ದಾವಣಗೆರೆ, ಫೆ. 23 – ಇನ್ನು ಎಂಟು ತಿಂಗಳಲ್ಲಿ ಚಿತ್ರದುರ್ಗದಿಂದ ಹರಿಹರದ ನಡುವಿನ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದ್ದಾರೆ.
ಹೆದ್ದಾರಿ ಕಾಮಗಾರಿಗಳ ಕುರಿತು ಎನ್.ಹೆಚ್.ಎ.ಐ. ಹಾಗೂ ಜಿಲ್ಲಾ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತ ನಾಡುತ್ತಿದ್ದ ಅವರು, ಸರ್ವೀಸ್ ರಸ್ತೆ ಹಾಗೂ ಹೆದ್ದಾರಿ ಕಾಮಗಾರಿಗಳನ್ನು ಎಂಟು ತಿಂಗಳಲ್ಲಿ ಮುಗಿಸಲಾಗುವುದು. ಮೂರು ಅಂಡರ್ಪಾಸ್ಗಳ ಕಾಮಗಾರಿ 15 ತಿಂಗಳಲ್ಲಿ ಮುಗಿಯಲಿದೆ ಎಂದು ಹೇಳಿದರು.
ವಿದ್ಯಾನಗರದ ಬಳಿ ಇರುವ ಸರ್ವೀಸ್ ರಸ್ತೆಯ ಹೈಟೆನ್ಷನ್ ವಿದ್ಯುತ್ ಮಾರ್ಗವನ್ನು ತೆರವುಗೊಳಿಸುವ ಕಾಮಗಾರಿಯ ಭೂ ಸ್ವಾಧೀನಕ್ಕೆ ಈಗಾ ಗಲೇ ಜಮೀನು ವಶಪಡಿಸಿ ಕೊಂಡಿರುವು ದರಿಂದ, ತ್ವರಿತವಾಗಿ ಕಾಮಗಾರಿ ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದು ಸಿದ್ದೇಶ್ವರ ಹೇಳಿದ್ದಾರೆ. ಹದಡಿ ಬಳಿಯ ರಸ್ತೆಗೆ ವೃತ್ತ ನಿರ್ಮಿಸುವ ಕಾಮಗಾರಿ ಇನ್ನು 15 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ನಗರದ ಬನಶಂಕರಿ ಬಡಾವಣೆ ಬಳಿಯ ಅಂಡರ್ಪಾಸ್ ಕಾಮಗಾರಿಗೂ ಸೂಚನೆ ನೀಡಲಾಗಿದೆ ಎಂದವರು ಹೇಳಿದರು.
ಆಶೋಕ ರಸ್ತೆ ರೈಲ್ವೆ ಕ್ರಾಸಿಂಗ್ಗೆ ವರ್ಷದಲ್ಲೇ ಕೆಳ ಸೇತುವೆ
ಅಶೋಕ ರಸ್ತೆಯ ರೈಲ್ವೆ ಕ್ರಾಸಿಂಗ್ ಸಮಸ್ಯೆ ಬಗೆಹರಿಸಲು ಎರಡು ವೆಂಟ್ಗಳನ್ನು (ಕೆಳ ಸೇತುವೆ) ನಿರ್ಮಿಸಲು ಜಮೀನು ವಶಪಡಿಸಿಕೊಳ್ಳುವ ಬಗ್ಗೆ ಅಂತಿಮ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದ್ದಾರೆ.
