ಸ್ನೇಹಿತರ ಕಾರ್ಯಕ್ಕೆ ಮೇಯರ್ ಶ್ಲಾಘನೆ
ದಾವಣಗೆರೆ, ಏ.25- ಹಸಿದವರಿಗೆ ಅನ್ನ ಕೊಡುವುದು ಪುಣ್ಯದ ಕೆಲಸ, ಇಂತಹ ಕೋವಿಡ್ ಕರ್ಫ್ಯೂ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸೇವೆಯಲ್ಲಿರುವ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಪೌರ ಕಾರ್ಮಿಕರಿಗೆ ಅಜಯ ಮತ್ತು ಮಂಜು ಸ್ನೇಹಿತರು ಆಹಾರದ ಪೊಟ್ಟಣ, ನೀರು ಕೊಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಮೇಯರ್ ಎಸ್.ಟಿ. ವೀರೇಶ್ ತಿಳಿಸಿದರು.
ಅವರು, ಇಂದು ನಗರದ ಜಯದೇವ ವೃತ್ತದಲ್ಲಿ ಕೋವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ಅಜಯ್ ಬಿರಿಯಾನಿ ಜೋನ್ ಮಾಲೀಕ ಅಜಯ್ ಮತ್ತು ಮಂಜು ಅವರ ಸ್ನೇಹಿತರ ನೇತೃತ್ವದಲ್ಲಿ ತಯಾರಿಸಿದ ಆಹಾರ ಪೊಟ್ಟಣ, ನೀರಿನ ಬಾಟಲ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೀವ ಇದ್ದರೆ ಜೀವನ, ಹಾಗಾಗಿ ನಮ್ಮ ಆರೋಗ್ಯ ಮತ್ತು ನಮ್ಮ ಕುಟುಂಬದ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಸೂಚನೆಗಳು ಏನಿದೆ ಅದೆಲ್ಲವನ್ನೂ ಪಾಲನೆ ಮಾಡಬೇಕು. ಯಾರಿಗಾದರೂ ಕೊರೊನಾ ಪಾಸಿಟಿವ್ ಬಂದಿದೆ ಎಂದರೆ ಭಯ ಪಡಬಾರದು. ನಮ್ಮ ದಾವಣಗೆರೆಯಲ್ಲಿ ಚಿಕಿತ್ಸೆಗೆ ಎಲ್ಲಾ ಸಾಕಷ್ಟು ವ್ಯವಸ್ಥೆ ಮಾಡಿಕೊಂಡಿದ್ದೇವೆ. ವ್ಯಾಕ್ಸಿನೇಷನ್ 2-3 ದಿನಗಳಿಂದ ಕೊರತೆ ಇತ್ತು. ನಿನ್ನೆಯಿಂದ ಬಂದಿದೆ. ಈಗ ಜಿಲ್ಲಾಸ್ಪತ್ರೆಯಲ್ಲಿ ಲಸಿಕೆ ಶಿಬಿರ ನಡೆಯುತ್ತಾ ಇದೆ. ನಾಳೆಯಿಂದ ಎಲ್ಲಾ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಕೆಲವೊಂದು ವಾರ್ಡ್ಗಳಲ್ಲಿ ವ್ಯಾಕ್ಸಿನೇಷನ್ ನೀಡಲಾಗುವುದು. ಪ್ರತಿಯೊಬ್ಬರೂ ತಮ್ಮ ಕುಟುಂಬದವರು, ಎಲ್ಲರೂ ನಿರ್ಲಕ್ಷ್ಯೆ ಮಾಡದೇ ಮುಂಜಾಗ್ರತಾ ಕ್ರಮವಾಗಿ ಲಸಿಕೆ ಪಡೆಯಬೇಕು ಎಂದು ಹೇಳಿದರು.
ಈ ಸೇವಾ ಕಾರ್ಯ ಮಾಡುತ್ತಿರುವ ಈ ಯುವಕ
ರಾರು ಶ್ರೀಮಂತರಲ್ಲ, ಸಣ್ಣ ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿರುವ ಸ್ನೇಹಿತರು. ಈ ತಂಡಕ್ಕೆ ಆ ಭಗವಂತ, ತಾಯಿ ದುಗ್ಗಮ್ಮ ಎಲ್ಲರಿಗೂ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಶಕ್ತಿ, ಆಯುಷ್ಯ, ಆರೋಗ್ಯವನ್ನು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸಿದರು.
ಎಸ್ಪಿ ಹನುಮಂತರಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳಿಗೆ ಆಹಾರದ ಪೊಟ್ಟಣ ನೀರಿನ ಬಾಟಲ್ ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅಜಯ್ ಮತ್ತು ಸ್ನೇಹಿತರ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ನಿಮ್ಮ ತಂಡದಿಂದ ಇನ್ನೂ ಹೆಚ್ಚಿನ ಸೇವಾ ಕಾರ್ಯಗಳು ನಡೆಯಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮಾಲೀಕ ಅಜಯ್ ಮಂಜು, ಸ್ನೇಹಿತರಾದ ಸುನಿಲ್, ರಾಕೇಶ, ಲೋಹಿತ್, ಅರ್ಜುನ್, ರಾಜು, ರೋಹನ್, ಕರಿಬಸವರಾಜು, ಗುರುರಾಜ, ನಾಗರಾಜ, ಸೃಜನ್, ಪತ್ರಿಕಾ ಛಾಯಾಗ್ರಾಹಕ ಎಸ್.ಎಸ್. ಸಾಗರ್ ಸೇರಿದಂತೆ, ಇತರರು ನಗರದಾದ್ಯಂತ ವಿವಿಧೆಡೆ ತೆರಳಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳಿಗೆ ಆಹಾರದ ಪೊಟ್ಟಣಗಳನ್ನು ವಿತರಿಸಿದರು.