ಮಾರ್ಚ್ 1, 2 ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ದಾವಣಗೆರೆ, ಫೆ.24- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಾರ್ಚ್ 1 ಮತ್ತು 2 ರಂದು ಎರಡು ದಿನಗಳ ಕಾಲ ನಗರದ ಕುವೆಂಪು ಕನ್ನಡ ಭವನದಲ್ಲಿ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ. ಹೆಚ್.ಎಸ್.ಮಂಜುನಾಥ್ ಕುರ್ಕಿ ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಾರ್ಚ್ 1 ರಂದು ಬೆಳಿಗ್ಗೆ 8.30ಕ್ಕೆ ಜಿ.ಪಂ. ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ ಶಶಿಧರ್ ಅವರು, ರಾಷ್ಟ್ರ ಧ್ವಜಾರೋಹಣವನ್ನು, ಪಾಲಿಕೆ ಮೇಯರ್ ಎಸ್.ಟಿ.ವೀರೇಶ್ ನಾಡ ಧ್ವಜಾರೋಹಣವನ್ನು ನೆರವೇರಿಸುವರು. ಬೆಳಿಗ್ಗೆ 9.30ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಎಸ್ಪಿ ಹನುಮಂತರಾಯ ಚಾಲನೆ ನೀಡಲಿದ್ದಾರೆ.

ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಪುಸ್ತಕ ಮಳಿಗೆಗಳನ್ನು, ಡಯಟ್ ಪ್ರಾಚಾರ್ಯ ಹೆಚ್.ಕೆ.ಲಿಂಗರಾಜು ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.

ಉದ್ಘಾಟನೆ : ನಿವೃತ್ತ ಬ್ಯಾಂಕ್ ಅಧಿಕಾರಿಗಳು, ಸಾಹಿತಿ ಎನ್‌.ಟಿ.ಯರಿಸ್ವಾಮಿ ಸಮ್ಮೇಳನಾಧ್ಯಕ್ಷರಾಗಿ ಭಾಗವಹಿಸಲಿದ್ದಾರೆ. ಶಾಸಕ ಎಸ್.ಎ.ರವೀಂದ್ರನಾಥ್‌ ಅಧ್ಯಕ್ಷತೆ ವಹಿಸುವರು. ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್ ಸಮ್ಮೇಳನ ಉದ್ಘಾಟಿಸಲಿದ್ದಾರೆ.

ಡಾ. ಜಿ.ಎಸ್.ಶಿವರುದ್ರಪ್ಪ ವೇದಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಉದ್ಘಾಟಿಸುವರು. ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಡಾ. ಲೋಕೇಶ್ ಅಗಸನಕಟ್ಟೆ ಕನ್ನಡ ಧ್ವಜ ಹಸ್ತಾಂತರ ಮಾಡಲಿದ್ದಾರೆ.

ಬೆಳಿಗ್ಗೆ 10 ರಿಂದ 10.45 ರವರೆಗೆ ಕಡದಕಟ್ಟೆ ತಿಮ್ಮಪ್ಪ ಹಾಗೂ ಸಂಗಡಿಗರಿಂದ ಜಾನಪದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಅಂದು ಮಧ್ಯಾಹ್ನ 2 ಗಂಟೆಗೆ ಕನ್ನಡ ಕಾವ್ಯ ಮತ್ತು ವಿಶ್ವಮಾನವ ಪ್ರಜ್ಞೆ ಹಾಗೂ ಮಧ್ಯಾಹ್ನ 3.30ಕ್ಕೆ ಸಾಹಿತ್ಯ ಮತ್ತು ಸಾಂಸ್ಕೃತಿಕ ನೆಲೆಗಳು ಕುರಿತು ವಿಚಾರಗೋಷ್ಠಿ, ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 

ಮಾರ್ಚ್ 2 ರಂದು ಬೆಳಿಗ್ಗೆ 9.30ಕ್ಕೆ `ಕೊರೊನಾ ಕವಿಗೋಷ್ಠಿ’ ಹಿರಿಯ ಪತ್ರಕರ್ತ ಬಿ.ಎನ್‌.ಮಲ್ಲೇಶ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಮಧ್ಯಾಹ್ನ 12ಕ್ಕೆ ಹಿರಿಯ ಸಾಹಿತಿ ಬಾ.ಮ.ಬಸವರಾಜಯ್ಯ ಅವರ ಅಧ್ಯಕ್ಷತೆಯಲ್ಲಿ `ದೇಶಿ ಭಾಷೆಯ ಮುಂದಿರುವ ಸವಾಲುಗಳು ಕುರಿತು’ ಪತ್ರಕರ್ತ ಡಾ. ಪದ್ಮರಾಜ್ ದಂಡಾವತಿ ಉಪನ್ಯಾಸ ನೀಡಲಿದ್ದಾರೆ.

ಮಧ್ಯಾಹ್ನ 2 ಗಂಟೆಗೆ ಕೃಷಿ ತಜ್ಞ ಪ್ರೊ. ಸಿ.ನರಸಿಂಹಪ್ಪ ಅಧ್ಯಕ್ಷತೆಯಲ್ಲಿ, ಮಾಜಿ ಶಾಸಕ ವೈ.ಎಸ್.ವಿ.ದತ್ತ `ನೂತನ ಕೃಷಿ ಕಾಯ್ದೆ ನಿಜಕ್ಕೂ ಹಿತ ಶತ್ರುವೇ?’ ಕುರಿತು ಸಂವಾದ ನಡೆಯಲಿದೆ.

ಸಂಜೆ 4ಕ್ಕೆ ಬಹಿರಂಗ ಅಧಿವೇಶನ, 4.30ಕ್ಕೆ ಸನ್ಮಾನ ಹಾಗೂ ಸಮಾರೋಪ ನಡೆಯಲಿದೆ. ವಾಗ್ಮಿ ಪ್ರೊ. ಎಂ.ಕೃಷ್ಣೇಗೌಡ ಸಮಾರೋಪ ಭಾಷಣ ಮಾಡಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕಸಾಪ ಪದಾಧಿಕಾರಿಗಳಾದ ಎ.ಆರ್.ಉಜ್ಜನಪ್ಪ, ಬಿ.ದಿಳ್ಳೆಪ್ಪ, ಎನ್.ಎಸ್.ರಾಜು ಬುರಡೇಕಟ್ಟೆ, ಮಂಜಪ್ಪ, ಷಣ್ಮುಖಪ್ಪ ಉಪಸ್ಥಿತರಿದ್ದರು.

error: Content is protected !!