ಜಮೀನು ವಶಕ್ಕೆ ಶೀಘ್ರದಲ್ಲೇ ಒಪ್ಪಂದ ಆಗಲಿದೆ. ನಂತರದಲ್ಲಿ ವರ್ಷದೊಳಗೆ ಎರಡು ಕೆಳ ಸೇತುವೆಗಳ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಶೋಕ ರಸ್ತೆ ರೈಲ್ವೆ ಕ್ರಾಸಿಂಗ್ನಿಂದ ಲಿಂಗೇಶ್ವರ ದೇವಸ್ಥಾನದ ರಸ್ತೆಯಲ್ಲಿ ಸಾಗುವಲ್ಲಿ ಎರಡು ಕೆಳ ಸೇತುವೆಗಳನ್ನು ನಿರ್ಮಿಸಲಾಗುವುದು. 60 ಅಡಿ ರಸ್ತೆ ನಿರ್ಮಾಣಕ್ಕಾಗಿ 1.14 ಲಕ್ಷ ಚದರಡಿಯ ಜಾಗ ವಶಪಡಿಸಿಕೊಳ್ಳಲಾಗುವುದು. ಇದರಲ್ಲಿ ಸುಮಾರು 11 ಸಾವಿರ ಚದರಡಿ ವ್ಯಾಪ್ತಿಯ ಮೂರು ಕಟ್ಟಡಗಳೂ ಬರಲಿವೆ ಎಂದು ಸಿದ್ದೇಶ್ವರ ಹೇಳಿದ್ದಾರೆ.
ಜಮೀನು ವಶಕ್ಕಾಗಿ ಬಿ.ಟಿ. ಹಾಗೂ ಕಿರುವಾಡಿ ಮನೆತನದವರು ಸೇರಿದಂತೆ ಹಲವರ ಜೊತೆ ಚರ್ಚಿಸಲಾಗಿದ್ದು, ಜಮೀನು ವಶದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಹೊಸ ಕುಂದವಾಡ ಬಳಿ ಹೊಸ ಕೆಳ ಸೇತುವೆ ನಿರ್ಮಾಣಕ್ಕೆ ಅಧಿಕಾರಿ ಗಳಿಗೆ ಸೂಚನೆ ನೀಡಲಾಗಿದೆ. ಲಕ್ಕಮು ತ್ತೇನಹಳ್ಳಿಯಲ್ಲಿ ಮೇಲ್ಸೇತುವೆ ನಿರ್ಮಾ ಣಕ್ಕೆ ಅಧಿಕಾರಿಗಳು ಸಮ್ಮತಿಸಿದ್ದಾರೆ. ಮಲ್ಲಶೆಟ್ಟಿಹಳ್ಳಿ ಬಳಿ ಸರ್ವೀಸ್ ರಸ್ತೆಯಲ್ಲಿರುವ ಹೈಟೆನ್ಷನ್ ವೈರ್ ತೆರವುಗೊಳಿಸಲೂ ಸಹ ಒಪ್ಪಿದ್ದಾರೆ ಎಂದವರು ಹೇಳಿದರು.
ನಗರ ಪ್ರವೇಶ : ದಾವಣಗೆರೆ ಬರಲು ಚಿಂದೋಡಿ ಲೀಲಾ ಕಲ್ಯಾಣ ಮಂಟಪದ ಬಳಿ ಸೂಕ್ತ ಪ್ರವೇಶ ದ್ವಾರ ರೂಪಿಸಲು ಅಧಿಕಾರಿಗಳಿಗೆ ಸಭೆಯಲ್ಲಿ ತಿಳಿಸಲಾಗಿದೆ. ಈ ಕುರಿತ ಪ್ರಸ್ತಾವನೆ ಬಗ್ಗೆ ಎನ್.ಹೆಚ್.ಎ.ಐ.ನ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದು ಸಿದ್ದೇಶ್ವರ ಹೇಳಿದರು.
ಶಾಮನೂರು ಬಳಿ ದಾವಣಗೆರೆ ಪ್ರವೇಶಿಸಲು ಇರುವ ಸರ್ವೀಸ್ ರಸ್ತೆಯನ್ನು ಅಗಲ ಮಾಡಲೂ ಸಹ ಸೂಚನೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತಿತರರು ಉಪಸ್ಥಿತರಿದ್ದರು.