ಬಿಕ್ಕಟ್ಟಿನಿಂದ ಹೊರ ಬರುವ ವಿಶ್ವಾಸವಿದೆ : ‘ಮನ್ ಕಿ ಬಾತ್’ನಲ್ಲಿ ಮೋದಿ
ನವದೆಹಲಿ, ಏ. 25 – ಕೊರೊನಾ ಎರಡನೇ ಅಲೆಯು ದೇಶದ ಜನರ ತಾಳ್ಮೆ ಹಾಗೂ ಅವರ ನೋವು ಸಹಿಸುವ ಸಾಮರ್ಥ್ಯವನ್ನು ಪರೀಕ್ಷಿಸುತ್ತಿದೆ ಎಂದು ಹೇಳಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಈ ಬಿರುಗಾಳಿಯಿಂದ ದೇಶ ನಡುಗಿದೆಯಾದರೂ ಶೀಘ್ರದಲ್ಲೇ ಬಿಕ್ಕಟ್ಟಿನಿಂದ ಹೊರ ಬರುವ ವಿಶ್ವಾಸವಿದೆ ಎಂದಿದ್ದಾರೆ.
ಮಾಸಿಕ §ಮನ್ ಕಿ ಬಾತ್¬ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿರುವ ಪ್ರಧಾನಿ ಮೋದಿ, ಈ ಸಂದರ್ಭದಲ್ಲಿ ವೈದ್ಯರು, ನರ್ಸ್ಗಳು ಹಾಗೂ ಮುಂಚೂಣಿ ಕಾರ್ಯಕರ್ತರ ಜೊತೆ ಮಾತನಾಡಿ ಅವರ ಅನುಭವಗಳನ್ನು ಜನರ ಜೊತೆ ಹಂಚಿಕೊಂಡಿದ್ದಾರೆ.
30 ನಿಮಿಷಗಳ ಕಾಲದ ಪ್ರಧಾನಿ ಕಾರ್ಯಕ್ರಮ ಸಂಪೂರ್ಣವಾಗಿ ಕೊರೊನಾ ಕುರಿತಾಗಿತ್ತು. ಕೊರೊನಾ ಸೋಲಿಸುವುದು ತಮ್ಮ ಅತಿ ದೊಡ್ಡ ಆದ್ಯತೆಯಾಗಿದೆ ಎಂದು ಪ್ರಧಾನಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ನಮ್ಮ ಹಲವಾರು ಹತ್ತಿರದವರು ಹಾಗೂ ಆತ್ಮೀಯರು ಅಕಾಲಿಕವಾಗಿ ಅಗಲಿದ್ದಾರೆ. ಕೊರೊನಾದ ಮೊದಲ ಅಲೆಯನ್ನು ಯಶಸ್ವಿಯಾಗಿ ಎದುರಿಸಿದ ನಂತರ ದೇಶ ಪೂರ್ಣ ಉತ್ಸಾಹ ಹಾಗೂ ಪೂರ್ಣ ವಿಶ್ವಾಸದಲ್ಲಿತ್ತು. ಆದರೆ, ಈ ಬಿರುಗಾಳಿ ದೇಶವನ್ನು ನಡುಗಿಸಿದೆ ಎಂದು ಮೋದಿ ಹೇಳಿದ್ದಾರೆ.
ಜನರು ರೋಗದ ವಿರುದ್ಧ ಲಸಿಕೆ ಪಡೆಯಬೇಕು ಎಂದಿರುವ ಪ್ರಧಾನಿ, ಗಾಳಿ ಸುದ್ದಿಗಳಿಂದ ದೂರವಿರಬೇಕು ಎಂದು ಹೇಳಿದ್ದಾರೆ. 45 ವರ್ಷ ಮೀರಿದ ಎಲ್ಲ ಅರ್ಹರಿಗೆ ಕೇಂದ್ರ ಸರ್ಕಾರ ಉಚಿತವಾಗಿ ಲಸಿಕೆ ನೀಡಲಿದೆ. ಈ ಸಂದರ್ಭದಲ್ಲಿ ನಾವು ಪರಿಣಿತರು ಹಾಗೂ ವಿಜ್ಞಾನಿಗಳ ಸಲಹೆಗೆ ಕಿವಿಗೊಡಬೇಕಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರದ ಉಚಿತ ಲಸಿಕಾ ಅಭಿಯಾನವನ್ನು ರಾಜ್ಯಗಳು ಗರಿಷ್ಠ ಪ್ರಮಾಣದಲ್ಲಿ ಜನರಿಗೆ ತಲುಪಿಸಬೇಕು ಎಂದಿರುವ ಮೋದಿ, ರಾಜ್ಯಗಳಿಗೆ ಪೂರ್ಣ ಬಲ ತುಂಬಲು ಕೇಂದ್ರ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯಗಳೂ ಸಹ ತಮ್ಮ ಹೊಣೆಗಾರಿಕೆ ನಿಭಾಯಿಸಲು ಅತ್ಯುತ್ತಮ ಪ್ರಯತ್ನ ನಡೆಸುತ್ತಿವೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನಿ ಜೊತೆ ಸಂವಾದ ನಡೆಸಿದ ವೈದ್ಯರೊಬ್ಬರು, ಜನರು ಕೊರೊನಾ ಪರಿಸ್ಥಿತಿಯಲ್ಲಿ ಸ್ವಲ್ಪ ಹೆದರಿದ್ದಾರೆ. ಆದರೆ, ಅದರ ಅಗತ್ಯವಿಲ್ಲ. ಶೇ.80ರಿಂದ 90ರಷ್ಟು ಸೋಂಕಿತರಿಗೆ ಯಾವುದೇ ಲಕ್ಷಣಗಳೂ ಕಂಡು ಬರುವುದಿಲ್ಲ. ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುವುದು ಮುಖ್ಯ ಎಂದು ಹೇಳಿದ್ದಾರೆ.
ಈ ನಿಲುವನ್ನು ಬೆಂಬಲಿಸಿರುವ ಶ್ರೀನಗರದ ಡಾ. ನವೀದ್ ನಜೀರ್ ಷಾ, ಜನರು ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸುವುದರ ಮೂಲಕ ಸೋಂಕಿನಿಂದ ತಪ್ಪಿಸಿಕೊಳ್ಳಬೇಕು ಹಾಗೂ ಲಸಿಕೆ ಪಡೆಯಬೇಕು ಎಂದಿದ್ದಾರೆ.
ಜನರು ಸೋಂಕಿಗೆ ಗುರಿಯಾಗುವುದಷ್ಟೇ ದೊಡ್ಡ ಪ್ರಮಾಣದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಕೊರೊನಾದಿಂದ ಚೇತರಿಸಿಕೊಂಡ ಗುರು ಗ್ರಾಮದ ಪ್ರೀತಿ ಚತುರ್ವೇದಿ ಅವರು ತಮ್ಮ ಅನುಭವ ತಿಳಿಸಿದರು.
ದೇಶದಲ್ಲಿ ಭಾನುವಾರ 3.49 ಲಕ್ಷ ಸೋಂಕಿತರು ಕಂಡು ಬಂದಿದ್ದಾರೆ. ಇದೇ ದಿನ ಸಕ್ರಿಯ ಸೋಂಕಿತರ ಸಂಖ್ಯೆ 26 ಲಕ್ಷದ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇದೇ ದಿನದಂದು 2,767 ಜನ ಸಾವನ್ನಪ್ಪಿದ್ದಾರೆ.