ಮೌಲ್ಯಗಳನ್ನು ಉಳಿಸಿ-ಬೆಳೆಸುವಲ್ಲಿ ದೇವಸ್ಥಾನಗಳು ಸಹಕಾರಿ

ಶಂಕರ ವಿಹಾರ ಬಡಾವಣೆಯಲ್ಲಿ ವರಸಿದ್ಧಿ ವಿನಾಯಕ ದೇವಸ್ಥಾನ ಕಟ್ಟಡದ ಗುದ್ದಲಿ ಪೂಜೆ ಸಮಾರಂಭದಲ್ಲಿ ಆವರಗೊಳ್ಳದ ಓಂಕಾರ ಶ್ರೀ

ದಾವಣಗೆರೆ,ಏ.25- ಅಭಿವೃದ್ಧಿ ಹೊಂದುತ್ತಿರುವ ಬಡಾವಣೆಗಳಲ್ಲೊಂದಾದ ಸ್ಥಳೀಯ ಮಹಾನಗರ ಪಾಲಿಕೆಯ 15ನೇ ವಾರ್ಡ್ ವ್ಯಾಪ್ತಿಗೊಳಪಟ್ಟಿರುವ ಶಂಕರ ವಿಹಾರ ಬಡಾವಣೆ ಬಿ ಬ್ಲಾಕ್ ನಲ್ಲಿ ನಿರ್ಮಿಸಲುದ್ದೇಶಿಸಿರುವ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನ ಕಟ್ಟಡದ ಕಾಮಗಾರಿ ಆರಂಭಗೊಂಡಿದೆ.

ಈ ಬಡಾವಣೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ತರಲಾಗಿರುವ ಶ್ರೀ ವರಸಿದ್ಧಿ  ವಿನಾಯಕ ಸೇವಾ ಸಮಿತಿ ನೇತೃತ್ವದಲ್ಲಿ ದಾನಿಗಳು ಮತ್ತು ಸಾರ್ವಜನಿಕರ ಧನ ಸಹಾಯ – ಸಹಕಾರ – ಪ್ರೋತ್ಸಾಹದೊಂದಿಗೆ ಶ್ರೀ ಗಣಪತಿ ದೇವಸ್ಥಾನವನ್ನು ನಿರ್ಮಿಸಲು ಚಾಲನೆ ನೀಡಲಾಗಿದೆ. 

ಶ್ರೀ ಕ್ಷೇತ್ರ ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಯುಗಾದಿ ಹಬ್ಬದ ಸಂದರ್ಭದಲ್ಲಿ ಏರ್ಪಾಡಾಗಿದ್ದ ಸಮಾರಂಭದಲ್ಲಿ ಗುದ್ದಲಿ ಪೂಜೆಯನ್ನು ನೆರವೇರಿಸುವುದರ ಮೂಲಕ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿ ಎಂದು ಆಶೀರ್ವದಿಸಿದರು.

ಮಾನವನ ಮೌಲ್ಯಗಳನ್ನು ಉಳಿಸಿ – ಬೆಳೆಸುವಲ್ಲಿ ದೇವಸ್ಥಾನಗಳು ಸಹಕಾರಿಯಾಗುತ್ತವೆ ಎಂದು ಪ್ರತಿಪಾದಿಸಿದ ಶ್ರೀಗಳು, ಧಾರ್ಮಿಕ ಕೇಂದ್ರಗಳು ಶ್ರದ್ಧಾ – ಭಕ್ತಿಯನ್ನು ಕಟ್ಟಿಕೊಡುವುದರ ಮೂಲಕ ಮನುಷ್ಯನನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುತ್ತವೆ ಎಂದು ತಿಳಿಸಿದರು.

