ಚಿತ್ರದುರ್ಗದ ಸಂಸದರು ಕೇಂದ್ರ ಸಚಿವರಾಗಿರುವುದರಿಂದ ನೇರ ರೈಲು ಕನಸು ನನಸಾಗುವ ಭರವಸೆಯಲ್ಲಿ ಅವಳಿ ಜಿಲ್ಲೆಯ ಜನತೆ
ತುಮಕೂರು – ಚಿತ್ರದುರ್ಗ – ದಾವಣಗೆರೆ ನೇರ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ 209 ಎಕರೆ ಭೂ ಸ್ವಾಧೀನ ಪಡಿಸಿಕೊಳ್ಳಬೇಕಾಗಿದ್ದು, 105 ಎಕರೆಯಷ್ಟು ಜಾಗ ಭೂ ಸ್ವಾಧೀನ ಪಡಿಸಿಕೊಂಡು ರೈತರಿಗೆ ಪರಿಹಾರ ನೀಡಲಾಗಿದೆ. ಎರಡು ಮೂರು ತಿಂಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಮುಗಿಯಲಿದೆ.
– ರೇಷ್ಮಾ ಹಾನಗಲ್, ವಿಶೇಷ ಭೂ ಸ್ವಾಧೀನಾಧಿಕಾರಿ
ತುಮಕೂರು – ಚಿತ್ರದುರ್ಗ – ದಾವಣಗೆರೆ ನೇರ ರೈಲು ಮಾರ್ಗದಿಂದ ಜಿಲ್ಲೆಗೆ ಸಾಕಷ್ಟು ಅನುಕೂಲತೆಗಳಾಗಲಿವೆ. ಯೋಜನೆ ಆದಷ್ಟು ಶೀಘ್ರ ಪೂರ್ಣಗೊಳ್ಳಲು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರು ಕಡಿಮೆ ದರದಲ್ಲಿ ಪ್ರಯಾಣ ಮಾಡಲು ಅನುಕೂಲವಾಗುತ್ತದೆ.
– ರೋಹಿತ್ ಜೈನ್,ಕಾರ್ಯದರ್ಶಿ, ನೈಋತ್ಯ ರೈಲ್ವೆ ಪ್ರಯಾಣಿಕರ ಸ೦ಘ
ದಾವಣಗೆರೆ, ಜು.15- ರೈಲ್ವೇ ಯೋಜನೆಗಳ ಪೈಕಿ ತುಮಕೂರು-ಚಿತ್ರದುರ್ಗ-ದಾವಣಗೆರೆ ನಡುವಿನ ನೇರ ರೈಲು ಓಡುವುದನ್ನು ಜಿಲ್ಲೆಯ ಜನತೆ ಎದುರು ನೋಡುತ್ತಿದ್ದಾರೆ. ಚಿತ್ರದುರ್ಗ ಸಂಸದ ಎ.ನಾರಾಯಣ ಸ್ವಾಮಿ ಅವರು ಕೇಂದ್ರ ಸಚಿವರಾಗಿರುವುದರಿಂದ ಅವಳಿ ಜಿಲ್ಲೆಗಳ ಜನತೆಯ ನೇರ ರೈಲಿನ ಕನಸು ಮತ್ತಷ್ಟು ಗರಿಗೆದರಿದೆ.
ತುಮಕೂರು-ಚಿತ್ರದುರ್ಗ-ದಾವಣಗೆರೆ ನೂತನ ರೈಲ್ವೆ ಮಾರ್ಗವು 201.47 ಕಿ.ಮೀ. ಇರಲಿದ್ದು, ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ತೋಳಹುಣಸೆಯಿಂದ ನೀರ್ಥಡಿ ಗ್ರಾಮದ ವರೆಗೆ 209 ಎಕರೆ ಭೂ ಸ್ವಾಧೀನ ಪಡಿಸಿಕೊಳ್ಳಬೇಕಾಗಿತ್ತು. ಇದರಲ್ಲಿ ಈಗಾಗಲೇ ಸುಮಾರು 105 ಎಕರೆಯಷ್ಟು ಜಾಗವನ್ನು ಭೂ ಸ್ವಾಧೀನ ಪಡಿಸಿಕೊಂಡು ರೈತರಿಗೆ ಪರಿಹಾರ ನೀಡಲಾಗಿದೆ ಎನ್ನುತ್ತಾರೆ ಭೂ ಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್.
