ಜು. 23ರಿಂದ 120 ದಿನ ಭದ್ರಾ ನೀರು

ಭದ್ರಾ ಕಾಡಾ ಸಭೆಯಲ್ಲಿ ತೀರ್ಮಾನ, ಅಪ್ಪರ್ ಭದ್ರಾ ಕಾಲುವೆಗೆ ನೀರು ಹರಿಸಬೇಕೆಂಬ ಸರ್ಕಾರದ ಆದೇಶಕ್ಕೆ ವ್ಯಾಪಕ ವಿರೋಧ

ಶಿವಮೊಗ್ಗ, ಜು.15- ಭದ್ರಾ ಅಚ್ಚುಕಟ್ಟಿನ ರೈತರ ಈ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಜುಲೈ 23 ರ ಶುಕ್ರವಾರ ಮಧ್ಯರಾತ್ರಿಯಿಂದ ಸತತವಾಗಿ 120 ದಿನ ಬಲ ಹಾಗೂ ಎಡದಂಡೆ ಕಾಲುವೆಗಳಿಗೆ ನೀರು ಹರಿಸಲು ಭದ್ರಾ ಕಾಡಾ ಸಭೆ ತೀರ್ಮಾನಿಸಿದೆ. ಇಂದು ಮಧ್ಯಾಹ್ನ ಮಲವಗೊಪ್ಪದ ಭದ್ರಾ ಕಾಡಾ ಕಚೇರಿಯ ಸಭಾಂಗಣದಲ್ಲಿ ಅಧ್ಯಕ್ಷರಾದ ಶ್ರೀಮತಿ ಪವಿತ್ರ ರಾಮಯ್ಯ ಅಧ್ಯಕ್ಷತೆಯಲ್ಲಿ ಜರುಗಿದ 78 ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ, ನೀರು ಹರಿಸುವ ಬಗ್ಗೆ ನಿರ್ಧರಿಸಲಾಯಿತು.

ಸಭೆಯ ಆರಂಭದಲ್ಲಿ ಅಪ್ಪರ್ ಭದ್ರಾ ಕಾಲುವೆಗೆ ಸರ್ಕಾರ ಆದೇಶ ಮಾಡಿದ ತಕ್ಷಣ ಅಧಿಕಾರಿಗಳು ಭದ್ರಾ ಕಾಡಾ ಸಮಿತಿಗೆ ತಿಳಿಸದೆ ಏಕಾಏಕಿ ನೀರು ಹರಿಸುತ್ತಿರುವ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಯಿತು.

ರೈತ ಸಂಘದ ಆರ್.ಹೆಚ್. ಬಸವರಾಜಪ್ಪ ಮಾತನಾಡಿ, ಚಿತ್ರದುರ್ಗ ಜಿಲ್ಲೆಯ ರಾಜಕಾರಣಿಗಳು ಸರ್ಕಾರದ ಮೇಲೆ  ಒತ್ತಡ ಹಾಕಿ ಅಪ್ಪರ್ ಭದ್ರಾ ಕಾಲುವೆಗೆ ನೀರು ಎತ್ತಿಸಿಕೊಳ್ಳುವ ಮೂಲಕ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದ್ದಾರೆ ಎಂದು ದೂರಿದರು.

