ಎರಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ವರುಣ
ತುಂಬಿದ ಹಳ್ಳಗಳು, ಕೆರೆಗಳಲ್ಲಿ ನೀರು ಹೆಚ್ಚಳ, ರೈತರ ಹರ್ಷ
ದಾವಣಗೆರೆ, ಜು. 18- ಕಳೆದ ಎರಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆ, ಹೊಲಗಳು, ರಸ್ತೆಗಳು ಜಲಾವೃತ, ತುಂಬಿ ಹರಿದ ಹಳ್ಳ, ಕೆರೆಗಳು. ನಗರದಲ್ಲಿ ವ್ಯಾಪಾರಕ್ಕೆ ಪೆಟ್ಟು.
ಆರಂಭದಲ್ಲಿ ನಿರಾಶೆ ಮೂಡಿಸಿದ್ದ ಪುನರ್ವಸು ಮಳೆ, ಅಂತ್ಯದ ದಿನಗಳಲ್ಲಿ ಭರ್ಜರಿಯಾಗಿ ಸುರಿಯಿತು. ಶನಿವಾರ ಸಂಜೆಯಿಂದ ಆರಂಭವಾದ ಮಳೆ ಭಾನುವಾರ ಮುಂಜಾನೆ ಕೆಲ ಹೊತ್ತು ಮಾತ್ರ ಬಿಡುವು ನೀಡಿ, ಮತ್ತೆ ತಡರಾತ್ರಿವರೆಗೆ ಸುರಿದಿದೆ. ರೈತಾಪಿ ವರ್ಗ ಮಳೆಗೆ ಹರ್ಷ ವ್ಯಕ್ತಪಡಿಸಿದೆ.
ಇತ್ತ ದಾವಣಗೆರೆ ನಗರದಲ್ಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಮಳೆಯ ರಭಸ ಕಡಿಮೆ ಇದ್ದುದರಿಂದ ನಗರ ಪ್ರದೇಶದಲ್ಲಿ ಅಷ್ಟಾಗಿ ಆಸ್ತಿ-ಪಾಸ್ತಿಗೆ ನಷ್ಟವಾಗಿಲ್ಲ. ಆದರೆ ವ್ಯವಹಾರಕ್ಕೆ ಹೆಚ್ಚಿನ ಪೆಟ್ಟು ಬಿದ್ದಿದೆ.
ಕೊರೊನಾ ಸಂಕಷ್ಟದಿಂದ ಚೇತರಿಕೆ ಹಾದಿಯ ಲ್ಲಿದ್ದ ವ್ಯಾಪಾರ-ವಹಿವಾಟು ಶನಿವಾರ ಸಂಜೆಯಿಂದ ಭಾನುವಾರ ಇಡೀ ದಿನ ಮಂದಗತಿಯಲ್ಲಿಯೇ ನಡೆದಿದೆ.
ಬೀದಿ ಬದಿ ವ್ಯಾಪಾರಿಗಳು, ಬಟ್ಟೆ ಅಂಗಡಿಗಳು, ಜ್ಯೂವೆಲರಿ ಅಂಗಡಿಗಳು ಹೋಟೆಲ್ಗಳು ಗ್ರಾಹಕರಿಲ್ಲದೆ ಬಣಗುಡುತ್ತಿದ್ದವು. ಭಾನುವಾರವಾಗಿ ದ್ದರಿಂದ ಜನರು ಮನೆ ಬಿಟ್ಟು ಹೊರ ಬರಲು ಇಷ್ಟಪಡದ ಕಾರಣ, ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಸಂತೆಯ ದಿನವಾಗಿದ್ದರಿಂದ ಕೆ.ಆರ್. ಮಾರುಕಟ್ಟೆ, ಗಡಿಯಾರ ಕಂಬ, ಕಾಳಿಕಾದೇವಿ ರಸ್ತೆ, ಚೌಕಿಪೇಟೆ ಮುಂತಾದ ಕಡೆ ಮುಂಜಾನೆ ಜನರ ಓಡಾಟ ವಿರಳವಾಗಿತ್ತು. ಆದರೆ ಮಧ್ಯಾಹ್ನದ ನಂತರ ಮಾರುಕಟ್ಟೆಯಲ್ಲಿ ಗ್ರಾಹಕರ ಸಂಖ್ಯೆ ತುಸು ಮಟ್ಟಿಗೆ ಏರಿಕೆಯಾಗಿತ್ತು.
