ಮತಾಂತರ ತಡೆಗೆ ಕಠಿಣ ಕಾನೂನು ಜಾರಿಯಾಗಲಿ : ಹೊನ್ನಾಳಿಯಲ್ಲಿ ಮುತಾಲಿಕ್
ಹೊನ್ನಾಳಿ, ಅ.19- ಇದೇ ದಿನಾಂಕ 24 ರಂದು ಭಾರತ – ಪಾಕಿಸ್ತಾನದ ನಡುವೆ ನಡೆಯಲಿರುವ ಕ್ರಿಕೆಟ್ ಪಂದ್ಯವನ್ನು ಕ್ರಿಕೆಟ್ ಮಂಡಳಿ ಹಾಗು ಕೇಂದ್ರ ಸರ್ಕಾರವು ತಡೆಯಬೇಕೆಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.
ಶಿವಮೊಗ್ಗದಲ್ಲಿ ನಡೆಯುತ್ತಿದ್ದ ಸಂತೋಷ ಗುರೂಜಿ ಜನ್ಮ ದಿನದ ಸಮಾರಂಭಕ್ಕೆ ತೆರಳುವ ಮಾರ್ಗ ಮಧ್ಯೆ ಇಲ್ಲಿನ ಬಿಜೆಪಿ ಮುಖಂಡ ಎಂ.ಆರ್. ಮಹೇಶ್ ನಿವಾಸಕ್ಕೆ ಸೌಹಾರ್ದಯುತ ಭೇಟಿ ನೀಡಿದ್ದ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
ಪಾಕಿಸ್ತಾನವು ತಾಲಿಬಾನ್ಗೆ ಬೆಂಬಲಿಸಿರುವುದು ಹಾಗು ಹಿಂದೂಗಳ ವಿರುದ್ಧ ಷಡ್ಯಂತರ ನಡೆಸುತ್ತಿರುವುದು ಬಹಿರಂಗ ಗೊಂಡಿದ್ದು, ಅವರ ಮುಖವಾಡ ಕಳಚಿ ಬಿದ್ದಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡು ಬಿಸಿಸಿಐಯೊಂದಿಗೆ ಚರ್ಚಿಸಿ ಕ್ರಿಕೆಟ್ ಆಟವನ್ನು ರದ್ದುಗೊಳಿಸುವ ಮೂಲಕ ದೇಶಾಭಿಮಾನ ಹಾಗು ಸ್ವಾಭಿಮಾನ ಗಮನದಲ್ಲಿಟ್ಟು ನಡೆದುಕೊಳ್ಳುವಂತೆ ಎಚ್ಚರಿಕೆ ನೀಡಿದ ಅವರು, ಇಲ್ಲವಾದಲ್ಲಿ ಇದರ ವಿರುದ್ಧ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮತಾಂತರವು ಹಳ್ಳಿಗಳಲ್ಲಿ ವ್ಯಾಪಕವಾಗಿ ಬೆಳೆದಿದ್ದು, ಇತ್ತೀಚಿಗೆ ಶಾಸಕ ಗೂಳಿಹಟ್ಟಿ ಶೇಖರ್ ನಿವಾಸದಲ್ಲಿಯೂ ಇಂತಹ ಬೆಳವಣಿಗೆ ನಡೆದಿರುವುದನ್ನು ನೋಡಿದರೆ ಕಾನೂನು ಇಷ್ಟೊಂದು ಬಲಹೀನವಾಯಿತೇ ? ಎಂಬ ಪ್ರಶ್ನೆ ಮೂಡುವಂತಾಗಿದೆ ಎಂದರು.
ಮತಾಂತರ ವಿರೋಧಿ ಕಾನೂನು ಜಾರಿಗೊಂಡು, ತಪ್ಪಿತಸ್ಥರಿಗೆ ಒಂದು ವರ್ಷ ಜಾಮೀನು ರಹಿತ ಶಿಕ್ಷೆ ನೀಡುವ ಕ್ರಮ ಆಗಬೇಕು. ಬಾಂಗ್ಲಾ ದೇಶ ಸೇರಿದಂತೆ, ಇತರೆಡೆ ಹಿಂದೂಗಳ ಪರಿಸ್ಥಿತಿ ಹದಗೆಟ್ಟಿದ್ದು, ಅಲ್ಲಿನ ದೇವಸ್ಥಾನಗಳ ರಕ್ಷಣೆ ಮತ್ತು ಜನರ ನೆಮ್ಮದಿಗೆ ಕೇಂದ್ರ ಸರ್ಕಾರ ಕೂಡಲೇ ಗಮನ ಹರಿಸಿ, ಪ್ರಧಾನಿ ಮೋದಿಯವರು ಹಿಂದೂಗಳ ರಕ್ಷಣೆಗೆ ಮುಂದಾಗಬೇಕಾದ ಅನಿವಾರ್ಯತೆ ಇದೆ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಕೆಲವರು ತಾಂಡಾದಲ್ಲಿ ಮತಾಂತರ ಹೆಚ್ಚಾಗಿದೆ ಎಂಬುದಾಗಿ ಗಮನಕ್ಕೆ ತಂದಾಗ ನೀವು ಒಂದು ದಿನಾಂಕ ನಿಗದಿಗೊಳಿಸಿ, ಕನಿಷ್ಠ 500 ಜನರು ಇರುವಂತೆ ಒಂದು ಜಾಗೃತಿ ಸಭೆ ನಡೆಸಿ ಮತಾಂತರ ಮತ್ತಿತರೆ ಗಂಭೀರ ಪರಿಸ್ಥಿತಿಯ ಅರಿವನ್ನು ಯುವ ಜನತೆಯಲ್ಲಿ ಮೂಡಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎಂ.ಆರ್. ಮಹೇಶ್, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಗುರುಪಾದಯ್ಯ ಹಿರೇಮಠ, ವಿನಯ್, ರಾಜು ಕಡಗಣ್ಣರ್, ಸಂತೋಷ್, ಪಂಡಿತ್ ಸಂತೋಷ್ ಇನ್ನಿತರರಿದ್ದರು.