ರಾಜ್ಯಾದ್ಯಂತ ಇಂದು ರಾತ್ರಿಯಿಂದಲೇ ಕಠಿಣ ನಿರ್ಬಂಧ
ಬೆಂಗಳೂರು, ಏ. 26 – ಕೊರೊನಾ ಸೋಂಕಿನ ಹರಡುವಿಕೆ ತಡೆಯಲು ರಾಜ್ಯದಲ್ಲಿ 14 ದಿನ ಕೋವಿಡ್ ಕರ್ಫ್ಯೂ ಜಾರಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಪ್ರಧಾನಮಂತ್ರಿ ಲಾಕ್ಡೌನ್ ಅನುಷ್ಠಾನ ಬೇಡ ಎಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜನತಾ ಲಾಕ್ಡೌನನ್ನು §ಕೊರೊನಾ ಕರ್ಫ್ಯೂ¬ ಎಂಬ ಹೆಸರಿನ ಮೂಲಕ ಹೇರಿಕೆ ಮಾಡಿದೆ.
ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಕರ್ಫ್ಯೂ ಬಗ್ಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ, ನಾಳೆ ಮಂಗಳವಾರ ರಾತ್ರಿ 9 ಗಂಟೆಯಿಂದ ಮೇ 10 ಬೆಳಿಗ್ಗೆ 6 ಗಂಟೆಯವರೆಗೂ ಕರ್ಫ್ಯೂ ಜಾರಿಯಲ್ಲಿರುತ್ತದೆ.
ಈ ಅವಧಿಯಲ್ಲಿ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ದಿನಸಿ, ಹಾಲು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ಮತ್ತು ವ್ಯಾಪಾರ ವಹಿವಾಟುಗಳಿಗೆ ಅವಕಾಶ ಕಲ್ಪಿಸಿದ್ದೇವೆ ಎಂದರು.
ಬೆಳಿಗ್ಗೆ 10 ರ ನಂತರ ಎಲ್ಲಾ ವ್ಯಾಪಾರ ಸ್ಥಗಿತ ಗೊಳಿಸಬೇಕು. ಪೊಲೀಸರು ಬಲಪ್ರಯೋಗಿಸಲು ಅವಕಾಶ ನೀಡಬೇಡಿ. ಈ ಸಮಯ ಮೀರಿದ ನಂತರ ಸಾರ್ವಜನಿಕರು ಬೀದಿಗಿಳಿಯಬಾರದು ಎಂದರು.
ಕೃಷಿ, ವೈದ್ಯಕೀಯ ಸೇವೆ ಕೈಗಾರಿಕಾ ವಲಯಗಳಿಗೆ ಕರ್ಫ್ಯೂನಿಂದ ವಿನಾಯಿತಿ ನೀಡಲಾಗಿದೆ. ಆದರೆ ಕೈಗಾರಿಕಾ ವಲಯದ ಭಾಗವಾಗಿರುವ ಗಾರ್ಮೆಂಟ್ ವಲಯಕ್ಕೆ ಇದರಿಂದ ವಿನಾಯಿತಿ ಇಲ್ಲ. ರೈತರು ಬೆಳೆದ ಬೆಳೆ ಮತ್ತು ತರಕಾರಿಗಳನ್ನು ಬೆಳಗಿನ ನಾಲ್ಕು ಗಂಟೆಗಳ ಅವಧಿಯಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಂತರ ಜಿಲ್ಲೆ ಮತ್ತು ಅಂತರ ರಾಜ್ಯ ಸರಕು ಸಾಗಾಣಿಕೆಗೆ ನಿರ್ಬಂಧ ಹೇರುವುದಿಲ್ಲ. ಆದರೆ, ರಾಜ್ಯ ರಸ್ತೆ ಸಾರಿಗೆ ಹಾಗೂ ಖಾಸಗಿ ಬಸ್ಗಳು ರಸ್ತೆಗಿಳಿಯುವಂತಿಲ್ಲ. ರೈಲು ಮತ್ತು ವಿಮಾನದ ಸಂಚಾರ ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದರು.
ಮಹಾರಾಷ್ಟ್ರಕ್ಕೂ ಮೀರಿ ಕರ್ನಾಟಕದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಂತಹ ಕ್ರಮ ಅನಿವಾರ್ಯವಾಗಿದೆ ಎಂದವರು ಸಮರ್ಥಿಸಿಕೊಂಡರು.