ತುಂಬಿದ ಮಾಗಾನಹಳ್ಳಿ ಹಳ್ಳ: ಮಾಗಾನಹಳ್ಳಿ ಹಳ್ಳ ತುಂಬಿ ಹರಿದ ಪರಿಣಾಮ ದಾವಣಗೆರೆ-ಕಂಚಿಕೆರೆ ರಸ್ತೆಯಲ್ಲಿ ನೀರು ನಿಂತು ಕೆಲ ಕಾಲ ಸಂಚಾರ ಅಸ್ತವ್ಯಸ್ಥವಾಗಿತ್ತು.
ಹರಿಹರ ತಾಲ್ಲೂಕಿನಲ್ಲಿ 8 ಮನೆಗಳಿಗೆ ಹಾನಿ
ಹರಿಹರ, ಜು.18- ಹರಿಹರ ತಾಲ್ಲೂಕಿನಲ್ಲಿ ಸತತವಾಗಿ ಒಂದು ವಾರದಿಂದ ಬೀಳುತ್ತಿರುವ ಮಳೆಯಿಂದಾಗಿ ಮಿಟ್ಟಲಕಟ್ಟೆ ಗ್ರಾಮದಲ್ಲಿ 1, ಕೊಂಡಜ್ಹಿ ಗ್ರಾಮದಲ್ಲಿ 2, ದೀಟೂರು ಗ್ರಾಮದಲ್ಲಿ 1 ಮತ್ತು ಹರಿಹರ ನಗರದಲ್ಲಿ 4 ಸೇರಿ ಒಟ್ಟು 8 ಮನೆಗಳಿಗೆ ಹಾನಿಯಾಗಿ ಸುಮಾರು 3.50 ಲಕ್ಷ ರೂಪಾಯಿ ಅಂದಾಜು ನಷ್ಟವಾಗಿದೆ ಎಂದು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ತಿಳಿಸಿದರು.
ಅವರು `ಜನತಾವಾಣಿ’ಯೊಂದಿಗೆ ದೂರವಾಣಿ ಮೂಲಕ ಮಾತನಾಡಿ, ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಸತತವಾಗಿ ಮಳೆ ಆಗುತ್ತಿದ್ದು, ಆದ್ದರಿಂದ ಎಲ್ಲಾ ಕೆಲಸ, ಕಾರ್ಯಗಳು ಅಸ್ತವ್ಯಸ್ತವಾಗಿವೆ. ತಾಲ್ಲೂಕಿನ ಕರಲಹಳ್ಳಿ ಕಾಲುವೆ ತುಂಬಿ ಹರಿಯುತ್ತಿರುವುದರಿಂದ ಕಾಲುವೆ ಪಕ್ಕದಲ್ಲಿ ವಾಸಿಸುವ 15 ಕುಟುಂಬದ 45 ಸದಸ್ಯರಿಗೆ ಕುರಬರಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ವಸತಿ ಸೌಕರ್ಯ ಕಲ್ಪಿಸಲಾಗಿದೆ ಮತ್ತು ಸಂಜೆಯಿಂದ ಅವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.
