ಜಾನಪದ ತಜ್ಞ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಎಂ.ಜಿ.ಈಶ್ವರಪ್ಪ ಅವರಿಗೆ ಇಮಾಂ ಸ್ಮಾರಕ ವಾರ್ಷಿಕ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ
ಶಾಸಕ ಎಸ್.ವಿ.ರಾಮಚಂದ್ರ ಭರವಸೆ
ಜಗಳೂರು, ಫೆ.24- ಇಮಾಂ ಸಾಹೇಬರು ನಿರ್ಮಿಸಿದ ಕೆರೆಗಳು ನಮ್ಮ ಭಾಗ್ಯವಾಗಿದ್ದು, ಕೆರೆಗಳಿಗೆ ನೀರು ತುಂಬಿಸುವ ಮೂಲಕ ಅವರ ಕನಸು ನನಸಾಗಿಸುತ್ತೇನೆ ಎಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್.ವಿ.ರಾಮಚಂದ್ರ ಭರವಸೆ ನೀಡಿದರು.
ಪಟ್ಟಣದ ಇಮಾಂ ಸ್ಮಾರಕ ಪ್ರೌಢಶಾಲೆಯಲ್ಲಿ ಇಮಾಂ ಟ್ರಸ್ಟ್ ವತಿಯಿಂದ ಮಹಮ್ಮದ್, ಇಮಾಂ ಸ್ಮಾರಕ ವಾರ್ಷಿಕ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬರದ ನಾಡಾಗಿದ್ದರೂ ಸಹ ಇಮಾಂ ಸಾಹೇಬರಂತಹ ನಿಸ್ವಾರ್ಥ ರಾಜಕಾರಣಿಯನ್ನು ಕಂಡಿರುವ ಭೂಮಿ ಎಂಬ ಹೆಮ್ಮೆ ನಮಗಿದೆ.ಸಿರಿಗೆರೆ ಶ್ರೀಗಳ ಮಾರ್ಗದರ್ಶನದಂತೆ ಜೂನ್, ಜುಲೈಗೆ ಕೆರೆಗಳಿಗೆ ನೀರು ಭರ್ತಿಯಾಗಲಿವೆ ಹಾಗೂ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಹಣವಿಲ್ಲ ಎಂದು ಹೇಳಿತ್ತು. ಸಂಸದ ಜಿ.ಎಂ.ಸಿದ್ದೇಶ್ವರ ಅವರ ಒತ್ತಡದಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ನೀರಾವರಿ ಯೋಜನೆಯನ್ನಾಗಿಸಿ, 1200 ಕೋಟಿ ರೂ. ಅನುದಾನಕ್ಕೆ ಅಸ್ತು ನೀಡಿದೆ. ಇದರಿಂದ ಬರದನಾಡು ಹಸಿರುನಾಡನ್ನಾಗಿಸುವುದೇ ನನ್ನ ಗುರಿ ಎಂದರು.
ತಾಲ್ಲೂಕಿನ ಜನತೆ ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ, ಕೊಟ್ಟ ಮಾತಿನಂತೆ ನೀರಾವರಿ ಯೋಜನೆ ಮಾಡಿ, ಭವಿಷ್ಯದ ಪೀಳಿಗೆಗೆ ಅನುಕೂಲ ಮಾಡಿರುವೆ. ಚುನಾವಣೆಯಲ್ಲಿ ಪುನಃ ಗೆಲುವುದು ಜನರಿಗೆ ಸೇರಿದ್ದು. ಆದರೆ, ಅಭಿವೃದ್ಧಿಗೊಳಿಸಿದ ನೆಮ್ಮದಿ ನನಗೆ ಇದೆ ಎಂದು ಶಾಸಕರು ಹರ್ಷ ವ್ಯಕ್ತಪಡಿಸಿದರು.
ಜಗಳೂರು ಮೊಹಮ್ಮದ್ ಇಮಾಂ ಸ್ಮಾರಕ ವಾರ್ಷಿಕ ರಾಜ್ಯ ಮಟ್ಟದ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ, ಜಾನಪದ ತಜ್ಞ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಂ.ಜಿ.ಈಶ್ವರಪ್ಪ, ನಾನು ಪ್ರೌಢಶಾಲೆ ಹಂತದಲ್ಲಿ ಶಿಕ್ಷಕ ವೃತ್ತಿ ಕನಸ್ಸು ಕಂಡಿದ್ದೆ. ಶಿಕ್ಷಕ ವೃತ್ತಿ ಪವಿತ್ರವಾದದ್ದು, ಬೋ ಧನೆ ಒಂದು ಕಲೆಯಾಗಿದ್ದು, ವಿಷಯ ಕರಗತ ಮಾಡಿಕೊಂಡು ತಯಾರಾಗಿ ತರಗತಿ ನಿರ್ವಹಿಸುವಲ್ಲಿನ ನೆಮ್ಮದಿ ಹಾಗೂ ವಿದ್ಯಾರ್ಥಿಗಳು ತೋರುವ ಪ್ರೀತಿ ವಿಶ್ವಾಸ ಉತ್ತಮ ಅಧ್ಯಾಪಕ ನಿಗೆ ಎಲ್ಲಿಲ್ಲದ ಆನಂದಮಯವಾಗಿರುತ್ತದೆ ಎಂದರು.
