ವಾರಕ್ಕೊಮ್ಮೆ ಒಣ ಕಸ, ಉಳಿದ ದಿನ ಹಸಿ ಕಸ ಸಂಗ್ರಹ

ದಾವಣಗೆರೆ, ಏ.25- ನಗರದಲ್ಲಿ ಪ್ರತಿ ದಿನ ಕಸ ಸಂಗ್ರಹಿಸುವ ಕ್ರಮದಲ್ಲಿ ಮಹಾನಗರ ಪಾಲಿಕೆ ಮಾರ್ಪಾಡು ಮಾಡಿದೆ ಎನ್ನಲಾಗಿದ್ದು, ವಾರಕ್ಕೊಮ್ಮೆ ಒಣ ಕಸ ಸಂಗ್ರಹಣೆ ಹಾಗೂ ಉಳಿದ ದಿನ ಹಸಿ ಕಸ ಸಂಗ್ರಹಣೆಗೆ ಪಾಲಿಕೆ ಮುಂದಾಗಿದೆ. ಈ ಕ್ರಮಕ್ಕೆ ಸಾರ್ವಜನಿಕರಿಂದ ವಿರೋಧವೂ ವ್ಯಕ್ತವಾಗುತ್ತಿದೆ.

ಒಣ ಕಸವನ್ನು ಗೊಬ್ಬರ ಮಾಡುವ  ಪಾಲಿಕೆಯ ಉದ್ದೇಶ ಹಾಗೂ ಕ್ರಮ ಸ್ವಾಗತಾರ್ಹ. ಆದರೆ ಒಂದು ವಾರಗಳ ಕಾಲ ಒಣ ಕಸ  ಸಂಗ್ರಹಿಸಿಟ್ಟುಕೊಳ್ಳಲು ಕಷ್ಟವಾಗುತ್ತದೆ.  ಬೆಂಗಳೂರು ಅಥವಾ ಹುಬ್ಬಳ್ಳಿ ಮಾದರಿಯಲ್ಲಿ ದಿನ ಬಿಟ್ಟು ದಿನ ಒಂದೊಂದು ರೀತಿಯ ಕಸ ಸಂಗ್ರಹ ಅಥವಾ ಒಂದೇ ದಿನ ಎರಡೂ ಬಗೆಯ ಕಸ ಸಂಗ್ರಹಿಸುವುದು ಉತ್ತಮ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಪ್ರಸ್ತುತ ಕೆಲ ಬಡಾವಣೆಗಳಲ್ಲಿ ಮೂರು ಚಕ್ರದ ವಾಹನಗಳ ಮೂಲಕ ಕಸ ಸಂಗ್ರಹಣೆ ನಡೆಯುತ್ತಿದೆ. ಮತ್ತೆ ಕೆಲ ಬಡಾವಣೆಗಳಲ್ಲಿ ಕಸ ಸಂಗ್ರಹಣೆಯನ್ನು ಖಾಸಗಿ ವ್ಯಕ್ತಿಗಳಿಗೆ ವಹಿಸಲಾಗಿದೆ. 

ಕಸ ಸಂಗ್ರಹಿಸುವ ಖಾಸಗಿ ವ್ಯಕ್ತಿಗಳು  ವಾರದಲ್ಲಿ ಒಂದು ದಿನ `ಅಧಿಕೃತ’ ರಜೆ ಮಾಡುತ್ತಿದ್ದಾರೆ. ಕೆಲ ಬಡಾವಣೆಗಳಲ್ಲಿ ಈ ವಾರದ ರಜೆಯ ಜೊತೆ, ಮಧ್ಯದ ದಿನಗಳಲ್ಲೊಮ್ಮೆ ಕಸ ಸಂಗ್ರಹಕ್ಕೆ ಬರುವುದಿಲ್ಲ. ಕೇಳಿದರೆ ಏನಾದರೊಂದು ನೆಪ ಹೇಳುತ್ತಿದ್ದಾರೆ ಎನ್ನುವ ಆರೋಪವೂ ಇದೆ.

ಕೆಲ ಕಡೆ ಪುಕ್ಕಟೆಯಾಗಿ ಕಸ ಸಂಗ್ರಹಿಸಿದರೆ ಮತ್ತೆ ಕೆಲವೆಡೆ  ಪ್ರತಿ ಮನೆಯಿಂದ ತಿಂಗಳಿಗೆ 30 ರೂ. ವಸೂಲಿ ಮಾಡಲಾಗುತ್ತಿದೆ.   ಆದರೆ ಮಹಾನಗರ ಪಾಲಿಕೆ ಮಾತ್ರ ಕಸ ಸಂಗ್ರಹಿಸುವವರಿಗೆ ಇಂತಿಷ್ಟು ಹಣ ನೀಡಬೇಕೆಂದು ಹೇಳಿಲ್ಲ. ಇದರಿಂದ ಸಾರ್ವಜನಿಕರು ಕಸ ಸಂಗ್ರಹಿಸುವವರಿಗೆ ಹಣ ನೀಡಬೇಕೋ, ಬೇಡವೋ ಎಂಬ ಗೊಂದಲದಲ್ಲಿದ್ದಾರೆ. ಈ ಬಗ್ಗೆ ಪಾಲಿಕೆ ಸ್ಪಷ್ಟಪಡಿಸಬೇಕಿದೆ.

