ಆಲೂರಿನಲ್ಲಿ `ನಮ್ಮೂರು ನಮ್ಮ ಕೆರೆ’ ಹಸ್ತಾಂತರ

ದಾವಣಗೆರೆ, ಅ.19- ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಲೂರು ಗ್ರಾಮದ ಕೆರೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಅನುದಾನದಿಂದ ಮತ್ತು ಗ್ರಾಮದ ಕಮಿಟಿಯಿಂದ ರೈತರ ಸಹಕಾರದೊಂದಿಗೆ, ಬೇಸಿಗೆ ಕಾಲದಲ್ಲಿ ಕೆರೆಯ ಹೂಳನ್ನು ತೆಗೆದಿದ್ದು, 130 ಎಕರೆ ವಿಸ್ತೀರ್ಣದ ಈ ಕೆರೆಗೆ ನಂತರದ ಒಂದೇ ರಾತ್ರಿಯಲ್ಲಿ ಸುರಿದ ಮುಂಗಾರು ಮಳೆಗೆ ತುಂಬಿ ಹರಿದು ಕೋಡಿ ಬಿದ್ದಿದ್ದು ರೈತರ ಮೊಗದಲ್ಲಿ ಸಂತೋಷಕ್ಕೆ ಕಾರಣವಾಯಿತು.

ಈ ಹಿನ್ನೆಲೆಯಲ್ಲಿ ಊರಿನ ಸಮಸ್ತ ನಾಗರಿಕರು ಹಾಗೂ ವಿಶೇಷವಾಗಿ ಗ್ರಾಮದ ಮಹಿಳೆಯರಿಂದ ಇಂದು ಕುಂಭಮೇಳವನ್ನು ನಡೆಸಲಾಯಿತು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಕೆರೆಯ ನಾಮಫಲಕ ಮತ್ತು ಕೆರೆಗೆ ಬಾಗಿನ ಅರ್ಪಣೆ ಮಾಡಿ, ಭಕ್ತ ಸಮೂಹಕ್ಕೆ ಆಶೀರ್ವಚನ ನೀಡುವುದರ ಮೂಲಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕಾರ್ಯವೈಖರಿ, ಉದ್ದೇಶ, ಜನಪರ ಕಾಳಜಿ, ಮಹಿಳಾ ಸಬಲೀಕರಣ, ಮದ್ಯಪಾನ ವರ್ಜನೆ ಮುಂತಾದ ಪ್ರಮುಖ ವಿಷಯಗಳು ಮತ್ತು ಸೇವಾ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಡಾ|| ವೀರೇಂದ್ರ ಹೆಗ್ಗಡೆಯವರ ಈ ಕೆರೆ ಹೂಳೆತ್ತುವ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆಲೂರಿನ ಸಂಪರ್ಕ ರಸ್ತೆಯು ಪೂರ್ಣ ಹಾಳಾಗಿದ್ದು, ಆರನೇ ಕಲ್ಲಿನಿಂದ ಮಲ್ಲಾಪುರ ಮುಖಾಂತರ ಆಲೂರಿನ ಕೆರೆಯವರೆಗಿನ ರಸ್ತೆಯನ್ನು ಆದಷ್ಟು ಬೇಗ ಸಿಸಿ ರಸ್ತೆಯನ್ನಾಗಿ ಮಾಡುವುದಾಗಿ ರೈತರಿಗೆ ಭರವಸೆ ನೀಡಿದರು.

ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ ಮಾತನಾಡಿ, ಗ್ರಾಮದ ಸಮಸ್ಯೆಗಳಾದ ರಸ್ತೆ ಇನ್ನಿತರೆ ಯಾವುದೇ ಸಮಸ್ಯೆಗಳಿಗೆ ಬೇಗನೆ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಎಸ್. ಬಸವಂತಪ್ಪ ಮಾತನಾಡಿ, ಈಗಿನ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ರೈತರ ಬೆಳೆಗಳಿಗೆ ಸರಿಯಾದ ಬೆಲೆ ನಿಗದಿ ಮಾಡಬೇಕು.  ದಾವಣಗೆರೆಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ತೆಗೆದು ಬೇಗನೆ ರೈತರಿಗೆ ಉತ್ತಮ ದರಗಳನ್ನು ನಿಗದಿ ಪಡಿಸುವಂತಾಗಬೇಕೆಂದರು. ಈಗಾಗಲೇ ಡೀಸೆಲ್, ಪೆಟ್ರೋಲ್, ಗ್ಯಾಸ್ ಏರಿಕೆಯನ್ನು ತಡೆಗಟ್ಟಲು ಸೂಕ್ತ ಕ್ರಮಗಳಿಗೆ ಆಗ್ರಹಿಸಿದರು.

