ದಾವಣಗೆರೆ, ಜು. 19 – ಬ್ಯಾಂಕಿನಲ್ಲಿ ಹಣ ಬಿಡಿಸಿಕೊಳ್ಳುತ್ತಿದ್ದವರ ಗಮನ ಬೇರೆಡೆಗೆ ಸೆಳೆದು ಕಳ್ಳತನ ಮಾಡುತ್ತಿದ್ದ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಓ.ಜಿ. ಕುಪ್ಪಂನ 11 ಜನರ ಇಡೀ ಗ್ಯಾಂಗ್ ಅನ್ನು ಮೊಟ್ಟ ಮೊದಲ ಬಾರಿಗೆ ಬಂಧಿಸಲಾಗಿದೆ ಎಂದು ಎಸ್ಪಿ ಸಿ.ಬಿ. ರಿಶ್ಯಂತ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಅವರು, ಓ.ಜಿ. ಕುಪ್ಪಂ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುವ ತಂಡಗಳಿಗೆ ಕುಖ್ಯಾತಿ ಪಡೆದಿದೆ. ಇಲ್ಲಿನ ಕಳ್ಳರು ಆಂಧ್ರದವರೇ ಆದರೂ, ಕಳ್ಳತನ ಮಾಡುತ್ತಿದ್ದುದು ಕರ್ನಾಟಕ ಹಾಗೂ ತಮಿಳುನಾಡುಗಳಂತಹ ನೆರೆ ರಾಜ್ಯಗಳಲ್ಲಿ ಎಂದು ಹೇಳಿದರು.
ಈ ತಂಡಕ್ಕೆ ಸೇರಿದ ನಾಗರಾಜ್, ಚಿನ್ನು, ಗೋಗುಲ ತುಳಸೀಧರ, ಕೆ. ವೆಂಕಟೇಶ್, ಜಿ. ಸ್ಯಾಮ್ಸನ್, ವಿನೋದ್, ಸತೀಶ್, ಪಿ. ಮೋಹನ್ ರಾವ್, ಕೆ. ಸುಬ್ರಮಣಿ, ಪಿ. ಬುರ್ಮಣಿ ಹಾಗೂ ಪಿ. ವೆಂಕಟೇಶಲು ಎಂಬುವವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ದಾವಣಗೆರೆ ಜಿಲ್ಲೆಯ 13 ಕಡೆಗಳಲ್ಲಿ ಇವರು ಒಟ್ಟು 41.54 ಲಕ್ಷ ರೂ.ಗಳ ಕಳ್ಳತನ ಎಸಗಿದ್ದರು. ಇವರಿಂದ 22 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದವರು ಹೇಳಿದರು.
ಶಾಸ್ತ್ರ ಕೇಳಿಯೇ ಕಳ್ಳತನಕ್ಕೆ ‘ಮುಹೂರ್ತ’!
ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ಓ.ಜಿ. ಕುಪ್ಪಂ, ಪ್ರತಿ ಕಳ್ಳತನಕ್ಕೆ ಮುಂಚೆ ಶಾಸ್ತ್ರ ಕೇಳಿ ‘ಮುಹೂರ್ತ’ ನಿಗದಿ ಪಡಿಸುತ್ತಿತ್ತು. ಶಾಸ್ತ್ರ ಹೇಳುವವರು ದಿನ ಸರಿ ಇಲ್ಲ ಎಂದರೆ ಕಳ್ಳತನಕ್ಕೇ ಹೋಗುತ್ತಿರಲಿಲ್ಲ!
ಈ ವಿಷಯ ತಿಳಿಸಿರುವ ಎಸ್ಪಿ ಸಿ.ಬಿ. ರಿಶ್ಯಂತ್, ಓ.ಜಿ. ಕುಪ್ಪಂ ತಂಡಗಳ ಸದಸ್ಯರಿಗೆ ವಿಪರೀತ ಜೂಜಿನ ಹುಚ್ಚಿರುವುದೂ ಕಂಡು ಬಂದಿದೆ. ಪ್ರತಿದಿನ 30ರಿಂದ 35 ಸಾವಿರಗಳವರೆಗೆ ಜೂಜಾಡುವುದು ಇವರ ಪ್ರವೃತ್ತಿ ಎಂದು ಹೇಳಿದ್ದಾರೆ.
