ಚಿತ್ರದುರ್ಗ, ಅ.18- ಕಳೆದ 30 ವರ್ಷಗಳಿಂದ ಮುರುಘಾ ಶರಣರು ತಮ್ಮದೇ ಆದ ವಿವಿಧ ಸಮಾಜಮುಖಿ ಕಾರ್ಯಗಳ ಮೂಲಕ ಸಮಾನತೆ ಸ್ಥಾಪಿಸಿದ್ದಾರೆ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದಿಲ್ಲಿ ಮುರುಘಾ ಮಠದ ಅನುಭವ ಮಂಟಪದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರ ಪೀಠಾರೋಹಣದ ತೃತೀಯ ದಶಮಾನೋತ್ಸವದ ಅಂಗವಾಗಿ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
§ಶರಣಶ್ರೀ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಯಡಿಯೂರಪ್ಪ, ಬಸವಣ್ಣನವರ ಆದರ್ಶಗಳನ್ನು ಮುಂದಿಟ್ಟುಕೊಂಡು ಸಾಗುತ್ತಿರುವ ಈ ಮಠ ಬಸವ ತತ್ವ ಪ್ರಚಾರ ಮಾಡುತ್ತಿದೆ. ಪ್ರತಿ ವರ್ಷದ ಶರಣ ಸಂಸ್ಕೃತಿ ಉತ್ಸವ ಜನರ ಉತ್ಸವವಾಗಿದೆ. ಇದು ಜನರ ಆಶಾಕಿರಣ. 20 ಕೋಟಿ ರೂ.ಗಳನ್ನು ಬಸವಣ್ಣನವರ ಪುತ್ಥಳಿ ನಿರ್ಮಾಣಕ್ಕೆ ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಂಜೂರು ಮಾಡಿದ್ದೆ. ಅದರಲ್ಲಿ 5 ಕೋಟಿ ತಲುಪಿದ್ದು, ಉಳಿದದ್ದನ್ನು ತಲುಪಿಸುವ ಜವಾಬ್ದಾರಿಯನ್ನು ಮುಖ್ಯಮಂತ್ರಿ ಬೊಮ್ಮಾಯಿ ತೆಗೆದುಕೊಳ್ಳಬೇಕು ಎಂದರು.
`ಬಸವ ಭೂಷಣ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರಾರು ರಹಿತ ಪ್ರೀತಿ, ಭಕ್ತಿಯನ್ನು ಸಮರ್ಪಣಾ ಭಾವದಿಂದ ಮಾಡಬೇಕು. ವೈಚಾರಿಕ ಕ್ರಾಂತಿಯೇ ಶರಣ ಸಂಸ್ಕೃತಿ, ಮನುಷ್ಯರನ್ನು ಮನುಷ್ಯರಾಗಿ ನೋಡುವುದೇ ಶರಣ ಸಂಸ್ಕೃತಿ. 12ನೇ ಶತಮಾನದ ಪ್ರತಿಪಾದನೆಯನ್ನು ಮುರುಘಾ ಶರಣರು ಮಾಡುತ್ತಿದ್ದಾರೆ ಎಂದು ಶ್ಲ್ಯಾಘಿಸಿದರು.
ಈಗ 21ನೇ ಶತಮಾನ, ಅಂಕಿಗಳು ತಿರುಗು ಮುರುಗಾಗಿವೆ. ಮನುಕುಲದ ಅಭಿವೃದ್ದಿಯಾಗ ಬೇಕು. ಬಸವಣ್ಣ ಇಂದಿಗೂ ಪ್ರಸ್ತುತ. ಅಸಮಾನತೆ, ಲಿಂಗ, ಭೇದ ಇಂದಿಗೂ ಇದೆ. ಸಂಪೂರ್ಣವಾಗಿ ಇದನ್ನು ತೊಲಗಿಸುವ ಜವಾಬ್ದಾರಿ ಶರಣರಿಂದ ಪ್ರಾರಂಭವಾಗಿದೆ. ಇದನ್ನು ಎಲ್ಲರೂ ಮುಂದುವ ರೆಸಿಕೊಂಡು ಹೋಗುವುದು ಜನ ಸಾಮಾನ್ಯರ ಕರ್ತವ್ಯವಾಗಬೇಕು. ಮೌಢ್ಯಗಳು ತಮಗೆ ದುಃಖ ಉಂಟು ಮಾಡಿವೆ. ಸಾಮಾಜಿಕ ಸಮಾನತೆ ಸಂತೋಷವನ್ನು ಉಂಟು ಮಾಡಿದೆ.
