ಕಲ್ಪನಾ ಶಕ್ತಿಯ ಪ್ರಶ್ನೆಗಳು ಸಂಶೋಧನೆಗೆ ದಾರಿ

ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಡಾ. ಎಸ್.ಎಂ. ಶಿವಪ್ರಸಾದ್‌

ದಾವಣಗೆರೆ, ಫೆ. 26 – ಕುತೂಹಲ ಹಾಗೂ ಕಲ್ಪನಾ ಶಕ್ತಿಗಳಿಂದಾಗಿ ಸಣ್ಣ ಪ್ರಶ್ನೆಗಳೂ ಸಹ ದೊಡ್ಡ ಸಂಶೋಧನೆಗಳಿಗೆ ದಾರಿ ಮಾಡಿಕೊಡುತ್ತವೆ ಎಂದು ಧಾರವಾಡದ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಡಾ. ಎಸ್.ಎಂ. ಶಿವಪ್ರಸಾದ್ ಹೇಳಿದ್ದಾರೆ.

ನಗರದ ಬಿಐಇಟಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.

ವಿಶ್ವದ ಮಹಾನ್ ವಿಜ್ಞಾನಿಗಳಲ್ಲಿ ಒಬ್ಬರಾಗಿರುವ ಅಲ್ಬರ್ಟ್ ಐನ್‌ಸ್ಟೀನ್ ಹೇಳಿರುವಂತೆ, ಜ್ಞಾನಕ್ಕಿಂತ ಕಲ್ಪನೆ ಮುಖ್ಯ. ಆದರೆ, ಪ್ರಸಕ್ತ ಶಿಕ್ಷಣ ಪದ್ಧತಿ ಕಲ್ಪನೆಗಿಂತ ಜ್ಞಾನಕ್ಕೆ ಒತ್ತು ನೀಡುತ್ತದೆ. ಕುತೂಹಲದ ಪ್ರಶ್ನೆ ಕೇಳದವರನ್ನೇ ಉತ್ತಮ ವಿದ್ಯಾರ್ಥಿ ಎಂದು ಪರಿಗಣಿಸುತ್ತಿದೆ ಎಂದು ವಿಷಾದಿಸಿದರು.

ವಿಜ್ಞಾನಿ ಅಲ್ಬರ್ಟ್‌ ಐನ್‌ಸ್ಟೀನ್ ಅವರಿಗೆ ತಾವು §ಬೆಳಕಿನ ಕಿರಣದ ಮೇಲೆ ಸವಾರಿ ಮಾಡಿ ದರೆ ಏನಾಗುತ್ತದೆ?’ ಎಂಬ ಪ್ರಶ್ನೆ ಬಂತು. ಅದು ಮಹತ್ವದ ಸಾಪೇಕ್ಷ ಸಿದ್ಧಾಂತಕ್ಕೆ ದಾರಿ ಮಾಡಿ ಕೊಟ್ಟಿತು. ವಿದ್ಯಾರ್ಥಿ ದಿಸೆಯಲ್ಲಿ ಸಾಮಾನ್ಯ ಜ್ಞಾನಿ ಎಂದು ಪರಿಗಣಿಸಲ್ಪಟ್ಟಿದ್ದ ಐನ್‌ಸ್ಟೀನ್, ತಮ್ಮ ಕಲ್ಪನಾ ಶಕ್ತಿಯಿಂದ ಮಹಾನ್ ವಿಜ್ಞಾನಿಯಾದರು ಎಂದು ಹೇಳಿದರು.

ಸಂಶೋಧನೆಗಾಗಿ ಸರಿಯಾದ ಪ್ರಶ್ನೆ ಕೇಳುವುದು ಮುಖ್ಯ. ಸರಿಯಾದ ಪ್ರಶ್ನೆ ಕೇಳಿದರೆ ನಿಸರ್ಗ ತನ್ನಲ್ಲಿರುವ ಗುಟ್ಟುಗಳ ಬಾಗಿಲು ತೆರೆಯುತ್ತದೆ ಎಂಬ ಸರ್ ಸಿ.ವಿ. ರಾಮನ್ ಮಾತುಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಶಿವಪ್ರಸಾದ್ ಹೇಳಿದರು.

ವಿಜ್ಞಾನಿ ಉಪಯುಕ್ತತೆಯನ್ನು ಗಮನಿಸದೇ ಮೋಜಿನ ಕಾರಣಕ್ಕಾಗಿ ಸಂಶೋಧನೆಯಲ್ಲಿ ತೊಡಗುತ್ತಾನೆ. ಓರ್ವ ಟೆಕಿ ಈ ಸಂಶೋಧನೆಗಳಲ್ಲಿ ಉಪಯುಕ್ತತೆ ಏನಿದೆ ಎಂಬುದನ್ನು ಹುಡುಕುತ್ತಾನೆ. ಓರ್ವ ವಿಜ್ಞಾನಿ ಉಪಯುಕ್ತತೆಯನ್ನು ಉಪಕರಣಗಳನ್ನಾಗಿ ಮಾಡುವುದು ಹೇಗೆ ಎಂಬುದನ್ನು ಕಂಡುಕೊಳ್ಳುತ್ತಾನೆ ಎಂದವರು ವಿವರಿಸಿದರು.

ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ವಿಜ್ಞಾನಿ ಎಂದೇ ಜನ ಸಾಮಾನ್ಯರು ಭಾವಿಸಿದ್ದಾರೆ. ಆದರೆ, ಅವರು ವಿಜ್ಞಾನಿಯಲ್ಲ ಅವರು ಇಂಜಿನಿಯರ್ ಎಂದ ಶಿವಪ್ರಸಾದ್, ಇಂಜಿನಿಯರ್‌ಗಳಾದವರೂ ವಿಜ್ಞಾನಿಗಳಾಗಬಾರದು ಎಂದೇನಿಲ್ಲ. ಅವರೂ ಸಹ ಸಂಶೋಧನೆ ಮಾಡಬಹುದು ಎಂದರು.

ಸಮಾರಂಭದಲ್ಲಿ ನೂತನ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ. ಹೆಚ್. ಹಾಲಪ್ಪ, ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ನಿವೃತ್ತ ಉಪನ್ಯಾಸಕ ಡಾ. ಪೂಜಾರ್, ಬಿಐಇಟಿ ಉಪನ್ಯಾಸಕರಾದ ಪ್ರೊ. ಬಿ.ಇ. ಬಸವರಾಜಪ್ಪ, ಪ್ರೊ. ವಿ.ಕೆ. ಗೀತ ಹಾಗೂ ಪ್ರೊ. ಕೆ.ಎಸ್. ಬಸವರಾಜಪ್ಪ ಉಪಸ್ಥಿತರಿದ್ದರು.

ನಯನ ಹಾಗೂ ಕ್ಷಮ ಪ್ರಾರ್ಥಿಸಿದರು. ಜಹಂಗೀರ್ ಸ್ವಾಗತಿಸಿದರೆ, ಡಿ. ಕರುಣ ಹಾಗೂ ಆರ್. ಸುಬ್ರಮಣ್ಯ ನಿರೂಪಿಸಿದರು. ಬಿ.ಎನ್. ಶ್ರೀಹರ್ಷ ವಂದನಾರ್ಪಣೆ ನೆರವೇರಿಸಿದರು.

error: Content is protected !!