ಮೇ 12ರವರೆಗೆ ಕೊರೊನಾ ತಡೆ ನಿರ್ಬಂಧ : ಮಾರ್ಗಸೂಚಿ ಪ್ರಕಟ
ಬೆಂಗಳೂರು, ಏ. 26 – ರಾಜ್ಯ ಸರ್ಕಾರ ಕೊರೊನಾ ತಡೆಗಾಗಿ ಹೊಸ ನಿರ್ಬಂಧಗಳ ಮಾರ್ಗಸೂಚಿ ಪ್ರಕಟಿಸಿದ್ದು, ಇವು ಇಂದು ಮಂಗಳವಾರ ರಾತ್ರಿ 9 ಗಂಟೆಯಿಂದ ಮೇ 12ರ ಬೆಳಿಗ್ಗೆ 6 ಗಂಟೆಯವರೆಗೆ ಅನ್ವಯವಾಗಲಿವೆ.
ಈ ಅವಧಿಯಲ್ಲಿ ನಿಷೇಧಿತ ಚಟುವಟಿಕೆಗಳು : ಶಾಲೆ, ಹೋಟೆಲ್, ಸಿನೆಮಾ, ಶಾಪಿಂಗ್ ಮಾಲ್, ಜಿಮ್, ಕ್ರೀಡಾ ಸಮುಚ್ಛಯ, ಸ್ವಿಮ್ಮಿಂಗ್ ಪೂಲ್, ಮನರಂಜನಾ ತಾಣಗಳು, ಕ್ಲಬ್, ಆಡಿಟೋರಿಯಂಗಳು, ಆಟೋ ರಿಕ್ಷಾ.
ಎಲ್ಲಾ ಸಾಮಾಜಿಕ, ಧಾರ್ಮಿಕ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಸಮಾರಂಭ ಹಾಗೂ ಸಮಾವೇಶಗಳು.
ತೆರೆದಿರುವ ಕಚೇರಿಗಳು : ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್, ಹೋಂ ಗಾರ್ಡ್, ಬಂಧೀಖಾನೆ, ನಾಗರಿಕ ರಕ್ಷಣೆ, ಅಗ್ನಿಶಾಮಕ, ವಿಕೋಪ ನಿರ್ವಹಣೆ, ಕಂದಾಯ, ಜಿಲ್ಲಾ ಹಾಗೂ ಸಬ್ ರಿಜಿಸ್ಟ್ರಾರ್ ಕಚೇರಿಗಳು.
ವಿದ್ಯುತ್, ಜಲ ಹಾಗೂ ನೈರ್ಮಲ್ಯದಂತಹ ಅಗತ್ಯ ಸೇವೆ ಒದಗಿಸುವ ಕಚೇರಿಗಳು.
ನ್ಯಾಯಾಂಗದ ಕಚೇರಿಗಳು, ಕೊರೊನಾ ಸಂಬಂಧಿಸಿದ ಕೆಲಸ ನಿರ್ವಹಿಸುವ ಕಚೇರಿಗಳು, ಖಜಾನೆ ಕಚೇರಿ ಹಾಗೂ ಅರಣ್ಯ ಇಲಾಖೆಯ ಕಚೇರಿಗಳು.
ರಕ್ಷಣೆ, ಸರ್ಕಾರಿ ಸ್ವಾಮ್ಯದ ಕಚೇರಿ, ಕೇಂದ್ರೀಯ ಸಶಸ್ತ್ರ ಮೀಸಲು ಪಡೆ, ಟೆಲಿಕಾಂ ಮುಂತಾದ ಅಗತ್ಯ ಸೇವೆಗಳ ಕಚೇರಿಗಳು.
ಪೆಟ್ರೋಲಿಯಂ, ಅಡುಗೆ ಅನಿಲ, ವಿದ್ಯುತ್ ಉತ್ಪಾದನೆ, ಅಂಚೆ, ವಿಕೋಪ ನಿರ್ವಹಣೆ ಮುಂತಾದ ಸಾರ್ವಜನಿಕ ಸೇವೆಗಳ ಕಚೇರಿಗಳು.
ಬ್ಯಾಂಕ್, ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಮತ್ತಿತರೆ ಹಣಕಾಸು ಸಂಸ್ಥೆಗಳು.
ರೈಲ್ವೆ ಹಾಗೂ ಸಂಬಂಧಿತ ಕಾರ್ಯಾಚರಣೆಗಳು.
