ಮಲೇಬೆನ್ನೂರು, ಜು.18- ಎಸ್ಟಿ ಮೀಸಲಾತಿ ಹೆಚ್ಚಳ ವಿಚಾರವಾಗಿ ಈ ವಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಮಾಜದ ಸಚಿವರ, ಸಂಸದರ, ಶಾಸಕರ ಮತ್ತು ಮುಖಂಡರ ಸಮ್ಮುಖದಲ್ಲಿ ಭೇಟಿ ಮಾಡಿ ಚರ್ಚಿಸುವುದಾಗಿ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ತಿಳಿಸಿದ್ದಾರೆ.
ರಾಜನಹಳ್ಳಿಯ ವಾಲ್ಮೀಕಿ ಗುರುಪೀಠ ದಲ್ಲಿ ಇಂದು ಕರೆದಿದ್ದ ಸಮಾಜದ ಸಾಹಿತಿಗಳ, ಲೇಖಕರ, ಚಿಂತಕರ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಕಳೆದ ಫೆಬ್ರವರಿ ತಿಂಗಳಲ್ಲಿ ಜರುಗಿದ 3ನೇ ವರ್ಷದ ವಾಲ್ಮೀಕಿ ಜಾತ್ರೆಯ ಸಮಾವೇಶದಲ್ಲಿ ಭಾಗವಹಿಸಿದ್ದ ಸಿಎಂ ಯಡಿಯೂರಪ್ಪ ಅವರು, ಮಾರ್ಚ್ 10 ರೊಳಗಾಗಿ ಎಸ್ಟಿ ಮೀಸಲಾತಿ ಹೆಚ್ಚಳ ವಿಚಾರವಾಗಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಮಾತುಕೊಟ್ಟು ಹೋಗಿದ್ದರು. ಅಲ್ಲಿಂದ ಇಲ್ಲಿಯವರೆಗೆ ಈ ವಿಚಾರವಾಗಿ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬ ಬಗ್ಗೆ ಸಿಎಂ ಆಗಲೀ ಅಥವಾ ಸಚಿವರಾಗಲೀ ನಮ್ಮ ಜೊತೆ ಸೌಜನ್ಯಕ್ಕೂ ಮಾತನಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಶ್ರೀಗಳು, ನಾವೇ ಸಿಎಂ ಭೇಟಿ ಮಾಡಿ, ಸಂವಿಧಾನ ಬದ್ಧವಾದ ನಮ್ಮ ಬೇಡಿಕೆ ಈಡೇರಿಸುವಂತೆ ಮತ್ತೊಮ್ಮೆ ಮನವಿ ಮಾಡುತ್ತೇವೆ ಎಂದು ಹೇಳಿದರು.
ಹೈಜಾಕ್ : ವಾಲ್ಮೀಕಿ – ನಾಯಕ ಸಮಾ ಜದ ದಾರ್ಶನಿಕರು, ಹೋರಾಟಗಾರರನ್ನು ಬೇರೆ ಸಮುದಾಯದವರು ಹೈಜಾಕ್ ಮಾಡುತ್ತಿರುವ ವಿಚಾರವಾಗಿ ಚಿಂತಕರ ಜೊತೆ ಚರ್ಚಿಸಿದ ಶ್ರೀಗಳು, ಶೀಘ್ರ ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿರುವ ಸಮಾಜದ ಪ್ರೊಫೆಸರ್‌ಗಳ ಸಭೆ ನಡೆಸಿ, ದಾರ್ಶನಿಕರ, ಹೋರಾಟಗಾರರ ಬಗ್ಗೆ ಸಮಾಜಕ್ಕೆ ತಿಳಿಸುವ ಪುಸ್ತಕಗಳನ್ನು ರಚಿಸುವಂತೆ ಹೇಳುತ್ತೇನೆಂದು ಸ್ವಾಮೀಜಿ ಹೇಳಿದರು.
