ದಾವಣಗೆರೆ, ಜು. 19- ಸರ್ಕಾರದ ಕೋವಿಡ್ ಮಾರ್ಗಸೂಚಿಯಡಿ ಮುಂಜಾಗ್ರತಾ ಕ್ರಮಗಳ ಮುಖೇನ ಇಂದಿನಿಂದ ಜಿಲ್ಲೆಯಾದ್ಯಂತ ಎಸ್ಎಸ್ಎಲ್ ಪರೀಕ್ಷೆ ಆರಂಭವಾಗಿದ್ದು, ಮೊದಲ ದಿನದಂದು ಮೂರು ವಿಷಯಗಳಿಗೆ ನಡೆದ ಪರೀಕ್ಷೆಯು ಸುಲಲಿತವಾಗಿ ನಡೆದಿದ್ದು, ವಿದ್ಯಾರ್ಥಿಗಳು ನಿರ್ಭೀತಿಯಿಂದ ಪರೀಕ್ಷೆ ಬರೆದರು.
ಒಟ್ಟು 120 ಕೇಂದ್ರಗಳಲ್ಲಿ ಸಮಾಜ ವಿಜ್ಞಾನ, ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಪರೀಕ್ಷೆ ನಡೆಯಿತು. ಗಣಿತ ವಿಷಯದಲ್ಲಿ 21,719 ವಿದ್ಯಾರ್ಥಿಗಳಲ್ಲಿ 21,686 ಪರೀಕ್ಷೆ ಬರೆದಿದ್ದು, 33 ಜನರು ಗೈರಾಗಿದ್ದರು. ವಿಜ್ಞಾನ ವಿಷಯದಲ್ಲಿ 21,633 ವಿದ್ಯಾರ್ಥಿಗಳಲ್ಲಿ 21,597 ಪರೀಕ್ಷೆ ಬರೆದಿದ್ದು, 36 ವಿದ್ಯಾರ್ಥಿಗಳು ಗೈರಾಗಿದ್ದರು. ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ 21,588 ವಿದ್ಯಾರ್ಥಿಗಳಲ್ಲಿ 21,555 ಜನರು ಪರೀಕ್ಷೆ ಬರೆದಿದ್ದು, 33 ವಿದ್ಯಾರ್ಥಿಗಳು ಗೈರಾಗಿದ್ದರು.
ಮರು ಪರೀಕ್ಷೆ ಬರೆದ ವಿದ್ಯಾರ್ಥಿಗಳು: ಗಣಿತ ವಿಷಯದಲ್ಲಿ 385 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇಬ್ಬರು ಗೈರಾಗಿದ್ದಾರೆ. ವಿಜ್ಞಾನದಲ್ಲಿ 313 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ ನಾಲ್ವರು ಗೈರಾಗಿದ್ದರು. ಸಮಾಜ ವಿಜ್ಞಾನದಲ್ಲಿ 270 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇಬ್ಬರು ಗೈರಾದರು.
ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಒಂದು ಕೊಠಡಿಗೆ ಗರಿಷ್ಠ 12 ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಮಾಡಲಾಗಿತ್ತು. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಐಸೋಲೇಷನ್ ಕೊಠಡಿ ಕಾಯ್ದಿರಿಸಲಾಗಿತ್ತು.
ವಿಶೇಷ ಕೊಠಡಿಯಲ್ಲಿ ಇಬ್ಬರು ಪರೀಕ್ಷೆ: ಅನಾರೋಗ್ಯದ ಕಾರಣದಿಂದ ಇಬ್ಬರು ವಿದ್ಯಾರ್ಥಿಗಳು ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದರು. ಕೋವಿಡ್ ಪಾಸಿಟೀವ್ ಎಂದು ಗುರುತಿಸಲ್ಪಟ್ಟು ಕೋವಿಡ್ ಕೇರ್ ಸೆಂಟರ್ ನಲ್ಲಿ ಓರ್ವ ಪರೀಕ್ಷಾರ್ಥಿ ಪರೀಕ್ಷೆ ಬರೆದಿದ್ದಾನೆ. ಸರ್ಕಾರಿ, ಖಾಸಗಿ ವಸತಿ ನಿಲಯಗಳಲ್ಲಿ 57, ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 302 ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಂಡು ಪರೀಕ್ಷೆ ಬರೆದಿರುವುದಾಗಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಆರ್. ಪರಮೇಶ್ವರಪ್ಪ ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರಕ್ಕೆ ತೆರಳುವುದಕ್ಕೂ ಮುನ್ನ ವಿದ್ಯಾರ್ಥಿಗಳು ತಂದಿದ್ದ ಮೊಬೈಲ್ಗಳನ್ನು ಹೊರಭಾಗದಲ್ಲಿ ಕೊಡುತ್ತಿರುವುದು.
