ಹಿರಿಯ ರೈತರ ಸಂಘಟನಾತ್ಮಕ ಹೋರಾಟಗಳು ಇಂದಿನ ರೈತನ ಬದುಕಿಗೆ ಶಕ್ತಿ ತಂದುಕೊಟ್ಟಿವೆ

ಹೊನ್ನಾಳಿಯಲ್ಲಿನ 41 ನೇ ರೈತ ಹುತಾತ್ಮ ದಿನಾಚರಣೆಯಲ್ಲಿ ಅಖಂಡ ಕರ್ನಾಟಕ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಅರಬಗಟ್ಟೆ ಕೆ.ಸಿ.ಬಸಪ್ಪ

ಹೊನ್ನಾಳಿ, ಜು.19- ರೈತರು ಇಂದು ನಡೆಸುವ ಸಭೆ ಸಮಾರಂಭಗಳಿಗಿಂತ ಹಿರಿಯ ರೈತ ಮುಖಂಡರು ನಮ್ಮೆಲ್ಲಾ ರೈತಾಪಿ ಜನರ ಬದುಕು ಹಸನಾಗಿಸಲು ಹಿಂದೆ ನಡೆಸಿದ ಅನೇಕ ಸಂಘಟನಾತ್ಮಕ ಹೋರಾಟಗಳು ಇಂದು ಶಕ್ತಿಯೊಂದಿಗೆ ಹೆಚ್ಚು ಪರಿಣಾಮಕಾರಿಯಾಗಿವೆ ಎಂಬುದಾಗಿ ಅಖಂಡ ಕರ್ನಾಟಕ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಅರಬಗಟ್ಟೆ ಕೆ.ಸಿ.ಬಸಪ್ಪ ಹೇಳಿದರು.

ರೈತ ಸಂಘ ಅವಳಿ ತಾಲ್ಲೂಕುಗಳಿಂದ ಇಲ್ಲಿನ ಹಿರೇಕಲ್ಮಠದಲ್ಲಿ ಇಂದು ಹಮ್ಮಿಕೊಂಡಿದ್ದ ಹೆಚ್‍.ಎಸ್.ರುದ್ರಪ್ಪ, ನಂಜುಡಸ್ವಾಮಿ, ಬಾಬುಗೌಡ  ಪಾಟೀಲ್ ಹಾಗೂ ಕುಂದೂರು ಹನುಮಂತಪ್ಪನವರ  ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಭೆಯನ್ನು ಉದ್ಘಾಟಿಸಿದ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ರೈತರ ಹೋರಾಟಕ್ಕೆ ಅಗಲಿದ ಹಿರಿಯ ರೈತ ನಾಯಕರು ಶಕ್ತಿ ತುಂಬಲಿ ಎಂದು ಆಶಯ ವ್ಯಕ್ತಪಡಿಸಿದರು. ರೈತ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಹೆಚ್.ಎಸ್. ರುದ್ರಪ್ಪನವರ ಪ್ರತಿಮೆ ಕಡದಕಟ್ಟೆಯಲ್ಲಿ ನಿರ್ಮಾಣ ವಾಗಿದ್ದು, ಬಿಸಿಲಿಗೆ ಪ್ರತಿಮೆ ಹಾಳಾಗದಂತೆ ಮೇಲ್ಚಾವಣೆಯನ್ನು ಸ್ವಂತ ಖರ್ಚಿನಲ್ಲಿ ನಿರ್ಮಿಸಿ ಕೊಡುವುದಾಗಿ ರೈತರ ಮನವಿಗೆ ಶಾಸಕರು ಭರವಸೆ ನೀಡಿದರು.

