ದಾವಣಗೆರೆ, ಅ.19- ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮ ದಿನವಾದ ಈದ್-ಮಿಲಾದ್ ಹಬ್ಬವನ್ನು ನಗರಾದ್ಯಂತ ಮುಸ್ಲಿಂ ಬಾಂಧವರು ಇಂದು ಸಡಗರ – ಸಂಭ್ರಮದಿಂದ ಆಚರಿಸಿದರು.
ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಜುಲುಸ್ಗೆ (ಮೆರವಣಿಗೆ) ಮಧ್ಯಾಹ್ನ ಆಜಾದ್ನಗರ ಮೆಕ್ಕಾ ಮಸೀದಿ ಬಳಿಯಿಂದ ಫಾತೇಹಾ ಖ್ವಾನಿ ನೆರವೇರಿಸಿ, ಚಾಲನೆ ನೀಡಲಾಯಿತು.
ಚಾಮರಾಜಪೇಟೆ, ಮಂಡಿಪೇಟೆ, ವಸಂತ ರಸ್ತೆ, ರೈಲ್ವೆ ಗೇಟ್ ಮೂಲಕ ಅರುಣ ಚಿತ್ರ ಮಂದಿರ ವೃತ್ತದ ತಲುಪಿ, ಪಿ.ಬಿ.ರಸ್ತೆ ಮೂಲಕ ಗಾಂಧಿ ವೃತ್ತದಲ್ಲಿ ಜಮಾವಣೆಗೊಂಡರು. ಕೆಟಿಜೆ ನಗರ, ನಿಟ್ಟುವಳ್ಳಿ, ಸೈಯದ್ ಪೀರ್ ಬಡಾವಣೆ, ವಿನೋಬನಗರ, ವಿನಾಯಕ ನಗರದಿಂದ ತಂಡೋಪತಂಡವಾಗಿ ಬಂದ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಸೇರಿಕೊಂಡು ಅಶೋಕ ಚಿತ್ರಮಂದಿರದ ಬಳಿಯ ರೈಲ್ವೇ ಗೇಟ್ ಮೂಲಕ ಕೆ.ಆರ್.ರಸ್ತೆ, ಇಮಾಂ ನಗರ ವೃತ್ತ ಅರಳಿಮರ, ಮಾಗಾನಹಳ್ಳಿ ರಸ್ತೆ ಮೂಲಕ ಮಂಡಕ್ಕಿ ಭಟ್ಟಿ ಲೇಔಟ್ನ ಮಿಲಾದ್ ಮೈದಾನದಲ್ಲಿ ಸೇರಿಕೊಂಡು ಸಮಾರೋಪಗೊಳಿಸಿದರು.
ಸಂಜೆ ನಡೆದ ಕಾರ್ಯಕ್ರಮದಲ್ಲಿ ಉಲೇಮಾಗಳಿಂದ ತಖರೀರ್ (ಉಪನ್ಯಾಸ), ನಾಥೇ ಷರೀಫ್ ಪಠಿಸಲಾಯಿತು. ಮೌಲಾನಾರಾದ ಹಿದಾಯತ್, ಅಮೀನ್ ರಜಾ ಅವರು ಪ್ರವಾದಿ ಮಹಮ್ಮದ್ ಅವರ ಜೀವನ ಸಂದೇಶವನ್ನು ವಿವರಿಸಿದರು.
ಕಳೆದ ಎರಡು ವರ್ಷಗಳಿಂದ ಕೊರೊನಾ ಕರಿನೆರಳಿನಿಂದ ಭಯಭೀತರಾಗಿದ್ದ ಜನತೆ ಈದ್-ಮಿಲಾದ್ ಹಬ್ಬವನ್ನು ಬಹಳ ಸಡಗರದಿಂದ ಆಚರಿಸಿದರು.
ಹೊಸ ಬಟ್ಟೆಗಳನ್ನು ಧರಿಸಿಕೊಂಡು, ತಲೆಗೆ ಟೋಪಿ, ಕೈಯಲ್ಲಿ ಝಂಡಾಗಳನ್ನು ಹಿಡಿದುಕೊಂಡು ತಮ್ಮ ತಮ್ಮ ಮಕ್ಕಳೊಂದಿಗೆ `ನಾರೇ ತಖಬೀರ್ ಅಲ್ಲಾಹು ಅಕ್ಬರ್’ ಎಂಬ ಘೋಷಣೆಗಳನ್ನು ಕೂಗುತ್ತಾ, ನಾಥ್ಗಳನ್ನು ಓದುತ್ತಾ ಸಾಗುತ್ತಿದ್ದ ಮುಸ್ಲಿಂ ಬಾಂಧವರು ಸಾಗರೋಪಾದಿಯಲ್ಲಿ ಸೇರಿ ಹಬ್ಬದ ಖುಷಿಯಲ್ಲಿ ಮಿಂದೆದ್ದರು.
ಗಲ್ಲಿ ಗಲ್ಲಿಗಳಲ್ಲಿ ವಿದ್ಯುತ್ ದೀಪಾಲಂಕಾಲರದಿಂದ ಕಂಗೊಳಿಸುತ್ತಿದ್ದ ಆಜಾದ್ನಗರ, ಭಾಷಾನಗರ ಸೇರಿದಂತೆ ಆಜುಬಾಜಿನ ಪ್ರದೇಶಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತು.
