ದಾವಣಗೆರೆ, ಫೆ.25- ಪ್ರಜಾಪ್ರಭುತ್ವದ ತತ್ವದ ಮೇಲೆ ಬಹುಮತ ಪಡೆದ ಸರ್ಕಾರವನ್ನು ಕೆಡುವುದರ ಮೂಲಕ ದೇಶದಲ್ಲಿ ಬಿಜೆಪಿ ಅಧಿಕಾರ ಹಿಡಿಯುತ್ತಿದ್ದು, ಪ್ರಜಾಪ್ರಭುತ್ವದ ಕಗ್ಗೋಲೆ ಮಾಡುತ್ತಿದೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.
ಅವರು, ಇಂದು ನಗರದ ಎಂಬಿಎ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೊದಲಿಗೆ ಗೋವಾ, ಮಧ್ಯ ಪ್ರದೇಶ, ಮಣಿಪುರ, ಅರುಣಾಚಲ ಪ್ರದೇಶ, ಕರ್ನಾಟಕ ಈಗ ಪಾಂಡಿಚರಿಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕೆಡವಿದ್ದಾರೆ. ಇದಕ್ಕೆ ಐಟಿ, ಇಡಿ, ಸಿಬಿಐ ಬಳಕೆ ಆಗುತ್ತಿದೆ. ಈ ಸಂಸ್ಥೆಗಳ ಮೂಲಕ ಕಾಂಗ್ರೆಸ್ ಜನಪ್ರತಿನಿಧಿಗಳಿಗೆ ಬೆದರಿಕೆ ಹಾಕುವ ಮೂಲಕ ರಾಜ್ಯಗಳಲ್ಲಿ ಅಧಿಕಾರವನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಹೀಗೆ ಸಂವಿಧಾನ ಬಾಹಿರವಾಗಿ ಅಧಿಕಾರ ಹಿಡಿಯುತ್ತಿರುವುದು ಪ್ರಜಾಪ್ರಭುತ್ವಕ್ಕೆ ಒಳಿತಲ್ಲ ಎಂದು ಹೇಳಿದರು.
ದೇಶದಲ್ಲಿನ ಮಹಿಳೆ ಮತ್ತು ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೋಸ ಮಾಡಿದ್ದಾರೆ. ದೇಶದ ಮಹಿಳೆಯರಿಗೆ ಸಿಲೆಂಡರ್ ಉಚಿತ ವಾಗಿ ಕೊಟ್ಟರು.
ನನ್ನ ಸೋಲಿಸಲು ಟಾರ್ಗೇಟ್ ಮಾಡಿದ್ದ ಮೋದಿ
ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಆರ್ಎಸ್ಎಸ್, ಬಿಜೆಪಿ ಮತ್ತು ದೇಶದ ಪ್ರಧಾನಿ ನನ್ನನ್ನು ಸೋಲಿಸಬೇಕೆಂದು ಟಾರ್ಗೇಟ್ ಮಾಡಿದ್ದರು. ಆದ್ದರಿಂದ 12 ಬಾರಿ ಚುನಾವಣೆಯಲ್ಲಿ ಜಯ ಸಾಧಿಸಿದ್ದ ನಾನು ಕೊನೆಯ ಚುನಾವಣೆಯಲ್ಲಿ ಸೋಲುಣ್ಣುವಂತಾಯಿತು ಎಂದು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
48 ವರ್ಷಗಳ ಕಾಲ ಲೋಕಸಭೆಯನ್ನು ಪ್ರತಿನಿಧಿಸುತ್ತಿದ್ದೆ. ಈ ಬಾರಿ ಗೆಲವು ಸಾಧಿಸಿದ್ದರೆ 50 ವರ್ಷ ಪೂರೈಸುತ್ತಿದ್ದೆ. ಆದರೆ, ಮೋದಿ ಮತ್ತಿತರರು ಇದನ್ನು ತಪ್ಪಿಸಿದರು. ನನ್ನನ್ನು ಸೋಲಿಸಿದ ಜನರೀಗ ಪಶ್ಚಾತ್ತಾಪ ಪಡುತ್ತಿದ್ದಾರೆ.