ಸರಗಳ್ಳತನ ಸೇರಿದಂತೆ ಬೇರೆ ಯಾವುದೇ ಕೃತ್ಯದಲ್ಲಿ ತೊಡಗದ §ಅಟೆನ್ಷನ್ ಡೈವರ್ಷನ್’ ಪರಿಣಿತ ತಂಡ ಇವರದ್ದಾಗಿದೆ. ಬ್ಯಾಂಕುಗಳಲ್ಲಿ ಹೆಚ್ಚು ಹಣ ಬಿಡಿಸಿಕೊಳ್ಳುವವರನ್ನು ಕಳ್ಳತನಕ್ಕೆ ಗುರಿ ಮಾಡುವುದೇ ಇವರ ಏಕೈಕ ಪರಿಣಿತಿ ಎಂದು ಎಸ್ಪಿ ತಿಳಿಸಿದ್ದಾರೆ. ಓ.ಜಿ. ಕುಪ್ಪಂನಲ್ಲಿರುವ ಕಳ್ಳತನದ ತಂಡಗಳು ಆಂಧ್ರಪ್ರದೇಶ ಮೂಲದವರಾದರೂ, ಆ ರಾಜ್ಯದಲ್ಲಿ ಕಳ್ಳತನ ಮಾಡುವುದಿಲ್ಲ. ನೆರೆ ರಾಜ್ಯಗಳಲ್ಲಿ ಕಳ್ಳತನ ಮಾಡಿ ತಮ್ಮ ಹಳ್ಳಿಗೆ ವಾಪಸ್ಸಾಗುತ್ತಾರೆ. ಇದರಿಂದಾಗಿ ಅವರು ಪೊಲೀಸರ ಕೈಗೆ ಸಿಗದೆ ನುಣುಚಿಕೊಳ್ಳುತ್ತಾರೆ ಎಂದು ಎಸ್ಪಿ ತಿಳಿಸಿದ್ದಾರೆ.
ಈ ಹಳ್ಳಿಯಲ್ಲಿ ಕಳ್ಳತನದ ಸಾಕಷ್ಟು ಗ್ಯಾಂಗ್ಗಳಿವೆ. ಪ್ರತಿಯೊಬ್ಬರೂ ತಿಂಗಳಿಗೆ 2 ಲಕ್ಷ ರೂ.ಗಳವರೆಗೆ ಗಳಿಸುತ್ತಿದ್ದಾರೆ. ತಂಡದ ಒಬ್ಬ ವ್ಯಕ್ತಿಯನ್ನು ಹಿಡಿದರೂ ಉಳಿದವರು ತಪ್ಪಿಸಿಕೊಳ್ಳುವಂತೆ ಸಂಚು ರೂಪಿಸುತ್ತಿದ್ದರು. ಇದೇ ಮೊದಲ ಬಾರಿಗೆ ಇಡೀ ತಂಡವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ರಿಶ್ಯಂತ್ ಹೇಳಿದ್ದಾರೆ.
ಗಮನ ಬೇರೆಡೆ ಸೆಳೆಯಲು ಹಲವು ದಾರಿ
ಬ್ಯಾಂಕ್ಗಳಲ್ಲಿ ಹಣ ಬಿಡಿಸಿಕೊಳ್ಳುವವರ ಮೇಲೆ ಓ.ಜಿ. ಕುಪ್ಪಂ ತಂಡ ನಿಗಾ ವಹಿಸುತ್ತಿತ್ತು. ಹೆಚ್ಚು ಹಣ ಬಿಡಿಸಿಕೊಂಡವರನ್ನು ಗುರುತಿಸಲಾಗುತ್ತಿತ್ತು. ಆಗ ಕೆಲವರು ಹಣ ಬಿಡಿಸಿಕೊಂಡವರ ಗಮನ ಬೇರೆಡೆಗೆ ಸೆಳೆಯುತ್ತಿದ್ದರು. ತಂಡದ ಉಳಿದವರು, ಸಾರ್ವಜನಿಕರಂತೆ ಸೋಗು ಹಾಕಿ ಕಳ್ಳತನಕ್ಕೆ ನೆರವಾಗುತ್ತಿದ್ದರು.
