ಜಿಲ್ಲಾಡಳಿತದ ವಾಲ್ಮೀಕಿ ಜಯಂತ್ಯೋತ್ಸವದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆಶಯ
ದಾವಣಗೆರೆ, ಅ.20- ಜಗತ್ತು ಕಂಡ ಮಹಾಕಾವ್ಯ ರಚಿಸಿದ್ದು ವಾಲ್ಮೀಕಿ. ಅವರು ಕೇವಲ ಗ್ರಂಥಗಳನ್ನು ರಚಿಸಲಿಲ್ಲ, ಪಾತ್ರಗಳನ್ನು ಸೃಷ್ಟಿಸಲಿಲ್ಲ. ಬದಲಾಗಿ ಎಲ್ಲಾ ಕಾಲಕ್ಕೂ ಅನ್ವಯವಾಗುವಂತಹ ಮೌಲ್ಯಗಳನ್ನು ಈ ಗ್ರಂಥದ ಮೂಲಕ ಓದುಗರಿಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಅವರು ಮಾತನಾಡಿದರು.
ರಾಮಾಯಣ ಕೃತಿ ರಚಿಸಿದ ವಾಲ್ಮೀಕಿ ಅವರು ತಮ್ಮ ಸಾಹಿತ್ಯ ಕೃತಿ ತರುವ ಮೂಲಕ ಸಮಾಜಕ್ಕೆ ದೊಡ್ಡ ಉಪಕಾರ ಮಾಡಿದ್ದಾರೆ. ರಾಮಾಯಣದ ಪಾತ್ರಗಳಾದ ರಾಮ, ಸೀತೆ, ಲಕ್ಷ್ಮಣ, ಸುಗ್ರೀವ, ದಶರಥ ಇವು ಕೇವಲ ಪಾತ್ರಗಳಲ್ಲ. ಇಂದಿಗೂ ನಮ್ಮ ನಿಮ್ಮ ಮಧ್ಯೆ ಇರುವ ವ್ಯಕ್ತಿಗಳು. ಆ ಪಾತ್ರಗಳಿಗೆ ಇಂದಿಗೂ ಪ್ರಸ್ತುತತೆ ಇದೆ. ಅಂಥ ಪಾತ್ರಗಳ ಮೂಲಕ ಕೃತಿಕಾರರು ಹೇಳಿದ ಮೌಲ್ಯಗಳು ನಮ್ಮ ಬದುಕಿನ ಆದರ್ಶಗಳಾಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
ಯಾವುದೇ ಸಾಹಿತ್ಯ, ಕಾವ್ಯ ಹೊರಬರ ಬೇಕಾದರೆ ಕೃತಿಕಾರರು ತಮ್ಮ ಜೀವನ ಉಂಡಿರ ಬೇಕು. ಜೀವನದೊಳಗಿರುವ ರಸಾನುಭವ, ಲೋಕಾನುಭವವನ್ನು ಅನುಭವಿಸಿರಬೇಕು. ಆಗ ಮಾತ್ರ ಕಾಲಾತೀತವಾದ ಮಹಾಕಾವ್ಯ ರಚಿಸಲು ಸಾಧ್ಯ. ಎಲ್ಲಾ ದೇಶಗಳಲ್ಲೂ ಒಂದೊಂದು ಮಹಾ ಕಾವ್ಯವಿರುತ್ತದೆ. ಅವು ಜನರ ಹೃದಯ ಮುಟ್ಟುವ ಶಕ್ತಿ ಹೊಂದಿರುತ್ತವೆ. ಈ ನಿಟ್ಟಿನಲ್ಲಿ ವಾಲ್ಮೀಕಿ ರಚಿಸಿದ ರಾಮಾಯಣ ಕಾಲಾತೀತವಾದದ್ದು. ಎಲ್ಲಾ ದೇಶಗಳು ಭಾರತದತ್ತ ಒಮ್ಮೆ ತಿರುಗಿ ನೋಡುವಂತಹ ಕೃತಿ ರಚಿಸಿದ ಹೆಗ್ಗಳಿಕೆ ವಾಲ್ಮೀಕಿ ಅವರಿಗೆ ಸಲ್ಲುತ್ತದೆ ಎಂದು ಅವರು ಹೇಳಿದರು.