ಸಾರಥಿ ಮತ್ತು ಚಿಕ್ಕಬಿದರಿ ಗ್ರಾಮದ ಸೇತುವೆಯ ಮೇಲೆ ನೀರು ಹರಿಯುತ್ತಿರುವುದರಿಂದ ರಸ್ತೆ ಸಂಚಾರ ಕಡಿತ ಮಾಡಲಾಗಿದೆ. ಹರಿಹರ ಸೇರಿದಂತೆ ತಾಲ್ಲೂಕಿನ ನದಿ ದಂಡೆಯ ಮೇಲೆ ವಾಸಿಸುವ ವಿವಿಧ ಗ್ರಾಮಗಳ ಸಾರ್ವಜನಿಕರು ಸುರಕ್ಷಿತವಾಗಿ ಇರುವುದಕ್ಕೆ ಬೇಕಾದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ನಮ್ಮ ಭಾಗದಲ್ಲಿರುವ ನದಿಗಳಿಗೆ ಇನ್ನೂ ನೀರಿನ ಪ್ರಮಾಣ ಹೆಚ್ಚು ಆಗಬೇಕಾದರೆ ಡ್ಯಾಮ್ನಿಂದ ಹೆಚ್ಚುವರಿ ನೀರನ್ನು ಬಿಟ್ಟಾಗ ಇಲ್ಲಿನ ಗ್ರಾಮಗಳಿಗೆ ಹೆಚ್ಚು ತೊಂದರೆ ಆಗುವ ಸಂಭವ ಇರುತ್ತದೆ. ಇನ್ನೂ ಡ್ಯಾಮ್ನಿಂದ ನೀರು ಬಿಡದೆ ಇರುವುದರಿಂದ ಯಾವುದೇ ರೀತಿಯ ತೊಂದರೆಗಳು ಇಲ್ಲಿಯವರೆಗೆ ಆಗಿರುವುದಿಲ್ಲ. ಆದಾಗ್ಯೂ ಸಹ ನಾವು ಮುಂದೆ ಯಾವುದೇ ರೀತಿಯ ತೊಂದರೆ ಬರದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ.
ಕುರಬರಹಳ್ಳಿ ಕಾಲುವೆಯ ಪ್ರದೇಶಕ್ಕೆ ಮತ್ತು ವಿವಿಧ ಗ್ರಾಮಗಳಿಗೆ ಸಿಪಿಐ ಸತೀಶ್ ಕುಮಾರ್, ಪಿಎಸ್ಐಗಳಾದ ಡಿ. ರವಿಕುಮಾರ್, ಸೈಫುದ್ದೀನ್ ಸಾಬ್ ಮತ್ತು ಕಂದಾಯ ಇಲಾಖೆ ಸಮೀರ್ ಸೇರಿದಂತೆ ಗ್ರಾಮಸ್ಥರ ಜೊತೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದೆ ತೊಂದರೆ ಬರದಂತೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಹರಪನಹಳ್ಳಿ ತಾಲ್ಲೂಕಿನಲ್ಲಿ ಮಹಾಮಳೆಗೆ ಜನರು ತತ್ತರ
ಹರಪನಹಳ್ಳಿ, ಜು.18- ಇಂದು ಸುರಿದ ಮಹಾ ಮಳೆಗೆ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಬೆಳೆ, ಆಸ್ತಿ, ಮನೆ, ಜಾನುವಾರುಗಳು, ಕುರಿ, ಮೇಕೆ ಸಾವಿನ್ನಪ್ಪಿದ ಘಟನೆ ಜರುಗಿದೆ.
ತಾಲ್ಲೂಕಿನ ಅರಸಿಕೇರಿ ಹೋಬಳಿ ಫಣಿಯಾಪುರದ ಕೆಂಚಪ್ಪ ಎಂಬುವವರಿಗೆ ಸೇರಿದ 9 ಮೇಕೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಚಟ್ನಿಹಳ್ಳಿ, ಬೇವಿನಹಳ್ಳಿ, ಕುರೆಮಾಗಾನಹಳ್ಳಿ, ಕಲ್ಲ ಹಳ್ಳಿ ಕೆರೆಗಳು ತುಂಬಿ ಹರಿಯುತ್ತಿದ್ದು, ಕರಡಿ ದುರ್ಗದ ಕೆರೆ ಏರಿ ಒಡೆದಿದೆ. ರಾಮಘಟ್ಟ ಗ್ರಾಮ ದಿಂದ ಹೊಸಕೋಟೆ ಮೂಲಕ ಹಗರಿಹಳ್ಳಕ್ಕೆ ಹೋಗುವ ಸೇತುವೆ ಜಲಾವೃತವಾಗಿದೆ. ಉಚ್ಚಂಗಿ ದುರ್ಗ ಭಾಗದಲ್ಲಿ 279 ಮೀ. ಮಳೆಯಾಗಿದ್ದು ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಸುರಿದ ಪ್ರದೇಶವಾಗಿದೆ.