ಆಯುಷ್ ಹಾಗೂ ಪಶು ಆಸ್ಪತ್ರೆ ಸೇರಿದಂತೆ ಎಲ್ಲಾ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಕ್ಲಿನಿಕ್, ಲ್ಯಾಬ್, ಟೆಲಿ ಮೆಡಿಸಿನ್, ಔಷಧ ಅಂಗಡಿಗಳು, ಜನೌಷಧ ಕೇಂದ್ರಗಳು, ರಕ್ತಭಂಡಾರ ಇತ್ಯಾದಿಗಳು.
ಎಲ್ಲಾ ಔಷಧ ಉತ್ಪಾದನಾ ಘಟಕಗಳು, ವೈದ್ಯಕೀಯ ಆಕ್ಸಿಜನ್ ಮತ್ತಿತರೆ ಘಟಕಗಳು.
ವೈದ್ಯಕೀಯ ಸಿಬ್ಬಂದಿ ಅಂತರ ಜಿಲ್ಲೆ ಹಾಗೂ ಅಂತರ ರಾಜ್ಯ ಪ್ರಯಾಣಕ್ಕೆ ಅವಕಾಶ ಇದೆ.
ಕೃಷಿಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಮಕ್ಕಳು, ಅಂಗವಿಕಲರು, ಮಾನಸಿಕ ಅಸ್ವಸ್ಥರು, ಹಿರಿಯ ನಾಗರಿಕರು ಮುಂತಾದವರ ಆಶ್ರಯ ತಾಣಗಳು.
ಎಲ್ಲ ರೀತಿಯ ಸರಕುಗಳ ಉತ್ಪಾದನೆ, ಸಂಗ್ರಹ ಹಾಗೂ ಇ – ಕಾಮರ್ಸ್ ಕಂಪನಿಗಳಿಗೆ ಅನುಮತಿ
ಗೂಡ್ಸ್ ವಾಹನ ಸೇರಿದಂತೆ, ಎಲ್ಲಾ ರೀತಿಯ ಸರಕು ವಾಹನಗಳಿಗೆ ಅನುಮತಿ
ಜನಸಂಚಾರದ ಮೇಲೆ ನಿರ್ಬಂಧ : ಸಾರ್ವಜನಿಕ ಹಾಗೂ ಖಾಸಗಿ ಬಸ್ಗಳ ಮೇಲೆ ನಿರ್ಬಂಧ.
ಅನುಮತಿ ಇಲ್ಲವೇ ತುರ್ತು ಸಂದರ್ಭದಲ್ಲಿ ಮಾತ್ರ ಅಂತರ ರಾಜ್ಯ ಹಾಗೂ ರಾಜ್ಯದ ಒಳಗೆ ಪ್ರಯಾಣಿಕರ ವಾಹನಕ್ಕೆ ಅನುಮತಿ.
ಕೆಲಸದ ಸ್ಥಳಗಳು ನೀಡುವ ಗುರುತಿನ ಚೀಟಿ ಹೊಂದಿದ್ದವರ ಸಂಚಾರಕ್ಕೆ ಮಾತ್ರ ಅನುಮತಿ.
ಪ್ರಯಾಣದ ದಾಖಲೆ ಹೊಂದಿರುವವರು ಹಾಗೂ ತುರ್ತು ಅಗತ್ಯವಿರುವವರಿಗೆ ಮಾತ್ರ ಆಟೋ ಸೇವೆ
ಕಟ್ಟಡ ನಿರ್ಮಾಣ ಕಾರ್ಮಿಕರು, ಕಟ್ಟಡ ನಿರ್ಮಾಣ ಸಂಸ್ಥೆಯ ಪಾಸ್ ಹೊಂದಿರಬೇಕು.
ರೋಗಿಗಳು ಹಾಗೂ ಲಸಿಕೆ ಪಡೆಯುವವರು ದಾಖಲೆಗಳೊಂದಿಗೆ ಪ್ರಯಾಣಿಸಲು ಅನುಮತಿ
ಬೆಳಿಗ್ಗೆ 6 ರಿಂದ 10ರವರೆಗೆ ದಿನಸಿ, ಮದ್ಯ : ಆಹಾರ, ದಿನಸಿ, ಹಣ್ಣು, ತರಕಾರಿ, ಹಾಲು, ಮಾಂಸ ಮತ್ತಿತರೆ ಸರಕುಗಳನ್ನು ಮಾರಲು ಬೆಳಿಗ್ಗೆ 6ರಿಂದ 10ರವರೆಗೆ ಅನುಮತಿ ನೀಡಲಾಗಿದೆ. ಮದ್ಯದಂಗಡಿಗಳೂ ಇದೇ ಸಮಯದಲ್ಲಿ ಕಾರ್ಯ ನಿರ್ವಹಿಸಬೇಕು.
