ಬೆಂಗಳೂರು, ಫೆ. 26 – ದಾವಣಗೆರೆ ಎಕ್ಸ್‌ಪ್ರೆಸ್ ಎಂದೇ ಹೆಸರಾಗಿದ್ದ ರಾಷ್ಟ್ರೀಯ ಕ್ರಿಕೆಟಿಗ ಹಾಗೂ ಕರ್ನಾಟಕ ತಂಡದ ಮಾಜಿ ನಾಯಕ ಆರ್. ವಿನಯ್ ಕುಮಾರ್ ಅಂತರರಾಷ್ಟ್ರೀಯ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ತಮ್ಮ ನಿವೃತ್ತಿ ಪತ್ರವನ್ನು ಟ್ವೀಟ್ ಮಾಡಿರುವ ಅವರು, ಕಳೆದ 25 ವರ್ಷಗಳಲ್ಲಿ ಅನೇಕ ನಿಲ್ದಾಣಗಳ ಮೂಲಕ ಹಾದು ಹೋಗಿರುವ ದಾವಣಗೆರೆ ಎಕ್ಸ್‌ಪ್ರೆಸ್ ಕೊನೆಗೂ ನಿವೃತ್ತಿ ಎಂಬ ನಿಲ್ದಾಣ ತಲುಪಿದೆ. ಮಿಶ್ರ ಭಾವದಿಂದ ಅಂತರರಾಷ್ಟ್ರೀಯ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದಿದ್ದಾರೆ.
ಇದು ಸುಲಭದ ನಿರ್ಧಾರವಾಗಿರಲಿಲ್ಲ. ಆದರೆ, ಪ್ರತಿಯೊಬ್ಬ ಕ್ರೀಡಾಪಟುವಿನ ಜೀವನದಂತೆ ನನ್ನ ಜೀವನದಲ್ಲೂ ಈ ದಿನ ಬಂದಿದೆ ಎಂದು ಅವರು ಭಾವುಕರಾಗಿ ಹೇಳಿದ್ದಾರೆ.
ತಾವು ದಾವಣಗೆರೆಯಿಂದ ಅಂತರರಾಷ್ಟ್ರೀಯ ಮಟ್ಟದವರೆಗೆ ಸಾಗಿ ಬಂದ ದಿನಗಳನ್ನೂ ನೆನಪಿಸಿಕೊಂಡಿರುವ ಅವರು, ದಾವಣಗೆರೆಯ ಯುನೈಟೆಡ್ ಕ್ರಿಕೆಟರ್ಸ್ ಕ್ಲಬ್,ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್ ಹಾಗೂ ನೆಪ್ಚೂನ್ ಕ್ರಿಕೆಟ್ ಕ್ಲಬ್‌ಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಮೊದಲ ತರಬೇತುದಾರರಾದ ಪ್ರಕಾಶ್ ಪವಾರ್ ಹಾಗೂ ಎಲ್.ಎ. ಪ್ರಕಾಶ್ ಅವರು ಬಾಲ್ಯದಲ್ಲಿ ಕ್ರಿಕೆಟ್ ಕರಗತಗೊಳಿಸಿದ್ದನ್ನು ಅವರು ವಿಶೇಷವಾಗಿ ನೆನಪಿಸಿಕೊಂಡಿದ್ದಾರೆ.
37 ವರ್ಷದ ವಿನಯ್ ಕುಮಾರ್, ಭಾರತೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದರು. ರಣಜಿ ಟ್ರೋಫಿಯನ್ನು ಸತತವಾಗಿ ಪಡೆಯಲು ರಾಜ್ಯ ತಂಡಕ್ಕೆ ನೆರವಾಗಿದ್ದರು ಅವರು ಒಂದು ಟೆಸ್ಟ್, 31 ಏಕದಿನ ಪಂದ್ಯ ಹಾಗೂ ಒಂಭತ್ತು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ. ಮೂರು ಸ್ವರೂಪದಲ್ಲಿ ಅವರು 49 ವಿಕೆಟ್ ಪಡೆದಿದ್ದಾರೆ.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರು 139 ಪಂದ್ಯಗಳಿಂದ 504 ವಿಕೆಟ್ ಪಡೆದಿದ್ದಾರೆ. ಸರಾಸರಿ 22.44ರಲ್ಲಿ ವಿಕೆಟ್ ಪಡೆಯುವ ಮೂಲಕ ಸಾಧನೆ ಮಾಡಿರುವ ಅವರು, ಇನ್ನಿಂಗ್ಸ್ ಒಂದರಲ್ಲಿ ಕೇವಲ 32 ರನ್‌ಗಳಿಗೆ ಎಂಟು ವಿಕೆಟ್ ಪಡೆದಿದ್ದಾರೆ.
ತಮ್ಮ ಅನುಭವವನ್ನು ಹಂಚಿಕೊಂಡಿರುವ ವಿನಯ್ ಕುಮಾರ್, ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ದೋನಿ ಹಾಗೂ ವಿರಾಟ್ ಕೊಹ್ಲಿ ಅಂಥವರ ಜೊತೆ ಆಡುವ ಅವಕಾಶ ತಮ್ಮ ವೃತ್ತಿ ಜೀವನದಲ್ಲಿ ದೊರೆತಿದೆ ಎಂದಿದ್ದಾರೆ.
ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಎಂ.ಎಸ್. ಧೋನಿ, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಸುರೇಶ್ ರೈನಾ ಹಾಗೂ ರೋಹಿತ್ ಶರ್ಮಾ ಸೇರಿದಂತೆ ಹಲವರ ನೇತೃತ್ವದಲ್ಲಿ ನಮ್ಮ ಕ್ರಿಕೆಟ್ ಅನುಭವ ಸಮೃದ್ಧವಾಗಿದೆ ಎಂದವರು ತಿಳಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಐಪಿಎಲ್ ತಂಡದಲ್ಲಿ ಸಚಿನ್ ತೆಂಡೂಲ್ಕರ್ ಅವರ ಮಾರ್ಗದರ್ಶನದಲ್ಲಿ ಆಡಿದ ಧನ್ಯತೆಯೂ ಇದೆ ಎಂದವರು ತಿಳಿಸಿದ್ದಾರೆ.
2004-05ರಲ್ಲಿ ಕರ್ನಾಟಕದ ರಣಜಿ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಅವರು, ತಂಡದ ಮುಂಚೂಣಿ ವೇಗದ ಬೌಲರ್ ಆಗಿ ರೂಪುಗೊಂಡಿದ್ದರು. 2007-08 ಹಾಗೂ 2009-10ರ ವರ್ಷ ಅವರಿಗೆ ಬೌಲರ್ ಆಗಿ ಸಾಧನೆಯ ಅವಧಿಯಾಗಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಐ.ಪಿ.ಎಲ್. ತಂಡದ ಪರವಾಗಿಯೂ ಅವರು ಆಡಿದ್ದರು.
2013-14 ಮತ್ತು 2014-15ರಲ್ಲಿ ಅವರ ನೇತೃತ್ವದಲ್ಲಿ ಕರ್ನಾಟಕ ಸತತ ಎರಡು ರಣಜಿ ಟ್ರೋಫಿಗಳನ್ನು ಪಡೆದಿತ್ತು. ಕೊಲ್ಕೊತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್ ಹಾಗೂ ಕೊಚ್ಚಿ ಟಸ್ಕರ್ಸ್ ಕೇರಳ ಐ.ಪಿ.ಎಲ್. ತಂಡಗಳಲ್ಲೂ ಅವರು ಆಡಿದ್ದರು.