ಕಳೆದ ಎಂಟು ದಿನಗಳಿಂದ ಹಗಲು – ರಾತ್ರಿ ಶ್ರಮಿಸಿ, ಹಬ್ಬದ ಆಚರಣೆಯಲ್ಲಿ ಮಗ್ನರಾಗಿದ್ದ ಮುಸ್ಲಿಂ ಬಾಂಧವರಿಗೆ ಕೊನೆ ಕ್ಷಣದವರೆಗೂ ಆತಂಕ ಮನೆ ಮಾಡಿತ್ತು. ಒಂದೆಡೆ ಕೋವಿಡ್ ಮಾರ್ಗ ಸೂಚಿಯ ಜಿಲ್ಲಾಡಳಿತದ ಆದೇಶ, ಮತ್ತೊಂದೆಡೆ ಧಾರ್ಮಿಕ ಗುರುಗಳ ಸಂದೇಶ ಅಂತೂ ಹಬ್ಬ ಆಚರಣೆಗೆ ಯಾವುದೇ ಕಂಟಕವಿಲ್ಲದೇ, ಯಶಸ್ವಿಯಾಗಿ ಸಾಗಲು ಈದ್-ಮಿಲಾದ್ ಸಮಿತಿ – ತಂಜೀಮ್ ಸಮಿತಿ ಪದಾಧಿಕಾರಿಗಳ ಪ್ರಯತ್ನ ಜೊತೆಗೆ ಮಸೀದಿಗಳಲ್ಲಿ ಉಲೇಮಾಗಳು ನೀಡಿದ ಶಾಂತಿ – ಸೌಹಾರ್ದತೆಯ ಸಂದೇಶಕ್ಕೆ ನಿಜಕ್ಕೂ ಪ್ರತಿಫಲ ದೊರೆತಂತಾಯಿತು ಎನ್ನುತ್ತಾರೆ ಮುಸ್ಲಿಂ ಮುಖಂಡರು.
ಬೀದಿ ಬೀದಿಗಳಲ್ಲಿ ಬಂಟಿಂಗ್ಸ್, ಹಸಿರು ಬಣ್ಣದ ಝಂಡಾ ಮೆರವಣಿಗೆಯುದ್ದಕ್ಕೂ ಹಿಂದೂ – ಮುಸ್ಲಿಂ ಬಾಂಧವರು ಸಿಹಿ, ತಂಪು ಪಾನೀಯ ನೀಡುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾದರು. ಹೀಗಾಗಿ ಜನರಲ್ಲಿ ಕಾಡುತ್ತಿದ್ದ ಕೊರೊನಾ ಛಾಯೆಯ ಭಯ ಸ್ವಲ್ಪ ಮಟ್ಟಿಗೆ ತೊಲಗಿದಂತಾಯಿತು ಎಂದು ದುವಾ ಮಾಡಲಾಯಿತು.
ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್, ಡಿ.ಬಸವರಾಜ್, ಯಶವಂತ್ರಾವ್ ಜಾಧವ್, ಕೆ.ಬಿ.ಶಂಕರನಾರಾಯಣ, ವೈ.ಮಲ್ಲೇಶ್ ಸೇರಿದಂತೆ ಇನ್ನೂ ಅನೇಕರು ಪಾಲ್ಗೊಂಡು ಶುಭ ಹಾರೈಸಿದರು.
ಸಂಜೆ ಸಮಾರೋಪ ಸಮಾರಂಭದಲ್ಲಿ ಈದ್-ಮಿಲಾದ್ ಸಮಿತಿಯ ಕಾರ್ಯದರ್ಶಿ ಯಾಸೀನ್ ಪೀರ್ ರಜ್ವಿ, ಬೇಕರಿ ಅನ್ವರ್ಸಾಬ್, ವಕೀಲರಾದ ನಜೀರ್ ಅಹ್ಮದ್, ರಜ್ವಿ ಖಾನ್, ಎಂ.ಹೆಚ್.ನೂರ್ಅಹಮದ್ ಸೇರಿದಂತೆ ಮುಸ್ಲಿಂ ಮುಖಂಡರಾದ ಸಾಧಿಕ್ ಪೈಲ್ವಾನ್, ಸೈಯದ್ ಸೈಫುಲ್ಲಾ, ಎ.ಬಿ.ಹಬೀಬುಲ್ಲಾ ಸಾಬ್, ಸಿರಾಜ್ ಅಹಮದ್, ಮುನ್ನಾ, ಅಕ್ಬರ್, ಬುತ್ತಿ ಗಫೂರ್ ಸಾಬ್, ಅಮಾನುಲ್ಲಾ ಖಾನ್, ಅಲ್ಲಾವಲ್ಲಿ ಮುಜಾಹಿದ್ ಖಾನ್, ಪಾಲಿಕೆ ಸದಸ್ಯರಾದ ಕೆ.ಚಮನ್ಸಾಬ್, ಎ.ಬಿ.ರಹೀಮ್ಸಾಬ್, ಸೈಯದ್ ಚಾರ್ಲಿ ಸೇರಿದಂತೆ ಮಂಡಕ್ಕಿ ಭಟ್ಟಿಯ ಪದಾಧಿಕಾರಿಗಳು ಈದ್-ಮಿಲಾದ್, ತಂಜೀಮ್ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.