ಹಿಂದಿನ ಕಾಲದಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ಪುರುಷಾರ್ಥಗಳು, ವಿವಿಧ ಆಶ್ರಮಗಳ ವ್ಯವಸ್ಥೆ ಇದ್ದು, ಯಾರು ಬೇಕಾದರೂ ಜ್ಞಾನ ಪಡೆದುಕೊಳ್ಳ ಬಹುದಿತ್ತು. ನಮ್ಮ ಹುಟ್ಟು ಜ್ಞಾನಾರ್ಜನೆಗೆ ಅಡೆತಡೆಯಾಗುತ್ತಿರಲಿಲ್ಲ. ಯಾವುದೇ ಮೀಸಲಾತಿ ಇರಲಿಲ್ಲ. ಆದ್ದರಿಂದಲೇ ವಾಲ್ಮೀಕಿ ಅವರು ಉನ್ನತ ಶಿಕ್ಷಣ ಪಡೆದು, ರಾಮಾಯಣ ದಂತಹ ಮೇರು ಕೃತಿ ಬರೆಯಲು ಸಾಧ್ಯವಾಯ್ತು. ಪ್ರಸ್ತುತ ದಿನಮಾನ ಗಳಲ್ಲೂ ಜಾತಿ, ಧರ್ಮದ ಕಾರಣದಿಂದ ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎಂದು ತಿಳಿಸಿದರು.
ಕೆಟ್ಟದ್ದರ ಮೇಲೆ ಒಳ್ಳೆಯದು ಸದಾ ವಿಜಯ ಸಾಧಿಸಿ ಅದನ್ನು ಸಾರಿ ಹೇಳುತ್ತದೋ ಅದು ಮಹಾಕಾವ್ಯವಾಗುತ್ತದೆ. ರಾಮಾಯಣ, ಮಹಾಭಾರತ, ಇಲಿಯಡ್, ಒಡಿಸ್ಸಿ ಸೇರಿದಂತೆ ಅನೇಕ ಮಹಾಕಾವ್ಯಗಳು ಇದಕ್ಕೆ ನಿದರ್ಶನಗಳಾ ಗಿವೆ. ಪ್ರತಿ ವ್ಯಕ್ತಿಯ ಮನಸಿನೊಳಗೆ ಒಬ್ಬ ಹೀರೋ ಮತ್ತು ವಿಲನ್ ಇದ್ದು, ಇವರುಗಳ ನಡುವೆ ನಿತ್ಯ ಸಂಘರ್ಷವಾಗುತ್ತಲೇ ಇರುತ್ತದೆ. ನಾವು ವಿಲನ್ ಸೋಲಿಸಿ, ಹೀರೋ ಗೆಲ್ಲಿಸಿದಾಗ ಮಾತ್ರ ನಮ್ಮ ಜೀವನವನ್ನು ಆದರ್ಶಮಯ ವಾಗಿಸಲು ಸಾಧ್ಯ ಎಂದರು.
zಜಿಲ್ಲಾ ಪಂಚಾಯತ್ ಸಿಇಓ ಡಾ.ವಿಜಯ ಮಹಾಂತೇಶ ಮಾತನಾಡಿ, ವಾಲ್ಮೀಕಿ ಅವರು ರಚಿಸಿದ ರಾಮಾಯಣ ಇಡೀ ವಿಶ್ವಕ್ಕೇ ಭಾರತ ನೀಡಿದ ಬಹುದೊಡ್ಡ ಸಾಹಿತ್ಯ ಕೊಡುಗೆ. ವಾಲ್ಮೀಕಿ ರಾಮಾಯಣವನ್ನು ದೇಶ-ಭಾಷೆಗೆ ಸೀಮಿತಗೊಳಿಸದೆ ಜಾಗತಿಕ ವಾಗಿ ಆರಾಧಿಸಲ್ಪಡುತ್ತದೆ. ರಾಮಾಯಣ ರಚನೆಯಾಗಿ ಶತಮಾನಗಳೇ ಉರುಳಿದರು ಅದರಲ್ಲಿರುವ ದೇಶದ ಸಂಸ್ಕೃತಿ, ಆಚಾರ-ವಿಚಾರಗಳು, ಮಾನವೀಯ ಮೌಲ್ಯಗಳು ಇಂದಿಗೂ ಪ್ರಸ್ತುತ ಎಂದು ತಿಳಿಸಿದರು.
