ಸಮಾಜಕ್ಕೆ ಮಹತ್ತರ ಕೊಡುಗೆ ನೀಡುತ್ತಿರುವ ಸಿವಿಲ್ ಇಂಜಿನಿಯರಿಂಗ್

ಸಿವಿಲ್ ಇಂಜಿನಿಯರ್ ಆಗಿದ್ದ ಸರ್ ಎಂ. ವಿಶ್ವೇಶ್ವರಾಯ ಅವರು ಈ ಕ್ಷೇತ್ರದಲ್ಲಿ ಮಾಡಿದ ಅನೇಕ ಗುರುತರ ಸೇವೆಗಳಿಂದಾಗಿ ಇಡೀ ಪ್ರಪಂಚದಲ್ಲಿ ಸಿವಿಲ್ ಇಂಜಿನಿಯರಿಂಗ್ ಬಗ್ಗೆ ಅತೀ ದೊಡ್ಡ ಮಾನ್ಯತೆ ದೊರೆಯುವಂತಾಗಿದೆ.

– ಆರ್.ಟಿ. ಅರುಣ್ ಕುಮಾರ್ಸಿವಿಲ್ ಇಂಜಿನಿಯರ್ ಮತ್ತು ಕಲಾವಿದ

ದಾವಣಗೆರೆ, ಅ.24- ಇಂಜಿನಿಯರಿಂಗ್ ಕ್ಷೇತ್ರದ ಸಿವಿಲ್ ವಿಭಾಗವು ಸಮಾಜಕ್ಕೆ ತನ್ನದೇ ಮಹತ್ತರ ಕೊಡುಗೆ ನೀಡುತ್ತಿದೆ ಎಂದು ಹಿರಿಯ ಸಿವಿಲ್ ಇಂಜಿನಿಯರ್ ಆಗಿರುವ ಕಲಾವಿದ ಆರ್. ಟಿ. ಅರುಣ್ ಕುಮಾರ್ ಅನೇಕ ಉದಾಹರಣೆಗಳೊಂದಿಗೆ ಪ್ರತಿಪಾದಿಸಿದ್ದಾರೆ.

ನಗರದ ಲಯನ್ಸ್ ಕ್ಲಬ್ ವತಿಯಿಂದ ಲಯನ್ಸ್ ಭವನದಲ್ಲಿ ಕಳೆದ ವಾರ ಏರ್ಪಾಡಾಗಿದ್ದ ಇಂಜಿನಿಯರ್ ದಿನಾಚರಣೆ ಮತ್ತು ಸೇವಾ ಕಾರ್ಯಕ್ರಮಗಳ  ಸಂದರ್ಭದಲ್ಲಿ ತಮಗೆ ನೀಡಿದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.

ಸರ್ ಎಂ. ವಿಶ್ವೇಶ್ವರಾಯ ಅವರು ಕೇವಲ ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಮಾತ್ರವ ಲ್ಲದೇ, ಸಾಮಾಜಿಕವಾಗಿ, ಶಿಕ್ಷಣ ತಜ್ಞರಾಗಿ, ಅರ್ಥ ಶಾಸ್ತ್ರಜ್ಞರಾಗಿ, ರಾಜ ತಂತ್ರಜ್ಞರಾಗಿ ನಮ್ಮ ಸಮಾ ಜದ ನಾಗರಿಕತೆಗೆ ಮೆರಗು ನೀಡಿದ ಮಹಾಚೇತನ ಎಂದು ಅರುಣ್ ಕುಮಾರ್ ಬಣ್ಣಿಸಿದರು.

ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ವಿಶ್ವೇಶ್ವರಾಯ ಅವರ ಹುಟ್ಟು ಹಬ್ಬವನ್ನು ಇಂಜಿನಿಯರ್ಸ್ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದ ಅವರು, ಇಂತಹ ದಿನದ ಸಂದರ್ಭದಲ್ಲಿ ಲಯನ್ಸ್ ಸಂಸ್ಥೆಯು ತಮ್ಮನ್ನು ಅಭಿನಂದಿಸಿ, ಸನ್ಮಾನಿಸಿರುವುದು ತಮ್ಮ ಜೀವನ ಸಾರ್ಥಕವಾಗಿದೆ ಎಂದು ಆರ್.ಟಿ. ಭಾವನಾತ್ಮಕವಾಗಿ ಕೃತಜ್ಞತೆ ಸಲ್ಲಿಸಿದರು.

