ರಸ್ತೆ ರಿಪೇರಿ, ಮೂಲ ಸೌಕರ್ಯಕ್ಕೆ ಆಗ್ರಹಿಸಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ

ಹರಿಹರ, ಜೂ.16- ನಗರದ ಹೊರ ವಲಯದ ದೀಟೂರು, ಚಿಕ್ಕಬಿದರಿ, ಸಾರಥಿ, ಗಂಗನರಸಿ ಗ್ರಾಮಗಳಿಗೆ ರಸ್ತೆ, ಬಸ್ ಸಂಚಾರ, ವಿದ್ಯುತ್, ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ, ಚಿಕ್ಕಬಿದರಿ ರಾಮಸೇನಾ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ರೈತರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಶಿವಮೊಗ್ಗ- ಹೊಸಪೇಟೆ ರಾಜ್ಯ ಹೆದ್ದಾರಿಯನ್ನು (ಎಸ್‌ಹೆಚ್‌ 25) ಒಂದು ಗಂಟೆ ಕಾಲ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

ಈ ವೇಳೆ ರಾಮಸೇನಾ ಚಿಕ್ಕಬಿದರಿ ಘಟಕದ ಮುಖಂಡ ನಾಗರಾಜ್ ಮಾತನಾಡಿ, ರಸ್ತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಗುಂಡಿಗಳು ಇರುವುದರಿಂದ ಹಲವಾರು ಬಾರಿ ಅಪಘಾತಗಳು ಸಂಭವಿಸಿ ಬಹಳಷ್ಟು ಜನರು ಮೃತಪಟ್ಟಿದ್ದಾರೆ. ಇನ್ನೂ ಕೆಲವರು ಕೈ, ಕಾಲು ಮುರಿದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.

ದೀಟೂರು ನಿರಂಜನ ಮಾತನಾಡಿ, ಈ ಗ್ರಾಮದಿಂದ ಹರಿಹರ ನಗರಕ್ಕೆ ಓಡಾ ಡಲು ಇದೊಂದೇ ರಸ್ತೆ ಇರುವುದರಿಂದ ಈ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಸಾಕಷ್ಟು  ಅಪಘಾತಗಳಾಗುತ್ತಿವೆ. ರಸ್ತೆಯನ್ನು ಆದಷ್ಟು ಬೇಗನೆ ದುರಸ್ತಿ ಪಡಿಸಬೇಕು ಎಂದು ಒತ್ತಾಯಿಸಿದರು.

ಸಾರಥಿ ಗ್ರಾಮ ಪಂಚಾಯ್ತಿ ಸದಸ್ಯ ಹನುಮಂತಪ್ಪ ಮಾತನಾಡಿ,  ಇಲ್ಲಿನ ಗ್ರಾಮದಿಂದ ಮರಳು ಮತ್ತು ಮಣ್ಣಿನ ಸಾಗಾಟ ಸೇರಿದಂತೆ, ವಿವಿಧ ರೀತಿಯಿಂದ ಲಕ್ಷಾಂತರ ರೂ. ಕಂದಾಯವನ್ನು ಸರ್ಕಾರ ವಸೂಲಿ ಮಾಡುತ್ತಿದೆ. ಆದರೆ ಅಭಿವೃದ್ಧಿ ವಿಚಾರದಲ್ಲಿ ಸೌಲಭ್ಯಗಳನ್ನು ನೀಡಿಲ್ಲ ಎಂದು ಕಿಡಿ ಕಾರಿದರು.

