜನರು ಹಾಗೂ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಕಲ್ಪಿಸಲಾಗಿದೆ ಎಂದು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮನು ಬಳಿಗಾರ್ ಹೇಳಿದ್ದಾರೆ.
ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ಹತ್ತನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದ ಅವರು, ಕಾರ್ಯಕಾರಿ ಸಮಿತಿಯಲ್ಲಿ ಬುಡಕಟ್ಟು ಸಮುದಾಯದ ಒಬ್ಬರಿಗೆ ಹಾಗೂ ಓರ್ವ ಮಹಿಳೆಗೆ ಅವಕಾಶವಿತ್ತು. ಇದನ್ನು ತಮ್ಮ ಅವಧಿಯಲ್ಲಿ ಎರಡಕ್ಕೆ ಹೆಚ್ಚಿಸಿದ್ದೇವೆ. ಇದರಿಂದಾಗಿ ರಾಜ್ಯಾದ್ಯಂತ 850 ಬುಡಕಟ್ಟು ಸಮುದಾಯ ದವರು ಹಾಗೂ ಮಹಿಳೆಯರು ಹೆಚ್ಚಿನ ಪ್ರಾತಿನಿಧ್ಯ ಪಡೆದಿದ್ದಾರೆ ಎಂದು ಹೇಳಿದರು.
ಚುನಾವಣಾ ಸುಧಾರಣಾ ಪ್ರಕ್ರಿಯೆ ಅಂಗವಾಗಿ ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲೂ ಮತಗಟ್ಟೆ ಸೌಲಭ್ಯ ಕಲ್ಪಿಸ ಲಾಗುತ್ತಿದೆ. ಪರಿಷತ್ತಿನ ಪದಾಧಿಕಾರಿಗಳ ಅಧಿ ಕಾರದ ಅವಧಿಯನ್ನು ಮೂರು ವರ್ಷದಿಂದ ಐದು ವರ್ಷಕ್ಕೆ ಹೆಚ್ಚಿಸುವ ಕ್ರಮವನ್ನು ವಿಚಾರಣೆ ನಡೆಸಿದ ಎಲ್ಲ ನ್ಯಾಯಾಲಯಗಳು ಎತ್ತಿ ಹಿಡಿದಿವೆ ಎಂದ ಅವರು, ಪರಿಷತ್ತಿನ ಲೆಕ್ಕ ಪತ್ರಗಳು ಪಾರದರ್ಶಕವಾಗಿದ್ದು ನಯಾ ಪೈಸೆ ಭ್ರಷ್ಟಾಚಾರ ನಡೆದಿಲ್ಲ ಎಂದು ಹೇಳಿದರು.
ಪ್ರಸಕ್ತ ಅವಧಿಯಲ್ಲಿ ದಲಿತ ಸಾಹಿತ್ಯ ಹತ್ತು ಸಂಪುಟಗಳಲ್ಲಿ ದಲಿತ ಸಾಹಿತ್ಯ ಪ್ರಕಟಿಸುವ ಉದ್ದೇಶವಿದ್ದು, ಈಗಾಗಲೇ 9 ಸಂಪುಟಗಳು ಪ್ರಕಟವಾಗಿವೆ. ಮಹಿಳಾ ಸಾಹಿತ್ಯ ಸಂಪುಟವನ್ನು ಕೇವಲ ಆರು ತಿಂಗಳಲ್ಲೇ ಮಹಿಳಾ ಸಾಹಿತಿಗಳು ರೂಪಿಸಿದ್ದಾರೆ ಎಂದು ಹೇಳಿದರು.