ಅಪ್ಪರ್ ಭದ್ರಾ ನೀರಿನ ವಿಚಾರವು ಕರ್ನಾಟಕ, ಆಂಧ್ರಪ್ರದೇಶಗಳು ಈ ಹಿಂದೆ ಇದೇ ತುಂಗಭದ್ರಾ, ಕೃಷ್ಣಾ ನೀರಿನ ವಿಚಾರದಲ್ಲಿ ನಡೆದುಕೊಂಡಂತೆ ಚಿತ್ರದುರ್ಗದವರು ಮಾಡಲು ಹೊರಟಿದ್ದು, ಇದು ಸಂಪೂರ್ಣ ಸರ್ವಾಧಿಕಾರಿಯಂತೆ ಕಾಣಿಸುತ್ತದೆ. ಇನ್ನು ಮುಂದೆ ಸರ್ಕಾರ ಆದೇಶ ಮಾಡಿದ ಕೂಡಲೇ ನೀರು ಬಿಡುಗಡೆ ಮಾಡಬೇಡಿ. ಇಲ್ಲಿನ ಕಾಡಾ ಸಭೆ ನಡೆಸಿ, ಸೌಹಾರ್ದಯುತವಾಗಿ ಮಾತುಕತೆ ಮೂಲಕ ನೀರು ಹರಿಸಬೇಕೆಂದು ಅಧಿಕಾರಿಗಳಿಗೆ ಬಸವರಾಜಪ್ಪ ತಾಕೀತು ಮಾಡಿದರು.

ಇದಕ್ಕೂ ಮುನ್ನ ಮಾತನಾಡಿದ ಕಾಡಾ ಸದಸ್ಯರಾದ ಆವರಗೊಳ್ಳದ ಷಣ್ಮುಖಯ್ಯ, ಷಡಾಕ್ಷರಪ್ಪ ಅವರು, ಇದು ಪ್ರಜಾಪ್ರಭುತ್ವ ವ್ಯವಸ್ಥೆ ಆಗಿದ್ದು, ಅಧಿಕಾರಿಗಳು ತಮಗೆ ತಿಳಿದಂತೆ ಮಾಡಬಾರದೆಂದು ಎಚ್ಚರಿಸಿ, ಕೂಡಲೇ ಅಪ್ಪರ್ ಭದ್ರಾ ಕಾಲುವೆಗೆ ಬಿಟ್ಟಿರುವ ನೀರನ್ನು ನಿಲ್ಲಿಸಿ ಎಂದರು.

ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಪಟೇಲ್ ಮಾತನಾಡಿ, ಐಸಿಸಿ ಸಭೆಯಲ್ಲಿ ತೀರ್ಮಾನಿಸಿದೆ ಒಂದು ಕ್ಯೂಸೆಕ್ಸ್ ನೀರನ್ನೂ ಬಿಡುವಂತಿಲ್ಲ. ಆದರೂ ಅಧಿಕಾರಿಗಳು ಒತ್ತಡಕ್ಕೆ ಮಣಿದು ಅಪ್ಪರ್ ಭದ್ರಾಗೆ ನೀರು ಎತ್ತಿರುವುದು ತಪ್ಪು. ಮೊದಲು ಭದ್ರಾ ಅಚ್ಚುಕಟ್ಟಿನ ಬೆಳೆಗಳಿಗೆ ನೀರು ಹರಿಸುವ ಬಗ್ಗೆ ತೀರ್ಮಾನಿಸಿ, ನಂತರ ಅಪ್ಪರ್ ಭದ್ರಾ ಕಾಲುವೆಗೆ ನೀರು ಹರಿಸುವ ಬಗ್ಗೆ ಚರ್ಚೆಯಾಗಲಿ. ಸಂಘರ್ಷ ಬೇಡ. ನಮ್ಮ ನೀರಿನ ಬೇಡಿಕೆ ನಂತರ ಉಳಿದ ನೀರನ್ನು ಅವರಿಗೆ ಕೊಡೋಣ ಎಂದು ಪಟೇಲ್ ಹೇಳಿದರು.

ಭದ್ರಾ ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ವೈ. ದ್ಯಾವಪ್ಪ ರೆಡ್ಡಿ ಮಾತನಾಡಿ, ಮೊದಲು ಅಪ್ಪರ್ ಭದ್ರಾ ಕಾಲುವೆಗೆ ಬಿಟ್ಟಿರುವ ನೀರು ನಿಲ್ಲಿಸಿ, ನಂತರ ಸಭೆ ಮುಂದುವರೆಸಿ ಎಂದು ಆಗ್ರಹಿಸಿದರು.

ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಮಾತನಾಡಿ, ಅಧ್ಯಕ್ಷೆಯಾಗಿ ನಾನು ಸುಮ್ಮನೆ ಕುಳಿತಿಲ್ಲ. ಅಪ್ಪರ್ ಭದ್ರಾ ಕಾಲುವೆಗೆ ನೀರು ಹರಿಸುವ ಬಗ್ಗೆ ಸರ್ಕಾರದ ಆದೇಶ ಬಂದ ತಕ್ಷಣ ಅಚ್ಚುಕಟ್ಟಿನ ಜನಪ್ರತಿನಿಧಿಗಳಿಗೆ, ರೈತ ಸಂಘದವರಿಗೆ ವಿಷಯ ತಿಳಿಸಿದ್ದೇನೆ. ಅಧಿಕಾರಿಗಳ ತುರ್ತು ಸಭೆ ನಡೆಸಿ, ನೀರು ಹರಿಸದಂತೆ ತಿಳಿಸಿದ್ದೆ.  ಆದರೂ ಅಧಿಕಾರಿಗಳು ಗೇಟ್ ಎತ್ತಿದ್ದಾರೆ. ಅಲ್ಲದೆ ಮುಖ್ಯಮಂತ್ರಿಗಳೂ ಕೂಡ ನನ್ನ ಗಮನಕ್ಕೆ ತರದೆ ನೀರು ಬಿಡುಗಡೆ ಮಾಡುವಂತೆ ಸೂಚಿಸಿರುವುದು ಬೇಸರ ತಂದಿದೆ ಎಂದರು.

ಅಚ್ಚುಕಟ್ಟಿನ ರೈತರ ಹಿತದೃಷ್ಟಿಯಿಂದ ತಕ್ಷಣ ಅಪ್ಪರ್ ಭದ್ರಾ ಕಾಲುವೆಗೆ ನೀರು ಹರಿಸುವುದನ್ನು  ನಿಲ್ಲಿಸಬೇಕೆಂಬುದು ನನ್ನ ವಾದವಾಗಿದೆ ಎಂದು ಪವಿತ್ರ ರಾಮಯ್ಯ ಹೇಳಿದರು. 

ಬಸವರಾಜಪ್ಪ ಮಾತನಾಡಿ, ಈಗ ಮಳೆಗಾಲ ಆಗಿರುವುದರಿಂದ ಅಪ್ಪರ್ ಭದ್ರೆಗೆ ನೀರು ನಿಲ್ಲಿಸುವುದು ಕಷ್ಟ. ಬೇಸಿಗೆ ಸಮಯ ನೀರು ನಿಲ್ಲಿಸೋಣ. ಅಕ್ಟೋಬರ್ 15 ರವರೆಗೂ ನಿರಂತರವಾಗಿ 700 ಕ್ಯೂಸೆಕ್ಸ್ ನೀರು ಹರಿಸಲು ಸರ್ಕಾರದ ಮೇಲೆ ಒತ್ತಡ ಹಾಕಿ, ಅವರು ನೀರು ಹರಿಸಿಕೊಳ್ಳುತ್ತಾರೆ. ನಮ್ಮ ಹೋರಾಟಕ್ಕೆ ಬಲ ಬೇಕೆಂದರೆ ನಾವು ನೈತಿಕವಾಗಿರಬೇಕು. ಹಾಗಾಗಿ ಈಗ ನೀರು ನಿಲ್ಲಿಸುವುದು ಬೇಡ. ಇದರಿಂದ ಸರ್ಕಾರದ ಆದೇಶ ಉಲ್ಲಂಘನೆ ಆಗುತ್ತದೆ ಎಂದು ಸಭೆಗೆ ಮನವರಿಕೆ ಮಾಡಿಕೊಟ್ಟರು.