ಮಾದಿಹಳ್ಳಿ, ಬೂದಿಹಾಳ್ ಬಳಿ ಸುರಿದ ಮಳೆಯಿಂದ ಹಳ್ಳ ಭರ್ತಿ ಯಾಗಿದ್ದು, ಸೇತುವೆ ಮೇಲೆ ಎರಡು ಅಡಿ ನೀರು ಹರಿಯುತ್ತಿದೆ. ಮಾದಿಹಳ್ಳಿ ಗ್ರಾಮದ ಸಂತೋಷ್ ಬೈಕ್ನಲ್ಲಿ ಸೇತುವೆ ದಾಟುವಾಗ ಬೈಕ್ ಸಮೇತ ಹಳ್ಳದಲ್ಲಿ ಕೊಚ್ಚಿಹೋಗಿದ್ದರೂ ಮಧ್ಯ ಗಿಡ ಹಿಡಿದು ನಿಂತಿದ್ದ, ನಂತರ ಬೂದಿಹಾಳ್ ಗ್ರಾಮದ ಮಹಾಂತೇಶ್, ಮಲ್ಲಪ್ಪ, ಭರಮಪ್ಪ ಇವರು ಹಗ್ಗದ ಸಹಾಯದಿಂದ ಈಜುವ ಮೂಲಕ ರಕ್ಷಣೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಅರಸಿಕೇರಿ ಪೊಲೀಸ್ ಠಾಣೆಯ ಅಧಿಕಾರಿಗಳು, ಅಗ್ನಿಶಾಮಕ ದಳದವರು ಆಗಮಿಸಿ ಪರಿಶೀಲನೆ ನಡೆಸಿದರು.
ಪಟ್ಟಣದ ಕಂಚಿಕೇರಿ. ಬೆಂಡಿಗೇರಿ ರಸ್ತೆಯ ರೈಲ್ವೆ ಸೇತುವೆ ಕೆಳಗೆ ಅಪಾರ ಪ್ರಮಾಣದ ನೀರು ಶೇಖರಣೆಯಾಗಿ ಕೆಲ ಸಮಯ ವಾಹನ ಸವಾರರು ಪರದಾಡಿದರು. ಪಟ್ಟಣದ ವಾಲ್ಮೀಕಿ ನಗರ ಸೇರಿದಂತೆ ಇತರೆಡೆ ಮನೆಗಳು ಬಿದ್ದ ವರದಿಯಾಗಿದೆ
ಈ ವೇಳೆ ಅರಸಿಕೇರಿ ಪಿಎಸ್ಐ ನಾಗರತ್ನ, ಅಗ್ನಿಶಾಮಕ ದಳದ ಮುನಿಸ್ವಾಮಿ, ಲಿಂಗರಾಜ್, ನಾಗಪ್ಪ ರೈತಮುಖಂಡ ಫಣಿಯಾಪುರ ಲಿಂಗರಾಜ್ ಸೇರಿದಂತೆ ಇತರರು ಇದ್ದರು.
ಹೊನ್ನಾಳಿ ತಾಲ್ಲೂಕಿನಲ್ಲಿ ಸತತ ಮಳೆಗೆ 5 ಮನೆ ಹಾನಿ
ಹೊನ್ನಾಳಿ, ಜು.18- ಶನಿವಾರ, ಭಾನುವಾರ ಬೆಳಿಗ್ಗೆ ಸುರಿದ ಸತತ ಮಳೆಯಿಂದಾಗಿ ತಾಲ್ಲೂಕಿನಾದ್ಯಂತ ಮೂರು ಮನೆಗಳು ಹಾಗೂ ಪಟ್ಟಣದಲ್ಲಿ ಎರಡು ಮನೆಗಳು ಸೇರಿ ಒಟ್ಟು ಐದು ಮನೆಗಳು ಭಾಗಶಃ ಕುಸಿದಿವೆ.