ವಿದ್ಯಾರ್ಥಿಗಳು ಗುರುಗಳಿಗೆ ಗೌರವಿಸುವ ಮನೊಭಾವ ಬೆಳೆಸಿಕೊಳ್ಳಬೇಕು. ಉತ್ತಮ ಸಂಸ್ಕಾರಯುತ ಶಿಕ್ಷಣ ಪಡೆದು ಸಮಾಜದಲ್ಲಿ ಸಾಧನೆಗೈದರೆ ಪೋಷಕರಿಗೆ ಶಿಕ್ಷಣ ಸಂಸ್ಥೆಗೆ ಕೀರ್ತಿ ಬರುತ್ತದೆ ಎಂದು ಹೇಳಿದರು.
ಸಿನಿಮಾಗಳು ನಿರ್ಜೀವ ಪಾತ್ರಧಾರಿಗಳ ಏಕಮುಖ ಪ್ರದರ್ಶನ ಹಾಗೂ ಅಭಿನಯವಾದರೆ, ನಾಟಕದಲ್ಲಿ ಪಾತ್ರಕ್ಕೆ ತಕ್ಕಂತೆ ಧ್ವನಿ ಅಭ್ಯಾಸ, ಯೋಗ, ಜೀವಂತ ಪಾತ್ರಧಾರಿಗಳ ದ್ವಿಮುಖ ಪ್ರತಿಭೆ ರೂಢಿಸಿಕೊಂಡಿರುತ್ತಾರೆ. ಆದರೆ, ಆಧುಕಿನಕತೆ ಬೆಳೆದಂತೆ ನಾಟಕ, ಕಲೆಯ ಕಲಾವಿ ದರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಮಾಂ ಟ್ರಸ್ಟ್ ಅಧ್ಯಕ್ಷ ಹಾಜಿ ಜೆ.ಕೆ.ಹುಸೇನ್ ಮಿಯಾ ಸಾಹೇಬ್ ಅವರು, ಡಾ.ಎಂ.ಜಿ.ಈಶ್ವರಪ್ಪ ಅವರಿಗೆ ಇಮಾಂ ಟ್ರಸ್ಟ್ ವತಿಯಿಂದ ಪ್ರಶಸ್ತಿ ಪ್ರದಾನ ಮಾಡಿ, ಸನ್ಮಾನಿಸಿ ಗೌರವಿಸಿದರು. ನಿವೃತ್ತ ಪ್ರಾಚಾರ್ಯರ ಎಂ.ಬಸವಪ್ಪ ಅವರು ಸಮಾರಂಭವನ್ನು ಉದ್ಘಾಟಿಸಿದರು.
ಸಮಾರಂಭದಲ್ಲಿ, ಹಿರಿಯ ರಂಗಕರ್ಮಿ ಬಾ.ಮ.ಬಸವರಾಜಯ್ಯ,ನಿವೃತ್ತ ಪ್ರಾಚಾರ್ಯ ಬಾತಿ ಬಸವರಾಜ್, ಕೆ.ರವಿಕುಮಾರ್, ಇಮಾಂ ಟ್ರಸ್ಟ್ ಉಪಾಧ್ಯಕ್ಷ ಖಾಸೀಂ ಅಲಿ, ಸಲಹಾ ಸಮಿತಿಯ ನಿವೃತ್ತ ಲೀಡ್ ಬ್ಯಾಂಕ್ ಮ್ಯಾನೇಜರ್ ಎನ್.ಟಿ.ಯರ್ರಿಸ್ವಾಮಿ, ಡಿ.ಸಿ.ಮಲ್ಲಿಕಾರ್ಜುನ್, ಕೆ.ಸುಜಾತಾ, ಶಿಲ್ಪ, ಬಸವೇಶ್, ಸಿ.ಎಂ.ಹೊಳೆ, ಪ.ಪಂ ಉಪಾಧ್ಯಕ್ಷರಾದ ಲಲಿತಾ ಶಿವಣ್ಣ, ಇಮಾಂ ಶಾಲೆಯ ಆಡಳಿತಾಧಿಕಾರಿ ಜೆ.ಕೆ.ಮುನ್ನಾ, ಫರೀದಾ, ನೂರ್ ಫಾತಿಮಾ, ಮಹಮ್ಮದ್ ಷರೀಫ್ ಮಸ್ತಾನ್ ಮತ್ತಿತರರು ಭಾಗವಹಿಸಿದ್ದರು.