ಬಡಾವಣೆಯ ಮಕ್ಕಳು ಆಟೋಟಗಳಲ್ಲಿ ತಲ್ಲೀನರಾಗಲು, ಸಂಗೀತ ಕಲಿಯಲು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ದೇವಸ್ಥಾನಗಳ ಆವರಣಗಳು ಪ್ರಶಾಂತ ವಾತಾವರಣವನ್ನು ಕಲ್ಪಿಸಿಕೊಡುತ್ತವೆ. ಇದರಿಂದ ಮಕ್ಕಳ ಭವಿಷ್ಯ ಉಜ್ವಲಗೊಳ್ಳುತ್ತದೆ ಎಂದು ಶ್ರೀಗಳು ಉದಾಹರಣೆಗಳ ಮೂಲಕ ಹೇಳಿದರು.

ಶ್ರೀ ಗಣಪತಿ ದೇವಸ್ಥಾನ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮದ ನಾಮಫಲಕ ಅನಾವರಣಗೊಳಿಸಿದ ನಗರ ಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್, ಈ ಬಡಾವಣೆಯಲ್ಲಿ ಸುಂದರವಾದ ಉದ್ಯಾನವನ ನಿರ್ಮಾಣಕ್ಕೆ ಪಾಲಿಕೆಯಿಂದ ಅಗತ್ಯ ನೆರವು ನೀಡುವುದಲ್ಲದೇ, ಶಂಕರ ವಿಹಾರ ಬಡಾವಣೆ ಅಭಿವೃದ್ಧಿಗೆ ಸಹಕರಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದ 15ನೇ ವಾರ್ಡಿನ ನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಆಶಾ ಉಮೇಶ್ ಮಾತನಾಡಿ, ಶಂಕರ ವಿಹಾರ ಬಡಾವಣೆಯನ್ನು ಸರ್ವತೋಮುಖವಾಗಿ ಅಭಿವೃದ್ಧಿ ಪಡಿಸುವಲ್ಲಿ ಶ್ರಮಿಸುವುದಾಗಿ ಆಶ್ವಾಸನೆ ನೀಡಿದರು.

ಶ್ರೀ ವರಸಿದ್ಧಿ ವಿನಾಯಕ ಸೇವಾ ಸಮಿತಿ ನಾಮಫಲಕವನ್ನು ಅನಾವರಣಗೊಳಿಸಿ ಮಾತನಾಡಿದ ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್, ತಾನು ಈ ಬಡಾವಣೆಯ ಪಕ್ಕದ ವಾರ್ಡಿನ ಸದಸ್ಯನಾಗಿದ್ದರೂ ಶಂಕರ ವಿಹಾರ ಬಡಾವಣೆಯ ನಾಗರಿಕರ ಸಮಸ್ಯೆಗಳಿಗೆ ಸದಾ ಸ್ಪಂದಿಸುವುದಾಗಿ ತಿಳಿಸಿದರು.

ನಗರ ಪಾಲಿಕೆ ಸದಸ್ಯರುಗಳಾದ ಪ್ರಸನ್ನ ಕುಮಾರ್, ಶ್ರೀಮತಿ ಸವಿತಾ ಗಣೇಶ್ ಹುಲ್ಲುಮನೆ, ಆರ್. ಶಿವಾನಂದಪ್ಪ, ಶ್ರೀಮತಿ ಸುಧಾ ಮಂಜುನಾಥ ಇಟ್ಟಿಗುಡಿ, ಶರಣೆ ಸುವರ್ಣಮ್ಮ, `ಜನತಾವಾಣಿ’ ಉಪ ಸಂಪಾದಕ ಮಂಜುನಾಥ ಏಕಬೋಟೆ, ಕಾಂಗ್ರೆಸ್ ಮುಖಂಡ ಉಮಾಶಂಕರ್, ವಿನೋಬನಗರ ಶ್ರೀ ವೀರ ವರಸಿದ್ಧಿ ವಿನಾಯಕ ದೇವಸ್ಥಾದ ಕಾರ್ಯದರ್ಶಿ ಡಿ.ಕೆ. ರಮೇಶ್ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. 

