ಮೈದುಂಬಿದ ಹಳ್ಳ-ಕೊಳ್ಳ: ಭದ್ರಾ ಹರಿವು ಹೆಚ್ಚಳ

ಶಿವಮೊಗ್ಗ, ಜು.16- ಬಹುತೇಕ ಕಡೆಗಳಲ್ಲಿ ಜಿಟಿ ಜಿಟಿ ಮಳೆಯೊಂದಿಗೆ ಆರಂಭವಾದ ಪುನರ್ವಸು ಮಳೆ ಮಲೆನಾಡಿನಲ್ಲಿ ಉತ್ತಮವಾಗಿ ಸುರಿದ ಪರಿಣಾಮ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಮಲೆನಾಡಿನಲ್ಲಿ ಎಲ್ಲಾ ನದಿಗಳು ಮೈದುಂಬಿ ಹರಿಯುತ್ತಿದ್ದು, ಜಲಾಶಯಗಳಿಗೆ ಬರುವ ಒಳ ಹರಿವು ಕೂಡಾ ಹೆಚ್ಚಳವಾಗಿದೆ. 

ಭದ್ರಾ ಜಲಾಶಯಕ್ಕೆ ಭಾನುವಾರ 2251 ಕ್ಯೂಸೆಕ್ಸ್ ಇದ್ದ ಒಳ ಹರಿವು ಸೋಮವಾರ 3339 ಕ್ಯೂಸೆಕ್ಸ್, ಮಂಗಳವಾರ 5029 ಕ್ಯೂಸೆಕ್ಸ್, ಬುಧವಾರ 7646 ಕ್ಯೂಸೆಕ್ಸ್, ಗುರುವಾರ 18, 214 ಕ್ಯೂಸೆಕ್ಸ್, ಶುಕ್ರವಾರ 23217 ಕ್ಯೂಸೆಕ್ಸ್‌ಗೆ ಏರಿಕೆ ಕಂಡಿದೆ. ಭಾನುವಾರ 156 ಅಡಿ ಇದ್ದ ಜಲಾಶಯದ ನೀರಿನ ಮಟ್ಟ ಶುಕ್ರವಾರ ಸಂಜೆ ವೇಳೆಗೆ 162 ಅಡಿ ತಲುಪಿದೆ. 6 ದಿನಗಳಲ್ಲಿ ಜಲಾಶಯಕ್ಕೆ 6 ಅಡಿ ನೀರು ಹರಿದು ಬಂದಿರುವುದು ಅಚ್ಚುಕಟ್ಟಿನ ರೈತರಿಗೆ ಹರ್ಷ ತಂದಿದೆ. 

ಗಾಜನೂರಿನ ತುಂಗಾ ಜಲಾನಯನ ಪ್ರದೇಶದಲ್ಲಿ ಗುರುವಾರದವರೆಗೆ ಭಾರೀ ಪ್ರಮಾಣದಲ್ಲಿ ಸುರಿದ ಮಳೆ ಶುಕ್ರವಾರ ಇಳಿಮುಖವಾಗಿದ್ದು, ಗುರುವಾರ 42,000 ಕ್ಯೂಸೆಕ್ಸ್‌ ಇದ್ದ ಒಳ ಹರಿವು ಶುಕ್ರವಾರ ಬೆಳಿಗ್ಗೆ 39 ಸಾವಿರ ಕ್ಯೂಸೆಕ್ಸ್‌ಗೆ ಇಳಿಕೆ ಕಂಡಿದೆ.

ತುಂಗಾ ಜಲಾಶಯಕ್ಕೆ ಹರಿದು ಬರುತ್ತಿರುವ ಅಷ್ಟು ನೀರನ್ನು ನದಿಗೆ ಬಿಟ್ಟಿರುವುದರಿಂದ ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಹೊನ್ನಾಳಿ, ಹರಿಹರ ಮತ್ತು ಹರಪನಹಳ್ಳಿ ತಾಲ್ಲೂಕುಗಳ ನದಿ ಪಾತ್ರದ ಜನರು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. 

ಲಿಂಗನಮಕ್ಕಿ ಜಲಾಶಯಕ್ಕೆ ಸಾಕಷ್ಟು ನೀರು ಹರಿದು ಬರುತ್ತಿದ್ದು, ವಿಶ್ವವಿಖ್ಯಾತ ಜೋಗ ಜಲಪಾತ ಮೈದುಂಬಿಕೊಂಡು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕೊಡಗಿನಲ್ಲೂ ಮಳೆ ಸುರಿಯುತ್ತಿದ್ದು, ಕುಶಾಲನಗರ ಸಮೀಪದ ಹಾರಂಗಿ ಜಲಾಶಯ ಬಹುತೇಕ ಭರ್ತಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಗುರುವಾರ ಸಂಜೆಯಿಂದಲೇ ಕ್ರಸ್ಟ್‌ ಗೇಟ್‌ಗಳ ಮೂಲಕ ನೀರನ್ನು ನದಿಗೆ ಬಿಡಲಾಗುತ್ತಿದೆ.

ಕಬಿನಿ, ಕೆಆರ್‌ಎಸ್‌, ಹೇಮಾವತಿ ಜಲಾಶಯಗಳಿಗೂ ಒಳಹರಿವು ಹೆಚ್ಚಳವಾಗಿದೆ. ಇತ್ತ ಘಟಪ್ರಭಾ, ಮಲಪ್ರಭಾ ಮತ್ತು ಕೃಷ್ಣಾ ನದಿಗಳಲ್ಲೂ ನೀರಿನ ಹರಿವು ಏರಿಕೆಯಾಗುತ್ತಿದೆ.

error: Content is protected !!