ದಾವಣಗೆರೆ ಜಿಲ್ಲೆ ರಚನೆಯಾಗಿ 24 ವರ್ಷಗಳಾದರೂ ಕೇವಲ 10ನೇ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ, ಇದಕ್ಕೆ ಅನುದಾನದ ಕೊರತೆಯೇ ಕಾರಣ. ಈ ಹಿಂದೆ ರಾಜ್ಯ ಸರ್ಕಾರಗಳು ಜಿಲ್ಲಾ ಸಮ್ಮೇಳನಗಳಿಗೆ ಕೇವಲ ಐದು ಸಾವಿರ ರೂ. ಕೊಡುತ್ತಿದ್ದವು. ತಾವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡ ನಂತರ, ಜಿಲ್ಲಾ ಸಮ್ಮೇಳನಗಳಿಗೆ ಸರ್ಕಾರ ಐದು ಲಕ್ಷ ರೂ. ಅನುದಾನ ಕೊಡುತ್ತಿದೆ. ಇದರಿಂದಾಗಿ ಜಿಲ್ಲಾ ಸಮ್ಮೇಳನಗಳು ನಡೆಯಲು ಸಾಧ್ಯವಾಗುತ್ತಿದೆ ಎಂದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಲೋಕೇಶ್ ಅಗಸನಕಟ್ಟೆ ಮಾತನಾಡಿ, ದೇಶ ಈಗ ಛಿದ್ರವಾಗಿ ಹೋಗುತ್ತಿದ್ದು, ಒಕ್ಕೂಟದ ಗುಣವೇ ಇಲ್ಲದಂತಾಗಿದೆ. ಜಾತಿ, ಮತ ಹಾಗೂ ಸಂಪ್ರದಾಯದ ವ್ಯಾಪ್ತಿಯೊಳಗೆ ಬದುಕು ಬರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಒಡೆಯುತ್ತಿರುವ ಮನಸ್ಸುಗಳನ್ನು ಸಾಹಿತ್ಯ ಒಗ್ಗೂಡಿಸಬೇಕು ಎಂದು ಹೇಳಿದರು.
ಕ.ಸಾ.ಪ ಜಿಲ್ಲಾ ಅಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಎನ್.ಕೆ. ನಾರಾಯಣ್, ನಿಕಟಪೂರ್ವ ಕ.ಸಾ.ಪ. ಜಿಲ್ಲಾಧ್ಯಕ್ಷ, ಎ.ಆರ್. ಉಜ್ಜನಪ್ಪ, ಪ್ರೌಢಶಾಲ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಡಿ.ಡಿ. ಹಾಲೇಶಪ್ಪ, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಡಿ. ರಾಮಪ್ಪ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಎಸ್. ಓಂಕಾರಯ್ಯ ತವನಿಧಿ ಅವರ §ಸಕಲ ಸೃಷ್ಠಿ ಸಿದ್ದಾಂತ ಹಾಗೂ ಗಂಡು ಮತ್ತು ಹೆಣ್ಣುಗಳ ನಡುವಿನ 350ಕ್ಕೂ ಹೆಚ್ಚು ವ್ಯತ್ಯಾಸಗಳು¬ ಮತ್ತು ಜೆ.ಸಿ. ಮಂಜುನಾಥ ಹುಲ್ಲೇಹಾಳ್ ಇವರ §ಭಾವ ಸಂಕಲ¬ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ಬಿ. ದಿಳ್ಯಪ್ಪ ಸ್ವಾಗತಿಸಿದರೆ, ಎನ್.ಎಸ್.ರಾಜು ನಿರೂಪಿಸಿದರು. ಬುರುಡೇಕಟ್ಟೆ ಮಂಜಪ್ಪ ವಂದಿಸಿದರು.
ಸಮ್ಮೇಳನಾಧ್ಯಕ್ಷ ಎನ್.ಟಿ. ಎರಿಸ್ವಾಮಿ ಅವರನ್ನು ತಾಯಿ ಭುವನೇಶ್ವರಿ ಪ್ರತಿಮೆಯೊಂದಿಗೆ ಕಲಾ ತಂಡಗಳ ಸಮೇತ ಮೆರವಣಿಗೆಯಲ್ಲಿ ಸಮ್ಮೇಳನ ಸ್ಥಳಕ್ಕೆ ಕರೆ ತರಲಾಯಿತು.
ಸಮ್ಮೇಳನ ಸ್ಥಳದಲ್ಲಿ ಆಯೋಜಿಸಲಾಗಿದ್ದ ಚಿತ್ರಕಲಾ ಪ್ರದರ್ಶನವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ (ಅಭಿವೃದ್ಧಿ) ಹೆಚ್.ಕೆ. ಲಿಂಗರಾಜ್ ಹೆಚ್.ಕೆ. ಲಿಂಗರಾಜು ಉದ್ಘಾಟಿಸಿದರು.