ಶಂಕರ ವಿಹಾರ ಬಡಾವಣೆ ಬಿ ಬ್ಲಾಕ್ ನ ಶ್ರೀ ವರಸಿದ್ದಿ ವಿನಾಯಕ ಸೇವಾ ಸಮಿತಿ ಅಧ್ಯಕ್ಷರೂ ಆಗಿರುವ ಅಂತರ ರಾಷ್ಟ್ರೀಯ ಪವರ್ ಲಿಫ್ಟರ್ ಎಂ. ಮಹೇಶ್ವರಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 

ದೇವಸ್ಥಾನ ಸಮಿತಿ ಉಪಾಧ್ಯಕ್ಷರುಗಳಾದ ಚಂದ್ರಪ್ಪ, ಟಿ. ವೆಂಕಟೇಶಪ್ಪ, ಕಾರ್ಯದರ್ಶಿ ಬಿ.ಪಿ. ಹರೀಶ್, ಸಹ ಕಾರ್ಯದರ್ಶಿ ರಾಕೇಶ್ ಹಾದಿಮನೆ, ಖಜಾಂಚಿ ಹೆಚ್.ಡಿ. ಕರಿಬಸಪ್ಪ, ಸಂಘಟನಾ ಕಾರ್ಯದರ್ಶಿ ಕೆ.ಆರ್. ರುದ್ರಪ್ಪ, ಕಾನೂನು ಸಲಹೆಗಾರರಾದ ಹೆಚ್.ಎನ್. ಶ್ರೀಧರ, ವಿ.ಡಿ. ಪ್ರಕಾಶ್ ಅವರುಗಳು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ವಿನಾಯಕ ದೇವಸ್ಥಾನಕ್ಕೆ ಶ್ರೀ ವರಸಿದ್ಧಿ ವಿನಾಯಕ ಮೂರ್ತಿಯನ್ನು ತಾವು ಮಾಡಿಸಿಕೊಡುವುದಾಗಿ ಶ್ರೀ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರಾದ ವಿದ್ಯುತ್ ಇಲಾಖೆಯ ಶ್ರೀಮತಿ ಇಂದ್ರಮ್ಮ ಅವರು ವಾಗ್ದಾನ ಮಾಡಿದರು.

ಸಮಿತಿಯ ಉಪಾಧ್ಯಕ್ಷರೂ ಆದ ಸಂಗೀತ ಶಿಕ್ಷಕ ಕಲ್ಲಪ್ಪ ಅರಳಿ ಅವರು ಸಂಗೀತ ಸೇವೆ ನೀಡಿದರು.

ಹರೀಶ್ ಅವರಿಂದ ಸ್ವಾಗತ, ವಕೀಲ ಬಿ.ಜಿ. ಚಂದ್ರಶೇಖರಪ್ಪ ಅವರಿಂದ ಪ್ರಾಸ್ತಾವಿಕ ಭಾಷಣ, ಉಪನ್ಯಾಸಕ ಮಲ್ಲಯ್ಯ ಅವರಿಂದ ವಂದನಾರ್ಪಣೆ, ಕರಿಬಸಪ್ಪ ಅವರಿಂದ ಕಾರ್ಯಕ್ರಮ ನಿರೂಪಣೆ ನಡೆಯಿತು.

ಸಮಾಜ ಸೇವಕ ಕೆ.ಎಂ. ವೀರಯ್ಯ ಸ್ವಾಮಿ, ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ರಾಜು ಮರಿಗೌಡರ್, ಎಸ್. ಈರೇಶ್, ಗಿರೀಶ್ ಜವಳಿ, ಪ್ರಕಾಶ್ ಕುಮಾರ್, ವಿ. ರಾಕೇಶ್, ಶ್ರೀಮತಿ ಸರೋಜ ಕೋಟೆ ಹಾಳ್, ನೀಲಮ್ಮ, ತ್ರಿವೇಣಿ ಅವರುಗಳು ಕಾರ್ಯಕ್ರಮದ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸಿದರು.

error: Content is protected !!