ಸ್ಥಳಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಮಾತನಾಡಿ, ಗ್ರಾಮದಲ್ಲಿ ಮರಳು ಮತ್ತು ಮಣ್ಣಿನ ವ್ಯವಹಾರಗಳನ್ನು ಮಾಡುವವರು ನೀವೇ ಮತ್ತು ರಸ್ತೆ ಹಾಳಾಗುತ್ತಿವೆ ಎಂದು ಹೇಳು ವವರು ನೀವೇ. ಮೊದಲು ನೀವು ಮರಳು ಮತ್ತು ಮಣ್ಣನ್ನು ಸಾಗಾಟ ಮಾಡುವುದನ್ನು ನಿಲ್ಲಿಸಿ, ವ್ಯವಹಾರ ಆಗಬೇಕು. ತೊಂದರೆ ಆಗಬಾರದು ಎಂದು ಹೇಳಿದರೆ ಹೇಗೆ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಲೋಕೋಪಯೋಗಿ, ಸಾರಿಗೆ ಮತ್ತು ಇತರೆ ಇಲಾಖೆಯ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿ ಈ ಭಾಗದ ಎಲ್ಲಾ ಹಳ್ಳಿಗಳ ಸಮಸ್ಯೆಯನ್ನು ಪರಿಹರಿಸಲು ಮುಂದಾಗುವುದಾಗಿ ಹೇಳಿದರು.

ಲೋಕೋಪಯೋಗಿ ಇಲಾಖೆ ಅಧಿಕಾರಿ ಶಿವಮೂರ್ತಿ ಮಾತನಾಡಿ, ಈಗಾಗಲೇ ದೀಟೂರು ಕ್ರಾಸ್‌ನಿಂದ ಚಿಕ್ಕಬಿದರಿ ಗ್ರಾಮದವರೆಗೆ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವುದಕ್ಕೆ 3 ಲಕ್ಷದ 50 ಸಾವಿರ ರೂ. ಬಿಡುಗಡೆ ಆಗಿ, ಟೆಂಡರ್ ಕೂಡ 23 ಕ್ಕೆ ಆಗಲಿದ್ದು, ಆದಷ್ಟು ಬೇಗನೆ ಈ ರಸ್ತೆ ದುರಸ್ತಿ ಮಾಡಲಾಗುತ್ತದೆ. ಈ ರಸ್ತೆಯನ್ನು ಶಾಶ್ವತ ದುರಸ್ತಿಪಡಿಸಲು 15 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಹಣ ಬಿಡುಗಡೆ ಆದ ನಂತರದಲ್ಲಿ ರಸ್ತೆ ಕಾಮಗಾರಿ ಮಾಡಲಾಗುತ್ತದೆ ಎಂದು ತಿಳಿಸಿದರು. ಕಾಳಪ್ಪ ಚಿಕ್ಕಬಿದರಿ, ಕಿರಣ್, ಕೆಂಚಪ್ಪ, ಗುತ್ತೂರು ಗ್ರಾಮಾಂತರ ಠಾಣೆಯ ಪಿಎಸ್ಐ ಡಿ ರವಿಕುಮಾರ್ ಇತರರು ಮಾತನಾಡಿದರು. 

ಈ ಸಂದರ್ಭದಲ್ಲಿ ನಿಂಗನಗೌಡ ಚಿಕ್ಕಬಿದರಿ, ಚಂದ್ರಶೇಖರ್ ಪೂಜಾರ್, ನಾಗರಾಜ್ ದಿಟೂರು, ಪಕ್ಕಿರೇಶ್, ಹಾಲೇಶ್, ರಮೇಶ್, ವಿಶ್ವನಾಥ್, ಭರತ್, ಬಸವರಾಜ್, ಕೊಟ್ರೇಶ್, ನಾಗರಾಜ್ ಗಂಗನರಸಿ, ಲೋಹಿತ್, ಕುಮಾರ್, ಪಿಡಬ್ಲ್ಯೂಡಿ ಎಇಇ ಚಂದ್ರಕಾಂತ್, ಕಾರ್ತಿಕ್, ಗುತ್ತೂರು ಗ್ರಾಮಾಂತರ ಪಿಎಸ್ಐ ಸೈಫುದ್ದೀನ್ ಸಾಬ್, ರಸೂಲ್ ಸಾಬ್ ಇತರರಿದ್ದರು.

error: Content is protected !!