ತಾಲ್ಲೂಕಿನ ಕೋಟೆಮಲ್ಲೂರು ಗ್ರಾಮದ ಬೀರಪ್ಪ ಎಂಬುವವರ ಮನೆಯ ಒಂದು ಪಾರ್ಶ್ವದ ಗೋಡೆ ಸಂಪೂರ್ಣ ಬಿದ್ದಿದೆ. ಬೇಲಿಮಲ್ಲೂರು ಗ್ರಾಮದ ಹನುಮಮ್ಮ ಎಂಬುವರ ಮನೆಯ ಮೇಲ್ಛಾವಣಿಯ ಹೆಂಚುಗಳು ಹಾರಿ ಹೋಗಿವೆ. ನೆಲಹೊನ್ನೆ ಗ್ರಾಮದ ಒಂದು ಮನೆ ಮತ್ತು ಹೊನ್ನಾಳಿ ಪಟ್ಟಣದ ತುಂಗಭದ್ರಾ ಬಡಾವಣೆಯ ಎರಡು ಮನೆಗಳು ಕುಸಿದಿವೆ.
ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಹಶೀಲ್ದಾರ್ ಬಸನಗೌಡ ಕೋಟೂರ ತಿಳಿಸಿದ್ದಾರೆ.
ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕುಗಳಾದ್ಯಂತ ಶನಿವಾರ ಒಟ್ಟು 236 ಮಿಮೀ ಮಳೆ ದಾಖಲಾಗಿದೆ. ವಿವಿಧೆಡೆ ಸುರಿದಿರುವ ಮಳೆ ವಿವರ ಇಂತಿದೆ :
ಸಾಸ್ವೆಹಳ್ಳಿ 45.4 ಮಿಮೀ, ಕುಂದೂರು 38.2 ಮಿಮೀ, ಹರಳಹಳ್ಳಿ 36.2 ಮಿಮೀ, ಹೊನ್ನಾಳಿ 34.4ಮಿಮೀ, ಗೋವಿನಕೋವಿ 33.8 ಮಿಮೀ, ಬೆಳಗುತ್ತಿ 24.4 ಮಿಮೀ, ಸವಳಂಗ 23.6 ಮಿಮೀ.
ಹೊನ್ನಾಳಿ ನದಿಯ ನೀರಿನ ಮಟ್ಟ ಶನಿವಾರ 6.97 ಮೀ. ಇತ್ತು. ಜುಲೈ 18ರ ಭಾನುವಾರ ಕೂಡ ಶನಿವಾರಕ್ಕಿಂತ ಹೆಚ್ಚು ಮಳೆ ಸುರಿದಿದೆ. ನದಿ ನೀರಿನ ಮಟ್ಟ ಜುಲೈ 19ರ ಸೋಮವಾರ ಇನ್ನಷ್ಟು ಹೆಚ್ಚಾಗಲಿದೆ.
ಜಗಳೂರು ತಾಲ್ಲೂಕಿನ ಕೆರೆ, ಗೋಕಟ್ಟೆಗಳಿಗೆ ನೀರು
ಜಗಳೂರು, ಜು.18- ತಾಲ್ಲೂಕಿನಾದ್ಯಂತ ನಿನ್ನೆ ರಾತ್ರಿ ಸುರಿದ ಮಳೆ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ತಾಲ್ಲೂಕಿನ ಬಹುತೇಕ ಕೆರೆ ಮತ್ತು ಗೋಕಟ್ಟೆಗಳಿಗೆ ನೀರು ಸಂಗ್ರಹವಾಗಿದೆ.