ಉಳಿದ 104 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ರೈತರು ದಾಖಲೆಗಳನ್ನು ಕೊಡುತ್ತಿದ್ದಾರೆ. ಒಂದೆರಡು ತಿಂಗಳಲ್ಲಿ ಪ್ರಕ್ರಿಯೆ ಮುಗಿಯಲಿದೆ ಎಂದು ಹೇಳಿದರು. ಅಂದ ಹಾಗೆ ಈ ನೂತನ ರೈಲ್ವೇ ಮಾರ್ಗವು ತುಮಕೂರು-ದಾವಣಗೆರೆ ನಡುವಿನ ದೂರವನ್ನು ಸುಮಾರು 70 ಕಿ.ಮೀ.ನಷ್ಟು ಕಡಿಮೆಗೊಳಿಸಲಿದೆ.
ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಮುತುವರ್ಜಿಯಿಂದ ಈಗಾಗಲೇ ದಾವಣಗೆರೆ ರೈಲ್ವೇ ನಿಲ್ದಾಣ ರಾಜ್ಯದ ಉತ್ತಮ ನಿಲ್ದಾಣಗಳಲ್ಲೊಂದಾಗಿದೆ. ಇನ್ನು ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ ಬಗ್ಗೆಯೂ ಹೆಚ್ಚು ಗಮನ ಹರಿಸಿದರೆ ಯೋಜನೆ ಶೀಘ್ರ ಪೂರ್ಣಗೊಳ್ಳುವುದರಲ್ಲಿ ಸಂದೇಹವಿಲ್ಲ ಎನ್ನಬಹುದು.
ಹೊಸ ಮಾರ್ಗಗಳಲ್ಲಿ ರೈಲು ಸಂಚರಿಸುವಂತೆ ಮಾಡಿ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವ ದೃಷ್ಟಿಯಿಂದ ನೈರುತ್ಯ ರೈಲ್ವೆ ವಲಯ ರಾಜ್ಯದಲ್ಲಿ 21 ಹೊಸ ಮಾರ್ಗಗಳನ್ನು ಗುರುತಿಸಿತ್ತು. ಅದರಲ್ಲಿ ತುಮಕೂರು–ಚಿತ್ರದುರ್ಗ–ದಾವಣಗೆರೆ ನೇರ ರೈಲು ಮಾರ್ಗವೂ ಒಂದು. 2011–12ರಲ್ಲಿ ಈ ಯೋಜನೆಗೆ ಅನುಮೋದನೆ ಸಿಕ್ಕರೂ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ನಡೆಯುತ್ತಲೇ ಇದೆ.
ಯೋಜನೆ ಅನುಷ್ಠಾನ ವಿಳಂಬವಾದಷ್ಟು ವೆಚ್ಚದ ಹೊರೆ ಹೆಚ್ಚಾಗುತ್ತಿದೆ. ದಿನ ಉರುಳಿದಂತೆ ರಾಜ್ಯ ಸರ್ಕಾರಕ್ಕೆ ಈ ಯೋಜನೆಗಳೇ ಹೊರೆಯಾಗಿ ಪರಿಣಮಿಸುವ ಸಾಧ್ಯತೆಗಳಿವೆ.
ಯೋಜನೆಯ ಉಪಯೋಗಗಳು: ತುಮಕೂರು – ಚಿತ್ರದುರ್ಗ – ದಾವಣಗೆರೆ ನೇರ ರೈಲು ಮಾರ್ಗವೂ ಮುಂದೆ ಬೆಂಗಳೂರಿನಿಂದ ಮುಂಬೈಗೆ ನೇರ ಮಾರ್ಗ ಕಲ್ಪಿಸುತ್ತದೆ. ಬೆಂಗಳೂರು-ಗುಂತ್ಕಲ್ ಮುಂಬೈ ಮಾರ್ಗಗಳ ರೈಲು ಸಂಚಾರ ದಟ್ಟಣೆ ನಿರ್ವಹಣೆಗೆ ಅನುಕೂಲವಾಗುತ್ತದೆ.
ಮಧ್ಯ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ರಾಜಧಾನಿಗೆ ನೇರ ಸಂಪರ್ಕ ಸಿಗುತ್ತದೆ. ಈ ರೈಲು ಮಾರ್ಗದಿಂದ ಬೆಂಗಳೂರಿಗೆ 70 ಕಿ.ಮೀ. ದೂರ ಕಡಿಮೆಯಾಗುವುದರಿಂದ ಕಾಲ, ಶ್ರಮ, ಹಣ, ಇಂಧನ ಉಳಿತಾಯವಾಗುತ್ತದೆ.
