ಜಿಲ್ಲೆಯಲ್ಲಿ 300 ಪಾಸಿಟಿವ್, 1 ಸಾವು

ದಾವಣಗೆರೆ, ಏ.27 – ಜಿಲ್ಲೆಯಲ್ಲಿ ಮಂಗಳವಾರ 300 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಓರ್ವ ಓರ್ವ ಪುರುಷ ಮೃತಪಟ್ಟ ಬಗ್ಗೆ ವರದಿಯಾಗಿದೆ.

ದಾವಣಗೆರೆ ತಾಲ್ಲೂಕಿನಲ್ಲಿ 200, ಹರಿಹರ 27, ಜಗಳೂರು 20, ಚನ್ನಗಿರಿ 12, ಹೊನ್ನಾಳಿ 30 ಹಾಗೂ ಹೊರ ಜಿಲ್ಲೆಯ 11 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 178 ಜನರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ.

ಸಿ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಗಳೂರು ಕೆಬಿಇ ವೃತ್ತದ ಬಳಿಯ ವಾಸಿ 47 ವರ್ಷದ ಪುರುಷ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1587ಕ್ಕೆ ಏರಿಕೆಯಾಗಿದೆ. 268 ಜನರು ಮೃತಪಟ್ಟಿದ್ದಾರೆ.

ವೆಂಟಿಲೇಟರ್ ಸಿಗದೇ ನರಳಾಡಿ ಜೀವ ಬಿಟ್ಟ ಸೋಂಕಿತೆ

ದಾವಣಗೆರೆ, ಏ.27- ವೆಂಟಿಲೇಟರ್ ಸಿಗದೇ ಜಿಲ್ಲಾಸ್ಪತ್ರೆ ಸೇರಿದಂತೆ ಮೂರು ಆಸ್ಪತ್ರೆಗಳಲ್ಲಿ ರಾತ್ರೋರಾತ್ರಿ ಆಂಬ್ಯುಲೆನ್ಸ್‍ನಲ್ಲಿ ನರಕ ಯಾತನೆ ಅನುಭವಿಸಿದ್ದ ಕೊರೊನಾ ಸೋಂಕಿತ ಮಹಿಳೆ ಕೊನೆಗೂ ಸೋಮವಾರ ತಡರಾತ್ರಿ ಜೀವ ಬಿಟ್ಟಿದ್ದಾರೆ. 

ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ತಾಲ್ಲೂಕಿನ ಲೋಕಿಕೆರೆ ಗ್ರಾಮದ ಸುಮಾರು 52 ವರ್ಷ ವಯಸ್ಸಿನ ಕೊರೊನಾ ಸೋಂಕಿತ ಮಹಿಳೆಯನ್ನು ವೆಂಟಿಲೇಟರ್ ಗಾಗಿ ಸೋಮವಾರ ಜಿಲ್ಲಾಸ್ಪತ್ರೆಗೆ ಕರೆ ತಂದು, ಆಂಬ್ಯುಲೆನ್ಸ್‍ನಲ್ಲೇ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾಯಿಸಿ, ನಂತರ ವೆಂಟಿಲೇಟರ್ ಇಲ್ಲವೆಂದು ಎಸ್ಸೆಸ್ ಹೈಟೆಕ್ ಆಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿಯೂ ಬೆಡ್, ವೆಂಟಿಲೇಟರ್ ಸಿಗದೇ, ಬಾಪೂಜಿ ಆಸ್ಪತ್ರೆಗೆ ಕಳಿಸಲಾಗಿತ್ತು. ಅಷ್ಟರಲ್ಲಿ ತೀವ್ರ ನಿತ್ರಾಣರಾಗಿದ್ದ ಮಹಿಳೆ ರಾತ್ರಿಯೇ ತೀವ್ರ ಉಸಿರಾಟದ ಸಮಸ್ಯೆಗೆ ತುತ್ತಾಗಿದ್ದರು.ಮೃತಳ ಪಾರ್ಥಿವ ಶರೀರವನ್ನು ಇಂದು ಬೆಳಿಗ್ಗೆ  ಕುಟುಂಬದವರು ಆಂಬ್ಯುಲೆನ್ಸ್‍ನಲ್ಲಿ ತಮ್ಮ ಊರಿಗೆ ಕೊಂಡೊಯ್ದರು.

ಮಗನ ಕಣ್ಣೀರು: ಊಟವನ್ನೂ ಕೊಡದೇ ತನ್ನ ತಾಯಿಯನ್ನು ಸಾಯಿಸಿದ್ದಾರೆ. ನಾವಾದರೂ ತಿನ್ನೋಕೆ ಏನಾದರೂ ಕೊಡೋಣವೇ ಅಂತಾ ಕೇಳಿದರೆ, ಡಾಕ್ಟರ್ ನೀವಾ, ನಾವಾ ಎಂಬುದಾಗಿ ಆಸ್ಪತ್ರೆ ವೈದ್ಯರು ಪ್ರಶ್ನಿಸುತ್ತಾರೆ. ರಾತ್ರಿಯೆಲ್ಲಾ ಊಟ, ಊಟ ಅನ್ನುತ್ತಲೇ ತಮ್ಮ ತಾಯಿ ಸಾವನ್ನಪ್ಪಿದರು ಎಂದು ಮೃತಳ ಮಗ ಸಂತೋಷ್ ಕಣ್ಣೀರು ಹಾಕಿದ್ದಾರೆ.