ಸಾಹಿತ್ಯಾಸಕ್ತರ ದಂಡು ಜನಪ್ರತಿನಿಧಿಗಳು ವಿರಳ
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊ ಳ್ಳಲು ಸಾಹಿತ್ಯಾಸಕ್ತರ ದಂಡು ಕುವೆಂಪು ಕನ್ನಡ ಭವನದಲ್ಲಿ ನೆರೆದಿತ್ತು. ಕೊರೊನಾ ಕಾರಣಕ್ಕಾಗಿ ಮುಂದೂಡಿಕೆಯ ನಂತರ ಸಮ್ಮೇಳನ ನಡೆ ದಿತ್ತು. ಬೆಳಿಗ್ಗೆ ನಡೆದ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಪಾಲ್ಗೊಂಡವರ ಸಂಖ್ಯೆ ವಿರಳವಾಗಿತ್ತು. ಆದರೆ, ಸರ್ಕಾರಿ ನೌಕರರು ಹಾಗೂ ಶಿಕ್ಷಕರು ಒ.ಒ.ಡಿ. ಪಡೆಯುವ ಸಲು ವಾಗಿ ಸಾಲುಗಟ್ಟಿ ನಿಂತಿದ್ದು ಕಂಡು ಬಂತು.
ಸಮ್ಮೇಳನದ ಸಂದರ್ಭದಲ್ಲಿ ಆಯೋಜಿಸ ಲಾಗಿದ್ದ ಪುಸ್ತಕ ಮಾರಾಟ, ಖಾದಿ ವಸ್ತ್ರಗಳ ಮಾರಾಟ ಮಳಿಗೆಗಳಲ್ಲೂ ಜನರು ಹೆಚ್ಚಾಗಿ ನೆರೆದಿದ್ದರು. ತೋಟಗಾರಿಕಾ ಉತ್ಪನ್ನಗಳ ಬೀಜಗಳು, ಗೃಹೋಪಯೋಗಿ ವಸ್ತುಗಳ ಮಾರಾಟವೂ ಬಿರುಸಾಗಿತ್ತು. ಸಮ್ಮೇಳನದಲ್ಲಿ ಜನಪ್ರತಿನಿಧಿಗಳು ಕಂಡು ಬರಲಿಲ್ಲ. ಪಾಲಿಕೆಯ ಪ್ರತಿನಿಧಿಗಳಿಂದ ಹಿಡಿದು ಶಾಸಕರವರೆಗೆ ಯಾರೂ ಸಮ್ಮೇಳನಕ್ಕೆ ಆಗಮಿಸಿರಲಿಲ್ಲ. ಮಧ್ಯಾಹ್ನದ ಭೋಜನದ ನಂತರ ಬಿಸಿಲೇರಿದಂತೆ ಗೋಷ್ಠಿಗಳಲ್ಲಿ ಉಪಸ್ಥಿತರಿದ್ದ ಜನರ ಸಂಖ್ಯೆ ಇಳಿಮುಖವಾಯಿತು.