ಭದ್ರಾ ಮೇಲ್ದಂಡೆ ಯೋಜನೆಯನ್ನು ಆರಂಭಿಸಿ ಬರದ ನಾಡಾದ ಚಿತ್ರದುರ್ಗಕ್ಕೆ ನೀರು ಹರಿಸಲು ನೆರವಾಗಿದ್ದಾರೆ. ಇದೊಂದು ಜನಪರ ಕೆಲಸ. ಮುರುಘಾ ಶರಣರು ಹೇಳಿದ ಬೇಡಿಕೆಗಳನ್ನು ಈಡೇರಿಸಲು ಅಧಿಕಾರಿಗಳೊಂದಿಗೆ ಮಾತನಾಡಿ, ಇಂಡಸ್ಟ್ರಿಯಲ್ ಟೌನ್‌ಶಿಪ್ ಮಾಡಲು ಸಿದ್ದನಿದ್ದೇನೆ. ಜಿಲ್ಲಾಧಿಕಾರಿಗಳು ಚಿತ್ರದುರ್ಗದಲ್ಲಿ 1 ಸಾವಿರದಿಂದ 2 ಸಾವಿರ ಎಕರೆ ಭೂಮಿಯನ್ನು ಗುರುತಿಸಿದರೆ, ನಾನು ಈ ಕಾರ್ಯ ಮಾಡಲು ಸಿದ್ದನಿದ್ದೇನೆ. ಸುವರ್ಣ ಕರ್ನಾಟಕ ಕಟ್ಟಬೇಕು ಎಂಬ ಸಂಕಲ್ಪ ಮಾಡಿದ್ದೇನೆ. ಸುಭೀಕ್ಷ, ಸುರಕ್ಷಿತ ಕರ್ನಾಟಕವನ್ನು ಹಾಗು ಸಮಾನತೆಯ ದಿನಾಚರಣೆಯನ್ನು ಸರ್ಕಾರದ ವತಿಯಿಂದ ಕಾರ್ಯಕ್ರಮ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಡಾ.ಶಿವಮೂರ್ತಿ ಮುರುಘಾ ಶರಣರು, ಬಸವರಾಜ ಬೊಮ್ಮಾಯಿ ಅದೃಷ್ಟದ ಮುಖ್ಯಮಂತ್ರಿ ಮತ್ತು ಬಿ.ಎಸ್.ಯಡ್ಯೂರಪ್ಪ ಅವರು ಅನುಭವದ ಮುಖ್ಯಮಂತ್ರಿಗಳಾಗಿದ್ದಾರೆ. ಇಬ್ಬರೂ ಸಹ ದುರ್ಗದ ಜನತೆಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು.
ಜಗತ್ತಿನಲ್ಲಿ ಮೂರು ವರ್ಗದ ಜನರಿದ್ದಾರೆ. ಆಯುಷ್ಯಕ್ಕಾಗಿ ಆಯುಷ್ಯವನ್ನು ಅಳೆದು ಹಾಕುವವರು, ಇವರು ಅಸಹಾಯಕರಾಗಿರುತ್ತಾರೆ. ಇವರು ಸಾಧನೆಯನ್ನು ಮಾಡಲು ಸಮಾಜ ಬಿಡುತ್ತಿಲ್ಲ ಮತ್ತು ಸಾಧನೆಗೆ ಆಯುಷ್ಯವನ್ನು ಅಳೆದು ಹಾಕುವವರು. ಇದು ಸವಾಲಿನಿಂದ ಕೂಡಿದೆ. ಶರಣರು ಮೂರನೇಯ ವರ್ಗದವರಾಗಿದ್ದಾರೆ. ದಾರ್ಶನಿಕರು, ಸಂತರು ಆಯುಷ್ಯ ಕಡಿಮೆ ಆದರೆ ಸಾಧನೆ ಜಾಸ್ತಿ. ವಿವೇಕಾನಂದರು ಇದಕ್ಕೆ ಉತ್ತಮ ಉದಾಹರಣೆ ಎಂದು ಬಸವಣ್ಣನವರ ವಚನಗಳ ಮೂಲಕ ಶರಣರು ವಿವರಣೆ ನೀಡಿದರು.