ಹಣ ನೆಲದ ಮೇಲೆ ಹಾಕುವುದು, ತುರಿಕೆ ಪುಡಿ ಸುರಿಯುವುದು, ಕಾರು – ಮೋಟರ್ ಬೈಕ್ಗಳ ಮೇಲೆ ಆಯಿಲ್ ಹಾಕುವುದು ಹಾಗೂ ಮೈ ಮೇಲೆ ಹೇಸಿಗೆ ಹಾಕುವಂತಹ ಕೃತ್ಯಗಳಿಂದ ಗಮನ ಬೇರೆಡೆ ಸೆಳೆಯಲಾಗುತ್ತಿತ್ತು.
ಅಲ್ಲದೇ ಕಾರಿನಲ್ಲಿ ಹಣ ಇದ್ದಾಗ ಬೇರಿಂಗ್ ಬಾಲ್ಸ್ನಲ್ಲಿ ಕಾರುಗಳ ಗ್ಲಾಸ್ ಒಡೆದು ಇಲ್ಲವೇ ಗ್ಲಾಸ್ ಕಟ್ಟರ್ನಿಂದ ಗಾಜು ಹೊಡೆದು ಹಣ ಕದಿಯಲಾಗುತ್ತಿತ್ತು.
ಅಲ್ಲದೇ ಬಂಧಿತರಿಂದ 4 ಬೈಕ್, 4 ಮೊಬೈಲ್ ಮತ್ತು ಕಳ್ಳತನಕ್ಕೆ ಬಳಸಲಾಗುತ್ತಿದ್ದ ಬೇರಿಂಗ್ ಬಾಲ್ಸ್, ಬೇರಿಂಗ್ ಬಾಲ್ಸ್ ಪಂಪ್ ಮಾಡುವ ಯಂತ್ರ, ತುರಿಕೆ ಪುಡಿ, ಕ್ಯಾಟರ್ಪಿಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರೆಲ್ಲರೂ ಒಂದೇ ಸಮುದಾಯಕ್ಕೆ ಸೇರಿದವರು. ಆರೋಪಿಗಳು ಇದುವರೆಗೂ 26 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಮೂಲತಃ ಇವರು ಆಂಧ್ರ ಪ್ರದೇಶದವರಾದರೂ ಕನ್ನಡವನ್ನು ಚೆನ್ನಾಗಿ ತಿಳಿದವರಾಗಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.
ಡಿಎಸ್ಪಿ ಬಸವರಾಜ ನೇತೃತ್ವದ 13 ಸದಸ್ಯರ ತಂಡ ಕಳೆದ 25 ದಿನಗಳಿಂದ ನಿರಂತರ ನಿಗಾ ವಹಿಸಿ ತಂಡವನ್ನು ತಾಲ್ಲೂಕಿನ ಬಾತಿ ಷುಗರ್ ಫ್ಯಾಕ್ಟರಿ ಹತ್ತಿರ ಇರುವ ಪಾಳು ಬಿದ್ದ ವಸತಿ ಗೃಹದ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದವರು ಹೇಳಿದ್ದಾರೆ.
ಆರೋಪಿತರ ಪತ್ತೆ ಕಾರ್ಯದಲ್ಲಿ ಪೊಲೀಸ್ ಸಿಬ್ಬಂದಿಯವರಾದ ಎಂ. ಅಂಜಿನಪ್ಪ, ಕೆ.ಸಿ. ಮಜೀದ್, ಆಂಜನೇಯ, ರಾಘವೇಂದ್ರ, ಮಾರುತಿ, ರಮೇಶ್ ನಾಯಕ್, ಬಸವರಾಜ, ನಟರಾಜ್, ಸುರೇಶ್, ಮಲ್ಲಿಕಾರ್ಜುನ, ಬಾಲರಾಜು, ರಾಘವೇಂದ್ರ, ಶಾಂತರಾಜು, ಉಮೇಶ್ ಬಿಸನಾಳ್, ನಿಂಗರಾಜು, ಪ್ರಶಾಂತ ಕುಮಾರ್ ಭಾಗವಹಿಸಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಎಎಸ್ಪಿ ರಾಜೀವ್ ಮತ್ತಿತರರು ಉಪಸ್ಥಿತರಿದ್ದರು.