ಕನ್ನಡದಲ್ಲಿ ಶಿಕ್ಷಣ, ಪುಸ್ತಕಗಳ ಡಿಜಿಟಲೀಕರಣ
ಕನ್ನಡ ಭಾಷೆ ಬೆಳೆಸಲು ಕೇಂದ್ರೀಯ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ, ಹತ್ತನೇ ತರಗತಿ ಯವರೆಗೆ ಕನ್ನಡವನ್ನು ಶಿಕ್ಷಣ ಮಾಧ್ಯಮವನ್ನಾಗಿ ಮಾಡುವುದು, ಪುಸ್ತಕಗಳ ಡಿಜಿಟಲೀಕರಣ, ಜಾಲತಾಣಗಳಲ್ಲಿ ಕನ್ನಡ ಸೇರಿದಂತೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಜಿಲ್ಲಾ ಕನ್ನಡ ಸಮ್ಮೇಳನಾಧ್ಯಕ್ಷ ಎನ್.ಟಿ. ಎರಿಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
ಕೊರೊನಾ ಸಂಕಷ್ಟ ಕಾಲದಲ್ಲಿ ಜಾಲತಾಣಗಳ ಮೂಲಕ ಕನ್ನಡದ ಡಿಂಡಿಮ ಬಾರಿಸಿದ ಅನೇಕ ಉತ್ಸಾಹಿ ತಂಡಗಳೇ ನಮ್ಮಲ್ಲಿ ಉದಯವಾದವು. ಇಂತಹ ಆವಿಷ್ಕಾರಗಳಿಗೆ ಉತ್ತೇಜನ ನೀಡಬೇಕಿದೆ. ರಾಜ್ಯದಲ್ಲಿರುವ ಎಲ್ಲ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ವರ್ಷದ ಮೊದಲ ತಿಂಗಳಲ್ಲಿಯೇ ಕನ್ನಡ ಸಪ್ತಾಹವನ್ನು ಕಡ್ಡಾಯವಾಗಿ ಆಚರಿಸಬೇಕು. ನಂತರ ವಾರ್ಷಿಕ ಕ್ರಿಯಾ ಯೋಜನೆ ರೂಪಿಸಿ, ವರ್ಷವಿಡೀ ಕನ್ನಡದ ಕೆಲಸಗಳಾಗಬೇಕು ಎಂದವರು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ಕನ್ನಡ ಕಾಯಕ ವರ್ಷ ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ವಿಧಾನಸೌಧದಿಂದ ಗ್ರಾಮ ಪಂಚಾಯ್ತಿಯವರೆಗೆ ಕನ್ನಡದಲ್ಲಿಯೇ ಆಡಳಿತ ನಡೆಯಬೇಕು ಎಂದು ಸಮ್ಮೇಳನಾಧ್ಯಕ್ಷರು ಆಗ್ರಹಿಸಿದ್ದಾರೆ.
ಮನೆಯ ಮಾತಿನಿಂದ, ಮನದ ಮಾತಿಗೆ
ನನ್ನ ಮನೆಯ ಮಾತು ತೆಲುಗಾದರೆ, ಮನದ ಮಾತು ಕನ್ನಡ… ಕನ್ನಡ… ಕನ್ನಡ… ಹೀಗೆಂದು ಹೇಳಿದ ಜಿಲ್ಲಾ ಕನ್ನಡ ಸಮ್ಮೇಳನಾಧ್ಯಕ್ಷ ಎನ್.ಟಿ. ಎರಿಸ್ವಾಮಿ, ನನ್ನ ವೃತ್ತಿ, ಪ್ರವೃತ್ತಿಗಳಲ್ಲಿ ಕನ್ನಡವೇ ಉಸಿರಾಗಿದೆ ಎಂದಿದ್ದಾರೆ.
§ಎಂದುಲೋ ಮಹಾನುಭಾವುಲು ಅಂದರಿಕಿ ವಂದನಮು¬ ಎಂಬ ತೆಲುಗಿನಿಂದ ಮಾತು ಆರಂಭಿಸಿದ ಅವರು, ನನಗೆ ಕನ್ನಡ ದೀಕ್ಷೆ ಕೊಟ್ಟವರು ತ್ರಿಮೂರ್ತಿ ವಿದ್ಯಾಗುರುಗಳಾದ ಮಲ್ಲಯ್ಯ ಮೇಷ್ಟ್ರು, ಎಂ. ಬಸವಪ್ಪ ಹಾಗೂ ಡಾ. ಟಿ. ತಿಪ್ಪೇಸ್ವಾಮಿ ಎಂದು ಹೇಿಳಿದರು.