ಇಷ್ಟೆಲ್ಲಾ ಚರ್ಚೆಗಳ ನಂತರ ಅಂತಿಮವಾಗಿ  ಅಪ್ಪರ್ ಭದ್ರಾ ಕಾಲುವೆಗೆ ತಕ್ಷಣ ನೀರು ಹರಿಸುವುದನ್ನು ನಿಲ್ಲಿಸಬೇಕು. ಕಾಡಾ ಸಭೆಯಲ್ಲಿ  ಚರ್ಚಿಸಿಯೇ ನೀರು ಹರಿಸುವ ಬಗ್ಗೆ ನಿರ್ಧರಿಸಬೇಕು ಮತ್ತು ಅಪ್ಪರ್ ಭದ್ರಾ ಕಾಲುವೆಗೆ ಹರಿಸುವ 29.5 ಟಿಎಂಸಿ ನೀರನ್ನು ತುಂಗಾ ಡ್ಯಾಂನಿಂದ ಭದ್ರಾ ಡ್ಯಾಂಗೆ ಲಿಫ್ಟ್ ಮಾಡಿ, ನೀರು ಹರಿಸುವ ಬಗ್ಗೆ ಸರ್ಕಾರ ಹೊಸ ಡಿಪಿಆರ್ ಮಾಡಬೇಕೆಂದು ಸಭೆ ನಿರ್ಣಯಿಸಿತು.

ನೀರು ಹರಿಸುವ ಬಗ್ಗೆ ಚರ್ಚೆ: ಸಭೆಯ ಕೊನೆಯಲ್ಲಿ ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರು ಹರಿಸುವ ವಿಚಾರ ಬಂದಾಗ ಆರ್.ಹೆಚ್. ಬಸವರಾಜಪ್ಪ, ತೇಜಸ್ವಿ ಪಟೇಲ್, ವೈ. ದ್ಯಾವಪ್ಪ ರೆಡ್ಡಿ, ಕಾಡಾ ಸದಸ್ಯರಾದ ಗೋವಿನಹಾಳ್ ರಾಜಣ್ಣ, ಆವರಗೊಳ್ಳದ ಷಣ್ಮುಖಯ್ಯ,  ಶ್ರೀಮತಿ ನಾಗರತ್ನ ಬಾಯಿ, ಹರಿಹರ ಎಪಿಎಂಸಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್‌ ಅವರುಗಳ ಅಭಿಪ್ರಾ ಯದಂತೆ ಜುಲೈ 23 ರಿಂದ ಸತತವಾಗಿ 120 ದಿನ ಕಾಲುವೆಗಳಿಗೆ ನೀರು ಹರಿಸುವ ತೀರ್ಮಾನ ಪ್ರಕಟಿಸಿದ ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಅವರು ಕಳೆದ ವರ್ಷವೂ ಜುಲೈ 23 ರಿಂದಲೇ ನೀರು ಹರಿಸಲಾಗಿತ್ತು ಎಂದು ತಿಳಿಸಿದರು. ಈ ವರ್ಷವೂ ಭದ್ರಾ ಡ್ಯಾಂ ಭರ್ತಿಯಾಗಲಿದ್ದು, ರೈತರು ಆತಂಕ ಪಡುವುದು ಬೇಡ ಎಂದರು.

ಭದ್ರಾ ಮುಖ್ಯ ಇಂಜಿನಿಯರ್ ಯತೀಶ್ ಚಂದ್ರನ್ ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದಿನ 2 ವರ್ಷಗಳಲ್ಲಿ ಜುಲೈ ತಿಂಗಳಲ್ಲೇ ಈ ರೀತಿ ನೀರು ಹರಿದು ಬಂದಿರಲಿಲ್ಲ. ಈ ವರ್ಷ ಜುಲೈ 15ಕ್ಕೆ 160 ಅಡಿ ನೀರು ಸಂಗ್ರಹವಾಗಿದೆ. ಮುಂದೆ ಇನ್ನು ಸಾಕಷ್ಟು ಮಳೆ ಬರುವ ನಿರೀಕ್ಷೆ ಇರುವುದರಿಂದ ನೀರಿನ ತೊಂದರೆ ಆಗದು ಎಂದು ಸಭೆಗೆ ತಿಳಿಸಿದರು.