ಎಪಿಎಂಸಿ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಮಾತನಾಡಿ, ಇಂದು ಆಲೂರಿನ ಕೆರೆಯು ತುಂಬಿ ಕೋಡಿ ಬಿದ್ದಿರುವುದಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿಗೆ ನಾವು ಕೃತಜ್ಞತೆ ಸಲ್ಲಿಸಬೇಕು ಮತ್ತು ಮುಂದಿನ ದಿನಗಳಲ್ಲಿ ಈಗಿನ ಸರ್ಕಾರ ಆಲೂರು ಕೆರೆಯನ್ನು ಏತ ನೀರಾವರಿ ಕೆರೆಯ ಪಟ್ಟಿಯಲ್ಲಿ ಸೇರಿಸಿ ಕೆರೆಗೆ ದಿನ ನಿತ್ಯ ನೀರು ಹರಿದು ಬರುವಂತೆ ಮಾಡಬೇಕು ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ ಟ್ರಸ್ಟ್‌ನ ಜಿಲ್ಲಾ ನಿರ್ದೇಶಕ ಜಯಂತ್ ಪೂಜಾರಿ ಮಾತನಾಡಿ, ಕರ್ನಾಟಕದಲ್ಲಿ ಇರುವ ಹಳ್ಳಿಗಳಲ್ಲಿ ಇರುವ ಕೆರೆಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಯೋಜನೆಯ ಬಿ.ಸಿ ಟ್ರಸ್ಟ್ ದೇವನಗರಿಯಲ್ಲಿ ಹೆಗ್ಗಡೆಯವರ ಆಶೀರ್ವಾದಗಳೊಂದಿಗೆ ಹೂಳು ತೆಗೆದಿದ್ದು, ಆಲೂರಿನ ಕೆರೆಯು ಬಾಗಿನ ಅರ್ಪಣೆ ಮಾಡುತ್ತಿರುವ ಮೊದಲ ಕೆರೆಯಾಗಿದೆ ಎಂಬ ಖುಷಿ ಹಂಚಿಕೊಂಡರು.

ಆಲೂರಿನಲ್ಲಿ ರೈತ ಸಿರಿ ಯೋಜನೆಯನ್ನು ಆರಂಭಿಸಿದ್ದು, ಅದರ ಅಧ್ಯಕ್ಷ ಟಿ.ಎಂ.ಸಿದ್ದಯ್ಯ ಅವರ ನೇತೃತ್ವದಲ್ಲಿ 1000 ಕ್ಕೂ ಹೆಚ್ಚು ಷೇರುದಾರರೊಳಗೊಂಡಂತೆ, ಗ್ರಾಮದ ರೈತರು ಬೆಳೆದ ಸಿರಿ ಧಾನ್ಯಗಳನ್ನು ನಮ್ಮ ಸಂಸ್ಥೆ ಖರೀದಿಸಿ ಮಾರಾಟ ಮಾಡುತ್ತಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ನಾಗಮ್ಮ ಜೆ.ಸಿ. ಮಂಜುನಾಥ, ಗ್ರಾಮ ಪಂಚಾಯಿತಿ ಸರ್ವ ಸದಸ್ಯರು, ಪಿಡಿಒ ಲಿಂಗಣ್ಣ, ಗ್ರಾಮ ಲೆಕ್ಕಾಧಿಕಾರಿ ದುರುಗೇಶ್, ಕೆರೆ ಸಮಿತಿ ಅಧ್ಯಕ್ಷ ತಿಪ್ಪಣ್ಣ ಹಾಗೂ ಸರ್ವ ಸದಸ್ಯರು ಹಾಗೂ ಕೆರೆ ಹೋರಾಟಗಾರರಾದ ಕೆ.ಎಂ.ಹೇಮಂತರಾಜ್ ಕ್ಷೇ.ಗ್ರಾ.ಯೋ. ಬಾಬು, ಉದಯ್ ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜಿ.ಎಸ್. ನವೀನ್ ಕುಮಾರ್ ಸ್ವಾಗತಿಸಿದರು, ಸಿದ್ದೇಶ್ ಎಂ.  ವಂದಿಸಿದರು.

error: Content is protected !!