ನನ್ನೆಲ್ಲ ಹುಚ್ಚುತನಗಳನ್ನು ನುಂಗಿಕೊಂಡು, ಈತ ಬದಲಾಗಲಾರ ಎಂದೇ ನಂಬಿಕೊಂಡು, ನನ್ನ ಬ್ಯಾಂಕಿಂಗ್ ಹಾಗೂ ಸಾಹಿತ್ಯ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತವಳು, ಸಂಸಾರದ ತೇರನೆಳೆವ ಸಾಹಸಿ ಮಡದಿ ಸಾವಿತ್ರಿ ಎಂದು ಪತ್ನಿಯ ಹೆಸರು ಹೇಳುವಾಗ ಅವರು ಗದ್ಗದಿತರಾಗಿದ್ದರು.
ಗೌಡರ ಹೇಳಿಕೆಗೆ ಆಕ್ಷೇಪ
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ದೊಡ್ಡರಂಗೇಗೌಡ ಅವರು ಹಿಂದಿ ರಾಷ್ಟ್ರೀಯ ಭಾಷೆ ಎಂದು ಹೇಳಿದ್ದಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಡಾ. ಲೋಕೇಶ್ ಅಗಸನಕಟ್ಟೆ ಆಕ್ಷೇಪಿಸಿದ್ದಾರೆ.
ಇದುವರೆಗೆ ಕನ್ನಡ ಸಮ್ಮೇಳನಾಧ್ಯಕ್ಷರಾದ ಎಲ್ಲರೂ ಕನ್ನಡ ಭಾಷೆಯ ಪರವಾಗಿ ಮಾತನಾಡಿದ್ದಾರೆ. ಆದರೆ, ಮುಂದೆ ಅಧ್ಯಕ್ಷರಾಗಲಿರುವವರು (ದೊಡ್ಡರಂಗೇಗೌಡ) ಬೇರೆ ಭಾಷೆ ಬಗ್ಗೆ ಮಾತನಾಡಿದ್ದಾರೆ ಎಂದು ಅಗಸನಕಟ್ಟೆ ಬೇಸರ ವ್ಯಕ್ತಪಡಿಸಿದರು.
ಮೆರವಣಿಗೆಗೆ ಮೆರಗು ನೀಡಿದ ಕಲಾತಂಡಗಳು
ದಾವಣಗೆರೆ, ಮಾ.1- ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸೋಮವಾರ ಮುಂಜಾನೆ ನಡೆದ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಸಮಾಳ, ವೀರಗಾಸೆ, ಕೀಲುಕುದುರೆ, ಮಕ್ಕಳ ಬ್ಯಾಂಡ್ಸೆಟ್ಗಳು ಮೆರವಣಿಗೆಗೆ ಮೆರುಗು ನೀಡಿದವು.
ಸಮ್ಮೇಳನದ ಸರ್ವಾಧ್ಯಕ್ಷ ಎನ್.ಟಿ. ಯರಿಸ್ವಾಮಿ ಸಾರೋಟು ಏರಲು ನಿರಾಕರಿಸಿ, ಕನ್ನಡ ಭುವನೇಶ್ವರಿ ದೇವಿಯ ವಿಗ್ರಹದೊಂದಿಗೆ ಮೆರವಣಿಗೆಯಲ್ಲಿ ನಡೆದುಕೊಂಡೇ ಸಾಗಿದರು. ವಿದ್ಯಾನಗರ ಆಂಜನೇಯ ಸ್ವಾಮಿ ದೇವಸ್ಥಾನ ಬಳಿಯಿಂದ ಸಭಾಂಗಣದವರೆಗೆ ಮೆರವಣಿಗೆ ನಡೆಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಚ್.ಎಸ್. ಮಂಜುನಾಥ ಕುರ್ಕಿ, ತಾಲ್ಲೂಕು ಅಧ್ಯಕ್ಷ ವಾಮದೇವಪ್ಪ, ಸೇರಿದಂತೆ ಇತರರು ಭಾಗವಹಿಸಿದ್ದರು.