ನಮ್ಮ ಜೀವನ ಹೂವಿನ ಹಾದಿಯಲ್ಲ. ಮುಳ್ಳಿನಿಂದ ಕೂಡಿರುತ್ತದೆ ಎಂಬ ಸತ್ಯಾಂಶ ಅಂದು-ಇಂದು ಪ್ರಸ್ತುತ. ನಾವು ನಮ್ಮ ಜೀವನವನ್ನು ಹೇಗೆ ಸ್ವೀಕರಿಸುತ್ತೇವೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ರಾಮನ ಜೀವನ ದಲ್ಲಿ ಬಂದ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ಮೆಟ್ಟಿ ನಿಂತಿದ್ದರಿಂದಲೇ ಮಹಾಜ್ಞಾನಿಯಾದ. ಆದರ್ಶ ಪುರುಷನಾಗಿ ದೈವತ್ವಕ್ಕೇರಿದನು. ಆದರೆ ಪ್ರಸ್ತುತ ದಿನಮಾನಗಳಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಲಾರದೇ ಆತ್ಮಹತ್ಯೆಯ ಮೊರೆ ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗಿರುವುದು ದುಸ್ಥಿತಿ. ಪಾಶ್ಚಿಮಾತ್ಯ ಹಾಗೂ ತಂತ್ರಜ್ಞಾನದಿಂದ ಸಂಸ್ಕೃತಿ, ಮೌಲ್ಯಗಳನ್ನು ಮರೆಯುತ್ತಿರುವ ಯುವಕರಿಗೆ, ರಾಮಾಯಣದ ಮೂಲಕ ಸಂಸ್ಕೃತಿ ಬೆಳೆಸಬೇಕು. ಆಚಾರ-ವಿಚಾರಗಳನ್ನು ಎತ್ತಿ ಹಿಡಿಯುವ ಕೆಲಸವಾಗಬೇಕು ಎಂದರು.
ಮಹಾನಗರ ಪಾಲಿಕೆ ಮಹಾಪೌರರಾದ ಎಸ್.ಟಿ.ವೀರೇಶ್ ಮಾತನಾಡಿ, ಭಾರತದ ಮಹಾಕಾವ್ಯಗಳು, ಸಾಹಿತ್ಯ, ಕೃತಿಗಳನ್ನು ದಾಖಲೀಕರಿಸುವ ಮೂಲಕ ಸಂಸ್ಕೃತಿ, ಮಾನವೀಯ ಮೌಲ್ಯಗಳನ್ನು ಉಳಿಸಿದ್ದಾರೆ. ಆಧುನಿಕ ದಾರ್ಶನಿಕರಿಂದ ಪ್ರೇರಣೆಗೊಂಡ ಬರಹಗಾರರು ಸಾವಿರಾರು ಕೃತಿಗಳನ್ನು ರಚಿಸಿದ್ದಾರೆ. ರಾಮಾಯಣ ಕೇವಲ ಪುಸ್ತಕವಲ್ಲ. ಅದೊಂದು ಮೌಲ್ಯ. ಯಾರು ರಾಮಾಯಣ ಅಧ್ಯಯನ ಮಾಡಿ, ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೋ, ಅವರು ಆದರ್ಶ ವ್ಯಕ್ತಿಗಳಾಗುತ್ತಾರೆ ಎಂದು ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ (ಏಕಲವ್ಯ) ಡಾ.ಹೆಚ್.ಕೆ.ನರಸಿಂಹಮೂರ್ತಿ ಅವರು ವಿಶೇಷ ಉಪನ್ಯಾಸ ನೀಡಿದರು.
ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಬಿ.ವೀರಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಕೌಸರ್ ರೇಷ್ಮ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆನಂದ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೆ. ಮಂಜಾನಾಯ್ಕ್, ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲರಾದ ದೀಪ ಜಕಾತಿ, ನಾಯಕ ಸಮಾಜದ ಮುಖಂಡರುಗಳಾದ ಹದಡಿ ಹಾಲೇಶಪ್ಪ, ಶ್ರೀನಿವಾಸ ನಾಯಕ್, ಎನ್.ಎಂ. ಆಂಜನೇಯ ಗುರೂಜಿ, ಅಣಜಿ ಆಂಜಿನಪ್ಪ, ಮಲ್ಲಿಕಾರ್ಜುನ್ ಗುಮ್ಮನೂರು, ವೀರೇಶ್ ಪೈಲ್ವಾನ್, ಗಣೇಶ್ ಹುಲ್ಲುಮನೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.