ದಾವಣಗೆರೆ, ಅ.20- ಭಗ ವಂತನ ಕೃಪೆಯಿಂದಲೇ ಜೀವ ತಾಳಿ ರುವ ಮನುಷ್ಯ ಭಗವಂತನ ಸ್ಮರಣೆಗಾಗಿ ನಿತ್ಯವೂ ಕೆಲ ಕಾಲವಾದರೂ ಮೀಸಲಿ ಡಬೇಕು ಎಂದು ಕೂಡಲಿ ಶೃಂಗೇರಿ ಮಠದ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಕಿವಿಮಾತು ಹೇಳಿದರು.
ನಗರದ ಶ್ರೀ ಜಯದೇವ ಮುರುಘ ರಾಜೇಂದ್ರ ವೃತ್ತದಲ್ಲಿರುವ ಕೂಡಲಿ ಶೃಂಗೇರಿ ಶಂಕರಾಚಾರ್ಯ ಮಹಾಸಂ ಸ್ಥಾನದ ಶಾಖಾ ಮಠವಾದ ಶಂಕರ ಮಠದಲ್ಲಿ ಶಾರದಾ ಶರನ್ನವರಾತ್ಯೋ ತ್ಸವದ ಅಂಗವಾಗಿ ನಡೆದ ರುದ್ರಾಭಿಷೇಕ, ರುದ್ರಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ ಕಾರ್ಯಕ್ರ ಮದ ನಂತರ ಶ್ರೀಗಳು ಆಶೀರ್ವಚನ ನೀಡಿದರು.
ವೇದಗಳಲ್ಲಿ ಭಗವಂತನ ಆರಾಧನೆ ಬಗ್ಗೆ ಹೇಳಲ್ಪಟ್ಟಿದೆ. ವೇದಗಳು ಭಗವಂತನ ಮುಖದಿಂದಲೇ ಹುಟ್ಟಿವೆ. ಯಾವುದೇ ಕೆಲಸಗಳಿಗೆ ಬ್ರಹ್ಮ, ವಿಷ್ಣು, ಶಿವ ಈ ತ್ರಿಮೂರ್ತಿಗಳ ಶಕ್ತಿಬೇಕು. ಶಕ್ತಿ ಇಲ್ಲದಿದ್ದರೆ ಬದುಕು ನಿರರ್ಥಕವಾಗುತ್ತದೆ. ಆದ್ದರಿಂದ ನವರಾತ್ರಿಯನ್ನು ಶಕ್ತಿ ದೇವತೆಗಳ ಆರಾಧನೆಗಾಗಿ ಆಚರಿಸಲಾಗುತ್ತದೆ. ಶಂಕರಾಚಾರ್ಯರು ತಮ್ಮ ಸೌಂದರ್ಯ ಲಹರಿಯಲ್ಲಿ ಶಕ್ತಿಯ ಬಗ್ಗೆ ಉಲ್ಲೇಖಿಸುತ್ತಾರೆ. ಶಕ್ತಿ ಇಲ್ಲದಿದ್ದರೆ ಏನೂ ಮಾಡಲಾಗುವುದಿಲ್ಲ ಎನ್ನುವುದನ್ನು ಸೌಂದರ್ಯ ಲಹರಿಯಲ್ಲಿ ಹೇಳಲಾಗಿದೆ ಎಂದರು.
ಕಲಿಯುಗದಲ್ಲಿ ಭಗವಂತನಿಗೆ ಅನೇಕ ರೀತಿಯಲ್ಲಿ ಪೂಜೆ ಮಾಡುತ್ತೇವೆ. ಮನುಷ್ಯನಿಗೆ ಭಗ ವಂತನನ್ನು ಸಾಕ್ಷಾತ್ಕರಿಸಿಕೊಳ್ಳುವುದು ಅತಿ ಮುಖ್ಯ. ಇದಕ್ಕಾಗಿ ಉಪಾಸನೆ, ಕರ್ಮಗಳನ್ನು ನಾವು ಮಾಡಬೇಕಾಗುತ್ತದೆ. ಆದರೆ, ಮನುಷ್ಯ ಅತಿಯಾದ ಆಸೆಯಿಂದ ಭಗವಂತನ ಸ್ಮರಣೆಗೆ ಸಮಯವನ್ನೇ ನೀಡುವುದಿಲ್ಲ. ಸುಖದ ಸಾಧನಗಳು ಮನುಷ್ಯನ ಕೊರತೆಯನ್ನು ನೀಗಿಸುವುದಿಲ್ಲ. ಇದಕ್ಕೆ ಕೊನೆ ಇಲ್ಲ. ಇನ್ನೂ ನಮಗೆ ಸಿಕ್ಕಿಲ್ಲ ಎನ್ನುವ ಕೊರತೆಯಲ್ಲಿಯೇ ಮನುಷ್ಯ ಜೀವನ ಮುಗಿದುಹೋಗುತ್ತದೆ. ಆದ್ದರಿಂದ ಸಂಸಾರ ಎನ್ನುವುದು ದುಃಖದಿಂದ ಕೂಡಿದ್ದು, ಮನುಷ್ಯನ ಸುಖ – ದುಃಖಗಳು, ಪಾಪ – ಪುಣ್ಯಗಳ ಪ್ರತಿಫಲಗಳು ಎಂದು ಶ್ರೀಗಳು ಪ್ರತಿಪಾದಿಸಿದರು. ನವರಾತ್ರಿ ಭಗವಂತನ ಸ್ಮರಣೆಗೆ ಸತ್ಕಾಲ. ದೇವಿಯ ಪೂಜೆ, ಆರಾಧನೆಗೆ ಹೆಚ್ಚು ಸಮಯವನ್ನು ಮೀಸಲಿಡಬೇಕು. ತಿಳಿದೋ ಅಥವಾ ತಿಳಿಯದೆಯೋ ಭಗವಂತನ ಸ್ಮರಣೆ ಮಾಡಿದರೆ, ಆತ ಅದನ್ನು ಪ್ರೀತಿಯಿಂದ ಸ್ವೀಕರಿಸುತ್ತಾನೆ. ಆದರೆ, ಸ್ಮರಣೆಯ ಆಲಯ ಮತ್ತು ಭಕ್ತನ ಮನಸ್ಸು ಶುದ್ಧವಾಗಿರಬೇಕು. ಆಗ ಭಗವಂತನ ಕೃಪೆ ಸಾಧ್ಯವಾಗುತ್ತದೆ. ಶುಚಿತ್ವ ಇಲ್ಲದ ಕಡೆ ದೇವರು ಬರುವುದೇ ಇಲ್ಲ ಎಂದು ಶ್ರೀಗಳು ಹೇಳಿದರು.
ಸಮಾಜದ ಮುಖಂಡರಾದ ಮೋತಿ ಪರಮೇಶ್, ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ. ಬಿ.ಟಿ.ಅಚ್ಯುತ್, ಪವನ್ಭಟ್, ದೀಕ್ಷಿತ್, ಮಾಲತೇಶ್, ಎಂ.ಜಿ.ಶ್ರೀಕಾಂತ್ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.