ಊಟ ಕೊಡಲ್ಲ, ಏನೂ ಕೊಡಲ್ಲ. ಸುಮ್ಮನೇ ಒಂದು ಮೆಡಿಸಿನ್ ಅಂತಾರೆ ಏನೂ ಇಲ್ಲ. ಗ್ಲುಕೋಸ್ ಹಾಕಿ, ಆಕ್ಸಿಜನ್ ಕೊಡುತ್ತಾರೆ. ಮೂರು ವೆಂಟಿಲೇಟರ್ ಇವೆಯೆಂದರೂ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಿರಿ ಅಂತಾ ಹೇಳುತ್ತಾರೆ ಎಂದು ಜಿಲ್ಲಾಸ್ಪತ್ರೆ, ಖಾಸಗಿ ಆಸ್ಪತ್ರೆಗಳ ಅವ್ಯವಸ್ಥೆಯ ವಿರುದ್ಧ ಅವರು ಆಕ್ರೋಶ ಹೊರ ಹಾಕಿದ್ದಾರೆ.

ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್. ಬಸವಂತಪ್ಪ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಆಸ್ಪತ್ರೆಗಳಲ್ಲಿ ಸಿಗದ ಚಿಕಿತ್ಸೆ, ಬೆಡ್ ರೋಗಿಗಳ ಪರದಾಟ-ಜೀವಕ್ಕೆ ಸಂಕಷ್ಟ

ದಾವಣಗೆರೆ, ಏ.27- ಕೋವಿಡ್ ಎರಡನೇ ಅಲೆಗೆ ಸಿಲುಕಿದ ಸೋಂಕಿತರು ಹಾಗೂ ಕೋವಿಡೇತರ ರೋಗಿಗಳು ಆಸ್ಪತ್ರೆಗಳಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ, ಬೆಡ್ ಸಹ ಸಿಗದೇ ಪರದಾಡುವ, ಜೀವವನ್ನೇ ಕಳೆದುಕೊಳ್ಳುವ ಸ್ಥಿತಿ ಜಿಲ್ಲೆಯಲ್ಲಿ ಎದುರಾಗಿದೆ. 

ಬೆಡ್ ಗಾಗಿ ವೃದ್ಧೆ ಪರದಾಟ: ಹರಪನಹಳ್ಳಿ ತಾಲ್ಲೂಕಿನ ಕೋಡಿಯಾಲ ಗ್ರಾಮದ ವೃದ್ಧೆ ಅನಸೂಯಮ್ಮ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಕೋವಿಡ್ ಟೆಸ್ಟ್‍ನಲ್ಲಿ ನೆಗೆಟಿವ್ ಬಂದಿದ್ದರೂ ಉಸಿರಾಟದ ತೀವ್ರ ಸಮಸ್ಯೆಯಿಂದ ಬಳಲುತ್ತಿದ್ದ ಅನಸೂಯಮ್ಮ ಅವರನ್ನು ಜಿಲ್ಲಾಸ್ಪತ್ರೆಗೆ ಕರೆ ತರಲಾಗಿತ್ತು. 

ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಇಲ್ಲವೆಂದು ಹೇಳಿ, ಅಲ್ಲಿನ ಸಿಬ್ಬಂದಿ ವಾಪಾಸ್ ಕಳಿಸಿ, ಖಾಸಗಿ ಆಸ್ಪತ್ರೆಗೆ ಹೋಗುವಂತೆ ಹೇಳಿದ್ದಾರೆ. ಪಕ್ಕದ ಬಾಪೂಜಿ ಆಸ್ಪತ್ರೆಗೆ ಅನುಸೂಯಮ್ಮನನ್ನು ಕರೆದೊಯ್ದರೆ ಅಲ್ಲಿಯೂ ಬೆಡ್ ಇರಲಿಲ್ಲ. ಬೆಡ್‍ಗಾಗಿ ಇತರೆ ಖಾಸಗಿ ಆಸ್ಪತ್ರೆಗಳಿಗೆ ಸುತ್ತಾಡಿ ಹೈರಾಣದ ಕುಟುಂಬಗಳು ತೀವ್ರ ಪರದಾಡಬೇಕಾಯಿತು. 

ಜಿಲ್ಲಾಸ್ಪತ್ರೆ ರೆಫರೆನ್ಸ್ ಪತ್ರ ತೋರಿಸಿದರೂ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲು ಮಾಡಿಕೊಳ್ಳಲಿಲ್ಲ. ಒಂದು ಆಸ್ಪತ್ರೆಯಲ್ಲಂತೂ 20 ಸಾವಿರ ಮುಂಗಡ ಹಣ ಕಟ್ಟಿದರೆ ಮಾತ್ರ ದಾಖಲಿಸಿಕೊಳ್ಳುವುದಾಗಿ ಹೇಳಿದ್ದಾರೆ. ಹಣ ಕಟ್ಟಲಾಗದ ಬಡ ಕುಟುಂಬವು ವೃದ್ಧೆ ಅನಸೂಯಮ್ಮನನ್ನು ಊರಿಗೆ ವಾಪಸ್ ಕರೆದೊಯ್ದಿದ್ದಾರೆ.

error: Content is protected !!