ವಿಶ್ವೇಶ್ವರಾಯ ಅವರ ಯಾವುದೇ ಒಂದು ಕ್ಷೇತ್ರದ ಶೇ. 1 ರಷ್ಟು ಕೆಲಸವನ್ನು ನಾವು ಮಾಡಿದ್ದೇ ಆದಲ್ಲಿ ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿದಂತೆ ಎಂದು ಅಭಿಪ್ರಾಯಪಟ್ಟ ಅವರು, ವಿಶ್ವೇಶರಾಯ ಅವರಂತಹ ಸಾಧಕರು ಮತ್ತು ಮಹನೀಯರ ಹುಟ್ಟುಹಬ್ಬಗಳನ್ನು ಆಚರಿಸುವುದರ ಮೂಲಕ ಅವರ ಸಾಮಾಜಿಕ ಸೇವೆಯನ್ನು ಹೊಸ ಪೀಳಿಗೆಗೆ ಪರಿಚಯ ಮಾಡಿಕೊಡುವ ಕೆಲಸ ಲಯನ್ಸ್‌ನಂತಹ ಸಂಸ್ಥೆಗಳಿಂದ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ತಮ್ಮ ವೈಯಕ್ತಿಕ ವಿಚಾರವನ್ನು ಪ್ರಸ್ತಾಪಿಸಿದ ಅರುಣ್ ಕುಮಾರ್, ತಾವು ಕ್ಯಾನ್ಸರ್ ಎದುರಿಸಲು ಆತ್ಮಸ್ಥೈರ್ಯ ಮುಖ್ಯವೆನಿಸಿದರೂ, ಆ ಸ್ಥೈರ್ಯ ತುಂಬಿದವರು ನನ್ನ ಗೆಳೆಯರು ಮತ್ತು ಲಯನ್ಸ್‌ನಂತಹ ಸಂಘಟನೆಗಳು ಎಂದರು. ಇದರಿಂದಾಗಿ ತಾವು ಮತ್ತೆ ಕ್ರಿಯಾತ್ಮಕ ಹಾಗೂ ಕಲಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಕಾರಣವಾಗಿದೆ ಎಂದು ಅವರು ಧನ್ಯವಾದ ಸಲ್ಲಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿವಿಲ್ ಇಂಜಿನಿಯರ್ ಆಗಿರುವ ಶ್ರೀ ಮುರುಘರಾಜೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಂ. ಜಯಕುಮಾರ್, ಒಂದು ನಗರ ಅಥವಾ ದೇಶದ ಅಭಿವೃದ್ಧಿ ಸಿವಿಲ್ ಇಂಜಿನಿ ಯರ್‌ಗಳನ್ನು ಅವಲಂಬಿಸಿದೆ ಎಂದು ಮಾರ್ಮಿಕವಾಗಿ ವಿಶ್ಲೇಷಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ರಾಣೇಬೆನ್ನೂರಿನ ಆರೋಗ್ಯ ಸಲಹೆಗಾರ ರವೀಂದ್ರ ಕುಲಕರ್ಣಿ, ಆರೋಗ್ಯ ಮತ್ತು ಮಾನಸಿಕ ನೆಮ್ಮದಿ ಜೀವನದಲ್ಲಿನ ಯಾವುದೇ ಸಾಧನೆಗೆ ಪ್ರೇರಕ ಶಕ್ತಿಯಾಗಿವೆ ಎಂದು ಪ್ರತಿಪಾದಿಸಿದರು.

ಲಯನ್ಸ್ ಪ್ರಾಂತೀಯ ಅಧ್ಯಕ್ಷ ಇ.ಎಂ. ಮಂಜುನಾಥ, ವಲಯಾಧ್ಯಕ್ಷ ಎಸ್. ವೆಂಕಟಾಚಲಂ, ನಗರ ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ.ಶೆಟ್ಟಿ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್. ಓಂಕಾರಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಸಿವಿಲ್ ಇಂಜಿನಿಯರ್ ಹೆಚ್.ವಿ.ಮಂಜುನಾಥ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

ಶ್ರೀ ಮುರುಘರಾಜೇಂದ್ರ ಕೋ-ಆಪರೇಟಿವ್ ಬ್ಯಾಂಕಿನ ಪಿಗ್ಮಿ ಸಂಗ್ರಹಕಾರರಾದ ಸಂಗಪ್ಪ ತೋಟದ್ ಅವರ ಪ್ರಾರ್ಥನೆ ನಂತರ ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೋರಿ ಶಿವಕುಮಾರ್ ಸ್ವಾಗತಿಸಿದರು.  ಲಯನ್ಸ್ ಕ್ಲಬ್ ನಿರ್ದೇಶಕ ಬಿ.ಎಸ್. ಶಿವಾನಂದ್ ಅವರು ಧ್ವಜವಂದನೆ ನಡೆಸಿಕೊಟ್ಟರು. 

ಲಯನ್ಸ್ ಕ್ಲಬ್ ಖಜಾಂಚಿ ಕಣವಿ ನಟರಾಜ್, ಸಹ ಕಾರ್ಯದರ್ಶಿ ಎಸ್.ಕೆ. ಮಲ್ಲಿಕಾರ್ಜುನ್ ಅವರುಗಳು ಕಾರ್ಯಕ್ರಮ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸಿದರು.

error: Content is protected !!