ಜಿಲ್ಲಾಧಿಕಾರಿಗಳ ಎದುರು ಸಮಸ್ಯೆಗಳ ಅನಾವರಣ

ದಾವಣಗೆರೆ, ಫೆ. 25 – ಬಸ್ ಸಂಪರ್ಕ, ವಿಕಲಚೇತನ ಪಿಂಚಣಿ, ಜಮೀನಿನ ಹದ್ದುಬಸ್ತು, ಆಶ್ರಯ ಮನೆ, ಬೆಳೆ ಹಾನಿ ಪರಿಹಾರ, ಹೆರಿಗೆ ಭತ್ಯೆ, ಜಮೀನು ಗಡಿ ಸಮಸ್ಯೆ, ಸಾಲ ಸೌಲಭ್ಯ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಹೊತ್ತುಕೊಂಡು ಜನರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜನಸ್ಪಂದನದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಗುರುವಾರ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಬಹುತೇಕ ವೈಯಕ್ತಿಕ ಸಮಸ್ಯೆಗಳ ಕುರಿತೇ ಅರ್ಜಿ ಸಲ್ಲಿಸಿದರು. ಅಧಿಕಾರಿಗಳೂ ಸಹ ಸಮಸ್ಯೆ ಬಗೆಹರಿಸಲು ಮನವಿ ಸಲ್ಲಿಸಿದ್ದು ವಿಶೇಷವಾಗಿತ್ತು.

ಡಾಲರ್ಸ್ ಕಾಲೊನಿಗೂ ಬಿಡದ ಕೊಳಚೆ : ಶಾಮನೂರು ಗ್ರಾಮ ಡಾಲರ್ಸ್ ಕಾಲೋನಿಯಲ್ಲಿ ಕೊಳಚೆ ಸಮಸ್ಯೆ ಬಗ್ಗೆ ಎಸ್.ಎಂ.ಪ್ರಭುದೇವಯ್ಯ ಹಾಗೂ ಕೆ.ಜಿ.ಲಕ್ಷ್ಮಿಕಾಂತ ಮನವಿ ಸಲ್ಲಿಸಿದರು. 

ಅರ್ಜಿಯ ಪರಿಶೀಲಿಸಿದ ಬೀಳಗಿ, ಡಾಲರ್ಸ್ ಕಾಲೊನಿಯಲ್ಲೂ ಸಮಸ್ಯೆಗಳಿರುತ್ತವೆಯೇ? ಎಂದು ಅಚ್ಚರಿಯಿಂದ ಕೇಳಿ, ಸಮಸ್ಯೆ ಬಗೆಹರಿಸಲು ಸೂಚಿಸಿದರು.

ಪಾರ್ಕ್‌ನಲ್ಲಿ ಅಕ್ರಮ ದೇವಸ್ಥಾನ : ನಗರದ ಶಿವಕುಮಾರಸ್ವಾಮಿ ಬಡಾವಣೆಯಲ್ಲಿ ಅಕ್ರಮವಾಗಿ ಬಂಜಾರ ಸಮುದಾಯದ ದೇವಸ್ಥಾನ ನಿರ್ಮಾಣಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಕಳೆದ ಫೆಬ್ರವರಿ 16ರಂದು ಬಡಾವಣೆಯ ಹೊರಗಿನವರು ದೇವಸ್ಥಾನ ಕಟ್ಟುವ ಪ್ರಯತ್ನ ನಡೆಸಿದ್ದಾರೆ. ದೇವಸ್ಥಾನ ನಿರ್ಮಾಣದ ಮೂಲಕ ಸ್ಥಳೀಯ ವಾತಾವರಣ ಪ್ರಕ್ಷುಬದ್ಧವಾಗುತ್ತಿದೆ. 

ಈ ಬಗ್ಗೆ ಪೊಲೀಸರು ಹಾಗೂ ಪಾಲಿಕೆಗೆ ದೂರು ನೀಡಿದರೂ ಇನ್ನೂ ಕ್ರಮ ತೆಗೆದುಕೊಂಡಿಲ್ಲ. ಪಾರ್ಕ್ ಜಾಗವನ್ನು ಉಳಿಸಿಕೊಳ್ಳಬೇಕು

ಹಾಗೂ ಅಭಿವೃದ್ಧಿ ಪಡಿಸಬೇಕು ಎಂದು ಸ್ಥಳೀಯರಾದ ರಾಜೇಶ್ವರಿ, ವೀಣಾ, ಅನ್ನಪೂರ್ಣ ಮತ್ತಿತರರು ದೂರಿದರು. ಈ ಬಗ್ಗೆ ತಕ್ಷಣವೇ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದರು.

