ಪಂಚಮಸಾಲಿ ಹೋರಾಟ ಸಂಪೂರ್ಣ ವಿವರ ಪಡೆದ ನಡ್ಡಾ, ಅಮಿತ್ ಷಾ
ಬೆಂಗಳೂರು, ಫೆ. 23 – ಪಂಚಮಸಾಲಿ ಸಮುದಾಯ ಮೀಸಲಾತಿ ಹೋರಾಟ ರಾಜ್ಯ ರಾಜಕೀಯ ಚಿತ್ರಣ ಬದಲಿಸುವ ಸಾಧ್ಯತೆ ಇದೆ. ಈ ಹೋರಾಟ ಬಿಜೆಪಿ ವರಿಷ್ಠರ ಕೈಗೆ ಹೊಸ ಅಸ್ತ್ರ ಕೊಟ್ಟಿದೆ.
ಆದರೆ, ಇದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರಕ್ಕೆ ಕುಂದು ತರುತ್ತದೋ ಇಲ್ಲವೆ ವಿರೋಧಿಗಳಿಗೆ ಮಟ್ಟ ಹಾಕುತ್ತದೋ ಕಾದು ನೋಡಬೇಕು.
ಗಣಿ ಸಚಿವ ಹಾಗೂ ಪಂಚಮಸಾಲಿ ಸಮುದಾಯದ ಮುಖಂಡ ಮುರುಗೇಶ್ ನಿರಾಣಿ ಅವರನ್ನು ಕೇಂದ್ರ ವರಿಷ್ಠರು ಹಠಾತ್ ಆಗಿ ಇಂದು ದೆಹಲಿಗೆ ಕರೆಸಿಕೊಂಡು, ಚರ್ಚೆ ಮಾಡಿರುವುದೇ ರಾಜಕೀಯ ವಲಯದಲ್ಲಿ ಚರ್ಚೆಗೂ ಕಾರಣವಾಗಿದೆ. ಮೈಸೂರು ಪ್ರವಾಸದಲ್ಲಿದ್ದ ನಿರಾಣಿ ಅವರನ್ನು ತಕ್ಷಣವೇ ದೆಹಲಿಗೆ ಬರುವಂತೆ ಕೇಂದ್ರ ಗೃಹ ಸಚಿವಾಲಯ ಸಂದೇಶ ರವಾನೆ ಮಾಡಿದ್ದಲ್ಲದೆ, ಬೆಳಿಗ್ಗೆ 11 ಗಂಟೆಗೆ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಬೇಕಿದೆ.
ನಿಮಗೆ 25 ನಿಮಿಷಗಳ ಕಾಲ ನಿಗದಿಪಡಿಸಿ ದ್ದೇವೆ ಎಂದಿತ್ತು. ತಾವು ಪ್ರವಾಸದಲ್ಲಿದ್ದು, ಸಂಜೆ ವೇಳೆಗೆ ದೆಹಲಿಗೆ ಬರುವುದಾಗಿ ನಿರಾಣಿಯವರು ಮಾಡಿದ ಮನವಿಗೂ ಸಚಿವಾಲಯ ಅವಕಾಶ ನೀಡಲಿಲ್ಲ. ಅಷ್ಟೇ ಅಲ್ಲ ಕೇಂದ್ರ ಗೃಹ ಸಚಿವಾಲಯವೇ ನಿನ್ನೆ ಮುಂಜಾನೆ ವಿಮಾನದ ಟಿಕೆಟ್ ಕಾಯ್ದಿರಿಸಿತ್ತು. ತಡರಾತ್ರಿ ಮೈಸೂರಿನಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ತೆರಳಿದ ನಿರಾಣಿ ಅವರು, ದೆಹಲಿಯಲ್ಲಿಂದು ಗೃಹ ಸಚಿವ ಅಮಿತ್ ಷಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ, ಮಾತುಕತೆ ನಡೆಸಿ, ನಗರಕ್ಕೆ ಹಿಂತಿರುಗಿದ್ದಾರೆ.
ನಿರಾಣಿ ಅವರನ್ನು ರಾಜಕೀಯವಾಗಿ ಬಳಸಿ ಕೊಳ್ಳಲು ರಾಜಕೀಯ ದಾಳವಾಗಿ ಬಳಸಿಕೊಳ್ಳಲು ವರಿಷ್ಠರು ಮುಂದಾಗಿದ್ದಾರೆ ಎನ್ನಲಾಗಿದೆ. ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಪಡೆದ ಗೃಹ ಸಚಿವರು, ಅವರಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ವರಿಷ್ಠರು ನೀಡುವ ಆದೇಶಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಹೇಳಿದ್ದಾರೆ. ಗೃಹ ಸಚಿವ ಭೇಟಿಯ ನಂತರ ನಡ್ಡಾ ಅವರ ಜೊತೆಯು ಸುಮಾರು 30 ನಿಮಿಷಗಳ ಕಾಲ ಚರ್ಚೆ ನಡೆದಿದೆ.
ನಿರಾಣಿ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಯಡಿಯೂರಪ್ಪ ಆಸಕ್ತಿ ತೋರಿರಲಿಲ್ಲ. ವರಿಷ್ಠರ ಸೂಚನೆ ಮೇರೆಗೆ ಈಗ ನಿರಾಣಿ ಮಂತ್ರಿಯಾಗಿದ್ದಾರೆ. ನಿರಾಣಿ ಅವರನ್ನೇ ಮುಂದಿನ ಕರ್ನಾಟಕ ರಾಜ್ಯದಲ್ಲಿ ಪಕ್ಷದ ಬೆಳವಣಿಗೆಗಳಿಗೆ ಸೂತ್ರದಾರರನ್ನಾಗಿ ಮಾಡಿಕೊಳ್ಳಲು ವರಿಷ್ಠರು ಹೊರಟಿದ್ದಾರೆ ಎನ್ನಲಾಗಿದೆ.
ನಿರಾಣಿ ಭೇಟಿಗೂ ಮುನ್ನ ಯಡಿಯೂರಪ್ಪ ವಿರುದ್ಧ ತಿರುಗಿ ಬಿದ್ದಿರುವ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಕರೆಸಿಕೊಂಡು ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಸಮಾಲೋಚನೆ ಮಾಡಿದ್ದಾರೆ.