2022 ರ ಫೆಬ್ರವರಿಯಲ್ಲಿ ನಡೆಯಲಿರುವ 4ನೇ ವರ್ಷದ ವಾಲ್ಮೀಕಿ ಜಾತ್ರೆಯ ಅಂಗವಾಗಿ ಹೊರ ತರಲಿರುವ `ವಾಲ್ಮೀಕಿ ವಿಜಯ’ ಸ್ಮರಣ ಸಂಪುಟ -4ರ ಸಂಪಾದಕರನ್ನಾಗಿ ಚಿತ್ರದುರ್ಗದ ಕಲಾ ಕಾಲೇಜಿನ ಪ್ರೊ. ಕರಿಯಪ್ಪ ಮಾಳಗಿ ಅವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಸಮಾಜದ ಪ್ರಾಥ ಸ್ಮರಣೀಯರಾದ ಚಳ್ಳಕೆರೆ ತಿಪ್ಪೇಸ್ವಾಮಿ, ಎಲ್.ಜಿ.ಹಾವನೂರು, ಹರಲೀಪುರದ ಹನುಮಂತಪ್ಪ, ಎಂ.ಬಸಪ್ಪ, ಲಕ್ಷ್ಮಣ್‌ರಾವ್ ಜಾರಕಿಹೊಳಿ, ಎಲ್ಲೂರು ಶಿವಪ್ಪ, ದೇವೇಂದ್ರ ಮಾಧವ ಸೇರಿದಂತೆ ಇನ್ನೂ ಅನೇಕರನ್ನು ಕುರಿತು ಕಿರು ಪುಸ್ತಕಗಳ ನ್ನು ರಚಿಸುವ ಜವಾಬ್ದಾರಿಯನ್ನು ಡಾ. ಅಮ ರೇಶ್ ಯತಗಲ್ ಅವರಿಗೆ ನೀಡಲಾಯಿತು.
ಮಠದಲ್ಲಿ ಗ್ರಂಥಾಲಯ ಮತ್ತು ಸಂಶೋಧನಾ ಕೇಂದ್ರವನ್ನು ತೆರೆಯುವ ಬಗ್ಗೆ ನಿರ್ಧರಿಸಲಾಯಿತು.
ಮಠದ ಆಡಳಿತಾಧಿಕಾರಿ ಟಿ.ಓಬಳಪ್ಪ, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದ ಡಾ.ರಂಗರಾಜ ವನದುರ್ಗ, `ವಾಲ್ಮೀಕಿ ವಿಜಯ’ ಸ್ಮರಣ ಸಂಪುಟ -3ರ ಸಂಪಾದಕ ಡಾ. ಎ.ಬಿ.ರಾಮಚಂದ್ರಪ್ಪ, ಕರ್ನಾಟಕ ವಿಶ್ವವಿದ್ಯಾಲಯದ ಡಾ.ಎನ್.ಎಂ.ಸಾಲಿ, ಕುವೆಂಪು ವಿಶ್ವವಿದ್ಯಾನಿಲಯದ ಡಾ. ಎಂ.ಹೆಚ್.ಪ್ರಹ್ಲಾದಪ್ಪ, ಡಾ.ಶರಣು ಮುಷ್ಠಿಗೇರಿ, ಡಾ.ವಿಜಯಕುಮಾರ್, ಡಾ.ವಾಮದೇವ ತಳವಾರ, ಮರಿಕುಂಟೆ ತಿಪ್ಪೇಸ್ವಾಮಿ, ನಿವೃತ್ತ ಅಧಿಕಾರಿ ಹರ್ತಿಕೋಟೆ ವೀರೇಂದ್ರ ಸಿಂಹ, ಸಮಾಜದ ಮುಖಂಡ ಹೊದಿಗೆರೆ ರಮೇಶ್, ಪತ್ರಕರ್ತರಾದ ರಮೇಶ್ ಹಿರೇಜಂಬೂರು, ಜಿಗಳಿ ಪ್ರಕಾಶ್, ಮಠದ ಧರ್ಮದರ್ಶಿ ಕೆ.ಬಿ.ಮಂಜುನಾಥ್, ರಾಜನಹಳ್ಳಿ ಭೀಮಣ್ಣ, ಜಿಗಳಿ ಗ್ರಾ.ಪಂ. ಸದಸ್ಯ ಕೆ.ಜಿ.ಬಸವರಾಜ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.