ಪರೀಕ್ಷೆ ಬರೆದ ಸೋಂಕಿತ ವಿದ್ಯಾರ್ಥಿ ವಿಶೇಷ ಕೊಠಡಿಯಲ್ಲಿ ಇಬ್ಬರು ಪರೀಕ್ಷೆ
ಧೈರ್ಯ ತುಂಬಿ ಪರೀಕ್ಷೆ ಬರೆಸಿದ ಬಿಇಓ
ದಾವಣಗೆರೆ, ಜು.19- ಭಯಪಟ್ಟು ಎಸ್ಎಸ್ಎಲ್ಸಿ ಪರೀಕ್ಷೆ ಯಿಂದ ಹಿಂದೆ ಸರಿಯಲಿದ್ದ ವಿದ್ಯಾರ್ಥಿನಿಯನ್ನು ಬಿಇಓ ಮನವೊಲಿಸಿ ಪರೀಕ್ಷೆ ಬರೆಸಿದ ಘಟನೆ ಚನ್ನಗಿರಿ ತಾಲ್ಲೂಕಿನ ಸಂತೆಬೆನ್ನೂರಿನಲ್ಲಿ ನಡೆದಿದೆ.
ಸಂತೆಬೆನ್ನೂರಿನ ವಿದ್ಯಾರ್ಥಿನಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಸೋಮವಾರ ಬರೆಯಬೇಕಿತ್ತು. ಆದರೆ, ಈ ವಿದ್ಯಾರ್ಥಿನಿಯು ಪರೀಕ್ಷೆಗೆ ಹೆದರಿ ಮನೆಯಲ್ಲೇ ಕುಳಿತಿದ್ದಳು. ಈ ವಿಚಾರ ತಿಳಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಅವರು ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ, ಆಕೆಗೆ ಧೈರ್ಯ ತುಂಬಿ ತಮ್ಮ ವಾಹನದಲ್ಲೇ ವಿದ್ಯಾರ್ಥಿಯನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದರು. ನಂತರ ಆ ವಿದ್ಯಾರ್ಥಿನಿಯು ಪರೀಕ್ಷೆ ಬರೆದಿದ್ದಾರೆ.
ಸೋಂಕಿತ ವಿದ್ಯಾರ್ಥಿ ಪರೀಕ್ಷೆ: ಇನ್ನು ಜಿಲ್ಲೆಯಲ್ಲಿ ಒಬ್ಬ ಸೋಂಕಿತ ವಿದ್ಯಾರ್ಥಿ ಪರೀಕ್ಷೆ ಬರೆದಿದ್ದಾನೆ. ಚನ್ನಗಿರಿ ತಾಲೂಕಿನ ಚಿಕ್ಕಬ್ಬಿಗೆರೆ ಮೂಲದ ವಿದ್ಯಾರ್ಥಿ ಸಂತೆಬೆನ್ನೂರು ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದಾರೆ. ಕೋವಿಡ್ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಒಂದು ಕೊಠಡಿಯಲ್ಲಿ ಶಿಕ್ಷಕರು ಪರೀಕ್ಷೆ ಬರೆಸಿದರು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ಪರೀಕ್ಷೆಯತ್ತ ಹೆಜ್ಜೆ: ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಬೆಳಿಗ್ಗೆ ಪೋಷಕರೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದರು. ಪರೀಕ್ಷಾ ಕೇಂದ್ರದಲ್ಲಿ ಹಾಕಲಾಗಿದ್ದ ನೋಟಿಸ್ ಬೋರ್ಡ್ ಗಳಲ್ಲಿದ್ದ ತಮ್ಮ ಪರೀಕ್ಷಾ ನೋಂದಣಿ ಸಂಖ್ಯೆ ಪರೀಕ್ಷಿಸಿಕೊಂಡು ಕೇಂದ್ರದೊಳಗೆ ಹೆಜ್ಜೆ ಹಾಕಿದರು. ಕೇಂದ್ರದ ಒಳ ಆವರಣದಲ್ಲಿ ಆಶಾ ಕಾರ್ಯಕರ್ತೆಯರು ಮಕ್ಕಳಿಗೆ ಸ್ಯಾನಿಟೈಜರ್ ಹಾಕಿದರಲ್ಲದೇ ತಾಪಮಾನದ ಪರೀಕ್ಷೆ ನಡೆಸಿದರು. ಮಾಸ್ಕ್ ಸಹ ಇಡಲಾಗಿತ್ತು. ಒಳ ಆವರಣದಲ್ಲಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಂದ ಮಾಹಿತಿಯ ಸಹಿತ ಸಹಿ ಮಾಡಿಸಿಕೊಳ್ಳಲಾಗಿದೆ.
ಜಿಲ್ಲಾಧಿಕಾರಿ ಆತ್ಮಸ್ಥೈರ್ಯ: ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಮೋತಿ ವೀರಪ್ಪ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳು, ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿದರು. ಕೋವಿಡ್ ನಿಯಮಾವಳಿ ಉಲ್ಲಂಘನೆ ಮಾಡದಂತೆ ಶಿಕ್ಷಕರಿಗೆ ಸೂಚನೆ ನೀಡಿ ಪರೀಕ್ಷಾ ಕೊಠಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲೆಯಲ್ಲಿ 120 ಪರೀಕ್ಷಾ ಕೇಂದ್ರಗಳಿದ್ದು, 21,720 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆಂದು ಜಿಲ್ಲಾಧಿಕಾರಿ ವಿವರಿಸಿದರು.