ಅಪ್ಪರ್ ಭದ್ರಾ ಸೂಪರಿಂಟೆಂಡೆಂಟ್‌ ಇಂಜಿನಿಯರ್ ಲಮಾಣಿ ಅವರು, 2022 ಜೂನ್ ವೇಳೆಗೆ ತುಂಗಾದಿಂದ ಭದ್ರಾಗೆ ನೀರು ಲಿಫ್ಟ್ ಕಾಮಗಾರಿ ಪೂರ್ಣಗೊಳ್ಳಬಹುದೆಂದು ಹೇಳಿದರು.

ಭದ್ರಾ ಕಾಡಾ ಆಡಳಿತಾಧಿಕಾರಿ ಕೃಷ್ಣಮೂರ್ತಿ ಕುಲಕರ್ಣಿ, ಭದ್ರಾ ಸೂಪರಿಂಟೆಂಡೆಂಟ್‌ ಇಂಜಿನಿಯರ್ ಚಂದ್ರಹಾಸ್, ಭದ್ರಾವತಿ ಇಇ ರವಿಚಂದ್ರ, ದಾವಣಗೆರೆ ಇಇ ಮಲ್ಲಪ್ಪ, ಮಲೇಬೆನ್ನೂರು ಇಇ ಚಿದಂಬರ್ ಲಾಲ್, ಹರಿಹರ ಇಇ ಶ್ರೀಧರ್, ಎಇಇ ರಾಜೇಂದ್ರ ಪ್ರಸಾದ್, ಹರಿಹರ ತಾ.ಪಂ. ಮಾಜಿ ಅಧ್ಯಕ್ಷ ಎಸ್.ಜಿ.ಪರಮೇಶ್ವರಪ್ಪ, ರಂಗನಾಥ್, ಆದಾಪುರ ವೀರೇಶ್, ಗೋವಿನಹಾಳ್ ಹಾಲಸ್ವಾಮಿ ಸೇರಿದಂತೆ ರೈತ ಸಂಘದ ಮುಖಂಡರು, ಭದ್ರಾ ಕಾಡಾ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.

ಜನಪ್ರತಿನಿಧಿಗಳ ಗೈರು : ಕಾಡಾ ಸಭೆಗಳಿಗೆ ಅಚ್ಚುಕಟ್ಟಿನ ಜನಪ್ರತಿನಿಧಿಗಳು ಸತತವಾಗಿ ಗೈರು ಹಾಜರಾಗುತ್ತಿರುವುದಕ್ಕೆ ಸಭೆಯಲ್ಲಿ ಸದಸ್ಯರು ತೀವ್ರ ಬೇಸರ ವ್ಯಕ್ತಪಡಿಸಿದರು. 

ಸಭೆಗೆ ಸಚಿವರು, ಸಂಸದರು, ಶಾಸಕರು ಆಗಮಿಸಿದರೆ, ಇಲ್ಲಿಯ ಸಮಸ್ಯೆಗಳನ್ನು ಅವರು ಸರ್ಕಾರದ ಮಟ್ಟದಲ್ಲಿ ಚರ್ಚಿಸಲು ಸಾಧ್ಯವಾ ಗುತ್ತದೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳ ಬೇಕೆಂದು ಕಾಡಾ ಸದಸ್ಯರೊಬ್ಬರು ತಿಳಿಸಿದರು.


ಜು. 23ರಿಂದ 120 ದಿನ ಭದ್ರಾ ನೀರು - Janathavani– ಜಿಗಳಿ ಪ್ರಕಾಶ್‌, [email protected]

error: Content is protected !!