ತಾಲ್ಲೂಕಿನ ಪ್ರಮುಖ ಕೆರೆಗಳಾದ ತುಪ್ಪದ ಹಳ್ಳಿ ಕೆರೆ, ಜಗಳೂರು, ಗಡಿಮಾಕುಂಟೆ, ಸಂಗೇನ ಹಳ್ಳಿ ಕೆರೆ ಹಾಗು ತೊರೆಸಾಲು ಗ್ರಾಮದ ಹಳ್ಳಕೊಳ್ಳ ಗಳು, ಗೋಕಟ್ಟೆಗಳಲ್ಲಿ ನೀರು ಸಂಗ್ರಹವಾಗಿದೆ.
ತಾಲ್ಲೂಕಿನಾದ್ಯಂತ ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು ಹದವಾದ ಮಳೆಯಾಗಿ ರುವುದು ರೈತರಲ್ಲಿ ಸಂತಸ ಮೂಡಿಸಿದೆ. ಆದರೆ ಹೆಚ್ಚಿನ ಮಳೆಯಿಂದಾಗಿ ಮೆಕ್ಕೆಜೋಳ ಮತ್ತು ಈರುಳ್ಳಿ ಬೆಳೆಗಳಿಗೆ ಹಾನಿಯಾಗುವ ಸಂಭವವಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಜಗಳೂರು ಮಳೆ ಮಾಪನ ಕೇಂದ್ರ 54.03, ಬಿಳಿಚೋಡು 168.00, ಸಂಗೇನಹಳ್ಳಿ 91.00, ಚಿಕ್ಕಬಂತನಹಳ್ಳಿ 15.00, ಸೊಕ್ಕೆ ಮಳೆಮಾಪನ ಕೇಂದ್ರದಲ್ಲಿ 19.02 ಮಿಲಿ ಮೀಟರ್ ಮಳೆಯಾಗಿದೆ. ಅಂದರೆ ಸರಾಸರಿ ತಾಲ್ಲೂಕಿನಲ್ಲಿ 69.02 ಮಿಲಿ ಮೀಟರ್ ಮಳೆಯಾಗಿದೆ.
ಅಸಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 64.5, ಬಿದರಕೆರೆ ಗ್ರಾಮ ಪಂಚಾಯಿತಿ 64.5, ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 65.5, ಮುಸ್ಟೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 65.8 ಹಾಗೂ ದೊಣ್ಣೆಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 65.8 ಮಿಲಿ ಮೀಟರ್ ಮಳೆ ಪ್ರಮಾಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು-ಅಪಘಾತ: ರಾಷ್ಟ್ರೀಯ ಹೆದ್ದಾರಿ ಎನ್-ಹೆಚ್.4ನಲ್ಲಿ ಆನಗೋಡು ಬಳಿ ರಸ್ತೆಯ ಒಂದು ಭಾಗದಲ್ಲಿ ನೀರು ನಿಂತು ಬೆಂಗಳೂರಿನಿಂದ ದಾವಣಗೆರೆ ಮಾರ್ಗವಾಗಿ ಬರುವ ವಾಹನಗಳು ಅಪಘಾತಕ್ಕೊಳಗಾದ ಬಗ್ಗೆ ವರದಿಯಾಗಿದೆ.
ಹೆದ್ದಾರಿಯಲ್ಲಿ ಒಂದು ಅಡಿಗೂ ಹೆಚ್ಚು ನೀರು ನಿಂತ ಪರಿಣಾಮ ಎರಡು ಕಾರುಗಳು ಅಪಾಘತಕ್ಕೀಡಾಗಿವೆ. ಮಲ್ಲಾಪುರ ಶ್ರೀಧರ್ ಹಾಗೂ ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ ಅವರುಗಳು ಸ್ಥಳಕ್ಕೆ ಧಾವಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರನ್ನು ಸಂಪರ್ಕಿಸಿ, ಜೆ.ಸಿ.ಬಿ ಸಹಾಯದಿಂದ ನೀರು ಸರಾಗವಾಗಿ ಹರಿಯುವಂತೆ ಮಾಡಿಕೊಟ್ಟಿದ್ದಾರೆ.
ಹೆದ್ದಾರಿ ಪ್ರಾಧಿಕಾರದವರು ನೀರು ನಿಲ್ಲುವಂತಹ ಸ್ಥಳ ಗುರುತಿಸಿ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಇದೇ ವೇಳೆ ಶ್ರೀಕಾಂತ್ ಆಗ್ರಹಿಸಿದ್ದಾರೆ.