ರಾಜ್ಯಸಭಾ ವಿರೋಧ ಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿರುವುದಕ್ಕೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಹಾಗೆಯೇ ಪ್ರಧಾನಿ ನರೇಂದ್ರ ಮೋದಿ, ಕೇಂದ್ರದ ಬಹಳಷ್ಟು ಮಂತ್ರಿಗಳು, ಸದಸ್ಯರೂ ಸಹ ನನ್ನನ್ನು ಅಭಿನಂದಿಸಿದ್ದಾರೆ. ಜನರ ಮತ್ತು ಪಕ್ಷದ ನಿರೀಕ್ಷೆಯಂತೆ ಜನಸಾಮಾನ್ಯರ ಸಮಸ್ಯೆಗಳ ನೀಗಿಸಲು ಪ್ರಯತ್ನಿಸುವೆ ಎಂದರು.
ನಂತರ ಸಿಲೆಂಡೆರ್ ಬೆಲೆ ದಿನೇ ದಿನೇ ಏರಿಕೆ ಮಾಡುವ ಮೂಲಕ ಇದೇ ಮಹಿಳೆಯಿಂದ ದುಪ್ಪಟ್ಟು ಬೆಲೆ ಪಡೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಅದೇ ರೀತಿ ಡಿಸೇಲ್ ಬೆಲೆ ಹೆಚ್ಚು ಮಾಡುತ್ತಿದ್ದು, ಬಹಳಷ್ಟು ರೈತರು ತಮ್ಮ ಪಂಪ್ಸೆಟ್, ಟ್ರ್ಯಾಕ್ಟರ್ಗಳಿಗೆ ಬಳಕೆ ಮಾಡುತ್ತಾರೆ. ಹೀಗೆ ಮಾಡುವ ಮೂಲಕ ರೈತರಿಂದ ದುಪ್ಪಟ್ಟು ಬೆಲೆಯನ್ನು ಪಡೆಯುತ್ತಿದ್ದಾರೆ ಮತ್ತೆ ರೈತರ ಪರವಾಗಿದ್ದೇವೆ ಎಂದು ಹೇಳಿ ಬೆಲೆ ಏರಿಕೆ ಮಾಡುತ್ತಿದ್ದಾರೆ. ಮೋದಿ ಹೇಳಿದಂತೆ ಚಪ್ಪಾಳೆ, ತಟ್ಟೆ ಬಡಿದವರು ಬೆಲೆ ಏರಿಕೆ ವಿರುದ್ಧ ಧ್ವನಿ ಎತ್ತದೇ ಎಲ್ಲಿಗೆ ಹೋದರು ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪೆಟ್ರೋಲ್ ಬೆಲೆ 75 ರೂ., ಡೀಸೆಲ್ನ ಬೆಲೆ 65 ರೂ. ಮೇಲೆ ಹೋಗಿರಲಿಲ್ಲ. ಆದರೀಗ ಬಿಜೆಪಿ ಸರ್ಕಾರ ಪೆಟ್ರೋಲ್ 100 ರೂ., ಡಿಸೇಲ್ 95 ರೂ. ಹೆಚ್ಚಿನ ಬೆಲೆ ಏರಿಕೆ ಮಾಡಿದ್ದು, ಬೆಲೆ ಏರಿಕೆಯಿಂದಲೇ 21 ಲಕ್ಷ ಕೋಟಿ ರೂ. ಮೋದಿ ಸರ್ಕಾರ ಸಂಪಾದನೆ ಮಾಡಿದೆ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ವಿಧಾನ ಪರಿಷತ್ ಸದಸ್ಯರಾದ ಕೆ.ಸಿ. ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಮೋಹನ್ ಕುಮಾರ್ ಕೊಂಡಜ್ಜಿ, ಮಾಜಿ ಸಚಿವ ಮಲ್ಲಿಕಾಜುನ ನಾಗಪ್ಪ, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಮುಖಂಡರಾದ ದಿನೇಶ್ ಕೆ. ಶೆಟ್ಟಿ, ಎಸ್. ಮಲ್ಲಿಕಾರ್ಜುನ ಅಯೂಬ್ ಪೈಲ್ವಾನ್ ಸೇರಿದಂತೆ ಇತರರು ಇದ್ದರು.