ದಾವಣಗೆರೆ, ಜು. 19 – ಕೊರೊನಾ ಪ್ರಕರಣಗಳು ಕಡಿಮೆಯಾಗಿ ಸಿನೆಮಾ ಮಂದಿರ ಸೇರಿದಂತೆ ಹಲವು ಚಟುವಟಿಕೆ ಗಳನ್ನು ಅನ್‌ಲಾಕ್ ಮಾಡಲಾಗಿದೆ. ಆದರೆ, ಜನರು ಮೈ ಮರೆಯಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಕೊರೊನಾ ಪ್ರಕರಣಗಳು ಕಡಿಮೆ ಯಾಗಿರುವ ಕಾರಣ ಜಿಲ್ಲೆಯಲ್ಲಿ ಕೋವಿಡ್ ಕೇರ್ ಸೆಂಟರ್‌ಗಳನ್ನು ಮುಚ್ಚಲಾಗಿದೆ. ಇತ್ತೀಚಿನವರೆಗೆ ದಾವಣಗೆರೆ ಹಾಗೂ ಹೊನ್ನಾಳಿ ತಾಲ್ಲೂಕಿನಲ್ಲಿ ತಲಾ ಒಂದು ಕೊವಿಡ್ ಕೇರ್ ಸೆಂಟರ್‌ಗಳಿದ್ದವು. ಅವು ಗಳನ್ನೂ ಈಗ ಮುಚ್ಚಲಾಗಿದೆ ಎಂದರು.
ಕೊರೊನಾ ಪ್ರಕರಣಗಳು ಕಡಿಮೆ ಇರು ವುದರಿಂದ, ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೋವಿಡ್ ಕೇರ್ ಸೆಂಟರ್‌ಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಇದೆ. ಕೊರೊನಾ ಪ್ರಕರಣಗಳು ಹೆಚ್ಚಾದರೆ ಮತ್ತೆ ಕೋವಿಡ್ ಕೇರ್ ಸೆಂಟರ್‌ಗಳನ್ನು ಆರಂಭಿಸುತ್ತೇವೆ ಎಂದವರು ಹೇಳಿದರು.
ಹೈಕೋರ್ಟ್ ಆದೇಶದಂತೆ ಅಕ್ರಮ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಾನೇ ಖುದ್ದು ಪರಿಶೀಲನೆ ಮಾಡಿ ಅಕ್ರಮ ಪಂಪ್‌ಸೆಟ್ ತೆರವಿಗೆ ಕ್ರಮ ತೆಗೆದುಕೊಂಡಿದ್ದೇನೆ. ಜು. 23 ರಿಂದ ಕಾಲುವೆಗೆ ಭದ್ರಾದಿಂದ ನೀರು ಹರಿಸಲಿದ್ದು, ನಂತರ ನಿರಂತರ ಕಾರ್ಯಾಚರಣೆ ಮಾಡಲಾಗುವುದು ಎಂದು ತಿಳಿಸಿದರು.
ಅಧಿಕಾರಿಗಳು ಪಂಪ್‌ಸೆಟ್ ತೆರವು ಮಾಡಿದರೂ, ಮತ್ತೆ ಪಂಪ್‌ಸೆಟ್ ಹಾಕಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಆದರೂ, ಕಾರ್ಯಾಚರಣೆ ನಿಲ್ಲಿಸುವುದಿಲ್ಲ. ಈಗ ಮಳೆ ಚೆನ್ನಾಗಿ ಆಗುವುದರಿಂದ ಜನ ಅಕ್ರಮ ಪಂಪ್‌ಸೆಟ್ ಬಳಸುವುದಿಲ್ಲ ಎಂಬ ನಿರೀಕ್ಷೆ ಇದೆ ಎಂದವರು ಹೇಳಿದರು.