ಮಗು ಇಂಗ್ಲಿಷ್ನಲ್ಲಿ ಟಸ್ಸು – ಪುಸ್ಸು ಎಂದರೆ ಹೆತ್ತವರಿಗೆ ಅದೇನೋ ಪರಮಾನಂದ. ಮಕ್ಕಳ ಮನಸ್ಸು ಬಾಡದ ಹಾಗೆ ಸುಮದ ಪರಿಮಳ ಎಲ್ಲೆಡೆ ಪಸರಿಸಲು §ಕನ್ನಡದ ನಂಟು ದಿವಿನಾದ ಔಷಧಿ¬ ಎಂಬುದನ್ನು ಮರೆಯಬಾರದು ಎಂದ ಅವರು, ಕನ್ನಡದ ಶಾಲೆಗಳಿಗೆ ಉತ್ತಮ ಸೌಲಭ್ಯ ಕಲ್ಪಿಸುವ ಮೂಲಕ ಮಕ್ಕಳನ್ನು ಅಲ್ಲಿಯೇ ಓದಿಸುವ ಹಠ ಮತ್ತು ಮನಸ್ಸು ಪೋಷಕರದ್ದಾಗಬೇಕಿದೆ ಎಂದರು.
ಕೇಂದ್ರ ಸರ್ಕಾರದ ಕಚೇರಿಗಳಾದ ಬ್ಯಾಂಕ್, ಅಂಚೆ ಕಚೇರಿ, ಜೀವ ವಿಮಾ ನಿಗಮ ಹಾಗೂ ರೈಲ್ವೆಗಳಲ್ಲಿ ಶೇ.80ರಷ್ಟು ಕನ್ನಡೇತರರೇ ತುಂಬಿದ್ದಾರೆ. ಇಲ್ಲಿ ಕನ್ನಡಗರಿಗೆ ಉದ್ಯೋಗ ಸಿಗುತ್ತಿಲ್ಲ. ಅಲ್ಲಿ ಉದ್ಯೋಗ ಮಾಡುವವರೂ ಸಹ ಕನ್ನಡ ಕಲಿಯದೇ, §ಕನ್ನಡ ಮಾಲೂಮ್ ನಹಿ, ಹಿಂದಿ ಮೆ ಬೋಲೋ¬ ಎಂಬ ಧಾಡಸೀತನದ ದುರ್ವರ್ತನೆ ತೋರುತ್ತಿದ್ದಾರೆ. ಕನ್ನಡದ ನೆಲದಲ್ಲಿ ಪ್ರತಿಯೊಬ್ಬರಿಗೂ ಕನ್ನಡ ಮಾತನಾಡಲು ಬರಬೇಕು. ಕನ್ನಡದ ನೆಲದಲ್ಲಿನ ಎಲ್ಲಾ ಹುದ್ದೆಗಳು ಕನ್ನಡಿಗರಿಗೇ ಸಿಗಬೇಕು ಎಂಬ ಹಕ್ಕೊತ್ತಾಯದ ಚಳುವಳಿಗೆ ಕನ್ನಡಿಗರು ಮುಂದಾಗಬೇಕು ಎಂದವರು ಆಗ್ರಹಿಸಿದರು.
ಕನ್ನಡ ಬರದೇ ಇರುವವರಿಗೂ ಬ್ಯಾಂಕಿನಲ್ಲಿ ಉದ್ಯೋಗ ಕೊಡಬಹುದು ಎಂಬ ನಿಯಮಗಳನ್ನು ರದ್ದುಗೊಳಿಸಬೇಕು. ಕನ್ನಡ ಜ್ಞಾನ ಹೊಂದಿದವರು ಮಾತ್ರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕೆಂಬ 2014ಕ್ಕೆ ಮುಂಚೆ ಇದ್ದ ನಿಯಮಗಳನ್ನು ಮತ್ತೆ ಜಾರಿಗೆ ತರುವಂತೆ ಒತ್ತಾಯಿಸಬೇಕು ಎಂದ ಅವರು, ಆಂಧ್ರ ಪ್ರದೇಶದಂತೆ ಪ್ರತಿ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಇಲಾಖೆಗಳ ಪರೀಕ್ಷೆಗಳಿಗೆ ಯುವಕ, ಯುವತಿಯರನ್ನು ಸಜ್ಜುಗೊಳಿಸುವ ವ್ಯವಸ್ಥೆ ಕರ್ನಾಟಕದಲ್ಲಿ ಜಾರಿಯಾಗಬೇಕು ಎಂದವರು ಆಗ್ರಹಿಸಿದರು.