ನ್ಯಾಮತಿ ಸಂಘದ ಅಧ್ಯಕ್ಷ ಬೆಳಗುತ್ತಿ ಉಮೇಶ್ ಮಾತನಾಡಿ, ರೈತರು ಬಳಸುವ ಟ್ರ್ಯಾಕ್ಟರ್‌ನ ಡೀಸೆಲ್ ದರ ಹೆಚ್ಚುತ್ತಲೇ ಇದ್ದು, ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡಲು ಹೊರಟ ಸರ್ಕಾರಗಳ ಕ್ರಮವನ್ನು ಖಂಡಿಸಿದ ಅವರು, ಭೂ ಸುಧಾರಣೆ ಮೂಲಕ ರೈತರು ಭೂಮಿ ಕಳೆದುಕೊಳ್ಳುವಂತೆ ಮಾಡಹೊರಟಿದೆ ಎಂದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ದೊಡ್ಡೇರಹಳ್ಳಿ ನಾಗರಾಜಪ್ಪ ಮಾತನಾಡಿ, ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿ ನಂತರವೇ ಖರೀದಿ ಕೇಂದ್ರ ತೆರೆಯಲು ಮುಂದಾಗಬೇಕಿದೆ ಎಂದರು.

ರೈತ ಮುಖಂಡ ಹಿರೇಮಠ ಬಸವರಾಜಪ್ಪ ಮಾತನಾಡಿ, ಕೃಷಿಕ ಸಮಾಜದ ಅಧ್ಯಕ್ಷರಾಗಿದ್ದ ಕುಂದೂರು ಹನುಮಂತಪ್ಪ ಅವರು, ತಮ್ಮ ಇಳಿವಯಸ್ಸಿನಲ್ಲೂ ಉತ್ಸಾಹದಿಂದ ರೈತ ಸಭೆಗಳಿಗೆ ಆಗಮಿಸಿ, ಧನ ಸಹಾಯದ ಮೂಲಕ ಸಂಘಕ್ಕೆ ಆರ್ಥಿಕ ಚೈತನ್ಯ ತುಂಬಿ ಸ್ಫೂರ್ತಿಯಾಗಿದ್ದು, ಅವರ ಪ್ರತಿಮೆಯನ್ನು ಎಪಿಎಂಸಿ ಆವರಣದಲ್ಲಿ ಸ್ಥಾಪಿಸುವ ಮೂಲಕ ಯುವ ರೈತರಿಗೆ ಪ್ರೇರಣೆ ಮೂಡಿಸುವ ಕೆಲಸಕ್ಕೆ ಸಂಘ ಮುಂದಾಗಬೇಕಿದೆ ಎಂದರು.

ಸಭೆಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಕರಿಬಸಪ್ಪ, ರಾಜ್ಯ ಸ.ಕಾ.  ಮುರುಗೇಂದ್ರಪ್ಪ, ಜಿಲ್ಲಾ ಉಪಾಧ್ಯಕ್ಷ ಮುರುಗೇಶ್, ನ್ಯಾಮತಿ ಗೋಪಾಲಪ್ಪ, ಹೊಳೆಹರಳಹಳ್ಳಿ ಬಸವರಾಜಪ್ಪ, ಮಹಿಳಾ ಅಧ್ಯಕ್ಷೆ ಗೋಣಿಗೇರಿ ಗಂಗಮ್ಮ, ಕೆ.ಜಿ. ಷಣ್ಮುಖ, ಕುಂದೂರು ಶಿವಶಂಕರ್‌, ನವೀನ್, ಅರಬಗಟ್ಟೆ ಪರಮೇಶ್, ಕೆಂಚಿಕೊಪ್ಪ ಶಂಕ್ರಪ್ಪ, ಬಸವನಹಳ್ಳಿ ಆನಂದಪ್ಪ, ಚನ್ನೇಶ್ ನ್ಯಾಮತಿ, ರಮೇಶ್ ಮತ್ತಿತರರು ಇದ್ದರು.

ಸಭೆ ನಂತರ ತಹಶೀಲ್ದಾರ್‌ ಬಸವರಾಜ್‌ ಕೋಟೂರ ಅವರಿಗೆ ರೈತರು ತಮ್ಮ ಬೇಡಿಕೆಗಳ ಮನವಿ ಸಲ್ಲಿಸಿದರು.

error: Content is protected !!