ಅಂಧ ಕಂದನಿಗೆ ನೆರವು : ನಗರದ ರಾಜೀವ್ ಗಾಂಧಿ ಬಡಾವಣೆಯ ವೆಂಕಟೇಶ ನಾಯ್ಕ ಎಂಬುವವರು ತಮ್ಮ ಒಂದು ವರ್ಷದ ಮಗುವಿಗೆ ದೃಷ್ಟಿದೋಶವಿದ್ದು, ನೆರವು ನೀಡುವಂತೆ ಕೋರಿದರು. 

ಮಗುವಿನ ತಾಯಿ ಶ್ರವಣ ಹಾಗೂ ವಾಕ್ ವಿಕಲಚೇತನರಾಗಿದ್ದಾರೆ. ನಾನು ದೂಡುವ ಗಾಡಿಯಲ್ಲಿ ವ್ಯಾಪಾರ ಮಾಡುತ್ತೇನೆ. ಆಪರೇಷನ್ ಮಾಡಿದರೆ ಮಗುವಿಗೆ ಕಣ್ಣು ಬರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ನಾಯ್ಕ ತಿಳಿಸಿದರು.

ಮಗುವಿಗೆ ಹುಟ್ಟಿನಿಂದಲೂ ಕಣ್ಣು ಕಾಣುತ್ತಿರಲಿಲ್ಲ. ಆದರೆ, ಅದು ಇತ್ತೀಚೆಗಷ್ಟೇ ತಮ್ಮ ಗಮನಕ್ಕೆ ಬಂತು. ಈ ಬಗ್ಗೆ ವೈದ್ಯರ ಬಳಿ ತೆರಳಿದಾಗ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದಾಗಿ ತಿಳಿಸಿದ್ದಾರೆ. ತಮ್ಮ ಬಳಿ ಬಿಪಿಎಲ್ ಕಾರ್ಡ್, ಪಡಿತರ ಚೀಟಿ ಸಹ ಇಲ್ಲ. ಮಗುವಿನ ಚಿಕಿತ್ಸೆಗಾಗಿ ನೆರವು ನೀಡಬೇಕೆಂದು ನಾಯ್ಕ ಕೋರಿದರು.

ಮೊದಲು ಬಿ.ಪಿ.ಎಲ್. ಕಾರ್ಡ್ ಮಾಡಿಸಿ, ಅದರ ಆಧಾರದ ಮೇಲೆ ಶಸ್ತ್ರಚಿಕಿತ್ಸೆಗೆ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಬೀಳಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಾಜಿ ದೇವದಾಸಿಯರ ಮನವಿ : ಮಾಜಿ ದೇವದಾಸಿಯರ ಪಟ್ಟಿಯಲ್ಲಿ ನಮ್ಮ ಹೆಸರುಗಳು ಬಿಟ್ಟು ಹೋಗಿದ್ದು, ಮರು ಸಮೀಕ್ಷೆಯ ಮೂಲಕ ಹೆಸರು ಸೇರ್ಪಡೆ ಮಾಡುವಂತೆ ಹಲವಾರು ದೇವದಾಸಿಯರು ಮನವಿ ಸಲ್ಲಿಸಿದರು. ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿಜಯ ಕುಮಾರ್ ಅವರಿಗೆ ಬೀಳಗಿ ಸೂಚಿಸಿದರು. 

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ವಿಜಯ್ ಮಹಾಂತೇಶ್ ದಾನಮ್ಮನವರ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪ ವಿಭಾಗಧಿಕಾರಿ ಮಮತ ಹೊಸಗೌಡರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇ ಶಕಿ ನಜ್ಮಾ, ದೂಡ ಆಯುಕ್ತ ಬಿ.ಟಿ.ಕುಮಾ ರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!