ಬೆ೦ಗಳೂರಿನಿ೦ದ ಚಿತ್ರದುರ್ಗಕ್ಕೆ 110 ಕಿ.ಮೀ. ಅ೦ತರ ಕಡಿಮೆಯಾಗುತ್ತದೆ. ಶಿರಾ ಮತ್ತು ಹಿರಿಯೂರು ಹೊಸ ಸ್ಥಳಗಳು ರೈಲು ಸ೦ಪರ್ಕವನ್ನು ಪಡೆಯುತ್ತವೆ. ಬೆಂಗಳೂರು-ಅರಸೀಕೆರೆ-ಶಿವಮೊಗ್ಗ ಸಾಲಿನಲ್ಲಿ ರೈಲು ಸಂಚಾರ ಶೇ.50ರಷ್ಟು ಕಡಿಮೆಯಾಗುತ್ತದೆ ಮತ್ತು ಶಿವಮೊಗ್ಗವು ಬೆಂಗಳೂರಿನಿಂದ ಹೆಚ್ಚು ಪ್ರಯಾಣಿಕ ರೈಲುಗಳನ್ನು ಹೊಂದಬಹುದಾಗಿದೆ.
ಅಲ್ಲದೆ ಬೆಂಗಳೂರಿನಿಂದ, ಬೆಳಗಾವಿ ಮತ್ತು ಬಿಜಾಪುರ ನಡುವಿನ ಅಸ್ತಿತ್ವದಲ್ಲಿರುವ ಮಾರ್ಗಗಳಲ್ಲಿ ಸಂಚಾರ ಕನಿಷ್ಠ ಶೇ.35ರಷ್ಟು ಕಡಿಮೆಯಾಗುತ್ತದೆ. ಪರಿಣಾಮವಾಗಿ ಪ್ರಸ್ತುತ ಹರಿಹರ-ಬೀರೂರು-ಅರಸೀಕೆರೆ ಸಾಲಿನಲ್ಲಿ ದಟ್ಟಣೆ ಕಡಿಮೆಯಾಗುವುದರಿ೦ದ ಹೆಚ್ಚಿನ ಸರಕು ಸಾಗಣೆ ಮಾಡಬಹುದು. ಪ್ರಯಾಣದ ದೂರ ಕಡಿಮೆಯಾಗುವುದರಿಂದ, ಇಂಧನ ಮತ್ತು ಸಾಕಷ್ಟು ಪ್ರಯಾಣ ಸಮಯ ಉಳಿಸಬಹುದು (ಸಾವಿರಾರು ಮನುಷ್ಯ ಗಂಟೆಗಳನ್ನು ಉಳಿಸಬಹುದು).
ರಾಜ್ಯ ಸರ್ಕಾರದ ಕೈಗಾರಿಕಾ ನೀತಿಯಂತೆ ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿ ಕೈಗಾರಿಕಾ ವಸಾಹತು ಸ್ಥಾಪಿಸಲು ಉದ್ದೇಶಿಸಿರುವುದು ಈ ಯೋಜನೆಗೆ ಪೂರಕವಾಗಿದೆ. ಪ್ರಸ್ತಾಪಿತ ಯೋಜನಾ ಪ್ರದೇಶದಲ್ಲಿ ಸಿಮೆಂಟ್/ಕಬ್ಬಿಣ ಕಾರ್ಖಾನೆಗಳಿಗೆ ಅಗತ್ಯವಾದ ಖನಿಜ ಸಂಪತ್ತು ಹೇರಳವಾಗಿ ದೊರಕುತ್ತದೆ.
ಯೋಜನಾ ಪ್ರದೇಶವು ಎಣ್ಣೆಬೀಜ ಉತ್ಪನ್ನ, ಹಣ್ಣು, ತರಕಾರಿ, ಹೂ ಬೇಸಾಯಕ್ಕೆ ಹೆಸರಾಗಿರುವುದರಿಂದ ಮಾರುಕಟ್ಟೆ ಸೌಲಭ್ಯ ಒದಗಿಸಿದಂತಾಗುತ್ತದೆ. ಚಿತ್ರದುರ್ಗ ಹಾಗೂ ಶಿರಾ ಕೋಟೆ ಕೊತ್ತಲಗಳಿಗೆ ಹೆಸರಾಗಿದ್ದು, ಇತಿಹಾಸ ಪ್ರಸಿದ್ಧವಾಗಿದೆ. ಪುರಾತತ್ವ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಉನ್ನತೀಕರಣ ವ್ಯವಸ್ಥೆಗೆ ಸೌಕರ್ಯ ಒದಗಿಸಿದಂತಾಗುತ್ತದೆ.