ಇನ್ನು ಪಾಲಿಕೆಯ ಕಸ ಸಂಗ್ರಹಣೆ ವಿಧಾನದ ಲ್ಲಿನ ದಿಢೀರ್ ಬದಲಾವಣೆ ಸಾರ್ವಜನಿಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದುವರೆಗೆ ಪಾಲಿಕೆ ಮೇಯರ್ ಆಗಲೀ ಅಥವಾ ಆಯುಕ್ತರಾಗಲಿ ಹಸಿ ಹಾಗೂ ಒಣ ಕಸ ಪ್ರತ್ಯೇಕಿಸಿ ನೀಡುವ ಬಗ್ಗೆ ಸಾರ್ವಜನಿಕರಿಗೆ ತಿಳಿಸಿಲ್ಲ ಎನ್ನುವುದೂ ಸಹ ಗೊಂದಲ ಹೆಚ್ಚಾಗಲು ಕಾರಣವಾಗಿದೆ. 

ಹಸಿ ಕಸ ಹಾಗೂ ಒಣ ಕಸ ಬೇರ್ಪಡಿಸಿ ನೀಡಬೇಕೆಂದು ಕಸದ ವಾಹನಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಅದೇ ವಾಹನಗಳು ಎರಡೂ ಬಗೆಯ ಕಸವನ್ನೂ ಸಂಗ್ರಹಿಸುತ್ತಿವೆ. ಕೆಲ ಬಡಾವಣೆಗಳಲ್ಲಿ ಮಾತ್ರ ಏಕೆ ಈ ಪದ್ಧತಿ? ಎಂಬ ಪ್ರಶ್ನೆ ಹಲವರದ್ದು.

ಆದರೆ ಇದೀಗ ಕಸ ಸಂಗ್ರಹಿಸುವವರು ಕಳೆದ ಮೂರ್ನಾಲ್ಕು ದಿನಗಳಿಂದ ಸಾರ್ವಜನಿಕರಿಗೆ ಸರಿಯಾಗಿ ಮನವರಿಕೆ ಮಾಡದೇ, ಮನೆ ಮುಂದೆ ಇಟ್ಟ ಕಸದ ಬುಟ್ಟಿಯಲ್ಲಿ ತಮಗೆ ಹಸಿ ಕಸ ಎಂದು ತಿಳಿದದ್ದು ಮಾತ್ರ ಆಯ್ದುಕೊಂಡು ಕಸದ ಬುಟ್ಟಿಯನ್ನು ಹಾಗೆಯೇ ಬಿಟ್ಟು ತೆರಳುತ್ತಿದ್ದಾರೆ. ಕಾರಣ ಕೇಳಿದರೆ ವಾಸ್ತವ ವಿವರಿಸದೆ ತಮ್ಮಿಷ್ಟ ಬಂದಂತೆ ವರ್ತಿಸುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಸದ್ಯ ನಗರದ ಜನತೆ ಕಸವನ್ನು ಮನೆ ಮುಂದಿಟ್ಟುಕೊಂಡು ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಒದಗಿದೆ.

ಅಲ್ಲದೆ ವಾರಗಳ ಕಾಲ ಕಸ ಇಟ್ಟುಕೊಳ್ಳಲಾಗದವರು ಸಮೀಪದ ಖಾಲಿ ನಿವೇಶನದಲ್ಲೋ ಅಥವಾ ಹತ್ತಿರದ ಖಾಲಿ ಜಾಗಗಳಲ್ಲಿ ಕಸ ಹಾಕುವ ಮೂಲಕ ಸುಂದರ ನಗರದ ಕಲ್ಪನೆಯನ್ನು ಕನಸಾಗಿಯೇ ಉಳಿಸಬಹುದು. ಈ ಬಗ್ಗೆ ಪಾಲಿಕೆ ಶೀಘ್ರ ಎಚ್ಚೆತ್ತುಕೊಳ್ಳಬೇಕಿದೆ.

ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಕಸ ಸಂಗ್ರಹಿಸುವವರು ಬಾರದೇ ಇದ್ದರಿಂದ ಬಹುತೇಕ ಬಡಾವಣೆಗಳಲ್ಲಿನ ಮನೆಗಳಲ್ಲಿ ಎರಡು ದಿನಗಳಿಂದ ಕಸ ಹಾಗೆಯೇ ಉಳಿದಿದೆ.

error: Content is protected !!