ಆಹಾರ ಸಂಸ್ಕರಣೆ, ಬ್ಯಾಂಕ್, ಮುದ್ರಣ – ವಿದ್ಯುನ್ಮಾನ ಮಾಧ್ಯಮ, ಟೆಲಿಕಮ್ಯುನಿಕೇಷನ್, ಇಂಟರ್ನೆಟ್, ಮಾಹಿತಿ ತಂತ್ರಜ್ಞಾನ, ಇ – ಕಾಮರ್ಸ್, ವಿದ್ಯುತ್ ಉತ್ಪಾದನೆ, ಶೀತಲ ಘಟಕ, ಖಾಸಗಿ ಭದ್ರತಾ ಸೇವೆಗಳಿಗೆ ಅನುಮತಿ
ಗಾರ್ಮೆಂಟ್ಸ್ ಹೊರತು ಪಡಿಸಿ ಉಳಿದೆಲ್ಲ ಕೈಗಾರಿಕಾ ಘಟಕಗಳ ಕಾರ್ಯ ನಿರ್ವಹಣೆಗೆ ಅನುಮತಿ
ಕಟ್ಟಡ ನಿರ್ಮಾಣ ಹಾಗೂ ರಿಪೇರಿಗಳಿಗೆ ಅನುಮತಿ. ಈ ಎಲ್ಲ ಚಟುವಟಿಕೆಗಳಿಗೆ ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸುವುದು ಕಡ್ಡಾಯ.
ಕರ್ಫ್ಯೂ ನಡುವೆ ಹೆಂಡಕ್ಕೆ ಅವಕಾಶ
ಬೆಂಗಳೂರು, ಏ. 26 – ಕರ್ಫ್ಯೂ ಸಂದರ್ಭದಲ್ಲೂ ನಿಗದಿತ ಅವಧಿಯಲ್ಲಿ ಆಲ್ಕೋಹಾಲ್ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಮೇ 12 ರವರೆಗೆ ಕರ್ಪ್ಯೂ ಜಾರಿಯಲ್ಲಿರುವುದರಿಂದ ಬಾರ್ ಮತ್ತು ಮದ್ಯದಂಗಡಿಗಳಲ್ಲಿ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಪಾರ್ಸೆಲ್ ತೆಗೆದುಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದೆ. ಹೋಟೆಲ್ ರೆಸ್ಟೋರೆಂಟ್ಗಳು ಎಂದಿನಂತೆ ಕಾರ್ಯನಿರ್ವಹಿಸುವವಾದರೂ ಪಾರ್ಸೆಲ್ಗ ಳಿಗೆ ಮಾತ್ರ ಸೀಮಿತವಾಗಿರುತ್ತದೆ. 10 ಗಂಟೆಯ ನಂತರ ಬಾರ್ಗಳು ತೆರೆಯುವಂತಿಲ್ಲ. ನಿಗದಿತ ವೇಳೆಯಲ್ಲೇ ಆಹಾರ ಮತ್ತು ಹಾಲ್ಕೋಹಾಲ್ಗೆ ಅವಕಾಶ ಮಾಡಿಕೊಡಲಾಗಿದೆ.
18 ವರ್ಷ ಮೀರಿದವರಿಗೆ ಉಚಿತ ಲಸಿಕೆ
ಬೆಂಗಳೂರು, ಏ. 26 – 18 ರಿಂದ 44 ವರ್ಷ ದವರೆಗಿನ ನಾಗರಿಕರಿಗೆ ಉಚಿತ ಲಸಿಕೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
45 ವರ್ಷ ಮೇಲ್ಪಟ್ಟವರಿಗೆ ಈಗಾಗಲೇ ಕೇಂದ್ರ ಸರ್ಕಾರ ಉಚಿತ ಲಸಿಕೆ ನೀಡುತ್ತಿದೆ.
ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮುಖ್ಯಮಂತ್ರಿಯವರು, ಯುವ ವಯಸ್ಸಿನ ನಾಗರಿಕರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ನೀಡ ಲಾಗುವುದು. ಇದೇ 28 ರಿಂದ ಹೆಸರು ನೋಂದಾಯಿಸಿಕೊಂಡು, ಲಸಿಕೆ ಪಡೆದು ಕೊಳ್ಳಬೇಕೆಂದು ಮನವಿ ಮಾಡಿದರು. ರಾಜ್ಯ ಸರ್ಕಾರ 400 ಕೋಟಿ ರೂ. ವೆಚ್ಚದಲ್ಲಿ ಒಂದು ಕೋಟಿ ಲಸಿಕೆಗಳನ್ನು ರಾಜ್ಯ ಸರ್ಕಾರ ಖರೀದಿಸಲಿದೆ.
45 ವರ್ಷ ಮೇಲ್ಪಟ್ಟವರಿಗೆ ಎಂದಿನಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇಂದ್ರ ಸರ್ಕಾರವೇ ಲಸಿಕೆ ನೀಡಲಿದೆ ಎಂದರು.
ಮೇ 10 ರ ವೇಳೆಗೆ ಸೋಂಕು ನಿಯಂತ್ರಣಕ್ಕೆ ಬಾರದಿದ್ದರೆ, ಇದೇ ಕಠಿಣ ಕ್ರಮ ಮುಂದುವರೆಯಲಿದೆ. ಇದಕ್ಕೆ ಸಾರ್ವಜನಿಕರು ಅವಕಾಶ ನೀಡಬಾರದು.
ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಅನ್ವಯ ಎಲ್ಲಾ ಕೆಲಸ ಕಾರ್ಯಗಳು ನಡೆಯಲಿವೆ. ಕೇಂದ್ರ, ರಾಜ್ಯ ಸರ್ಕಾರದ ಕಚೇರಿಗಳು, ಬ್ಯಾಂಕ್ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಸರ್ಕಾರಿ ಕಚೇರಿಗಳು ಶೇ. 50 ರಷ್ಟು ಸಿಬ್ಬಂದಿಗೆ ಮಾತ್ರ ಅವಕಾಶ ನೀಡಲಾಗುವುದು. ಬ್ಯಾಂಕುಗಳ ವಹಿವಾಟು ಸಮಯ ಬದಲಾವಣೆಯಾಗಲಿದೆ ಎಂದರು.
ಇದು ಲಾಕ್ಡೌನ್ ಅಲ್ಲ, ಸೋಂಕು ನಿವಾರಣೆಗೆ ಕಠಿಣ ತೀರ್ಮಾನ ಕೈಗೊಂಡಿದ್ದೇವೆ. ಜನತೆ ಸಹಕಾರ ನೀಡಬೇಕು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಶುಚಿತ್ವ ಕಾಪಾಡುವ ಮೂಲಕ ಸೋಂಕು ನಿವಾರಿಸಲು ಸರ್ಕಾರದ ಜೊತೆ ಕೈಜೋಡಿಸಿ ಎಂದು ಮುಖ್ಯಮಂತ್ರಿಯವರು ಮನವಿ ಮಾಡಿಕೊಂಡರು.
ಇನ್ನು ಮುಂದೆ ಸೋಂಕು ಪೀಡಿತ ರೋಗಿಗಳಿಗೆ ಆಕ್ಸಿಜನ್ ಕೊರತೆ ಇರುವುದಿಲ್ಲ. ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ಆಕ್ಸಿಜನ್ ಒದಗಿಸಲು ಸಮ್ಮತಿಸಿದೆ. ಅಷ್ಟೇ ಅಲ್ಲ ಸೋಂಕಿನ ಚಿಕಿತ್ಸೆಗೆ ಅತ್ಯವಶ್ಯವಾದ ರೆಮಿಡಿಸಿವಿರ್ ಚುಚ್ಚುಮದ್ದನ್ನು 50 ಸಾವಿರದಿಂದ 1.22 ಲಕ್ಷಕ್ಕೆ ಹೆಚ್ಚಿಸಿದೆ.
ಭಯ ಪಡುವುದು ಬೇಡ, ಆದರೆ ಎಚ್ಚರಿಕೆಯಿಂದ ಇರಿ, ಸರ್ಕಾರ ಸೋಂಕು ನಿವಾರಣೆಗಾಗಿ ಎಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದಕ್ಕೆ ನಿಮ್ಮ ಸಹಕಾರ ಅಗತ್ಯವಿದೆ ಎಂದರು.