ವಾಲ್ಮೀಕಿ ನಾಯಕ ಸಮಾಜವನ್ನು ಓಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ಚುನಾವಣೆಯಲ್ಲಿ ರಾಜಕೀಯ ಮಾಡಬೇಕು, ಚುನಾವಣೆ ಮುಗಿದ ನಂತರ ನಾವೆಲ್ಲಾ ವಾಲ್ಮೀಕಿ ನಾಯಕರಾಗಬೇಕೇ ವಿನಃ ರಾಜಕಾರಣವೇ ಜೀವನವಾಗಬಾರದು.
– ಶ್ರೀ ಪ್ರಸನ್ನಾನಂದ ಸ್ವಾಮೀಜಿ, ವಾಲ್ಮೀಕಿ ಗುರುಪೀಠ, ರಾಜನಹಳ್ಳಿ
ಕೊಟ್ಟೂರು, ಅ.24- ಸಾಂಸ್ಕೃತಿಕ ನಾಯಕರ ಹೆಸರಿನಲ್ಲಿ ಆಯಾ ಜಾತಿಗಳು ಜಾಗೃತವಾಗುತ್ತಿದ್ದು, ವಾಲ್ಮೀಕಿ ನಾಯಕ ಸಮಾಜದವರು ಮಹರ್ಷಿ ವಾಲ್ಮೀಕಿಯವರ ಹೆಸರಿನಲ್ಲಿ ಜಾಗೃತರಾಗಬೇಕಿದೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಕರೆ ನೀಡಿದರು.
ಪಟ್ಟಣದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ವಾಲ್ಮೀಕಿ ಸರ್ಕಾರಿ ನೌಕರರ ತಾಲ್ಲೂಕು ಸಂಘದ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಪರಿಶಿಷ್ಟ ಪಂಗಡದ ಪಟ್ಟಿಗೆ 50 ಬುಡಕಟ್ಟು ಸಮುದಾಯಗಳನ್ನು ಸೇರಿಸಿ, ಶೇ. 3 ರಷ್ಟು ಮೀಸಲಾತಿ ನೀಡಲಾಗಿದ್ದು, ಈಗ ಜನಸಂಖ್ಯೆ ಹೆಚ್ಚಳವಾಗಿದ್ದು, ಮೀಸಲಾತಿ ಹೆಚ್ಚಳ ವಿಚಾರದಲ್ಲಿ ರಾಜ್ಯ ಸರ್ಕಾರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ, ಸಮಿತಿ, ಉಪಸಮಿತಿ ಮಾಡುವುದರಿಂದ ಮೀಸಲಾತಿ ನೀಡದೇ ಕಾಲಹರಣವಾಗುತ್ತಿದ್ದು, ರಾಜ್ಯದಲ್ಲಿ 4ನೇ ಅತಿ ದೊಡ್ಡ ಸಮಾಜವಾದ ವಾಲ್ಮೀಕಿ ನಾಯಕರು 50 ಲಕ್ಷ ಜನರಿದ್ದು, ಸರ್ಕಾರ ಶೇ 7.5 ಮೀಸಲಾತಿ ನೀಡಲೇ ಬೇಕು. ಇಲ್ಲವಾದರೆ ನಮ್ಮ ಸಮಾಜದ ಶಕ್ತಿಯನ್ನು ನಿಮಗೆ ತೋರಿಸುವ ಮೂಲಕ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಸರ್ಕಾರವನ್ನು ಎಚ್ಚರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಜ್ಜಯಿನಿಯ ಜ್ಞಾನ ಗುರುಪೀಠದ ಕಾರ್ಯದರ್ಶಿ ಎಂ.ಎಂ.ಜೆ. ಹರ್ಷವರ್ಧನ, ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಮಾತೃ ಹೃದಯಿಗಳಾಗಿದ್ದು, ವಾಲ್ಮೀಕಿ ನಾಯಕ ಸಮಾಜವನ್ನು ಸಂಘಟಿಸುವ ಮೂಲಕ ಹಗಲಿರಳು ಎನ್ನದೇ ಶ್ರಮಿಸುತ್ತಿದ್ದು, ಶ್ರೀಗಳ ಜೊತೆಗೆ ಸಮಾಜದವರು ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಉಪನ್ಯಾಸಕ ರಮೇಶ್‌ಕುಮಾರ್ ವಾಲ್ಮೀಕಿ ಮಾತನಾಡಿ, ಮಹರ್ಷಿ ವಾಲ್ಮೀಕಿ, ಮದಕರಿ ನಾಯಕ ಸೇರಿದಂತೆ ರಾಜ್ಯದ 77 ಪಾಳೇಗಾರರು ಸಮಾಜ ಕಟ್ಟುವಲ್ಲಿ ಶ್ರಮ ಪಟ್ಟಿದ್ದಾರೆ. ಪ್ರತಿ ರಾಜರ ಹಿಂದೆ ವಾಲ್ಮೀಕಿ ನಾಯಕರ ಬೇಡರ ಶ್ರಮವಿದೆ. ಸಮಾಜದ ಮೀಸಲಾತಿಯಿಂದ ಚುನಾಯಿತರಾದ ವಾಲ್ಮೀಕಿ ನಾಯಕ ಸಮಾಜದ ಶಾಸಕರು, ಸಂಸದರು ಸಮುದಾಯಕ್ಕೆ ಸಿಗಬೇಕಾದ ಮೀಸಲಾತಿಗಾಗಿ ಹೋರಾಟಕ್ಕೆ ಇಳಿಯಬೇಕು. ಹಾಗಾದರೆ ಮೀಸಲಾತಿ ಸಿಕ್ಕೇ ಸಿಗುತ್ತದೆ ಎಂದರು.