ಕಾಡಜ್ಜಿ–ಆಲೂರು ಹಳ್ಳ ಭರ್ತಿ: ಬಿಡದೆ ಸುರಿದ ಮಳೆಯಿಂದಾಗಿ ಕಾಡಜ್ಜಿ–ಆಲೂರು ಹಳ್ಳ ಭರ್ತಿಯಾಗಿದ್ದು, ಕಾಡಜ್ಜಿಯ ಕೆಪಿಟಿಸಿಎಲ್ ಉಪಕೇಂದ್ರದ ಕಟ್ಟಡದಲ್ಲಿ ನೀರು ತುಂಬಿ, ಅಲ್ಲಿದ್ದ ಇಬ್ಬರು ಸಿಬ್ಬಂದಿಯನ್ನು ಅಗ್ನಿಶಾಮಕ ದಳದ ಅಧಿಕಾರಿಗಳು ರಕ್ಷಿಸಿದ್ದಾರೆ.
ಕಾಡಜ್ಜಿಯಿಂದ 1.5 ಕಿ.ಮೀ ದೂರದಲ್ಲಿದ್ದ ಕೆಪಿಟಿಸಿಎಲ್ ಉಪಕೇಂದ್ರದ ಕಟ್ಟಡ ಮುಳುಗಡೆಯಾಗಿದೆ. ಈ ವೇಳೆ ಕಚೇರಿಯಲ್ಲಿ ಸಿಲುಕಿದ್ದ ಸ್ಟೇಷನ್ ಆಪರೇಟರ್ ಸಂತೋಷ್ಕುಮಾರ್ ಹಾಗೂ ಸಹಾಯಕ ಕೃಷ್ಣಪ್ರಸಾದ್ ಅವರನ್ನು ಅಗ್ನಿಶಾಮಕ ದಳದ ಅಧಿಕಾರಿಗಳು ನಿರಂತರ ಎರಡು ಗಂಟೆ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಕಾಡಜ್ಜಿ ಕೃಷಿ ತರಬೇತಿ ಕೇಂದ್ರದ ಆವರಣದಲ್ಲೂ ನೀರು ತುಂಬಿಕೊಂಡಿತ್ತು.
ಶನಿವಾರ 53.8 ಮಿ.ಮೀ. ಮಳೆ, 9.70 ಲಕ್ಷ ನಷ್ಟ: ಜಿಲ್ಲೆಯಲ್ಲಿ ಶನಿವಾರ 53.8 ಮಿ.ಮೀ. ಮಳೆಯಾಗಿದ್ದು, 9.70 ಲಕ್ಷ ರೂ. ನಷ್ಟು ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಚನ್ನಗಿರಿ ತಾಲ್ಲೂಕಿನಲ್ಲಿ 29.6 ಮಿ.ಮೀ., ದಾವಣಗೆರೆ 90.9, ಹರಿಹರ 45.57, ಹೊನ್ನಾಳಿ 33.7 ಹಾಗೂ ಜಗಳೂರು ತಾಲ್ಲೂಕಿನಲ್ಲಿ 69.5 ಮಿ.ಮೀ. ಮಳೆಯಾಗಿದೆ.
ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 8 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, 2.60 ಲಕ್ಷ ರೂ., ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 4 ಪಕ್ಕಾ ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 2 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ. ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 5 ಪಕ್ಕಾ ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 2 ಲಕ್ಷ ರೂ. , ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 4 ಪಕ್ಕಾ ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 1.60 ಲಕ್ಷ ರೂ. ಅಂದಾಜು ನಷ್ಟ ಹಾಗೂ ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 10 ಕಚ್ಚಾ ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 1.50 ಲಕ್ಷ ರೂ. ಅಂದಾಜು ನಷ್ಟ ಸೇರಿ ಜಿಲ್ಲೆಯಲ್ಲಿ ಒಟ್ಟಾರೆ 9.70 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ.