ನಗರ ಪಾಲಿಕೆ ಸದಸ್ಯತ್ವಕ್ಕೆ ಕಾಂಗ್ರೆಸ್‌ನ ದೇವರಮನೆ ರಾಜೀನಾಮೆ : ಬಿಜೆಪಿ ಸೇರ್ಪಡೆ

ದಾವಣಗೆರೆ,ಫೆ.23- ದಾವಣಗೆರೆ ಮಹಾನಗರ ಪಾಲಿಕೆ 22ನೇ ವಾರ್ಡಿನ ಕಾಂಗ್ರೆಸ್ ಸದಸ್ಯ ದೇವರಮನೆ ಶಿವಕುಮಾರ್ ಅವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಪಾಲಿಕೆ ಮಹಾಪೌರರಾದ ಬಿ.ಜಿ ಅಜಯ್ ಕುಮಾರ್ ಅವರನ್ನು ಇಂದು ಮಧ್ಯಾಹ್ನ ಭೇಟಿ ಮಾಡಿದ ಶಿವಕುಮಾರ್, ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ್ದು, ಅದು ಸಂಜೆ ವೇಳೆಗೆ ಅಂಗೀಕಾರವಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಮೇಯರ್ ಅಜಯ್ ಕುಮಾರ್ ಅವರ ಒಂದು ವರ್ಷದ ಅವಧಿ ಮುಗಿದಿದ್ದು, ತೆರವಾಗಿರುವ ಮಹಾ ಪೌರರ ಸ್ಥಾನಕ್ಕೆ ನಾಳೆ ದಿನಾಂಕ 24ರ ಬುಧವಾರ ಚುನಾವಣೆ ನಡೆಯ ಲಿದೆ. ಈ ಸಂಬಂಧ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ನಡೆಯುತ್ತಿರುವ ಸಂದರ್ಭದಲ್ಲಿ ದೇವರಮನೆ ಶಿವಕುಮಾರ್ ನೀಡಿರುವ ರಾಜೀನಾಮೆಯಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಒಂದು ಸ್ಥಾನ ಕಡಿಮೆ ಯಾಗಿದ್ದು, ಇದರಿಂದಾಗಿ ನಾಳಿನ ಚುನಾವಣೆ ಮತ್ತಷ್ಟು ಬಿರುಸು ಗೊಳ್ಳುವಂತೆ ಮಾಡಿದೆ.

ನಗರ ಪಾಲಿಕೆ ಸದಸ್ಯತ್ವಕ್ಕೆ ಕಾಂಗ್ರೆಸ್‌ನ ದೇವರಮನೆ ರಾಜೀನಾಮೆ : ಬಿಜೆಪಿ ಸೇರ್ಪಡೆ - Janathavani

ನಾಳಿನ ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್  ಪಕ್ಷದ ಎಲ್ಲಾ ಸದಸ್ಯರುಗಳನ್ನು ಆ ಪಕ್ಷದ ಮುಖಂಡರು ಒಂದೆಡೆ ಸೇರಿ ತಮ್ಮ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ತಂತ್ರಗಳನ್ನು ರೂಪಿಸುತ್ತಿದ್ದರು. ಎಲ್ಲಾ ಸದಸ್ಯರುಗಳೊಂದಿಗಿದ್ದ ದೇವರಮನೆ ಶಿವಕುಮಾರ್ ಸಂಜೆ ವೇಳೆಗೆ ಏಕಾಏಕಿ ದಿಢೀರ್ ನಿರ್ಧಾರ ಕೈಗೊಂಡು ಪಾಲಿಕೆ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದು, ಕಾಂಗ್ರೆಸ್ ನಲ್ಲಿ ಆಶ್ಚರ್ಯವನ್ನುಂಟು ಮಾಡಿತು. ಅವರ ರಾಜೀನಾಮೆಗೆ ನಿಖರವಾದ ಕಾರಣ ಗೊತ್ತಾಗಿಲ್ಲ.

ಮೇಯರ್ ಚುನಾವಣೆ ಸಂಬಂಧ ನಡೆಯುತ್ತಿರುವ ಪ್ರಕ್ರಿಯೆಗಳಿಂದ ಬೇಸರಗೊಂಡು ತಾವು ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲದೇ, ಆ ಪಕ್ಷದಿಂದ ಸ್ಪರ್ಧಿಸಿ ಜಯ ಗಳಿಸಿದ್ದ 22ನೇ ವಾರ್ಡಿನ ಪಾಲಿಕೆ ಸದಸ್ಯತ್ವಕ್ಕೂ ರಾಜೀನಾಮೆ ನೀಡಿರುವುದಾಗಿ ಶಿವಕುಮಾರ್ `ಜನತಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ. ಆದರೆ, ರಾಜೀನಾಮೆಗೆ ಸ್ಪಷ್ಟ ಮಾಹಿತಿ ನೀಡಲಿಲ್ಲ. 

ಬಿಜೆಪಿಗೆ ಸೇರ್ಪಡೆ : ನಗರ ಪಾಲಿಕೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ದೇವರಮನೆ ಶಿವಕುಮಾರ್ ಸಂಜೆ ವೇಳೆಗೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಜಿಎಂಐಟಿ ಅತಿಥಿ ಗೃಹದಲ್ಲಿ ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ, ಹಿರಿಯ ಶಾಸಕ ಎಸ್.ಎ. ರವೀಂದ್ರನಾಥ್, ಮೇಯರ್ ಬಿ.ಜಿ. ಅಜಯ್ ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಎ.ಹೆಚ್. ಶಿವಯೋಗಿಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ, ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಯಶವಂತರಾವ್ ಜಾಧವ್ ಅವರುಗಳ ಸಮ್ಮುಖದಲ್ಲಿ ಶಿವಕುಮಾರ್ ಬಿಜೆಪಿಗೆ ಸೇರಿದ್ದಾರೆ.

error: Content is protected !!