ಚಿತ್ರದುರ್ಗ ಶ್ರೀ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಕಾರ್ಯಕ್ರಮದ ಸಮ್ಮುಖ ವಹಿಸಿದ್ದರು.
ಕನ್ನಡಪ್ರಭ ಸಂಪಾದಕ ರವಿ ಹೆಗಡೆ, ಇಂಡಿಯನ್ ಎಕ್ಸ್‍ಪ್ರೆಸ್ ಎಡಿಟರ್ ಶ್ರೀಮತಿ ಸಾಂತ್ವನಾ ಭಟ್ಟಾಚಾರ್ಯ, ಐ-ಕ್ಯಾಟ್ ಸಂಸ್ಥೆಯ ಶ್ರೀಮತಿ ಶಾಲಿನಿ ನಲ್ವಾಡ್ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಗುರುವಂದನೆ ಕಾರ್ಯಕ್ರಮದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರಿಗೆ 30 ವಿವಿಧ ಬಗೆಯ ಪುಷ್ಪಗಳಿಂದ ಪುಷ್ಪಾಭಿಷೇಕ ಮಾಡಿ, 20 ಕೆಜಿ ತೂಕದ ಬೆಳ್ಳಿ ಪುತ್ಥಳಿಯನ್ನು ನೀಡಿ ಗೌರವಿಸಲಾಯಿತು. ಶರಣ ಶ್ರೀ ಪ್ರಶಸ್ತಿ ಮತ್ತು ಬಸವ ಭೂಷಣ ಪ್ರಶಸ್ತಿಯ ಸನ್ಮಾನ ಪತ್ರಗಳನ್ನು ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ ಮತ್ತು ನಾನಾಗೌಡ ಪಾಟೀಲ್ ವಾಚಿಸಿದರು. ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಪತ್ರವನ್ನು ಡಾ. ಸಿ.ಟಿ.ಜಯಣ್ಣ ವಾಚಿಸಿದರು.
ಇದೇ ಸಂದರ್ಭದಲ್ಲಿ ಇಂಡಿಯನ್ ಎಕ್ಸ್‍ಪ್ರೆಸ್ ಪಬ್ಲಿಕೇಷನ್ ಸಂಪಾದಿತ ಕನ್ನಡ ಅವತರಣಿಕೆ ‘ವಿಶ್ವರೂಪಿ ಡಾ. ಶಿವಮೂರ್ತಿ ಮುರುಘಾ ಶರಣರು’ ಪುಸ್ತಕ ಬಿಡುಗಡೆಯಾಯಿತು. ಈ ಸಂದರ್ಭದಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್ ಪ್ರಧಾನ ಸಂಪಾದಕ ಪಿ.ಸುರೇಶ್, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಸಕರುಗಳಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ, ವಿಧಾನ ಪರಿಷತ್ ಸದಸ್ಯರಾದ ವೈ.ನಾರಾಯಣಸ್ವಾಮಿ, ಹೆಚ್.ಲಿಂಗಮೂರ್ತಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ರಕ್ಷಣಾಧಿಕಾರಿ ಶ್ರೀಮತಿ ರಾಧಿಕ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ನಂದಿನಿ, ಡಾ. ಹನುಮಲಿ ಷಣ್ಮುಖಪ್ಪ, ಪಟೇಲ್ ಶಿವಕುಮಾರ್, ಶಂಕರಮೂರ್ತಿ, ಹರ ಗುರು ಚರ ಮೂರ್ತಿಗಳು ಉಪಸ್ಥಿತರಿದ್ದರು.
ಶರಣ ಸಂಸ್ಕೃತಿ ಉತ್ಸವ-2021ರ ಕಾರ್ಯಾಧ್ಯಕ್ಷ ಕೆ.ಎಸ್.ನವೀನ್ ಸ್ವಾಗತಿಸಿದರು. ಉಪನ್ಯಾಸಕ ರಹಮ್ಮತ್ ಉನ್ನೀಸಾ ನಿರೂಪಿಸಿ ವಂದಿಸಿದರು. ಹೆಸರಾಂತ ಬಾಲಿವುಡ್ ಹಿನ್ನೆಲೆ ಗಾಯಕ ಹರಿಹರನ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.