ವಿಜಯನಗರ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಸಂಗಪ್ಪನವರ್ ಮಾತನಾಡಿ, ವಾಲ್ಮೀಕಿ ಸರ್ಕಾರಿ ನೌಕರರ ತಾಲ್ಲೂಕು ಸಂಘದವರು ಆರೋಗ್ಯ ಪೂರ್ಣ ಸಮಾಜ ಕಟ್ಟುವ ಮೂಲಕ ಇತರೆ ಸಮಾಜಗಳ ಜೊತೆಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು ಎಂದರು.
ವಾಲ್ಮೀಕಿ ಸರ್ಕಾರಿ ನೌಕರರ ತಾಲ್ಲೂಕು ಸಂಘದ ಅಧ್ಯಕ್ಷ ಬಿ.ಪಿ. ಮಂಜುನಾಥ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯನಿರ್ವಾಹಕ ಅಧಿಕಾರಿ ಹುಲ್ಲುಮನಿ ತಿಮ್ಮಣ್ಣ, ಹರಪನಹಳ್ಳಿ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ರಾಮಣ್ಣ, ಪಟ್ಟಣ ಪಂಚಾಯಿತಿ ಸದಸ್ಯರಾದ ಹೆಚ್. ಅಂಜಿನಮ್ಮ, ವಿರೂಪಾಕ್ಷಪ್ಪ, ವಾಲ್ಮೀಕಿ ಸರ್ಕಾರಿ ನೌಕರರ ಸಂಘದ ಹರಪನಹಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ಜಿ. ಕಾಂತರಾಜ್, ಕಾರ್ಯದರ್ಶಿ ಜಿ.ನಾಗಪ್ಪ, ಕೊಟ್ಟೂರು ವಾಲ್ಮೀಕಿ ಸರ್ಕಾರಿ ನೌಕರರ ತಾಲ್ಲೂಕು ಸಂಘದ ಗೌರವ ಅಧ್ಯಕ್ಷ ಬೋರಯ್ಯ, ಪ್ರಧಾನ ಕಾರ್ಯದರ್ಶಿ ಹೆಚ್.ಕೊಟ್ರೇಶ್, ಉಪಾಧ್ಯಕ್ಷರುಗಳಾದ ಚಾಮರಾಜ್, ಬಿ.ಪಿ. ತಿಪ್ಪೇಸ್ವಾಮಿ, ಜಿ.ಗುರುಬಸವರಾಜ್, ಎ. ಮಲ್ಲಿಕಾರ್ಜುನ್, ಎಂ. ಕೇಶವಮೂರ್ತಿ, ಖಜಾಂಚಿ ಎಂ. ಕರಿಬಸಪ್ಪ, ಕಾರ್ಯದರ್ಶಿಗಳಾದ ಹನುಮಂತಪ್ಪ ಸೊಪ್ಪಿನ, ಯು. ಹೇಮಣ್ಣ, ಹೆಚ್. ರೇವಣ್ಣ, ಸಹಕಾರ್ಯದರ್ಶಿಗಳಾದ ಎಸ್. ನಿಂಗಪ್ಪ, ವಿ. ಕೆಂಚಮ್ಮ, ಸಂಘಟನಾ ಕಾರ್ಯದರ್ಶಿಗಳಾದ ಕೆ.ತಿಪ್ಪಣ್ಣ, ಬಿ.ರವೀಂದ್ರ, ಟಿ.ರಾಜೇಂದ್ರ ಪ್ರಸಾದ್ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.